ಕೊರೋನಾ ವೈರಸ್ ಎಂಬುದು ಕಳೆದ ನಾಲ್ಕು ತಿಂಗಳಲ್ಲಿ ಬದುಕನ್ನು ಬಹಳಷ್ಟು ಬದಲಿಸಿದೆ. ತೀರಾ ಅನಿವಾರ್ಯವಲ್ಲದೆ ಹೊರ ಹೋಗದಿರುವುದನ್ನು ಕಲಿಸಿದೆ. ಬ್ಯಾಂಕಿಂಗ್, ಉದ್ಯೋಗ, ಶಾಪಿಂಗ್, ನ್ಯೂಸ್, ಎಂಟರ್ಟೇನ್‌ಮೆಂಟ್ ಎಲ್ಲಕ್ಕೂ ಈಗ ಆನ್‌ಲೈನ್ ವೇದಿಕೆ ಅವಲಂಬಿಸಿದ್ದೇವೆ. ಆನ್‌ಲೈನ್‌ನಲ್ಲಿಯೇ ಎಲ್ಲವನ್ನೂ ಮಾಡುವುದು ಈಗ ಸಾಮಾನ್ಯ ಜೀವನದ ಭಾಗವಾಗಿದೆ. ಅದಕ್ಕೆ ಮತ್ತೊಂದು ಸೇರ್ಪಡೆ ವರ್ಚುಯಲ್ ಕನ್ಸಲ್ಟೇಶನ್. 

ಹೌದು, ಕೊರೋನಾ ಬಂದ ಮೇಲಷ್ಟೆ ನಮ್ಮಲ್ಲಿ ಹಲವರಿಗೆ ಸಣ್ಣ ಪುಟ್ಟ ಸೀತ, ಕೆಮ್ಮು, ಜ್ವರ, ಮೈಕೈ ನೋವು ಇತ್ಯಾದಿಗಳಿಗೆ ವೈದ್ಯರ ಬಳಿ ಹೋಗಲೇಬೇಕೆಂದಿಲ್ಲ ಎಂಬ ಅರಿವಾಗಿರುವುದು. ಇವೆಲ್ಲಕ್ಕೂ ಈಗ ಫೋನಿನಲ್ಲಿ ಔಷಧ ಕೇಳಿಕೊಂಡರೆ ಸಾಕು ಎಂಬುದನ್ನು ಹಲವರು ಮನಗಂಡಿರುವುದು. ಮುಂಚೆಯಾದರೆ ಏನೇ ಇದ್ದರೂ ವೈದ್ಯರು ನೋಡಲೇಬೇಕು ಎಂದುಕೊಳ್ಳುತ್ತಿದ್ದವರೆಲ್ಲ ಈಗ ಅಂಥ ತೀರಾ ಅಗತ್ಯವಿದ್ದಲ್ಲಿ ವಿಡಿಯೋ ಕನ್ಸಲ್ಟೇಶನ್, ಇಲ್ಲದಿದ್ದಲ್ಲಿ ಫೋನ್ ಕನ್ಸಲ್ಟೇಶನ್ ಮೂಲಕ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆಯುವುದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಎಮರ್ಜೆನ್ಸಿ ಎಂದಾಗ ಮಾತ್ರ ಆಸ್ಪತ್ರೆಗೆ ಓಡಿದರೆ ಸಾಕು ಎಂಬುದು ಈಗ ಅರ್ಥವಾಗುತ್ತಿದೆ. 

ಹುಷಾರ್.. ಕಣ್ಣೀರಿನಿಂದಲೂ ಕೊರೋನಾ ವೈರಸ್‌ ಬರುತ್ತೆ..!

