ಹೊಟ್ಟೆ ಖಾಲಿಯಾದಾಗ ಸ್ನಾಯುಗಳ ಚಲನೆ ಹಾಗೂ ಗಾಳಿ ಹೊರಹೋಗುವುದರಿಂದ ಗುರ್ ಎಂಬ ಶಬ್ದ ಬರುತ್ತದೆ. ಗ್ರೆಲಿನ್ ಹಾರ್ಮೋನ್ ಕೂಡ ಈ ಶಬ್ದಕ್ಕೆ ಕಾರಣವಾಗಬಹುದು. ಆಹಾರ ಸೇವನೆ, ಜೀರ್ಣಕಾರಿ ಸಮಸ್ಯೆ, ಒತ್ತಡ ಇವುಗಳಿಂದಲೂ ಈ ಶಬ್ದ ಉಂಟಾಗುತ್ತದೆ. ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಿ.
ಹಸಿವಾದಾಗ ಮಕ್ಕಳು ಅಳ್ತಾರೆ. ಮಗು ಅಳ್ತಿದ್ದಂತೆ ಪಾಲಕರು ತಿಂಡಿ ನೀಡಲು ಶುರು ಮಾಡ್ತಾರೆ. ಮಕ್ಕಳಂತೆ ನಮ್ಮ ಹೊಟ್ಟೆ ಕೂಡ ಹಸಿವಾಗ್ತಿದ್ದಂತೆ ಶಬ್ಧ ಮಾಡುತ್ತದೆ. ಹಸಿವಾದಾಗ ಹೊಟ್ಟೆಯಲ್ಲಿ ಗುಡ್, ಗುರ್ ಎನ್ನುವ ಚಿತ್ರವಿಚಿತ್ರ ಶಬ್ಧ ಕೇಳಿ ಬರ್ತಿರುತ್ತದೆ. ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಗುರುಗುಟ್ಟುವಿಕೆ ಶಬ್ಧ ಅನೇಕ ಬಾರಿ ನಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಗೂ ಕೇಳಿಸುತ್ತದೆ. ಈ ವಿಚಿತ್ರ ಶಬ್ದಗಳಿಗೆ ಅನೇಕ ಕಾರಣವಿದೆ. ಈ ಶಬ್ಧವನ್ನು ಬೊರ್ಬೊರಿಗ್ಮಿ ಎಂದು ಕರೆಯಲಾಗುತ್ತದೆ.
ಹಸಿವಾದಾಗ ಹೊಟ್ಟೆ (stomach) ಗುರ್ ಎನ್ನಲು ಕಾರಣ ಏನು? :
ಸ್ನಾಯು ಚಟುವಟಿಕೆ : ಹೊಟ್ಟೆ ಖಾಲಿಯಿದ್ದಾಗ ಹೊಟ್ಟೆ ಒಳಗಿನ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇವು ಹೊಟ್ಟೆಯೊಳಗಿರುವ ಗ್ಯಾಸ್, ಗಾಳಿಯನ್ನು ಹೊರಹಾಕುತ್ತವೆ. ಈ ಸಮಯದಲ್ಲಿ ಹೊಟ್ಟೆಯಿಂದ ನಿಮಗೆ ಶಬ್ಧ ಕೇಳಿ ಬರುತ್ತದೆ. ಸ್ನಾಯುಗಳ ಸಂಕೋಚನದಿಂದ ಉಂಟಾಗುವ ಈ ಶಬ್ದಗಳು ಕೇವಲ ಹೊಟ್ಟೆಗೆ ಸೀಮಿತವಾಗಿಲ್ಲ, ಕೆಲವೊಮ್ಮೆ ಕೆಳ ಕರುಳಿನಿಂದ ಕೂಡ ಈ ಶಬ್ಧ ಕೇಳಿ ಬರುತ್ತದೆ.
