Bad breath : ಅನೇಕರು ಬಾಯಿ ತೆಗೆದ್ರೆ ದೂರ ಓಡ್ಬೇಕು ಅನ್ನಿಸುತ್ತೆ. ಅವರ ಬಾಯಿ ವಾಸನೆ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೆ. ನಿಮಗೂ ಈ ಸಮಸ್ಯೆ ಇದ್ರೆ ಅದಕ್ಕೆ ಪರಿಹಾರ ಇಲ್ಲಿದೆ.

ಬಾಯಿಯ ದುರ್ವಾಸನೆ ಮುಜುಗರ ತರುವಂತ ಸಮಸ್ಯೆ. ಅನೇಕ ಜನರು ಅದನ್ನು ಮರೆಮಾಚಲು ಚೂಯಿಂಗ್ ಗಮ್, ಮೌತ್ ಫ್ರೆಶ್ನರ್ಗಳು ಅಥವಾ ಮೌತ್ವಾಶ್ ಬಳಸ್ತಾರೆ. ಆದ್ರೆ ಇವು ಅಲ್ಪಾವಧಿಗೆ ಮಾತ್ರ ಪರಿಣಾಮಕಾರಿ. ವಾಸನೆ ಶಾಶ್ವತವಾಗಿ ಹೋಗ್ಬೇಕು ಅಂದ್ರೆ ಈ ವಿಧಾನ ಬಳಸಿ.

ಬಾಯಿಯಿಂದ ದುರ್ವಾಸನೆ ಬರೋದು ಏಕೆ?

ಬಾಯಿಯ ದುರ್ವಾಸನೆ ಬರಲು ದೊಡ್ಡ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಾಗಿರಬಹುದು. ಹಲ್ಲುಗಳ ನಡುವೆ ಸಿಲುಕಿರುವ ಆಹಾರ ಮತ್ತು ನಾಲಿಗೆಯ ಮೇಲಿನ ಕೊಳೆಯಿಂದ ಈ ಬ್ಯಾಕ್ಟೀರಿಯಾ ಬೆಳೆಯುತ್ತವೆ. ಇದು ಬಾಯಿ ವಾಸನೆಗೆ ಕಾರಣವಾಗುತ್ತೆ.

ಏನು ಮಾಡಬೇಕು?

ನಿಮ್ಮ ಬಾಯಿಂದ ವಾಸನೆ ಬರ್ಯಿದ್ದರೆ ನೀವು ಮನೆಯಲ್ಲಿರುವ ಮಸಾಲೆ ಪದಾರ್ಥ ಬಳಸಿ ಈ ವಾಸನೆ ದೂರ ಮಾಡ್ಬಹುದು. ಅದಕ್ಕೆ ಲವಂಗ ಮತ್ತು ದಾಲ್ಚಿನಿ ಅಗತ್ಯವಿದೆ.

ಮೊದಲು 4 ರಿಂದ 5 ಲವಂಗವನ್ನು ಪುಡಿಮಾಡಿ ಸುಮಾರು 250 ಮಿಲಿ ನೀರಿಗೆ ಸೇರಿಸಿ. ನೀರಿಗೆ 1 ಇಂಚಿನ ದಾಲ್ಚಿನಿಯನ್ನು ಸೇರಿಸಿ. ಈಗ ನೀರನ್ನು ಮಧ್ಯಮ ಉರಿಯಲ್ಲಿ ಸುಮಾರು 5 ನಿಮಿಷಗಳ ಕಾಲ ಕುದಿಸಿ. ನಿಗದಿತ ಸಮಯದ ನಂತ್ರ ಗ್ಯಾಸ್ ಆಫ್ ಮಾಡಿ ಮತ್ತು ಪಾತ್ರೆಯನ್ನು ಮುಚ್ಚಿಡಿ. ನೀರು ಉಗುರು ಬೆಚ್ಚಗಾದ್ಮೇಲೆ ಅದನ್ನು ಸೋಸಿ, ಆ ನೀರಿನಲ್ಲಿ ಗಾರ್ಗಲ್ ಮಾಡಿ.

ಗಾರ್ಗಲ್ ಮಾಡುವ ಸರಿಯಾದ ವಿಧಾನ

ಒಂದು ಸಿಪ್ ದಾಲ್ಚಿನ್ನಿ ಮತ್ತು ಲವಂಗದ ನೀರನ್ನು ತೆಗೆದುಕೊಂಡು ಸುಮಾರು 30 ರಿಂದ 40 ಸೆಕೆಂಡುಗಳ ಕಾಲ ಚೆನ್ನಾಗಿ ಮುಕ್ಕಳಿಸಿ. ಇದರ ನಂತ್ರ ನೀರನ್ನು ಸ್ವಲ್ಪ ಗಂಟಲಿನ ಕಡೆಗೆ ಸರಿಸಿ ಮತ್ತು ಸುಮಾರು 20 ಸೆಕೆಂಡುಗಳ ಕಾಲ ಗಾರ್ಗ್ಲ್ ಮಾಡಿ. ನಂತರ ನೀರನ್ನು ಉಗುಳಿ. ಬೆಳಿಗ್ಗೆ ಹಲ್ಲುಜ್ಜಿದ ನಂತರ ಮತ್ತು ರಾತ್ರಿ ಮಲಗುವ ಮೊದಲು ನೀವು ಗಾರ್ಗಲ್ ಮಾಡಬೇಕು.

ಲವಂಗ ಮತ್ತು ದಾಲ್ಚಿನ್ನಿ ನೀರು ಹೇಗೆ ಪ್ರಯೋಜನಕಾರಿ?

ಲವಂಗಗಳು ಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿಯಲ್ಲಿ ಸಿನ್ನಮಾಲ್ಡಿಹೈಡ್ ಎಂಬ ವಸ್ತುವೂ ಇದೆ, ಇದು ಬ್ಯಾಕ್ಟೀರಿಯಾ ಕೊಲ್ಲುವಲ್ಲಿ ಸಹಕಾರಿ. ನೀವು ಗಾರ್ಗಲ್ ಮಾಡುವ ಜೊತೆಗೆ ನಾಲಿಗೆಯನ್ನು ಚೆನ್ನಾಗಿ ಉಜ್ಜಬೇಕು. ದಿನವಿಡೀ ನೀರು ಕುಡಿಯುವುದು ಕೂಡ ಮುಖ್ಯ. ನಿಮ್ಮ ಬಾಯಿ ಒಣಗಿದ್ದರೆ ದುರ್ವಾಸನೆ ಬರುತ್ತದೆ.