ಮಲೇಷ್ಯಾದಲ್ಲಿ ನಡೆದ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದರು. ಉಭಯ ತಂಡಗಳ ನಡುವಿನ ರೋಚಕ ಪಂದ್ಯವು 3-3 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು, ಇದರಲ್ಲಿ ಭಾರತ ಹಿನ್ನಡೆಯಿಂದ ಪುಟಿದೆದ್ದು ಬಂದಿತ್ತು.

ಜೋಹರ್(ಮಲೇಷ್ಯಾ): ಭಾರತ ಹಾಗೂ ಪಾಕಿಸ್ತಾನ ಆಟಗಾರರು ಪರಸ್ಪರ ಕೈಕುಲುಕಿ, ಹೈ-ಫೈವ್ ಮಾಡಿದ ಘಟನೆ ಇಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಮಂಗಳವಾರ ನಡೆಯಿತು. ಇತ್ತೀಚಿಗೆ ಏಷ್ಯಕಪ್ ಟಿ20, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಯಾವುದೇ ಸಂವಹನ ನಡೆದಿರಲಿಲ್ಲ. ಜೊತೆಗೆ ನೋ ಹ್ಯಾಂಡ್ ಶೇಕ್ ನಿಯಮವನ್ನು ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಆದರೆ ಆ ನಿಯಮ ಹಾಕಿ ತಂಡಕ್ಕೆ ಅನ್ವಯವಾಗಿಲ್ಲ.

ಪಂದ್ಯಕ್ಕೂ ಮುನ್ನ ಸೋಮವಾರ, ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್ ಎಫ್) ತನ್ನ ದೇಶದ ಆಟಗಾರರಿಗೆ ಹ್ಯಾಂಡ್ ಶೇಕ್ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಎಚ್ಚರಿಸಿತ್ತು. ಒಂದು ವೇಳೆ ಭಾರತೀಯರು ಹ್ಯಾಂಡ್ ಶೇಕ್ ಮಾಡದಿದ್ದರೆ ನಿರ್ಲಕ್ಷಿಸುವಂತೆ ಸೂಚಿಸಿತ್ತು. ಆದರೆ, ಮಂಗಳವಾರ ಪಂದ್ಯವಾಡಲು ಅಂಕಣಕ್ಕೆ ಇಳಿಯುತ್ತಿದ್ದಂತೆ ಭಾರತೀಯ ಆಟಗಾರರೇ ಪಾಕಿಸ್ತಾನಿಯರಿಗೆ ಹೈ ಫೈವ್ ನೀಡಿ, ಕೈಕುಲುಕಿ ಶುಭ ಕೋರಿದರು. ಪಂದ್ಯದುದ್ದಕ್ಕೂ ಎರಡೂ ದೇಶಗಳ ಆಟಗಾರರ ನಡುವೆ ಮಾತುಕತೆ ಕಂಡುಬಂತು. ಪಂದ್ಯ ಮುಗಿದ ಬಳಿಕವೂ ಎರಡೂ ತಂಡದ ಆಟಗಾರರು ಪರಸ್ಪರ ಅಭಿನಂದಿಸಿದರು.

3-3 ಗೋಲುಗಳಲ್ಲಿ ಡ್ರಾಗೊಂಡ ಪಂದ್ಯ

ಪಂದ್ಯದಲ್ಲಿ 0-2 ಗೋಲುಗಳ ಹಿನ್ನಡೆ ಅನುಭವಿಸಿ ಪಾಕಿಸ್ತಾನ ವಿರುದ್ಧ ಸೋಲುವ ಆತಂತಕ್ಕೆ ಒಳಗಾಗಿದ್ದ ಭಾರತ 3-3 ಗೋಲುಗಳಲ್ಲಿ ಡ್ರಾ ಸಾಧಿಸಿ, ಟೂರ್ನಿಯಲ್ಲಿ ಅಜೇಯವಾಗಿ ಉಳಿಯಿತು. ಪಾಕಿಸ್ತಾನ 5ನೇ ನಿಮಿಷದಲ್ಲೇ ಖಾತೆ ತೆರೆಯಿತು. ಬಳಿಕ 39ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿತು. ಬಳಿಕ ಭಾರತ ಪರ 43ನೇ ನಿಮಿಷದಲ್ಲಿ ಅರೈಜಿತ್ ಸಿಂಗ್, 47ನೇ ನಿಮಿಷದಲ್ಲಿ ಸೌರಭ್ ಆನಂದ್, 53ನೇ ನಿಮಿಷದಲ್ಲಿ ಮನೀತ್ ಸಿಂಗ್ ಗೋಲು ಬಾರಿಸಿದರು. ಭಾರತ 3-2ರ ಮುನ್ನಡೆಯೊಂದಿಗೆ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ 55ನೇ ನಿಮಿಷದಲ್ಲಿ ಪಾಕ್ ಮತ್ತೊಂದು ಗೋಲು ಬಾರಿಸಿ ಸಮಬಲ ಸಾಧಿಸಿತು.

