ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್, ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: 22 ವರ್ಷದ ಯುವ ಶಟ್ಲರ್ ಲಕ್ಷ್ಯ ಸೇನ್, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ದ ಆಘಾತಕಾರಿ ಸೋಲು ಕಾಣುವ ಮೂಲಕ ಒಲಿಂಪಿಕ್ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಮಲೇಷ್ಯಾದ ಲೀ ಝಿ ಜಿಯಾ 13-21, 21-16, 21-11 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ವಿಶ್ವ 7ನೇ ಶ್ರೇಯಾಂಕಿತ ಮಲೇಷ್ಯಾದ ಲೀ ಝಿ ಜಿಯಾ ವಿರುದ್ದ ಮೊದಲ ಗೇಮ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡುವ ಮೂಲಕ 21-13 ನೇರ ಸೆಟ್‌ಗಳಲ್ಲಿ ಅನಾಯಾಸವಾಗಿ ಲಕ್ಷ್ಯ ಸೇನ್ ಗೆಲುವು ತಮ್ಮದಾಗಿಸಿಕೊಂಡರು. ಇನ್ನು ದ್ವಿತೀಯ ಗೇಮ್‌ನಲ್ಲಿ ಲಕ್ಷ್ಯ ಸೇನ್ ಆರಂಭಿಕ ಮುನ್ನಡೆ ಸಾಧಿಸಿದರಾದರೂ, ಆ ಬಳಿಕ ಮಲೇಷ್ಯಾದ ಲೀ ಝಿ ಜಿಯಾ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಎರಡನೇ ಗೇಮ್‌ನಲ್ಲಿ ಒಂದು ಹಂತದಲ್ಲಿ 12-12ರ ಸಮಬಲದ ಹೋರಾಟ ಕಂಡು ಬಂದಿತು. ಆದರೆ ಆ ಬಳಿಕ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಲೀ ಝಿ ಜಿಯಾ 21-16 ಅಂತರದಲ್ಲಿ ಗೆಲುವಿನ ನಗೆ ಬೀರಿದರು.
ಒಂದೇ ಪಾಯಿಂಟ್‌ನಿಂದ ಕಂಚಿನ ಪದಕ ತಪ್ಪಿಸಿಕೊಂಡ ಶೂಟಿಂಗ್ ಸ್ಕೀಟ್ ಮಿಶ್ರ ಟೀಮ್!
ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಕಾದಾಟದಲ್ಲಿ ಲೀ ಝಿ ಜಿಯಾ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಆರಂಭದಲ್ಲಿ ಲೀ ಝಿ ಜಿಯಾ 8-2ರ ಮುನ್ನಡೆ ಸಾಧಿಸಿದ್ದರು. ಇದಾದ ಬಳಿಕ ಲಕ್ಷ್ಯ ಸೇನ್ ಕಮ್‌ಬ್ಯಾಕ್ ಮಾಡಲು ಮಲೇಷ್ಯಾ ಆಟಗಾರ ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ ಲೀ ಝಿ ಜಿಯಾ 21-11 ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಳ್ಳುವ ಮೂಲಕ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾದರು.
ಒಂದು ಕಡೆ ಮೊಣಕೈ ಗಾಯದಿಂದ ರಕ್ತ ಬಸಿಯುತ್ತಿದ್ದರೂ ಲಕ್ಷ್ಯ ಛಲಬಿಡದೇ ಕಾದಾಡುವ ಮೂಲಕ ಮಲೇಷ್ಯಾ ಆಟಗಾರನಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆದರೆ ನಿರ್ಣಾಯಕ ಘಟ್ಟದಲ್ಲಿ ಮಲೇಷ್ಯಾ ಆಟಗಾರ ಗೆಲುವು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
