ಲಂಡನ್[ಜೂ.02]: ಶಕೀಬ್ ಅಲ್ ಹಸನ್-ಮುಷ್ಫಿಕರ್ ರಹೀಮ್ ಶತಕದ ಜತೆಯಾಟ ಹಾಗೂ ಒಟ್ಟಾರೆ ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ 330 ರನ್ ಬಾರಿಸಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ತಮೀಮ್ ಇಕ್ಬಾಲ್-ಸೌಮ್ಯ ಸರ್ಕಾರ್ ಜೋಡಿ 8.2 ಓವರ್’ಗಳಲ್ಲಿ 60 ರನ್’ಗಳ ಜತೆಯಾಟವಾಡಿದರು. ಎಚ್ಚರಿಕೆಯ ಆಟವಾಡುತ್ತಿದ್ದ ತಮೀಮ್ ಇಕ್ಬಾಲ್’ರನ್ನು ಪೆವಿಲಿಯನ್’ಗಟ್ಟಲು ಆ್ಯಂಡಿಲೆ ಫೆಲುಕ್ವಾಯೋ ಯಶಸ್ವಿಯಾದರು. ಇದಾದ ಕೆಲಹೊತ್ತಿನಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಸೌಮ್ಯ ಸರ್ಕಾರ್, ಡಿಕಾಕ್ ಹಿಡಿದ ಅದ್ಭುತ ಕ್ಯಾಚ್’ಗೆ ಪೆವಿಲಿಯನ್ ಸೇರಬೇಕಾಯಿತು. ಸರ್ಕಾರ್ ಕೇವಲ 30 ಎಸೆತಗಳಲ್ಲಿ 9 ಬೌಂಡರಿ ಸಹಿತ 42 ರನ್ ಬಾರಿಸಿದ್ದರು.

ಆಸರೆಯಾದ ಶಕೀಬ್-ರಹೀಮ್: ಒಂದು ಹಂತದಲ್ಲಿ 75 ರನ್’ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ಬಾಂಗ್ಲಾ ಪಡೆಗೆ ಅನುಭವಿ ಬ್ಯಾಟ್ಸ್’ಮನ್’ಗಳಾದ ಶಕೀಬ್ ಅಲ್ ಹಸನ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮುಷ್ಫಿಕರ್ ರಹೀಮ್ ಆಸರೆಯಾದರು. ಮೂರನೇ ವಿಕೆಟ್’ಗೆ 142 ರನ್ ಕಲೆಹಾಕಿದ ಈ ಜೋಡಿ ದಕ್ಷಿಣ ಆಫ್ರಿಕಾ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿತು. ಶಕೀಬ್ 75 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮುಷ್ಫಿಕರ್ 78 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ರನ್ ವೇಗ ಹೆಚ್ಚಿಸಿದ ಮೊಹಮ್ಮದುಲ್ಲಾ: ಶಕೀಬ್-ಮುಷ್ಫಿಕರ್ ವಿಕೆಟ್ ಪತನದ ಬಳಿಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದ ಮೊಹಮ್ಮದುಲ್ಲಾ[44], ಮೊಹಮ್ಮದ್ ಮಿಥುಲ್[21] ಹಾಗೂ ಮೊಸಾದ್ದೇಕ್ ಹುಸೈನ್[26] ತಂಡದ ಮೊತ್ತವನ್ನು 330ರ ಗಡಿ ಮುಟ್ಟಿಸಲು ನೆರವಾದರು.
ದಕ್ಷಿಣ ಆಫ್ರಿಕಾ ಪರ ನೂರನೇ ಪಂದ್ಯವಾಡುತ್ತಿರುವ ಇಮ್ರಾನ್ ತಾಹಿರ್, ಮಧ್ಯಮ ವೇಗಿಗಳಾದ ಆ್ಯಂಡಿಲೆ ಫೆಲುಕ್ವಾಯೋ ಹಾಗೂ ಕ್ರಿಸ್ ಮೋರಿಸ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ: 330/6
ಮುಷ್ಫಿಕರ್ ರಹೀಮ್: 78
ಆ್ಯಂಡಿಲೆ ಫೆಲುಕ್ವಾಯೋ: 52/2

[* ಬಾಂಗ್ಲಾ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]