Health Problem : ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಗೆ ಇಮ್ಯುನೊಥೆರಪಿ
ಕ್ಯಾನ್ಸರ್ ಬಂದ ತಕ್ಷಣ ಸಾವು ಹತ್ತಿರ ಬಂತು ಅಂತಾ ಭಯಪಡೋರೇ ಹೆಚ್ಚು. ಆದ್ರೆ ಅದಕ್ಕೂ ಚಿಕಿತ್ಸೆಗಳಿವೆ. ಇಮ್ಯುನೊಥೆರಪಿ ಬಗ್ಗೆ ಅನೇಕರು ಕೇಳಿಲ್ಲ. ನಾವಿಂದು ಕ್ಯಾನ್ಸರ್ ಗೆ ಪರಿಣಾಮಕಾರಿಯಾಗಿರುವ ಈ ಚಿಕಿತ್ಸೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ನಮ್ಮ ದೇಹದಲ್ಲಿ ಅನೇಕ ಜೀವಕೋಶಗಳಿವೆ. ಅಂತಹ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ಅಂಗಾಂಶಗಳಿಗೆ ಹಾನಿ ಮಾಡುತ್ತವೆ. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ ಗಡ್ಡೆಗಳು ನಿರ್ಮಾಣವಾಗುತ್ತವೆ. ಅದೇ ಮುಂದೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅಂತಹ ಗಡ್ಡೆಗಳಲ್ಲಿ ಕೆಲವು ಮಾರಣಾಂತಿಕವಲ್ಲದಿದ್ದರೂ ಹಲವು ಗಡ್ಡೆಗಳು ಬಹಳ ಅಪಾಯಕಾರಿ. ಮಾರಣಾಂತಿಕ ಗಡ್ಡೆಗಳು ಬೆಳೆಯುವ ಸಾಧ್ಯತೆಯೂ ಹೆಚ್ಚು. ಕ್ಯಾನ್ಸರ್ ರೋಗಕ್ಕೆ ಶಸ್ತ್ರ ಚಿಕಿತ್ಸೆ ಮಾಡುವುದು ಸಾಮಾನ್ಯ. ಲ್ಯಾಪರೋಸ್ಕೋಪಿ, ರೊಬೊಟಿಕ್ ಸರ್ಜರಿ, ಕಿಮೋಥೆರಪಿ, ರೇಡಿಯೇಷನ್ ಥೆರಪಿ ಮುಂತಾದವುಗಳ ಕೂಲಕ ಕ್ಯಾನ್ಸರ್ ಚಿಕಿತ್ಸೆ ನಡೆಸಲಾಗುತ್ತದೆ. ಇತ್ತೀಚೆಗೆ ಇಮ್ಯುನೋಥೆರಪಿ ಎಂಬ ಹೊಸ ಚಿಕಿತ್ಸಾ ಪದ್ಧತಿಯಲ್ಲಿ ದೇಹದ ರೋದನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ಯಾನ್ಸರ್ ಅನ್ನು ಗುಣಪಡಿಸುತ್ತಾರೆ.
ವ್ಯಕ್ತಿಯ ಶರೀರದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿ ರೋಗ (Disease) ದ ವಿರುದ್ಧ ಹೋರಾಡಲು ಶಕ್ತಿ (Strength) ಕೊಡುವ ಚಿಕಿತ್ಸೆಯೇ ಇಮ್ಯುನೊಥೆರಪಿಯಾಗಿದೆ. ಕ್ಯಾನ್ಸರ್ (Cance )ನಂತಹ ಗಂಭೀರ ಖಾಯಿಲೆಗಳ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ವೈದ್ಯಕೀಯ ಪದ್ಧತಿಯಲ್ಲಿ ಇಂದು ಅನೇಕ ವಿಧಾನಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ಅಂತಹ ಚಿಕಿತ್ಸೆಗಳು ಪರಿಣಾಮಕಾರಿಯೂ ಆಗಿವೆ. ಅಂತಹ ಒಂದು ಚಿಕಿತ್ಸೆಯಲ್ಲಿ ಇಮ್ಯುನೊಥೆರಪಿ ಕೂಡ ಒಂದು. ಈ ಥೆರಪಿಯನ್ನು ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆಗಳಲ್ಲೂ ಇದನ್ನು ಬಳಸುತ್ತಿದ್ದಾರೆ. ಇಮ್ಯುನೊಥೆರಪಿ ವ್ಯಕ್ತಿಯ ಶರೀರದ ರೋಗನಿರೋಧಕ ಶಕ್ತಿಯನ್ನು ಬಲಗೊಳಿಸಿ ಕ್ಯಾನ್ಸರ್ ಕೋಶದ ವಿರುದ್ಧ ರಕ್ಷಣೆ ಒದಗಿಸುತ್ತದೆ. ಇಮ್ಯುನೊಥೆರಪಿ ಎಂದರೇನು? ಅದರಲ್ಲಿ ಎಷ್ಟು ಪ್ರಕಾರಗಳಿವೆ ಎಂಬುದನ್ನು ನೋಡೋಣ.
