ಕಾರ್ಡಿಫ್‌[ಜೂ.04]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೋಲಿನ ಆರಂಭ ಪಡೆದ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮಂಗಳವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 

ನ್ಯೂಜಿಲೆಂಡ್‌ ವಿರುದ್ಧ ಹೀನಾಯ ಸೋಲು ಕಂಡಿದ್ದ ಶ್ರೀಲಂಕಾಕ್ಕೆ, ಆಸ್ಪ್ರೇಲಿಯಾ ವಿರುದ್ಧ ಹೋರಾಡಿದ್ದ ಆಫ್ಘಾನಿಸ್ತಾನದಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದ್ದು, ಮೇಲ್ನೋಟಕ್ಕೆ ಆಫ್ಘಾನಿಸ್ತಾನವೇ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದೆ. ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾದ ಬಲಿಷ್ಠ ಬೌಲಿಂಗ್‌ ಪಡೆ ಎದುರು ಆಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಯಶಸ್ಸು ಕಂಡಿರಲಿಲ್ಲ. ಆದರೆ ಲಂಕಾ ಬೌಲಿಂಗ್‌ ವಿಭಾಗ, ಆಸ್ಪ್ರೇಲಿಯಾದಷ್ಟು ಬಲಿಷ್ಠವಲ್ಲದ ಕಾರಣ, ಆಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳಿಂದ ಸುಧಾರಿತ ಪ್ರದರ್ಶನ ನಿರೀಕ್ಷೆ ಮಾಡಬಹುದಾಗಿದೆ.

ವಿಶ್ವಕಪ್ 2019: ಇಂಗ್ಲೆಂಡ್‌ ಮಣಿಸಿ ಸೇಡು ತೀರಿಸಿಕೊಂಡ ಪಾಕಿಸ್ತಾನ

ಆಫ್ಘಾನಿಸ್ತಾನ ಉತ್ಸಾಹಿ ಆಟಗಾರರಿಂದ ಕೂಡಿದ್ದು, ಟಿ20 ಮಾದರಿಯಲ್ಲಿ ಹೆಚ್ಚಿನ ಅನುಭವ ಹೊಂದಿದೆ. ಆದರೆ 50 ಓವರ್‌ ಮಾದರಿಗೆ ಅಗತ್ಯವಿರುವ ತಾಳ್ಮೆ ಹಾಗೂ ತಂತ್ರಗಾರಿಕೆ ರೂಢಿಸಿಕೊಂಡರೆ ಆಫ್ಘನ್ನರು ಮತ್ತಷ್ಟು ಅಪಾಯಕಾರಿ ಆಗುವುದರಲ್ಲಿ ಅನುಮಾನವಿಲ್ಲ. ಶ್ರೀಲಂಕಾ ಸಹ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದರೂ, ಸಂಘಟಿತ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ದಿಮುತ್‌ ಕರುಣರತ್ನೆ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು. ಕುಸಾಲ್‌ ಪೆರೇರಾ, ಏಂಜೆಲೋ ಮ್ಯಾಥ್ಯೂಸ್‌, ತಿಸಾರ ಪೆರೇರಾ, ಧನಂಜಯ ಡಿ ಸಿಲ್ವಾ ಜವಾಬ್ದಾರಿ ಅರಿತು ಬ್ಯಾಟ್‌ ಮಾಡಬೇಕಿದೆ. ಅನುಭವಿ ವೇಗಿ ಲಸಿತ್‌ ಮಾಲಿಂಗ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ವಿಶ್ವಕಪ್ ಮೊದಲ 20 ಪಂದ್ಯಗಳು ಎಲ್ಲಿ..? ಯಾವಾಗ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಪಿಚ್‌ ರಿಪೋರ್ಟ್‌

ನ್ಯೂಜಿಲೆಂಡ್‌-ಲಂಕಾ ಪಂದ್ಯಕ್ಕೆ ಹಸಿರು ಪಿಚ್‌ ಒದಗಿಸಲಾಗಿತ್ತು. ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಕ್ಕಿತ್ತು. ಈ ಪಂದ್ಯಕ್ಕೂ ಅಂತದ್ದೇ ಪಿಚ್‌ ಸಿದ್ಧಪಡಿಸಲಾಗಿದ್ದು, ವೇಗಿಗಳು ಮಹತ್ವದ ಪಾತ್ರ ವಹಿಸಲಿದ್ದಾರೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.

ಒಟ್ಟು ಮುಖಾಮುಖಿ: 03

ಆಫ್ಘಾನಿಸ್ತಾನ: 01

ಶ್ರೀಲಂಕಾ: 02

ವಿಶ್ವಕಪ್‌ನಲ್ಲಿ ಆಫ್ಘನ್‌ vs ಲಂಕಾ

ಪಂದ್ಯ: 01

ಆಫ್ಘಾನಿಸ್ತಾನ: 00

ಶ್ರೀಲಂಕಾ: 01

ಸಂಭವನೀಯ ಆಟಗಾರರ ಪಟ್ಟಿ

ಆಫ್ಘಾನಿಸ್ತಾನ: ಶಹಜಾದ್‌, ಹಜರತ್ತುಲ್ಲಾ, ರಹಮತ್‌, ಹಶ್ಮತ್ತುಲ್ಲಾ, ನಜೀಬುಲ್ಲಾ, ನಬಿ, ಗುಲ್ಬದಿನ್‌ (ನಾಯಕ), ರಶೀದ್‌, ದವ್ಲತ್‌, ಮುಜೀಬ್‌, ಹಮೀದ್‌.

ಶ್ರೀಲಂಕಾ: ಕರುಣರತ್ನೆ (ನಾಯಕ), ತಿರಿಮನ್ನೆ, ಕುಸಾಲ್‌, ಕುಸಾಲ್‌ ಮೆಂಡಿಸ್‌, ಮ್ಯಾಥ್ಯೂಸ್‌, ಧನಂಜಯ, ತಿಸಾರ, ಉಡಾನ, ಜೀವನ್‌, ಲಕ್ಮಲ್‌, ಮಾಲಿಂಗ.

ಸ್ಥಳ: ಕಾರ್ಡಿಫ್‌

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1