ಲಂಡನ್[ಜೂ.08]: ಶಕೀಬ್ ಅಲ್ ಹಸನ್ ಆಕರ್ಷಕ ಶತಕದ ಹೊರತಾಗಿಯೂ ಬಾಂಗ್ಲಾದೇಶ 106 ರನ್’ಗಳ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಕಳೆದೆರಡು ವಿಶ್ವಕಪ್’ಗಳಲ್ಲಿ ಬಾಂಗ್ಲಾ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಇಂಗ್ಲೆಂಡ್ ನೀಡಿದ್ದ 387 ರನ್’ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ನಾಲ್ಕನೇ ಓವರ್’ನಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆ ಬಳಿಕ ಎರಡನೇ ವಿಕೆಟ್’ಗೆ ಶಕೀಬ್ ಅಲ್ ಹಸನ್-ತಮೀಮ್ ಇಕ್ಬಾಲ್ ಜೋಡಿ 55 ರನ್’ಗಳ ಜತೆಯಾಟವಾಡುವ ಮೂಲಕ ಆಸರೆಯಾಯಿತು. ಉತ್ತಮ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ಇಕ್ಬಾಲ್[19]ಗೆ ಮಾರ್ಕ್ ವುಡ್ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ನಂತರ ಮುಷ್ಫಿಕರ್ ರಹೀಮ್ ಜತೆ ಶಕೀಬ್ 106 ರನ್’ಗಳ ಜತೆಯಾಟವಾಡಿ ಇಂಗ್ಲೆಂಡ್ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಫ್ಲಂಕೆಟ್ ಯಶಸ್ವಿಯಾದರು. ಮುಷ್ಪಿಕರ್ 50 ಎಸೆತಗಳಲ್ಲಿ 2 ಬೌಂಡರಿ 44 ರನ್ ಬಾರಿಸಿ ಜೇಸನ್ ರಾಯ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮರು ಓವರ್’ನಲ್ಲಿ ಮೊಹಮ್ಮದ್ ಮಿಥುನ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಆಲ್ರೌಂಡರ್ ಶಕೀಬ್ 119 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸಹಿತ 121 ರನ್ ಬಾರಿಸಿ ಬೆನ್ ಸ್ಟೋಕ್ಸ್ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮೊಹಮ್ಮದುಲ್ಲಾ[28] ಹಾಗೂ ಮೊಸಾದ್ದೇಕ್ ಹೊಸೈನ್[26] ಹೋರಾಟ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಜೇಸನ್ ರಾಯ್ ಅಬ್ಬರ: ಹೊಸ ಇತಿಹಾಸ ಬರೆದ ಇಂಗ್ಲೆಂಡ್

ಇಂಗ್ಲೆಂಡ್ ಪರ ಜೋಪ್ರಾ ಆರ್ಚರ್, ಬೆನ್ ಸ್ಟೋಕ್ಸ್ ತಲಾ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2 ಹಾಗೂ ಆದಿಲ್ ರಶೀದ್ ಮತ್ತು ಲಿಯಾಮ್ ಫ್ಲಂಕೆಟ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಜೇಸನ್ ರಾಯ್ ಸಿಡಿಲಬ್ಬರದ ಶತಕ ಹಾಗೂ ಜಾನಿ ಬೇರ್’ಸ್ಟೋ ಮತ್ತು ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ 386 ರನ್ ಬಾರಿಸಿತ್ತು. ಇದರ ಜತೆಗೆ ಏಕದಿನ ಸತತ 7ನೇ ಬಾರಿಗೆ 300+ ರನ್ ಬಾರಿಸಿದ ಮೊದಲ ತಂಡ ಎನ್ನುವ ಅಪರೂಪದ ದಾಖಲೆ ಇಂಗ್ಲೆಂಡ್ ಬರೆಯಿತು. ಈ ಮೊದಲು 2007ರಲ್ಲಿ ಆಸ್ಟ್ರೇಲಿಯಾ ಸತತ 6 ಬಾರಿ 300+ ರನ್ ಬಾರಿಸಿದ ಸಾಧನೆ ಮಾಡಿತ್ತು. 

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 386/6
ಜೇಸನ್ ರಾಯ್: 153
ಮೆಹದಿ ಹಸನ್: 67/2

ಬಾಂಗ್ಲಾದೇಶ: 280/10
ಶಕೀಬ್ ಅಲ್ ಹಸನ್: 121
ಬೆನ್ ಸ್ಟೋಕ್ಸ್: 23/3