ಲಂಡನ್[ಜೂ.01]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡುವ ಮುನ್ನವೇ ಬಾಂಗ್ಲಾದೇಶ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ  ಅಭ್ಯಾಸದ ವೇಳೆ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ ಎಡಗೈಗೆ ಗಾಯವಾಗಿದ್ದು, ಭಾನುವಾರ ಇಲ್ಲಿ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಗಾಯದ ತೀವ್ರತೆ ತಿಳಿಯಲು ಮುನ್ನೆಚ್ಚರಿಕಾ ಕ್ರಮವಾಗಿ ಎಕ್ಸ್-ರೇ ತೆಗೆಸಲಾಗಿದ್ದು, ಯಾವುದೇ ತೀವ್ರವಾದ ಗಾಯದ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ. ಆದರೂ ತಮೀಮ್ ಇನ್ನೊಂದು ಪರೀಕ್ಷೆಗೆ ಒಳಗಾಗಲಿದ್ದು, ಅದರ ಬಳಿಕವಷ್ಟೇ ಜೂನ್ 02ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುವ ಬಗ್ಗೆ ಸ್ಪಷ್ಟವಾಗಲಿದೆ.

ತಮೀಮ್ ಭಾರತ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲೂ ಕಣಕ್ಕಿಳಿದಿರಲಿಲ್ಲ. ಬಾಂಗ್ಲಾದೇಶ  ನಾಯಕ ಮಶ್ರಾಫೆ ಮೊರ್ತಾಜಾ, ಮುಷ್ತಾಫಿಜುರ್ ರೆಹಮಾನ್ ಹಾಗೂ ಮೊಹಮ್ಮದುಲ್ಲಾ ಈಗಾಗಲೇ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...