ನಾಟಿಂಗ್‌ಹ್ಯಾಮ್‌[ಜೂ.15]: ಭಾರತ-ನ್ಯೂಜಿಲೆಂಡ್‌ ನಡುವೆ ಗುರುವಾರ ನಡೆಯಬೇಕಿದ್ದ ವಿಶ್ವಕಪ್‌ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಈ ವಿಶ್ವಕಪ್‌ನಲ್ಲಿ ಒಂದೂ ಎಸೆತ ಕಾಣದೆ ರದ್ದಾದ 3ನೇ ಪಂದ್ಯವದು. ಒಟ್ಟು 4 ಪಂದ್ಯಗಳು ಈಗಾಗಲೇ ಮಳೆಗೆ ಬಲಿಯಾಗಿವೆ. ಗುರುವಾರ ನಾಟಿಂಗ್‌ಹ್ಯಾಮ್‌ನಲ್ಲಿ ಇಡೀ ದಿನ ಮಳೆ ಸುರಿಯಲಿಲ್ಲ. ಹೀಗಾಗಿ ಕೊನೆ ಪಕ್ಷ 20 ಓವರ್‌ಗಳ ಪಂದ್ಯವನ್ನು ನಡೆಸಬಹುದಾಗಿತ್ತು. ಆದರೆ ಮೈದಾನ ಒದ್ದೆಯಾಗಿದ್ದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

ಇಸಿಬಿ ಹೊಣೆ ಏಕೆ?: ಭಾರತ-ನ್ಯೂಜಿಲೆಂಡ್‌ ಪಂದ್ಯ ರದ್ದುಗೊಳ್ಳಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ನೇರ ಹೊಣೆ ಹೊರಬೇಕು. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಮಳೆ ಬಂದಾಗ ಪಿಚ್‌ ಮುಚ್ಚಲು ಅತ್ಯುತ್ತಮ ಗುಣಮಟ್ಟದ ಹೋವರ್‌ಕ್ರಾಫ್ಟ್‌ ಇದೆ. ಇಲ್ಲಿನ ಒಳಚರಂಡಿ ವ್ಯವಸ್ಥೆ ಸಹ ಉತ್ತಮವಾಗಿದೆ. ಆದರೆ ಮಳೆ ಬೀಳುವಾಗ ಮೈದಾನಕ್ಕೆ ಸಂಪೂರ್ಣವಾಗಿ ಹೊದಿಕೆ ಹೊದಿಸದ ಕಾರಣ ಔಟ್‌ಫೀಲ್ಡ್‌ನಲ್ಲಿ ನೀರು ಶೇಖರಣೆಯಾಗಿ ಒಣಗಿಸಲು ಹೆಚ್ಚಿನ ಸಮಯ ಹಿಡಿಯುತ್ತದೆ. ನಿಗದಿತ ಸಮಯದೊಳಗೆ ಪಂದ್ಯ ಆರಂಭಿಸಲು ಸಾಧ್ಯವಾಗದೆ ಇದ್ದಾಗ ಪಂದ್ಯವನ್ನು ರದ್ದುಗೊಳಿಸುವುದನ್ನು ಹೊರತು ಪಡಿಸಿ ಅಂಪೈರ್‌ಗಳಿಗೆ ಬೇರೆ ಆಯ್ಕೆ ಇರುವುದಿಲ್ಲ.

ಮಳೆಯಿಂದ ಪಂದ್ಯ ರದ್ದು-ಇಂಗ್ಲೆಂಡ್ ಕಾಲೆಳೆದ ಗಂಗೂಲಿ!

ಇಸಿಬಿ ನಿರ್ಲಕ್ಷ್ಯ: ಗುರುವಾರ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಭಾರತದ ಮಾಜಿ ನಾಯಕ, ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸೌರವ್‌ ಗಂಗೂಲಿ ಇಸಿಬಿ ನಿರ್ಲಕ್ಷ್ಯವನ್ನು ಟೀಕಿಸಿದರು. ‘2016ರ ಟಿ20 ವಿಶ್ವಕಪ್‌ ವೇಳೆ ಇಂಗ್ಲೆಂಡ್‌ನಿಂದಲೇ ಈಡನ್‌ ಗಾರ್ಡನ್ಸ್‌ ಮೈದಾನಕ್ಕೆ ಹೊದಿಕೆಗಳನ್ನು ತರಿಸಿದ್ದೆವು. ಆದರೆ ಇಂಗ್ಲೆಂಡ್‌ನವರೇ ಆ ಸೌಲಭ್ಯ ಬಳಸಿಕೊಳ್ಳುತ್ತಿಲ್ಲ’ ಎಂದು ಗಂಗೂಲಿ ಟೀಕೆ ಮಾಡಿದರು.

ರದ್ದಾಯ್ತು ಇಂಡೋ-ಕಿವೀಸ್ ಪಂದ್ಯ-ಅಂಕಪಟ್ಟಿಯಲ್ಲಿ ಏರುಪೇರು!

ಹೊದಿಕೆಗೆ ಎಷ್ಟಾಗುತ್ತೆ?: 2016ರ ಟಿ20 ವಿಶ್ವಕಪ್‌ ವೇಳೆ ಬಿಸಿಸಿಐ ತಲಾ 1 ಕೋಟಿ ರುಪಾಯಿ ಕೊಟ್ಟು ಕೆಲ ಗ್ರೌಂಡ್‌ ಕವರ್‌ಗಳನ್ನು ಖರೀದಿಸಿತ್ತು. ವಿಶ್ವಕಪ್‌ ಆಯೋಜನೆಗೆ ಐಸಿಸಿ, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೆ ಹೆಚ್ಚಿನ ನೆರವು ನೀಡಿದೆ. ‘2016ರ ಟಿ20 ವಿಶ್ವಕಪ್‌ ಆಯೋಜನೆಗೆ ಬಿಸಿಸಿಐಗೆ ನೀಡಿದ್ದ ಆರ್ಥಿಕ ನೆರವಿಗಿಂದ ಮೂರು ಪಟ್ಟು ಹೆಚ್ಚಿನ ನೆರವನ್ನು 2019ರ ವಿಶ್ವಕಪ್‌ ಆಯೋಜನೆಗೆಂದು ಐಸಿಸಿ, ಇಸಿಬಿಗೆ ನೀಡಿದೆ. ಆದರೂ ಇಸಿಬಿ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್‌ ಠಾಕೂರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.