ಲಂಡನ್‌[ಜೂ.09]: ಭಾರತ ತಂಡದ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿಯವ ಕನಸಿಗೆ ಭಾನುವಾರ ಅಸಲಿ ಪರೀಕ್ಷೆ ಎದುರಾಗಲಿದೆ. 2019ರ ಐಸಿಸಿ ಏಕದಿನ ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಒಂದೆನಿಸಿರುವ ಭಾರತ-ಆಸ್ಪ್ರೇಲಿಯಾ ಪಂದ್ಯಕ್ಕೆ ಇಲ್ಲಿನ ದಿ ಓವಲ್‌ ಕ್ರೀಡಾಂಗಣ ಆತಿಥ್ಯ ನೀಡಲಿದ್ದು, 5 ಬಾರಿ ವಿಶ್ವ ಚಾಂಪಿಯನ್‌ ತಂಡದ ಎದುರು ಗೆಲುವು ಸಾಧಿಸಲು ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಹೊಸ ತಂತ್ರಗಳನ್ನು ಹೆಣಿಯಬೇಕಿದೆ.

ವಿಶ್ವಕಪ್‌ನಲ್ಲಿ ಭಾರತ-ಆಸ್ಪ್ರೇಲಿಯಾ ಹಲವು ರೋಚಕ ಕದನಗಳಿಗೆ ಸಾಕ್ಷಿಯಾಗಿದ್ದು, ಈ ಪಂದ್ಯ ಎರಡೂ ದೇಶಗಳ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಸಾಧಿಸಿದರೂ, ಭಾರತಕ್ಕೆ ಆಸೀಸ್‌ ಎದುರಿಸುವ ಮುನ್ನ ಆತಂಕ ಇದ್ದೇ ಇದೆ. ಕಳೆದ ಕೆಲ ತಿಂಗಳಲ್ಲಿ ಆಸ್ಪ್ರೇಲಿಯಾ ತನ್ನ ಆಟದ ಗುಣಮಟ್ಟವನ್ನು ಏರಿಸಿಕೊಂಡಿದೆ. ಆಫ್ಘಾನಿಸ್ತಾನ ವಿರುದ್ಧ ಸಲೀಸಾಗಿ ಗೆದ್ದಿದ್ದ ಆಸೀಸ್‌, ವೆಸ್ಟ್‌ಇಂಡೀಸ್‌ ವಿರುದ್ಧ ಆರಂಭಿಕ ಹಿನ್ನಡೆ ಬಳಿಕ ಪುಟಿದೆದ್ದು ಗೆಲುವು ಒಲಿಸಿಕೊಂಡಿತ್ತು.

ಧೋನಿ ಗ್ಲೌಸ್ ವಿವಾದ: ಗಂಭೀರ್ ಹೇಳಿದ್ದೇನು..?

ಒಂದು ವರ್ಷ ಕಾಲ ಸ್ಟೀವ್‌ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್‌ ಸೇವೆ ಸಿಗದೆ ಪರದಾಡಿದ್ದ ಆಸ್ಪ್ರೇಲಿಯಾ, ಇಬ್ಬರು ತಂಡಕ್ಕೆ ವಾಪಸಾದ ಬಳಿಕ ತನ್ನ ಎಂದಿನ ಲಯ ಕಂಡುಕೊಂಡಿದೆ. 5 ಬಾರಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ತನ್ನ ಘನತೆಗೆ ತಕ್ಕ ಆಟವಾಡುತ್ತಿದೆ. ಆಸ್ಪ್ರೇಲಿಯಾದ ಲಯ ಭಾರತ ತಂಡಕ್ಕೆ ಖಂಡಿತವಾಗಿಯೂ ಆತಂಕ ಮೂಡಿಸಲಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಸೀಸ್‌ಗೆ ಶರಣಾಗಿದ್ದ ಭಾರತ, ಇನ್ನೂ ಸರಿಯಾದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಸಂಯೋಜನೆಗಾಗಿ ಹುಡುಕಾಡುತ್ತಿದೆ.

ಭಾರತ ತಂಡದಲ್ಲಿ ಬದಲಾವಣೆ?: ಭಾರತ ಪ್ರವಾಸದ ವೇಳೆ ಆಸ್ಪ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಸ್ಪಿನ್‌ ಜೋಡಿ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ರನ್ನು ಸಮರ್ಥವಾಗಿ ಎದುರಿಸಿದ್ದರು. ವಾರ್ನರ್‌, ಸ್ಮಿತ್‌ ಇಲ್ಲದಿದ್ದರೂ ಆಸ್ಪ್ರೇಲಿಯಾ ಯಶಸ್ಸು ಕಂಡಿತ್ತು. ಇನ್ನು ಕೇದಾರ್‌ ಜಾಧವ್‌ರ ಸೈಡ್‌ ಆರ್ಮ್ ಆಫ್‌ ಸ್ಪಿನ್‌ ಬೌಲಿಂಗ್‌ಗೂ ಆಸ್ಪ್ರೇಲಿಯಾ ನಾಯಕ ಆ್ಯರೋನ್‌ ಫಿಂಚ್‌ ಹಾಗೂ ಉಸ್ಮಾನ್‌ ಖವಾಜ ತಕ್ಕ ಉತ್ತರ ನೀಡಿದ್ದರು. ಇದೀಗ ಸ್ಮಿತ್‌ ಹಾಗೂ ವಾರ್ನರ್‌ ಸಹ ತಂಡದಲ್ಲಿರುವ ಕಾರಣ, ಭಾರತ ಸ್ಪಿನ್‌ ಅಸ್ತ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಓವಲ್‌ನ ಬೌನ್ಸಿ ಪಿಚ್‌ ಹಾಗೂ ಮೋಡ ಕವಿದ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಭಾರತ ಆಟಗಾರರ ಆಯ್ಕೆ ನಡೆಸಬೇಕಿದೆ.