2027ರ ಏಷ್ಯನ್ ಕಪ್‌ಗೆ ಭಾರತಕ್ಕಿಲ್ಲ ಅರ್ಹತೆ!

ಗೋವಾ: 2027ರ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಗೆ ಪ್ರವೇಶ ಪಡೆಯಲು ಭಾರತ ತಂಡ ವಿಫಲವಾಗಿದೆ. ಅರ್ಹತಾ ಸುತ್ತಿನ 3ನೇ ಹಂತದಲ್ಲಿ ಭಾರತ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು. ಮಂಗಳವಾರ ಇಲ್ಲಿ ನಡೆದ ಸಿಂಗಾಪುರ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತಕ್ಕೆ 1-2 ಗೋಲುಗಳ ಸೋಲು ಎದುರಾಯಿತು.

ಆಡಿರುವ 4 ಪಂದ್ಯಗಳಲ್ಲಿ 2 ಸೋಲು, 2 ಡ್ರಾನೊಂದಿಗೆ ಭಾರತ 'ಸಿ' ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವಷ್ಟೇ ಪ್ರಧಾನ ಟೂರ್ನಿಗೆ ಪ್ರವೇಶ ಪಡೆಯಲಿದೆ. ಪಂದ್ಯದ 14ನೇ ನಿಮಿಷದಲ್ಲೇ ಲಾಲಿಯಾನ್ಸುಲಾ ಚಾಂಗ್ಲೆ ಬಾರಿಸಿದ ಗೋಲಿನ ನೆರವಿನಿಂದ ಭಾರತ ಆರಂಭಿಕ ಮುನ್ನಡೆ ಪಡೆಯಿತು. ಆದರೆ ಸಾಂಗ್ ಯು-ಯಂಗ್ 44ನೇ ನಿಮಿಷದಲ್ಲಿ ಬಾರಿಸಿದ ಗೋಲು, ಸಿಂಗಾಪುರ ಸಮಬಲ ಸಾಧಿಸಲು ನೆರವಾಯಿತು. 58ನೇ ನಿಮಿಷದಲ್ಲಿ ಸಾಂಗ್ ಯು-ಯಂಗ್ 2ನೇ ಗೋಲು ಬಾರಿಸಿ, ಪಂದ್ಯವನ್ನು ಭಾರತದಿಂದ ಕಸಿದುಕೊಂಡರು. ಹಲವು ಅವಕಾಶಗಳನ್ನು ಕೈಚೆಲ್ಲಿದ ಭಾರತ ನಿರಾಸೆಗೊಳಗಾಯಿತು.

ಉಭಯ ತಂಡಗಳು ಅ.9ರಂದು ನಡೆದಿದ್ದ ಮೊದಲ ಚರಣದ ಪಂದ್ಯದಲ್ಲಿ 1-1ರ ಡ್ರಾಗೆ ತೃಪ್ತಿಪಟ್ಟಿದ್ದವು. ಭಾರತಕ್ಕೆ ಹಾಂಕಾಂಗ್ ಹಾಗೂ ಬಾಂಗ್ಲಾದೇಶ ವಿರುದ್ಧ ತಲಾ ಒಂದು ಪಂದ್ಯ ಬಾಕಿ ಇದ್ದು, ಇವು ಔಪಚಾರಿಕವಷ್ಟೇ.

ಡೆನ್ಮಾರ್ಕ್ ಓಪನ್: ಆಯುಷ್ ಶೆಟ್ಟಿಗೆ ಸೋಲು

ಒಡೆನ್ಸ್: ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ಕರ್ನಾಟಕದ ಆಯುಷ್ ಶೆಟ್ಟಿ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ನಂ.30 ಆಯುಷ್‌, ಫ್ರಾನ್ಸ್‌ನ ಟೊಮಾ ಪೊಪೊವ್ ವಿರುದ್ಧ 19-21, 21-17, 15-21 ಸೋಲುಂಡರು. ಮಹಿಳೆಯರ ವಿಭಾಗದಲ್ಲಿ ಅನ್ಮೋಲ್ ಖಾರ್ಬ್ ಇಂಡೋನೇಷ್ಯಾದ ಪುತ್ರಿ ಕುಸುಮ ವರ್ದನಿ ವಿರುದ್ದ 9-21, 14-21 ರಲ್ಲಿ ಸೋಲುಂಡರು. ಡಬಲ್‌ನಲ್ಲಿ ಪೃಥ್ವಿ ಹಾಗೂ ಸಾಯಿ ಪ್ರತೀಕ್ ಜೋಡಿಯೂ ಸೋಲುಂಡಿತು.