ಟೋಕಿಯೋ 2020: ಹರ್ಮನ್‌ಪ್ರೀತ್, ಶ್ರೀಜೇಶ್‌ಗೆ ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ?
* ಎಫ್‌ಐಎಚ್ ಪ್ರಶಸ್ತಿಗೆ ಹಲವು ಭಾರತೀಯ ಹಾಕಿ ಪಟುಗಳ ಹೆಸರು ಶಾರ್ಟ್‌ಲಿಸ್ಟ್‌ಗೆ
* ವರ್ಷದ ಆಟಗಾರ ಪ್ರಶಸ್ತಿ ಹೊಸ್ತಿಲಲ್ಲಿ ಡ್ರ್ಯಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್
* ವರ್ಷದ ಗೋಲು ಕೀಪರ್ ಪ್ರಶಸ್ತಿ ರೇಸ್‌ನಲ್ಲಿ ಶ್ರೀಜೇಶ್, ಸವಿತಾ
ಲಾವ್ಸನ್(ಆ.24): ಭಾರತದ ಪುರುಷರ ಹಾಕಿ ತಂಡದ ಡ್ರ್ಯಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಮಹಿಳಾ ತಂಡದ ಆಟಗಾರ್ತಿ ಗುರ್ಜಿತ್ ಕೌರ್ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ(ಎಫ್‌ಐಎಚ್) ವರ್ಷದ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದವು.
ಪಿ.ಆರ್.ಶ್ರಿಜೇಶ್ ಹಾಗೂ ಸವಿತಾ ಪೂನಿಯಾರನ್ನು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ತಂಡದ ವರ್ಷದ ಗೋಲ್‌ಕೀಪರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಪುರುಷರ ತಂಡದ ಕೋಚ್ ಗ್ರಹಂ ರೀಡ್, ಮಹಿಳಾ ತಂಡದ ಮಾಜಿ ಕೋಚ್ ಸೋರ್ಡ್ ಮರಿನೆ ಹೆಸರು ವರ್ಷದ ಕೋಚ್ ಪ್ರಶಸ್ತಿಗೆ, ಮಹಿಳಾ ತಂಡದ ಆಟಗಾರ್ತಿ ಶರ್ಮಿಲಾ ದೇವಿ ಹೆಸರು ಉದಯೋನ್ಮುಖ ತಾರೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಟೋಕಿಯೋ 2020: ಪಂಜಾಬಿನ 10 ಸರ್ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರು..!
ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರೊಂದಿಗೆ ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿತ್ತು. ಭಾರತ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಗೋಲ್ ಕೀಪರ್ ಶ್ರೀಜೇಶ್ ಹಾಗೂ ಡ್ರ್ಯಾಗ್ ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಮಹತ್ವದ ಪಾತ್ರ ನಿಭಾಯಿಸಿದ್ದರು.
ಇನ್ನು ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಕೂಡಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಮೊದಲ ಬಾರಿಗೆ ಸೆಮಿಫೈನಲ್‌ಗೇರುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ಎದುರು ಭಾರತ ಗೆಲುವು ಸಾಧಿಸುವಲ್ಲಿ ಮಹಿಳಾ ಗೋಲು ಕೀಪರ್ ಸವಿತಾ ಪೂನಿಯಾ ಪ್ರಮುಖ ಪಾತ್ರ ವಹಿಸಿದ್ದರು.