ದ.ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಆಡಲು ಅವಕಾಶ ಪಡೆಯದ ಮೊಹಮದ್‌ ಶಮಿ, ಭಾನುವಾರ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆಸ್ಪ್ರೇಲಿಯನ್ನರ ವಿರುದ್ಧ ಭಾರತದ ಮುಂಚೂಣಿ ವೇಗಿಗಳಾದ ಜಸ್ಪ್ರೀತ್‌ ಬುಮ್ರಾ ಹಾಗೂ ಶಮಿ ಉತ್ತಮ ದಾಖಲೆ ಹೊಂದಿದ್ದಾರೆ. ದ.ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಭುವನೇಶ್ವರ್‌ ಕುಮಾರ್‌ಗೆ ಸ್ಥಾನ ಖಚಿತವಿಲ್ಲ. ಒಂದೊಮ್ಮೆ ಕುಲ್ದೀಪ್‌ ಹಾಗೂ ಚಹಲ್‌ ಇಬ್ಬರನ್ನೂ ಉಳಿಸಿಕೊಳ್ಳಲು ನಿರ್ಧರಿಸಿದರೆ ಭುವನೇಶ್ವರ್‌ ತಮ್ಮ ಸ್ಥಾನವನ್ನು ಶಮಿಗೆ ಬಿಟ್ಟುಕೊಡಬೇಕಾಗುತ್ತದೆ. ಬೌನ್ಸಿ ಪಿಚ್‌ ಆಗಿರುವ ಕಾರಣ, ಜಾಧವ್‌ ಪರಿಣಾಮಕಾರಿಯಾಗುವುದು ಕಷ್ಟ. ಹೀಗಾಗಿ ವಿಜಯ್‌ ಶಂಕರ್‌ಗೆ ಅವಕಾಶ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಧವನ್‌ಗೆ ಸ್ಟಾರ್ಕ್ ಭೀತಿ: ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ರ ಕಳಪೆ ಲಯ ಮುಂದುವರಿದಿದೆ. 2 ಅಭ್ಯಾಸ ಪಂದ್ಯಗಳಲ್ಲೂ ಲಯದ ಸಮಸ್ಯೆ ಎದುರಿಸಿದ್ದ ಧವನ್‌, ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಬೇಗನೆ ಔಟಾಗಿದ್ದರು. ಪ್ರಚಂಡ ಲಯದಲ್ಲಿರುವ ವೇಗಿ ಮಿಚೆಲ್‌ ಸ್ಟಾರ್ಕ್, ಧವನ್‌ರನ್ನು ಬೇಗನೆ ಪೆವಿಲಿಯನ್‌ಗಟ್ಟುವ ವಿಶ್ವಾಸದಲ್ಲಿದ್ದಾರೆ. ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ, ಆಸ್ಪ್ರೇಲಿಯಾ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದು, ಭಾರತ ತಂಡ ಈ ಇಬ್ಬರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.

ಪಿಚ್‌ ರಿಪೋರ್ಟ್‌

ದಿ ಓವಲ್‌ನ ಪಿಚ್‌ ಉತ್ತಮ ಬೌನ್ಸ್‌ ಹೊಂದಿರಲಿದ್ದು, ಮೋಡ ಕವಿದ ವಾತಾವರಣವಿದ್ದರೆ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಒಂದೊಮ್ಮೆ ಬಿಸಿಲು ಹೆಚ್ಚಿದ್ದರೆ ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗಲಿದೆ. ಇಲ್ಲಿನ ಪಿಚ್‌ನಲ್ಲಿ ಹಲವು ಬಾರಿ 300ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ.

ಒಟ್ಟು ಮುಖಾಮುಖಿ: 136

ಭಾರತ: 49

ಆಸ್ಪ್ರೇಲಿಯಾ: 77

ರದ್ದು: 10

ವಿಶ್ವಕಪ್‌ನಲ್ಲಿ ಭಾರತ vs ಆಸ್ಪ್ರೇಲಿಯಾ

ಪಂದ್ಯ: 11

ಭಾರತ: 03

ಆಸ್ಪ್ರೇಲಿಯಾ: 08

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ, ಜಸ್ಪ್ರೀತ್‌ ಬುಮ್ರಾ.

ಆಸ್ಪ್ರೇಲಿಯಾ: ಡೇವಿಡ್‌ ವಾರ್ನರ್‌, ಆ್ಯರೋನ್‌ ಫಿಂಚ್‌, ಉಸ್ಮಾನ್‌ ಖವಾಜ, ಸ್ಟೀವ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕಾರ್ರಿ, ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್, ಆ್ಯಡಂ ಜಂಪಾ.

ಸ್ಥಳ: ಲಂಡನ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1