ಹಸಿವಾದಾಗ ಹೊಟ್ಟೆಯಲ್ಲಿ ಉಂಟಾಗುವ ಶಬ್ಧವು ಜೋರಾಗಿ ಕೇಳಲು ಕಾರಣವೆಂದರೆ, ಹೊಟ್ಟೆ ಖಾಲಿಯಾಗಿರುವುದು. ಆಹಾರವು ಉತ್ತಮ ಧ್ವನಿ ಮಫ್ಲರ್ ಆಗಿದೆ. ಆದ್ದರಿಂದ ನಿಮ್ಮ ಅನ್ನನಾಳ ಖಾಲಿಯಾಗಿರುವಾಗ, ಅದರ ಸ್ನಾಯು ಚಟುವಟಿಕೆಯು ಶಬ್ದ ಮಾಡುತ್ತದೆ.
ಹಾರ್ಮೋನ್ ಪ್ರತಿಕ್ರಿಯೆ : ಗ್ರೆಲಿನ್ ಮತ್ತು ಲೆಪ್ಟಿನ್ ರೂಪದಲ್ಲಿ ನಮ್ಮ ಪೋಷಣೆಯ ಅಗತ್ಯವನ್ನು ಟ್ರ್ಯಾಕ್ ಮಾಡಲು ಹಾರ್ಮೋನುಗಳು ನಮಗೆ ಸಹಾಯ ಮಾಡುತ್ತವೆ. ನಮಗೆ ಹಸಿವಾಗಿದೆ ಎಂಬುದನ್ನು ಗ್ರೆಲಿನ್ ಹೇಳಿದರೆ, ಲೆಪ್ಟಿನ್ ಹೊಟ್ಟೆ ತುಂಬಿದೆ ಎಂದು ಹೇಳುತ್ತದೆ. ಕೆಲವು ಪ್ರಾಣಿಗಳ ಅಧ್ಯಯನದ ಪ್ರಕಾರ, ಗ್ರೆಲಿನ್ ಹಾರ್ಮೋನ್, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಖಾಲಿಯಾಗುವಿಕೆಯನ್ನು ಹೆಚ್ಚಿಸುತ್ತದೆ. ಮಾನವನ ಅಧ್ಯಯನದಲ್ಲಿ ಗ್ರೆಲಿನ್ ನಿಂದ ಕರುಳುಗಳು ಉಪ್ಪು ನೀರಿಗಿಂತ ವೇಗವಾಗಿ ಕೆಲಸ ಮಾಡುತ್ತವೆ ಎಂಬುದು ಪತ್ತೆಯಾಗಿದೆ. ಹಸಿವಾದಾಗ ಗ್ರೆಲಿನ್ ಬೊರ್ಬೊರಿಗ್ಮಿಗೆ ಕಾರಣವಾಗುವ ಸ್ನಾಯು ಚಟುವಟಿಕೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ. ಆದರೆ ಇದು ನಮ್ಮ ಶರೀರಶಾಸ್ತ್ರದ ಒಂದು ಸಂಕೀರ್ಣ ಭಾಗವಾಗಿದ್ದು, ಬಹು ಹಾರ್ಮೋನುಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳೋದು ಕಷ್ಟ.
