ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮುಂದುವರೆದ ಭಾರತದ ಜಯದ ನಾಗಾಲೋಟಬದ್ದ ಎದುರಾಳಿ ಪಾಕಿಸ್ತಾನ ಎದುರು 4-0 ಅಂತರದ ಜಯಭೇರಿಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಚೆನ್ನೈ(ಆ.10): 7ನೇ ಆವೃತ್ತಿಯ ಏಷ್ಯನ್‌ ಪುರುಷರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನವನ್ನು ಬದ್ಧವೈರಿ ಭಾರತ ತಂಡ ಹೊರಗಟ್ಟಿದೆ. ಬುಧವಾರ ರೌಂಡ್‌ ರಾಬಿನ್‌ ಮಾದರಿಯ ಕೊನೆಯ ಪಂದ್ಯದಲ್ಲಿ 3 ಬಾರಿ ಚಾಂಪಿಯನ್‌ ಭಾರತ ತಂಡ ಪಾಕಿಸ್ತಾನ ವಿರುದ್ದ 4-0 ಗೋಲುಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಭಾರತ ಅಜೇಯವಾಗಿ, ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿಯೇ ಅಂತಿಮ 4ರ ಘಟ್ಟ ಪ್ರವೇಶಿಸಿದೆ. ಇನ್ನು ನಿರ್ಣಾಯಕ ಘಟ್ಟದಲ್ಲಿ ಹೀನಾಯ ಸೋಲು ಕಂಡ ಮೂರು ಬಾರಿಯ ಚಾಂಪಿಯನ್‌ ಪಾಕಿಸ್ತಾನ, ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ತನ್ನ ಅಭಿಯಾನ ಕೊನೆಗೊಳಿಸಿತು. ಪಾಕ್ ಸೆಮೀಸ್‌ಗೇರಬೇಕಿದ್ದರೆ ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಬೇಕಿತ್ತು.

ಪಂದ್ಯದ ಆರಂಭದಲ್ಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಭಾರತ ತಂಡಕ್ಕೆ 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆ ಒದಗಿಸಿದರು. 23ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದು ಹರ್ಮನ್‌, ಭಾರತ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ನೆರವಾದರು. 36ನೇ ನಿಮಿಷದಲ್ಲಿ ಜುಗ್ರಾಜ್‌ ಸಿಂಗ್ ಹೊಡೆದ ಪೆನಾಲ್ಟಿ ಕಾರ್ನರ್ ಗೋಲು ಹಾಗೂ 55ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್ ಬಾರಿಸಿದ ಗೋಲು ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿತು. ಶುಕ್ರವಾರ ಸೆಮೀಸ್‌ನಲ್ಲಿ ಭಾರತ ತಂಡ, ಜಪಾನ್‌ ವಿರುದ್ದ ಸೆಣಸಾಡಲಿದೆ.

ದಾಖಲೆಯ 6ನೇ ಬಾರಿ ಸೆಮಿಫೈನಲ್‌ಗೇರಿದ ಭಾರತ

ಟೂರ್ನಿಯ ಇತಿಹಾಸದಲ್ಲಿ ಭಾರತ ಹಾಕಿ ತಂಡವು ಒಟ್ಟಾರೆ 6ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತು. 2011ರ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡ 2012ರಲ್ಲಿ ಪಾಕಿಸ್ತಾನ ವಿರುದ್ದ ಸೋತು ರನ್ನರ್ ಅಪ್ ಆಗಿತ್ತು. 2013ರಲ್ಲಿ ಸೆಮೀಸ್‌ಗೇರಲು ವಿಫಲವಾಗಿದ್ದ ಭಾರತ, 2016ರಲ್ಲಿ ಮತ್ತೆ ಟ್ರೋಫಿ ಗೆದ್ದಿತ್ತು. ಬಳಿಕ 2018ರಲ್ಲಿ ಪಾಕ್‌ ಜತೆ ಟ್ರೋಫಿ ಹಂಚಿಕೊಂಡಿತ್ತು. 2021ರಲ್ಲಿ ಭಾರತ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ODI World Cup 2023 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಇಂಡೋ-ಪಾಕ್ ಪಂದ್ಯ ಸೇರಿ 9 ಮ್ಯಾಚ್‌ ವೇಳಾಪಟ್ಟಿ ಬದಲು

ಮಲೇಷ್ಯಾ, ಜಪಾನ್ ಸೆಮೀಸ್‌ಗೆ ಲಗ್ಗೆ..!

ರೌಂಡ್ ರಾಬಿನ್‌ ಮಾದರಿಯ ಕೊನೆಯ ಪಂದ್ಯದಲ್ಲಿ ಬುಧವಾರ ಜಪಾನ್ ಹಾಗೂ ಮಲೇಷ್ಯಾ ತಂಡಗಳು ಜಯ ಗಳಿಸಿದವು. ದಿನದ ಮೊದಲ ಪಂದ್ಯದಲ್ಲಿ ಚೀನಾವನ್ನು ಜಪಾನ್ ತಂಡ 2-1 ಗೋಲುಗಳಿಂದ ಮಣಿಸಿ 5 ಅಂಕ ಸಂಪಾದಿಸಿ 4ನೇ ಸ್ಥಾನ ಪಡೆಯಿತು. ನಂತರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯಾ ವಿರುದ್ದ ಮಲೇಷ್ಯಾ 1-0 ಅಂತರದಲ್ಲಿ ಜಯಭೇರಿ ಬಾರಿಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು.

ಸೆಮಿಫೈನಲ್ ವೇಳಾಪಟ್ಟಿ
ಆಗಸ್ಟ್‌ 11: ಮಲೇಷ್ಯಾ-ಕೊರಿಯಾ- ಸಂಜೆ 6 ಕ್ಕೆ
ಆಗಸ್ಟ್ 11: ಭಾರತ-ಜಪಾನ್‌- ಸಂಜೆ 8.30ಕ್ಕೆ