ಇ-ಕನ್ಸಲ್ಟೇಶನ್
ದೈಹಿಕ ಪರೀಕ್ಷೆ ಅಗತ್ಯವಿಲ್ಲದಂಥ ಸಂದರ್ಭಗಳಲ್ಲಿ ಅಂದರೆ, ಫಾಲೋ ಅಪ್, ರೂಟೀನ್ ಚೆಕಪ್ಸ್, ಸಣ್ಣ ಪುಟ್ಟ ಅನಾರೋಗ್ಯಗಳಿಗೆ ಕೇವಲ ವೈದ್ಯರ ಸಲಹೆ ಸೂಚನೆಗಳು ಸಾಕಾಗುತ್ತವೆ. ಹೆಚ್ಚಿನ ಬಾರಿ ಇಂಥ ಕೇಸ್‌ಗಳಲ್ಲಿ ದೈಹಿಕ ಪರೀಕ್ಷೆ ನಡೆಸದೆಯೂ ವೈದ್ಯರಿಗೆ ಅದರ ಗಂಭೀರತೆಯ ಮಟ್ಟ ನಿಮ್ಮ ವಿವರಣೆಯಿಂದಲೇ ತಿಳಿಯುತ್ತದೆ. ಆಗ ಅವರು ಏನು ಮಾಡಬೇಕು, ಯಾವ ಮೆಡಿಸಿನ್ ತಗೋಬೇಕು, ಅವರನ್ನು ಮುಖತಃ ಭೇಟಿಯಾಗಬೇಕೇ ಬೇಡವೇ ಎಲ್ಲವನ್ನೂ ಹೇಳುತ್ತಾರೆ. ಅಲ್ಲಿಗೆ ಕ್ಲಿನಿಕ್‌ಗೆ ಹೋಗಿ ಬರುವ ಸಮಯ ಉಳಿತಾಯವಾಗುತ್ತದೆ. ಸಮಸ್ಯೆಗೆ ಪರಿಹಾರವೂ ಸಿಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಇತರರಿಂದ ನಮಗೆ, ಅಥವಾ ನಮ್ಮಿಂದ ಇತರರಿಗೆ ಕೆಲ ಕಾಯಿಲೆಯ ರೋಗಾಣುಗಳು ಹರಡುವ ಅಪಾಯ ಹೆಚ್ಚಿರುತ್ತದೆ. ಆದರೆ, ಮನೆಯಿಂದಲೇ ಕನ್ಸಲ್ಟ್ ಮಾಡುವಾಗ ಈ ಭಯ ಇರುವುದಿಲ್ಲ. 

ನೆನಪಿಡಬೇಕಾದ ಸಂಗತಿಗಳು
- ವರ್ಚುಯಲ್ ಕನ್ಸಲ್ಟೇಶನ್‌ಗಳು ಇನ್ನು ಸಾಮಾನ್ಯ ಸಂಗತಿಯಾದ್ದರಿಂದ ವೈದ್ಯರು ಹಾಗೂ ಸಾಮಾನ್ಯರು ಇದರ ಬಳಕೆ ಬಗ್ಗೆ ಚೆನ್ನಾಗಿ ತಿಳಿದಿರುವುದು ಅಗತ್ಯ. ಇದಕ್ಕಾಗಿ ಬಳಸುವ ಆ್ಯಪ್‌ಗಳು, ಅಂತರ್ಜಾಲ ಬಳಕೆ, ವಿಡಿಯೋ ಕಾಲ್, ಆಡಿಯೋ ಕಾಲ್ ಮುಂತಾದವನ್ನು ಉಪಯೋಗಿಸುವ ಅರಿವಿರಬೇಕು. 

- ಸಾಮಾನ್ಯವಾಗಿ ವೈದ್ಯರಿಗೆ ಕರೆ ಮಾಡಿ, ಅದರಲ್ಲೂ ಫಾಲೋ ಅಪ್‌ಗಾಗಿ ಕರೆ ಮಾಡಿದಾಗ ಸುಮ್ಮನೆ ಬೇಕಾದ ಸಲಹೆ ಕೇಳಿ ಫೋನಿಡುವ ಅಭ್ಯಾಸ ಹಲವರಿಗೆ. ಆದರೆ, ಈಗ ನೀವು ನೇರ ಭೇಟಿ ಮಾಡುವ ಬದಲು ಕರೆ ಮಾಡುತ್ತಿದ್ದೀರಿ ಎಂಬುದನ್ನು ನೆನಪಿಡಿ. ಹಾಗಾಗಿ, ಇಲ್ಲಿ ಕೂಡಾ ಆನ್‌ಲೈನ್‌ ಮೂಲಕ ಡಾಕ್ಟರ್ ಫೀಸ್ ಕಟ್ಟಬೇಕಾಗುತ್ತದೆ. 

