ನವದೆಹಲಿ[ಜೂ.09]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ತಮ್ಮ ಕೀಪಿಂಗ್‌ ಗ್ಲೌಸ್‌ ಮೇಲೆ ಬಾಕು ಚಿಹ್ನೆ ಹಾಕಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಚಿಹ್ನೆ ತೆಗೆಯುವಂತೆ ಪಟ್ಟು ಹಿಡಿದ ಐಸಿಸಿಗೆ ಬಿಸಿಸಿಐ ಮಣಿದಿದೆ. ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಶನಿವಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿಯಮಗಳನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಧೋನಿ ಗ್ಲೌಸ್‌ ಮೇಲೆ ಬಾಕು ಚಿಹ್ನೆ ಇರುವ ಕುರಿತು ಮಾತನಾಡಿದ ರಾಯ್‌, ‘ನಮ್ಮ ನಿಲುವು ಸ್ಪಷ್ಟವಾಗಿದೆ. ಐಸಿಸಿ ನಿಯಮಗಳಿಗೆ ನಾವು ಬದ್ಧರಾಗಿದ್ದೇವೆ. ನಮ್ಮ ದೇಶದಲ್ಲಿ ಕ್ರೀಡೆಗೆ ಅತ್ಯುನ್ನತ ಸ್ಥಾನವಿದೆ. ಯಾವುದೇ ನಿಯಮ ಉಲ್ಲಂಘಿಸಲು ನಾವು ಇಚ್ಛಿಸುವುದಿಲ್ಲ’ ಎಂದಿದ್ದಾರೆ.

ಧೋನಿ ಗ್ಲೌಸ್ ವಿವಾದ: ಗಂಭೀರ್ ಹೇಳಿದ್ದೇನು..?

ಕ್ರೀಡಾ ಸಾಮಾಗ್ರಿ ಹಾಗೂ ಪೋಷಾಕು ನಿಯಮಗಳನ್ನು ಧೋನಿ ಉಲ್ಲಂಘಿಸಿದ್ದಾರೆ. ಮುಂಚಿತವಾಗಿಯೇ ಅನುಮತಿ ಪಡೆಯದೆ ಆಟಗಾರ ಇಲ್ಲವೇ ತಂಡದ ಸಿಬ್ಬಂದಿ ಯಾವುದೇ ಸಂದೇಶ ಪ್ರದರ್ಶನ ಮಾಡುವಂತಿಲ್ಲ. ರಾಜಕೀಯ, ಧರ್ಮ, ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಪಟ್ಟ ವಿಚಾರಗಳ ಸಂದೇಶಗಳನ್ನು ಪ್ರದರ್ಶಿಸಲು ಅನುಮತಿ ನೀಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಜತೆಗೆ ಗ್ಲೌಸ್‌ನಲ್ಲಿ ಪ್ರಾಯೋಜಕರ ಚಿಹ್ನೆಗಳನ್ನಷ್ಟೇ ಬಳಸಬೇಕು. ಆದರೆ ಧೋನಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಹೇಳಿದೆ.

ಬಾಕು ಚಿಹ್ನೆ ಇರುತ್ತೆ, ಆದರೆ ಕಾಣೋದಿಲ್ಲ!

ಧೋನಿ ವಿಶ್ವಕಪ್‌ ಟೂರ್ನಿಯುದ್ದಕ್ಕೂ ಬಾಕು ಚಿಹ್ನೆ ಇರುವ ಗ್ಲೌಸ್‌ ತೊಟ್ಟು ಆಟ ಮುಂದುವರಿಸಲಿದ್ದಾರೆ. ಆದರೆ ಚಿಹ್ನೆ ಕ್ಯಾಮೆರಾಕ್ಕೆ ಕಾಣಿಸುವುದಿಲ್ಲ. ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದರ ವರದಿ ಪ್ರಕಾರ, ಧೋನಿ ಚಿಹ್ನೆ ಮೇಲೆ ಟೇಪ್‌ ಅಂಟಿಸಲಿದ್ದಾರೆ.

ವಿವಾದ ಬೇಡ ಬಿಸಿಸಿಐಗೆ ಧೋನಿ!

ಗ್ಲೌಸ್‌ ವಿವಾದ ಆರಂಭವಾಗುತ್ತಿದ್ದಂತೆ ಬಿಸಿಸಿಐ ಅಧಿಕಾರಿಗಳು ಧೋನಿಯನ್ನು ಸಂಪರ್ಕಿಸಿ ನಿಯಮದ ಬಗ್ಗೆ ವಿವರಿಸಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಐಸಿಸಿ ನಿಯಮದ ಪ್ರಕಾರ ಚಿಹ್ನೆ ಬಳಸುವಂತಿಲ್ಲ ಎನ್ನುವುದನ್ನು ಅರಿತ ಧೋನಿ, ‘ವಿಶ್ವಕಪ್‌ನಂತಹ ದೊಡ್ಡ ಟೂರ್ನಿ ವೇಳೆ ಅನಗತ್ಯ ಒತ್ತಡ ಬೇಡ. ನಿಯಮ ಪಾಲಿಸೋಣ’ ಎಂದರು ಎಂದು ವರದಿಯಲ್ಲಿ ತಿಳಿಸಲಾಗಿದೆ.