ಹಸಿವಾದಾಗ ಮಾತ್ರ ಹೊಟ್ಟೆಯಿಂದ ಶಬ್ಧ ಬರುತ್ತದೆಯೇ? : ಹಸಿವಾದಾಗ ಮಾತ್ರ ನಿಮ್ಮ ಹೊಟ್ಟೆಯಲ್ಲಿ ಶಬ್ಧ ಕೇಳಿಸೋದಿಲ್ಲ. ಈ ಶಬ್ದಗಳು ನೋವು, ವಾಕರಿಕೆ, ಅತಿಯಾದ ಉಬ್ಬರ ಅತಿಸಾರ ಅಥವಾ ಮಲಬದ್ಧತೆಯಂತಹ ಇತರ ಜಠರಗರುಳಿನ ಸಮಸ್ಯೆಯಿದ್ದಾಗಲೂ ಕಾಣಿಸಿಕೊಳ್ಳುತ್ತದೆ. ಪ್ರತಿಯೊಬ್ಬರ ಕರುಳಿನಲ್ಲಿ ಲಕ್ಷಾಂತರ ಆರೋಗ್ಯಕರ ಬ್ಯಾಕ್ಟೀರಿಯಾಗಳಿದ್ದು, ನಾವು ಸೇವಿಸುವ ಆಹಾರವನ್ನು ಒಡೆಯಲು ಮತ್ತು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಹೈಡ್ರೋಜನ್ ಮತ್ತು ಮೀಥೇನ್ ಅನಿಲಗಳನ್ನು ಬಿಡುಗಡೆ ಮಾಡುತ್ತದೆ, ಇದು ಹೊಟ್ಟೆಯ ಶಬ್ದಗಳು, ಉಬ್ಬುವುದು ಮತ್ತು ಇತರ ಜಠರಗರುಳಿನ ಲಕ್ಷಣಗಳನ್ನು ಹೆಚ್ಚಿಸುತ್ತದೆ. ನಿಮ್ಮ ಕರುಳಿನಲ್ಲಿ ಪ್ರತಿಕೂಲವಾದ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆದರೆ ಈ ಹೊಟ್ಟೆಯ ಶಬ್ದಗಳು ಹೆಚ್ಚು ತೀವ್ರವಾಗಿರಬಹುದು.
ಹೊಟ್ಟೆಯಲ್ಲಾಗುವ ಶಬ್ಧವನ್ನು ಕಡಿಮೆ ಮಾಡೋದು ಹೇಗೆ? : ಹೊಟ್ಟೆಯಲ್ಲಿ ದೊಡ್ಡದಾಗಿ ಶಬ್ಧ ಕೇಳಿ ಬರ್ತಿದ್ದರೆ, ಏನಾದ್ರೂ ಆಹಾರ ಸೇವನೆ ಮಾಡಿ, ಆಹಾರ ತಿನ್ನುವುದ್ರಿಂದ ಹಸಿವನ್ನು ಹೆಚ್ಚಿಸುವ ಗ್ರೆಲಿನ್ ಹಾರ್ಮೋನ್ ಬಿಡುಗಡೆ ಕಡಿಮೆ ಆಗುತ್ತದೆ. ಇದ್ರಿಂದ ಹೊಟ್ಟೆಯಲ್ಲಿ ಬರುವ ಶಬ್ಧ ಕಡಿಮೆ ಆಗುತ್ತದೆ. ಹೊಟ್ಟೆಯಲ್ಲಿ ಅತಿಯಾದ ಶಬ್ದ ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವ ಆಹಾರಗಳನ್ನು ಕಡಿಮೆ ಮಾಡಿ. ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಆಹಾರದಲ್ಲಿ ಶುಂಠಿ, ಪುದೀನ ಅಥವಾ ದಾಲ್ಚಿನ್ನಿ ಸೇರಿಸಿ. ಮೊಸರು, ಮಜ್ಜಿಗೆಯಂತ ಪ್ರೋಬಯಾಟಿಕ್ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬಹುದು. ಒತ್ತಡವೂ ಹೊಟ್ಟೆಯಲ್ಲಿ ಶಬ್ಧಕ್ಕೆ ಕಾರಣವಾಗುವ ಕಾರಣ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳ ಮೂಲಕ ಒತ್ತಡ ಕಡಿಮೆ ಮಾಡಿ. ದೇಹದ ಬಗ್ಗೆ ಗಮನ ಹರಿಸುವುದು ಮುಖ್ಯ. ಸಮಸ್ಯೆ ಅತಿಯಾದ್ರೆ ವೈದ್ಯರನ್ನು ಭೇಟಿಯಾಗಿ.


