ಲಂಡನ್[ಜೂ.02]: ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ಕೊನೆಗೂ ಕೈವಶ ಮಾಡಿಕೊಳ್ಳುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿದೆ. ಬೃಹತ್ ಮೊತ್ತ ಕಲೆಹಾಕಿದ್ದ ಬಾಂಗ್ಲಾ ಹುಲಿಗಳು 21 ರನ್’ಗಳಿಂದ ಹರಿಣಗಳನ್ನು ಶಿಕಾರಿ ಮಾಡಿದೆ. ಈ ಮೂಲಕ ಮೊಶ್ರಾಫೆ ಮೊರ್ತಾಜಾ ನೇತೃತ್ವದ ಬಾಂಗ್ಲಾದೇಶ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದರೆ, ದಕ್ಷಿಣ ಆಫ್ರಿಕಾ ಸತತ ಎರಡು ಸೋಲು ಕಂಡಂತಾಗಿದೆ

ಬಾಂಗ್ಲಾದೇಶ ನೀಡಿದ್ದ 331 ರನ್’ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡದ ಮೊತ್ತ 50 ಆಗುವಷ್ಟರಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತ್ತು. ಆಮ್ಲಾ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಏಯ್ಡನ್ ಮಾರ್ಕ್’ರಮ್ 45 ರನ್ ಬಾರಿಸಿದರಾದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ನಾಯಕ ಡುಪ್ಲಿಸಿಸ್ 62 ರನ್ ಬಾರಿಸಿ ಮೆಹದಿ ಹಸನ್ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮಿಲ್ಲರ್[38], ರಸ್ಸಿ ವ್ಯಾನ್ ಡರ್ ಡ್ಯುಸೆನ್[41], ಜೆ.ಪಿ ಡುಮಿನಿ[45] ಬಾರಿಸಿದರಾದರೂ ತಂಡವನ್ನು ಗೆಲುವಿನ ಡಡ ಸೇರಿಸಲು ಸಾಧ್ಯವಾಗಲಿಲ್ಲ. ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ದಕ್ಷಿಣ ಆಫ್ರಿಕಾ ತಂಡ ಪಂದ್ಯವನ್ನು ಕೈಚೆಲ್ಲಬೇಕಾಗಿ ಬಂತು.

ಹರಿಣಗಳಿಗೆ ಕಠಿಣ ಗುರಿ ನೀಡಿದ ಬಾಂಗ್ಲಾ ಹುಲಿಗಳು..!

ಬಾಂಗ್ಲಾದೇಶ ಪರ ಮುಷ್ತಾಫಿಜುರ್ ರೆಹಮಾನ್ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಸೈಫುದ್ದೀನ್ 2 ಹಾಗೂ ಶಕೀಬ್ ಅಲ್ ಹಸನ್ ಮತ್ತು ಮೆಹದಿ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು. 

ಇದಕ್ಕೂ ಮೊದಲು ಶಕೀಬ್ ಅಲ್ ಹಸನ್ ಹಾಗೂ ಮುಷ್ಫಿಕರ್ ರಹೀಮ್[142] ಭರ್ಜರಿ ಶತಕದ ಜತೆಯಾಟದ ನೆರವಿನಿಂದ ಬಾಂಗ್ಲಾದೇಶ ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು. ಕೊನೆಯಲ್ಲಿ ಅಬ್ಬರಿಸಿದ ಮೊಹಮ್ಮದುಲ್ಲಾ[44], ಮೊಹಮ್ಮದ್ ಮಿಥುಲ್[21] ಹಾಗೂ ಮೊಸಾದ್ದೇಕ್ ಹುಸೈನ್[26] ತಂಡದ ಮೊತ್ತವನ್ನು 330ರ ಗಡಿ ಮುಟ್ಟಿಸಲು ನೆರವಾದರು.

ದಕ್ಷಿಣ ಆಫ್ರಿಕಾ ಪರ ನೂರನೇ ಪಂದ್ಯವಾಡುತ್ತಿರುವ ಇಮ್ರಾನ್ ತಾಹಿರ್, ಮಧ್ಯಮ ವೇಗಿಗಳಾದ ಆ್ಯಂಡಿಲೆ ಫೆಲುಕ್ವಾಯೋ ಹಾಗೂ ಕ್ರಿಸ್ ಮೋರಿಸ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ: 330/6
ಮುಷ್ಫಿಕರ್ ರಹೀಮ್: 78
ಆ್ಯಂಡಿಲೆ ಫೆಲುಕ್ವಾಯೋ: 52/2

ದಕ್ಷಿಣ ಆಫ್ರಿಕಾ: 309/8
ಫಾಫ್ ಡುಪ್ಲೆಸಿಸ್: 62
ಮುಷ್ತಾಫಿಜುರ್ ರೆಹಮಾನ್: 67/3