- ವೈದ್ಯರನ್ನು ಭೇಟಿಯಾಗುವಾಗ ನಿಮ್ಮ ಆರೋಗ್ಯ ದಾಖಲೆಗಳನ್ನೆಲ್ಲ ತೆಗೆದುಕೊಂಡು ಹೋಗುವ ಅಭ್ಯಾಸವಿರುತ್ತದೆಯಷ್ಟೇ. ಇಲ್ಲಿ ಕೂಡಾ ಕರೆ ಮಾಡುವ ಮುನ್ನ ಎಲ್ಲ ದಾಖಲೆಗಳನ್ನು ಎದುರಿಗಿಟ್ಟು ಕುಳಿತುಕೊಳ್ಳಿ. ಅಗತ್ಯ ಬಿದ್ದರೆ ಅದನ್ನು ಅಲ್ಲಿಯೇ ತೋರಿಸಬಹುದು. ಇಲ್ಲವೇ ವಾಟ್ಸಾಪ್ ಅಥವಾ ಇ ಮೇಲ್ ಮೂಲಕ ಕಳುಹಿಸಬೇಕಾಗಬಹುದು. 

ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ; ವಿಕೃತಿಯ ವಿರಾಟ ರೂಪ

- ಇಲ್ಲಿ ಕೂಡಾ ವೈದ್ಯರು ಹಾಗೂ ಪೇಶೆಂಟ್ ಕಂಫರ್ಟೇಬಲ್ ಆಗಿರುವುದು ಮುಖ್ಯ. ಹಾಗಾಗಿ, ನೀವು ಕ್ಲಿನಿಕ್‌ನಲ್ಲಿಯೇ ಇದ್ದೀರೆಂಬಂತೆ ಭಾವಿಸಿ ಮಾತನಾಡಿ. ಯಾವ ಸಮಸ್ಯೆಯನ್ನೂ ಹಂಚಿಕೊಳ್ಳಲು ಮುಜುಗರ ಮಾಡಿಕೊಳ್ಳಬೇಡಿ. ಮನೆಯಲ್ಲಿ ಇತರರಿಗೆ ನಿಮ್ಮ ಮಾತುಗಳು ಕೇಳಿಸುವ ಭಯವಿದ್ದಲ್ಲಿ, ಮುಂಜಾಗ್ರತೆಯಾಗಿ ಒಬ್ಬರೇ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಕಾಲ್ ಮಾಡಿ. 

ಇವನ್ನು ತಂದಿರಿಸಿಕೊಳ್ಳಿ
ವರ್ಚುಯಲ್ ಕನ್ಸಲ್ಟೇಶನ್, ಟೆಲಿ ಮೆಡಿಸಿನ್‌ಗಳು ಇನ್ನು ಸಾಮಾನ್ಯ ವಿಷಯವಾಗುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿ ಬಿಪಿ ಮೆಶಿನ್, ತಾಪಮಾನ ತಪಾಸಣೆ ಯಂತ್ರ, ತೂಕ ತಪಾಸಣೆ ಯಂತ್ರಗಳನ್ನು ಇಟ್ಟುಕೊಳ್ಳಿ. ಇವು ಬಹಳಷ್ಟು ಸಂದರ್ಭಗಳಲ್ಲಿ ನಿಮ್ಮ ಸಹಾಯಕ್ಕೆ ಬರುತ್ತವೆ. ನೀವೇ ರೀಡಿಂಗ್ಸನ್ನು ವೈದ್ಯರಿಗೆ ಕರೆ ಮಾಡಿದಾಗ ಹೇಳಿದರೆ ಸಾಕಾಗುತ್ತದೆ.