ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿಂದು ಭಾರತ ಹಾಕಿ ತಂಡವು ಸೆಮಿಫೈನಲ್‌ನಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ 15 ಆಟಗಾರರ ತಂಡವಾಗಿ ಕಣಕ್ಕಿಳಿಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಮುಖ ಪದಕ ಭರವಸೆ ಕ್ರೀಡೆಯಾಗಿರುವ ಹಾಕಿಯ ಸೆಮಿಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತ ಹಾಗೂ ಜರ್ಮನಿ ತಂಡಗಳು ಪರಸರ ಸೆಣಸಾಡಲಿವೆ. ಕ್ವಾರ್ಟರ್ ಫೈನಲ್‌ನಲ್ಲಿ ರೆಡ್ ಕಾರ್ಡ್ ಪಡೆದು ಅಮಿತ್ ರೋಹಿದಾಸ್ ಒಂದು ಪಂದ್ಯದ ಮಟ್ಟಿಗೆ ನಿಷೇಧಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಸೆಮಿಫೈನಲ್‌ನಲ್ಲಿ ಭಾರತ 15 ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

ಟೋಕಿಯೋ ಒಲಿಂಪಿಕ್‌ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿಯನ್ನು ಸೋಲಿಸಿ ಐತಿಹಾಸಿಕ ಪದಕ ಗೆದ್ದಿದ್ದ ಭಾರತ, ಈ ಬಾರಿ ಮತ್ತೆ ಜರ್ಮನಿಗೆ ಸೋಲುಣಿಸಿ ಇತಿಹಾಸ ಸೃಷ್ಟಿಸಲು ಕಾಯುತ್ತಿದೆ. ಭಾರತ ಕೊನೆ ಬಾರಿ 1980ರಲ್ಲಿ ಫೈನಲ್‌ಗೇರಿ, ಚಿನ್ನ ಗೆದ್ದಿತ್ತು. ಬರೋಬ್ಬರಿ 44 ವರ್ಷಗಳ ಬಳಿಕ ಮತ್ತೆ ಫೈನಲ್ ಪ್ರವೇಶಿಸುವ ಕಾತರದಲ್ಲಿದೆ.ಸೋತರೆ ಕಂಚಿಗಾಗಿ ಸೆಣಸಾಡಬೇಕಿದೆ.

0.005 ಸೆಕೆಂಡ್‌ ಅಂತರದಲ್ಲಿ 100 ಮೀ. ಓಟ ಗೆದ್ದ ಲೈಲ್ಸ್‌! ಫೋಟೋ ಫಿನಿಶ್‌ ಮೂಲಕ ಫಲಿತಾಂಶ ನಿರ್ಧಾರ..!

ಹರ್ಮನ್‌ಪ್ರೀತ್ ನಾಯಕತ್ವದ ಭಾರತ, ಭಾನುವಾರ ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಶೂಟೌಟ್‌ನಲ್ಲಿ ಗೆದ್ದಿತ್ತು. ಅತ್ತ ಜರ್ಮನಿ ತಂಡ ಅರ್ಜೆಂಟೀನಾ ವಿರುದ್ಧ ಗೆದ್ದು ಸೆಮೀಸ್‌ಗೇರಿದೆ. ಭಾರತ ಹಾಗೂ ಜರ್ಮನಿ ಕಳೆದ ಜೂನ್‌ನಲ್ಲಿ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ 2 ಬಾರಿ ಮುಖಾಮುಖಿ ಯಾಗಿದ್ದವು. ಮೊದಲ ಪಂದ್ಯದಲ್ಲಿ ಭಾರತ 2ನೇ ಮುಖಾಮುಖಿಯಲ್ಲಿ ಜರ್ಮನಿ ಗೆದ್ದಿತ್ತು. ಬಳಿಕ ಒಲಿಂಪಿಕ್ಸ್ ಸಿದ್ಧತೆಗಾಗಿ ಉಭಯ ತಂಡಗಳ ನಡುವೆ ನಡೆದ 6 ಅಭ್ಯಾಸ ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿತ್ತು. ಮಂಗಳವಾರ ಮತ್ತೊಂದು ಸೆಮಿಫೈನಲ್ ನಲ್ಲಿನೆದರ್‌ಲೆಂಡ್ಸ್ -ಸ್ಪೇನ್ ಸೆಣಸಾಡಲಿವೆ.

ಅಮಿತ್‌ ಒಂದು ಪಂದ್ಯದಿಂದ ಬ್ಯಾನ್‌: ಸೆಮೀಸ್‌ಗೆ ಅಲಭ್ಯ

ಪ್ಯಾರಿಸ್: ಗ್ರೇಟ್‌ ಬ್ರಿಟನ್‌ ವಿರುದ್ಧ ಹಾಕಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೆಂಪು ಕಾರ್ಡ್‌ ಪಡೆದಿದ್ದ ಭಾರತದ ಪ್ರಮುಖ ಡಿಫೆಂಡರ್‌ ಅಮಿತ್‌ ರೋಹಿದಾಸ್‌ಗೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌(ಎಫ್‌ಐಎಚ್‌) ಒಂದು ಪಂದ್ಯದ ನಿಷೇಧ ಹೇರಿದೆ. ಇದರಿಂದಾಗಿ ಜರ್ಮನಿ ವಿರುದ್ಧ ಮಂಗಳವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯಕ್ಕೆ ಅಮಿತ್‌ ಲಭ್ಯರಿಲ್ಲ. ಹೀಗಾಗಿ ಭಾರತ 16ರ ಬದಲು 15 ಮಂದಿ ಜೊತೆ ಆಡಬೇಕಿದೆ. 

ಪ್ಯಾರಿಸ್ ಒಲಿಂಪಿಕ್ಸ್‌ 2024 ಹೋರಾಡಿ ಸೋತ ಲಕ್ಷ್ಯ ಸೇನ್; ಭಾರತದ ಕೈತಪ್ಪಿದ ಕಂಚು..!

ಅಮಿತ್‌ ಮೇಲಿನ ನಿಷೇಧ ಪ್ರಶ್ನಿಸಿ ಎಫ್‌ಐಎಚ್‌ಗೆ ಹಾಕಿ ಇಂಡಿಯಾ ಮೇಲ್ಮನವಿ ಸಲ್ಲಿಸಿತ್ತು. ಆದರೆ ಮೇಲ್ಮನವಿಯನ್ನು ಎಫ್‌ಐಎಚ್‌ ತಿರಸ್ಕರಿಸಿದೆ. 2ನೇ ಕ್ವಾರ್ಟರ್‌ ವೇಳೆ ತಮ್ಮ ಹಾಕಿ ಸ್ಟಿಕ್‌ ಬ್ರಿಟನ್‌ ಆಟಗಾರನ ಮುಖಕ್ಕೆ ಬಡಿದ ಕಾರಣ ಅಮಿತ್‌ಗೆ ರೆಫ್ರಿ ರೆಡ್‌ ಕಾರ್ಡ್‌ ನೀಡಿದ್ದರು.