ಲಂಡನ್: ಇಂಗ್ಲೆಂಡ್‌ನ ಅಬ್ಬರಕ್ಕೆ ಮಂಕಾಗಿ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಭಾನುವಾರ ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಎದುರಿಸಲಿದ್ದು, ಮೊದಲ ಗೆಲುವಿಗಾಗಿ ಹುಡುಕಾಟ ನಡೆಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು 311 ರನ್‌ಗಳಿಗೆ ನಿಯಂತ್ರಿಸಿದರೂ, ಜೋಫ್ರಾ ಆರ್ಚರ್‌ರ ವೇಗಕ್ಕೆ ಆಫ್ರಿಕಾ ಬ್ಯಾಟ್ಸ್‌ಮನ್'ಗಳು ನಡುಗಿದ್ದರು. 104 ರನ್‌ಗಳಿಂದ ಸೋಲು ಕಂಡಿದ್ದರಿಂದ ಡು ಪ್ಲೆಸಿ ಪಡೆಯ ನೆಟ್ ರನ್‌ರೇಟ್‌ಗೆ ಪೆಟ್ಟು ಬಿದ್ದಿತ್ತು. ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ರನ್ ರೇಟ್‌ನಲ್ಲಿ ಸುಧಾರಣೆ ಕಾಣುವುದು ಆಫ್ರಿಕಾ ಗುರಿಯಾಗಿದೆ. ತಂಡದ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೂ, ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿರುವ ಕಾರಣ ಒತ್ತಡದಲ್ಲಿದೆ. ಅನುಭವಿ ಆಟಗಾರರಿಂದ ಜವಾಬ್ದಾರಿಯುತ ಆಟವನ್ನು ತಂಡದ ಆಡಳಿತ ನಿರೀಕ್ಷೆ ಮಾಡುತ್ತಿದೆ. 

ಬಾಂಗ್ಲಾ ತಂಡಕ್ಕೆ ’ಆರಂಭಿಕ’ ಆಘಾತ..!

ಸಮಸ್ಯೆ ಸುಳಿಯಲ್ಲಿ ಬಾಂಗ್ಲಾ: ಭಾರತ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ತಿಣುಕಾಡಿದ ಬಾಂಗ್ಲಾದೇಶ, ಟೂರ್ನಿಯಲ್ಲಿ ಅಭಿಯಾನ ಆರಂಭಿಸುವ ಮೊದಲೇ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಆರಂಭಿಕ ತಮೀಮ್ ಇಕ್ಬಾಲ್, ನಾಯಕ ಮಶ್ರಫೆ ಮೊರ್ತಜಾ, ಮುಸ್ತಾಫಿಜುರ್ ರಹಮಾನ್ ಹಾಗೂ ಮಹಮದ್ದುಲ್ಲಾ ಸಹ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಇವರ ಲಭ್ಯತೆ ಬಗ್ಗೆ ಖಚಿತತೆ ಇಲ್ಲ. ಆದರೂ ಪಂದ್ಯದ ವೇಳೆಗೆ ಫಿಟ್ ಆಗಲಿದ್ದಾರೆ ಎಂದು ತಂಡದ ಕೋಚ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಷ್ಫಿಕುರ್ ರಹೀಂ, ಶಕೀಬ್ ಅಲ್ ಹಸನ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. 

ಸ್ಥಳ: ಲಂಡನ್
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