ಚಹಾ ಜೊತೆ ಪರೋಟ ತಿಂತೀರಾ? ಹೊಟ್ಟೆ ಸಮಸ್ಯೆ ಖಚಿತ
ಇಮ್ಯುನೊಥೆರಪಿ ಎಂದರೇನು? : ಇಮ್ಯುನೊಥೆರಪಿಯು ವೈದ್ಯಕೀಯ ಚಿಕಿತ್ಸೆಯಾಗಿದ್ದು ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ ಖಾಯಿಲೆಗಳ ವಿರುದ್ಧ ಹೋರಾಡಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಸುತ್ತವೆ. ದೇಹದಲ್ಲಿ ಅಸಹಜ ಜೀವಕೋಶಗಳು ಅಥವಾ ಅಂಗಾಂಶಗಳನ್ನು ಗುರುತಿಸಲು ಮತ್ತು ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವುದು ಇಮ್ಯುನೊಥೆರಪಿಯ ಕೆಲಸವಾಗಿದೆ. ಇಲ್ಲಿ ದೇಹದ ಜೀವಕೋಶಗಳು ಕ್ಯಾನ್ಸರ್ ಕೋಶದ ವಿರುದ್ಧ ಹೋರಾಡಿ ಅವುಗಳನ್ನು ನಾಶಪಡಿಸುತ್ತದೆ.
ಇಮ್ಯುನೊಥೆರಪಿಯ ವಿಧಗಳು :
ಮೊನೊಕ್ಲೊನಲ್ ಪ್ರತಿಕಾಯಗಳು : ಇವು ಪ್ರಯೋಗಾಲಯದಲ್ಲಿ ನಿರ್ಮಿತವಾದ ಅಣುಗಳಾಗಿದ್ದು ಕ್ಯಾನ್ಸರ್ ಕೋಶಗಳ ಮೇಲೆ ನಿರ್ದಿಷ್ಟವಾದ ಪ್ರೋಟೀನ್ ಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾಗಿದೆ. ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲು ಇವುಗಳನ್ನು ಬಳಸಲಾಗುತ್ತದೆ.
ಇಮ್ಯೂನ್ ಚೆಕ್ ಪಾಯಿಂಟ್ ಇನ್ಹಿಬಿಟರ್ : ಇವು ಕ್ಯಾನ್ಸರ್ ಕೋಶಗಳ ಅಥವಾ ಪ್ರತಿರಕ್ಷಣಾ ಕೋಶಗಳ ಮೇಲೆ ಪ್ರೋಟೀನ್ ಗಳನ್ನು ನಿರ್ಬಂಧಿಸುವ ಔಷಧಗಳಾಗಿವೆ. ಇದು ಕ್ಯಾನ್ಸರ್ ಕೋಶದ ಮೇಲೆ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ದುರ್ಬಲಗೊಳ್ಳುವುದನ್ನು ತಡೆಗಟ್ಟುತ್ತದೆ.
Permanent Tattoo: ಶಾಶ್ವತ ಟ್ಯಾಟೂಗೆ ಗುಡ್ ಬೈ ಹೇಳೋದು ಹೀಗೆ
ಎಂಡಾಪ್ಟಿವ್ ಸೆಲ್ ಟ್ರಾನ್ಸಪರ್: ಈ ವಿಧಾನದಲ್ಲಿ ರೋಗಿಯ ದೇಹದಿಂದ ರೋಗನಿರೋಧಕ ಕೋಶಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಕ್ಯಾನ್ಸರ್ ಕೋಶಗಳನ್ನು ಗುರುತಿಸುವ ಮತ್ತು ದಾಳಿ ಮಾಡುವ ಸಾಮರ್ಥ್ಯವನ್ನು ಪ್ರಯೋಗಾಲಯದಲ್ಲೇ ಹೆಚ್ಚಿಸಲಾಗುತ್ತದೆ. ನಂತರ ಆ ಕೋಶಗಳನ್ನು ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ.
ಸೈಟೋಕಿನ್ ಗಳು: ಸೈಟೋಕಿನ್ ಗಳು ರೋಗಕಾರಕ ಸೋಂಕಿನ ವಿರುದ್ಧ ಕಾರ್ಯನಿರ್ವಹಿಸುತ್ತವೆ. ಇವು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುವ ನೈಸರ್ಗಿಕವಾಗಿ ಸಂಭವಿಸುವ ಪ್ರೋಟೀನ್ ಗಳಾಗಿವೆ. ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುವ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಿಂಥೆಟಿಕ್ ಸೈಟೊಕಿನ್ ಗಳನ್ನು ಬಳಸಬಹುದಾಗಿದೆ.
ಇಮ್ಯುನೊಥೆರಪಿ ಶ್ವಾಸಕೋಶದ ಕ್ಯಾನ್ಸರ್, ಮೆನಲೊಮ, ಮೂತ್ರಕೋಶದ ಕ್ಯಾನ್ಸರ್ ಮತ್ತು ಲ್ಯುಕೇಮಿಯಾ ಮುಂತಾದ ವಿವಿಧ ಕ್ಯಾನ್ಸರ್ ಗಳಿಗೆ ಪರಿಣಾಮಕಾರಿಯಾಗಿದೆ. ಮಲ್ಟಿಪಲ್ ಸ್ಕೆಲೆರೋಸಿಸ್ ಮತ್ತು ರುಮಟಾಯ್ಡ್ ಸಂಧಿವಾತದಂತಹ ಸ್ವಯಂನಿರೋಧಕ ಖಾಯಿಲೆಗಳಲ್ಲಿ ಕೂಡ ಇಮ್ಯುನೊಥೆರಪಿ ಬಳಸಲಾಗುತ್ತಿದೆ. ಇದರಿಂದ ಅಡ್ಡಪರಿಣಾಮಗಳು ಕೂಡ ಕಡಿಮೆಯಿದೆ. ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನಶೈಲಿಯನ್ನು ರೂಪಿಸಿಕೊಂಡರೆ ಇಮ್ಯುನೊಥೆರಪಿಯಿಂದ ಕ್ಯಾನ್ಸರ್ ಅನ್ನು ದೂರವಿಡಬಹುದಾಗಿದೆ.