ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮೆರಿಕದ ನೊಹಾ ಲೈಲ್ಸ್ ಕೇವಲ 0.005 ಸೆಕೆಂಡ್ ಅಂತರದಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಒಲಿಂಪಿಕ್ಸ್‌ನ ಪುರುಷರ 100 ಮೀ. ಓಟದ ಫೈನಲ್ ನಾಟಕೀಯ ರೀತಿಯಲ್ಲಿ ಮುಕ್ತಾಯಗೊಂಡಿದೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ನೊಹಾ ಲೈಲ್ಸ್ ಕೇವಲ 0.005 ಸೆಕೆಂಡ್ ಅಂತರದಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಅವರು 9.784 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಜಮೈಕಾದ ಕಿಶಾನೆ ಥಾಮ್ಸನ್(9.789 ಸೆಕೆಂಡ್) ಬೆಳ್ಳಿ, ಅಮೆರಿಕದ ಫ್ರೆಡ್ ಕರ್ಲಿ(9.81 ಸೆಕೆಂಡ್) ಕಂಚು ತಮ್ಮದಾಗಿಸಿಕೊಂಡರು. ಎಲ್ಲಾ ಅಥ್ಲೀಟ್‌ಗಳಿಂದ ನಿಕಟ ಸ್ಪರ್ಧೆ ಕಂಡುಬಂದ ಕಾರಣ ಆಯೋಜಕರು ಫೋಟೋ ಫಿನಿಶ್‌ನಲ್ಲಿ ವಿಜೇತರನ್ನು ನಿರ್ಧರಿಸಿದರು.
ಏನಿದು ಫೋಟೋ ಫಿನಿಶ್?
ಎಲ್ಲಾ ಸ್ಪರ್ಧಿಗಳು ಮಿಲಿ ಸೆಂಟಿ ಮೀಟರ್ ಅಂತರದಲ್ಲಿ ಗುರಿ ತಲುಪಿದ್ದರು. ಹೀಗಾಗಿ ಫಲಿತಾಂಶ ನಿರ್ಧರಿಸುವುದು ಆಯೋಜಕರಿಗೆ ಸವಾಲಾಗಿ ಪರಿಣಮಿಸಿತು. ಕೊನೆಗೆ ಸ್ಪರ್ಧಿಗಳು ಗುರಿ ತಲುಪಿದಾಗ ತೆಗೆದಿದ್ದ ಫೋಟೋಗಳನ್ನು ವಿವಿಧ ತಂತಜ್ಞಾನಗಳ ಮೂಲಕ ಪರಿಶೀಲಿಸಿ ವಿಜೇತರನ್ನು ಘೋಷಿಸಲಾಯಿತು.
ಕ್ರೀಡಾ ಗ್ರಾಮದಲ್ಲಿ ಅವ್ಯವಸ್ಥೆ: ಪಾರ್ಕಲ್ಲೇ ಮಲಗಿದ ಇಟಲಿಯ ಚಿನ್ನದ ವಿಜೇತ ಈಜುಪಟು!
ಕ್ರೀಡಾ ಗ್ರಾಮದಲ್ಲಿ ಒದಗಿಸಿರುವ ವ್ಯವಸ್ಥೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಇಟಲಿಯ ಚಿನ್ನ ವಿಜೇತ ಈಜು ಪಟು ಥಾಮಸ್ ಸೆಕಾನ್ ಪಾರ್ಕ್‌ನಲ್ಲಿ ಮಲಗಿದ್ದಾರೆ. ತಮ್ಮ ಟವಲ್ ಹಾಸಿ ಅದರ ಮೇಲೆ ಥಾಮಸ್ ನಿದ್ದೆ ಮಾಡುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದಿರುವ ಥಾಮಸ್, ಕ್ರೀಡಾ ಗ್ರಾಮದಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ತೀವ್ರ ಬಿಸಿಲಿನಿಂದಾಗಿ ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೋಣೆಗಳಲ್ಲೂ ವಿಪರೀತ ಬಿಸಿ ವಾತಾವರಣವಿದೆ. ಇದರಿಂದ ತಮ್ಮ ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ದೂರಿದ್ದರು.
ಸೀನ್ ನದಿಯಲ್ಲಿ ಈಜಿ ಅನಾರೋಗ್ಯ: ಸ್ಪರ್ಧೆ ತೊರೆದ ಬೆಲ್ಜಿಯಂ ಟ್ರಯಥ್ಲಾನ್ ಅಥ್ಲೀಟ್‌ಗಳು
ಪ್ಯಾರಿಸ್‌ನ ಸೀನ್ ನದಿಯಲ್ಲಿ ಈಜಿದ ಬಳಿಕ ಬೆಲ್ಜಿಯಂ ಹಾಗೂ ಸ್ವಿಜರ್‌ಲೆಂಡ್‌ನ ಟ್ರಯಥ್ಲಾನ್ ಅಥ್ಲೀಟ್‌ಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಬೆಲ್ಜಿಯಂ ಟ್ರಯಥ್ಲಾನ್ ಮಿಶ್ರ ರಿಲೇ ತಂಡ ಸ್ಪರ್ಧೆಯಿಂದಲೇ ಹಿಂದೆ ಸರಿದಿದೆ. ಅತ್ತ ಸ್ವಿಜರ್‌ಲೆಂಡ್ ತಂಡ ಅನಾರೋಗ್ಯಕ್ಕೆ ತುತ್ತಾದ ಸ್ಪರ್ಧಿಯ ಬದಲು ಬೇರೊಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಸೀನ್ ನದಿ ನೀರಿನ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಭಾರೀ ಆಕ್ಷೇಪ ವ್ಯಕ್ತವಾಗುತ್ತಿತ್ತು. ಆದರೆ ಆಯೋಜಕರು ನದಿ ನೀರು ಈಜಲು ಯೋಗ್ಯ ಎಂದಿದ್ದರು.
