ನಾಟಿಂಗ್‌ಹ್ಯಾಮ್(ಜೂ.03): ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ನಡೆದ  ಏಕದಿನ ಸರಣಿ ಸೋಲಿಗೆ ಪಾಕಿಸ್ತಾನ ಸೇಡು ತೀರಿಸಿಕೊಂಡಿದೆ. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕ್ 14 ರನ್ ಗೆಲುವು ಸಾಧಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ದದ ಸೋಲಿನಿಂದ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡಿದೆ.

349 ರನ್ ಬೃಹತ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಜೇಸನ್ ರಾಯ್ ಕೇವಲ 8 ರನ್ ಸಿಡಿಸಿ ಔಟಾದರು. ಜಾನಿ ಬೈರ್‌ಸ್ಟೋ 32 ರನ್ ಸಿಡಿಸಿ ಔಟಾದರು. ಆದರೆ ಜೋ ರೂಟ್ ಹೋರಾಟ ಮುಂದುವರಿಸಿದರು. ಇತ್ತ ನಾಯಕ ಇಯಾನ್ ಮಾರ್ಗನ್ ಹಾಗೂ ಬೆನ್ ಸ್ಟೋಕ್ಸ್ ಅಬ್ಬರಿಸಿಲ್ಲ.

ಜೋ ರೂಟ್ ಹಾಗೂ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡಕ್ಕೇ ಚೇತರಿಕೆ ನೀಡಿದರು. ಅದ್ಬುತ ಪ್ರದರ್ಶನ ನೀಡಿದ ರೂಟ್ ಭರ್ಜರಿ ಶತಕ ಸಿಡಿಸಿದರು. ರೂಟ್ ಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಕಳೆದುಕೊಂಡರು. ರೂಟ್ 107 ರನ್ ಸಿಡಿಸಿ ಔಟಾದರು.  ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಸ್ ಬಟ್ಲರ್ 76 ಎಸೆತದಲ್ಲಿ 103 ರನ್ ಸಿಡಿಸಿ ಔಟಾದರು. 

ಕ್ರಿಸ್ ವೋಕ್ಸ್ ಬ್ಯಾಟಿಂಗ್ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿಸಿತು. ಆದರೆ ಮೊಯಿನ್ ಆಲಿ 19 ರನ್ ಸಿಡಿಸಿ ಔಟಾದರೆ, ಕ್ರಿಸ್ ವೋಕ್ಸ್ 21 ರನ್ ಸಿಡಿಸಿ ಔಟಾಗೋ ಮೂಲಕ ಆತಂಕ ಹೆಚ್ಚಿಸಿದರು. ಇಂಗ್ಲೆಂಡ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 29 ರನ್ ಅವಶ್ಯಕತೆ ಇತ್ತು. ಜೋಫ್ರಾ ಆರ್ಚರ್ ಕೂಡ ಆಸರೆಯಾಗಲಿಲ್ಲ. ಹೀಗಾಗಿ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 334 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಪಾಕ್ 14 ರನ್ ಗೆಲುವು ಸಾಧಿಸಿತು.