ಟೋಕಿಯೋ 2020: ಪಂಜಾಬಿನ 10 ಸರ್ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರು..!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತೀಯ ಪುರುಷರ ಹಾಕಿ ತಂಡ
* 41 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಗೆದ್ದಿರುವ ಮನ್‌ಪ್ರೀತ್ ಸಿಂಗ್ ಪಡೆ
* ಪಂಜಾಬ್ ಆಟಗಾರರ ಸ್ಮರಣಾರ್ಥ 10 ಸರ್ಕಾರಿ ಶಾಲೆಗಳಿಗೆ ಹಾಕಿ ತಾರೆಯರ ಹೆಸರು
ಚಂಡೀಗಡ(ಆ.23): ರಾಜ್ಯದ 10 ಸರಕಾರಿ ಶಾಲೆಗಳಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕು ದಶಕಗಳ ಬಳಿಕ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡದ ಸದಸ್ಯರ ಹೆಸರನ್ನಿಡುವ ಮೂಲಕ ಪಂಜಾಬ್ ಸರಕಾರವು ಗೌರವ ಸಲ್ಲಿಸಿದೆ. ಪಂಜಾಬ್ ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
1980ರ ಬಳಿಕ ಅಂದರೆ ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿತ್ತು. ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳನ್ನು ಜಯಿಸಿದ ಸಾಧನೆ ಮಾಡಿದ್ದ ಭಾರತೀಯ ಹಾಕಿ ತಂಡವು ಕಳೆದ 4 ದಶಕಗಳಿಂದ ಪದಕ ಗೆಲ್ಲಲು ವಿಫಲವಾಗಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಜರ್ಮನಿ ಎದುರು 5-4 ಗೋಲುಗಳ ಅಂತರದ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು.
ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ
ಭಾರತೀಯ ಕ್ರೀಡೆಗೆ ಪಂಜಾಬ್ ಬಂಗಾರದ ಕೊಡುಗೆಯೇ ನೀಡಿದೆ. ಹರ್ಯಾಣದ ಬಳಿಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪಂಜಾಬ್ ಒಟ್ಟು 20 ಕ್ರೀಡಾಪಟುಗಳನ್ನು ಕಳಿಸುವ ಮೂಲಕ ಉನ್ನತ ಸಾಧನೆಯನ್ನು ಮಾಡಿದೆ ಎಂದು ಕ್ರೀಡಾಸಚಿವ ವಿಜಯ್ ಇಂದರ್ ಸಿಂಗ್ಲಾ ತಿಳಿಸಿದ್ದಾರೆ.
ತಂಡದ ನಾಯಕರಾದ ಮನ್‌ಪ್ರೀತ್ ಸಿಂಗ್, ಉಪನಾಯಕ ಹರ್ಮನ್‌ಪ್ರೀತ್ ಸಿಂಗ್, ಮಂದೀಪ್ ಸಿಂಗ್, ಸಂಶೀರ್ ಸಿಂಗ್, ರೂಪಿಂದರ್ ಪಾಲ್ ಸಿಂಗ್ ಸೇರಿ ಒಟ್ಟು 10 ಆಟಗಾರರ ಹೆಸರನ್ನು ವಿವಿಧ ಶಾಲೆಗಳಿಗೆ ಇಡಲಾಗಿದೆ.