ಭೀಕರ ಅಪಘಾತ; ನಾಲ್ವರು ರಾಷ್ಟ್ರೀಯ ಹಾಕಿ ಪಟುಗಳ ದುರ್ಮರಣ!
ಧ್ಯಾನ್ ಚಂದ್ ಹಾಕಿ ಟೂರ್ನಿಗೆ ತೆರಳುತ್ತಿದ್ದ ರಾಷ್ಟ್ರೀಯ ಹಾಕಿ ಪಟುಗಳ ಕಾರು ಅಪಘಾತಕ್ಕೀಡಾಗಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸಂಗಬಾದ್(ಮಧ್ಯಪ್ರದೇಶ)ಅ.14): ರಾಷ್ಟ್ರಮಟ್ಟದ ಧ್ಯಾನ್ ಚಂದ್ ಟ್ರೋಫಿಯಲ್ಲಿ ಮಿಂಚಿ, ಟೀಂ ಇಂಡಿಯಾ ಹಾಕಿ ತಂಡವನ್ನು ಪ್ರತಿನಿಧಿಸೋ ಗುರಿ ಹೊಂದಿದ್ದ ನಾಲ್ವರು ರಾಷ್ಟ್ರೀಯ ಹಾಕಿ ಪಟುಗಳು ದುರಂತ ಅಂತ್ಯ ಕಂಡಿದ್ದಾರೆ. ಧ್ಯಾನ್ ಚಂದ್ ಟೂರ್ನಿಗೆ ತೆರಳುತ್ತಿದ್ದ ಭೋಪಾಲ್ MP ಹಾಕಿ ಅಕಾಡೆಮಿಯ ಹಾಕಿ ಪಟುಗಳ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ
ರಾಷ್ಟ್ರೀಯ ಹಾಕಿ ಟೂರ್ನಿಗಾಗಿ ಸೋಮವಾರ(ಅ.14) ಮುಂಜಾನೆ ಹಾಕಿ ಪಟುಗಳು ಕಾರಿನಲ್ಲಿ ತೆರಳಿದ್ದಾರೆ. 7 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 69ರ ರೈಸಾಲ್ಪುರ ಗ್ರಾಮದ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ವಾಹನ ಡಿಕ್ಕಿಯಾಗೋದನ್ನು ತಪ್ಪಿಸುವ ಸಲುವಾಗಿ ತಕ್ಷಣವೇ ಕಾರನ್ನು ದಾರಿ ಬದಿಗೆ ತಿರುಗಿಸಿದ್ದಾನೆ. ಆದರೆ ವೇಗವಾಗಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: 2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್
ಹಾಕಿ ಪಟುಗಳು ಗೆಳೆಯನ ಹುಟ್ಟುಹಬ್ಬಕ್ಕಾಗಿ ಹೊಸಂಗಬಾದ್ ಸಮೀಪದ ಇತಾರ್ಸಿಗೆ ತೆರಳಿದ್ದರು. ಹುಟ್ಟು ಹಬ್ಬ ಆಚರಿಸಿದ ಬಳಿಕ ಹೊಸಂಗಬಾದ್‌ಗೆ ವಾಪಾಸ್ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಮೃತರಾದ ಹಾಕಿ ಪಟುಗಳು 18 ರಿಂದ 22ರ ವಯಸ್ಸಿನವರಾಗಿದ್ದು, ಉದಯೋನ್ಮುಖ ಹಾಕಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.
ಶೆಹನವಾಝ್ ಹುಸೈನ್(ಇಂಧೋರ್), ಆದರ್ಶ್ ಹಾರ್ದ್ವಾ(ಇತಾರ್ಸಿ) ಆಶಿಶ್ ಲಾಲ್(ಜಬಲ್‌ಪುರ್) ಅನಿಕೇತ್ ವರುಣ್(ಗ್ವಾಲಿಯರ್) ಮೃತಪಟ್ಟ ಹಾಕಿಪಟುಗಳು. ಶಾನ್ ಗ್ಲಾಡ್ವಿನ್(ಇತಾರ್ಸಿ), ಶಾಹಿಲ್ ಚೌರ್(ಇತಾರ್ಸಿ) ಹಾಗೂ ಅಕ್ಷಯ್ ಅವಾಸ್ತಿ(ಗ್ವಾಲಿಯರ್) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಹೊಸಂಗಬಾದ್ ಸಮೀಪದ ನರ್ಮದಾ ಅಪ್ನಾ ಆಸ್ಪತ್ರೆಗ ದಾಖಲಿಸಲಾಗಿದೆ.
ಇದನ್ನೂ ಓದಿ: FIH ಹಾಕಿ ಸೀರೀಸ್: ಭಾರತ ವನಿತೆಯರು ಚಾಂಪಿಯನ್
ಘಟನೆಗೆ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಮೃತರ ಕುಟುಂಬಕ್ಕೆ ಎಲ್ಲಾ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಇಷ್ಟೇ ಅಲ್ಲ, ಗಾಯಗೊಂಡಿರುವರಿಗೆ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.