ಕತ್ತು, ಕೈ,ಕಾಲು ಸೇರಿ ಇಷ್ಟವಾದ ಕಡೆಯಲ್ಲೆಲ್ಲ ಟ್ಯಾಟೂ ಏನೋ ಹಾಕಿಸಿಕೊಳ್ತೇವೆ. ಆದ್ರೆ ಅದನ್ನು ತೆಗೆಯೋ ವಿಷ್ಯ ಬಂದಾಗ ಚಿಂತೆ ಕಾಡುತ್ತೆ. ಪರ್ಮನೆಂಟ್ ಟ್ಯಾಟೂನ ಏನು ಮಾಡೋದು ಅಂತಾ ನೀವೂ ಟೆನ್ಷನ್ ನಲ್ಲಿದ್ದರೆ ಈ ಸ್ಟೋರಿ ಓದಿ. 

ಟ್ಯಾಟೂ ಯಾವಾಗಲೂ ಟ್ರೆಂಡ್ ನಲ್ಲಿದೆ. ವಿದೇಶದಲ್ಲಿ ಶುರುವಾದ ಟ್ಯಾಟೂವನ್ನು ಈಗ ಭಾರತದ ಹಳ್ಳಿ ಹಳ್ಳಿಗಳಲ್ಲಿ ನೋಡಬಹುದು. ಯುವಜನರನ್ನು ಆಕರ್ಷಿಸುತ್ತಿದ್ದ ಟ್ಯಾಟೂಗೆ ಈಗ ಎಲ್ಲ ವಯಸ್ಸಿನ ಜನರನ್ನು ಸೆಳೆಯುತ್ತಿದೆ. ತಮ್ಮಿಷ್ಟದ ಹೆಸರು, ಡಿಸೈನ್ ಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಕೆಲವರು ಇಡೀ ಮೈಗೆ ಟ್ಯಾಟೂ ಹಾಕಿಕೊಳ್ತಾರೆ.

ಈಗ ಇಷ್ಟವಾದ ಡಿಸೈನ್ (Design) ಅಥವಾ ಹೆಸರು ಮುಂದಿನ ದಿನಗಳಲ್ಲಿ ಬೇಡವಾಗಬಹುದು. ಪ್ರೀತಿ (Love) ಯಲ್ಲಿ ಬಿದ್ದ ಜನರು ತಮ್ಮಿಷ್ಟದ ವ್ಯಕ್ತಿಯ ಹೆಸರನ್ನು ಕತ್ತು, ಮಣಿಕಟ್ಟು, ಕೈ ಇಲ್ಲವೆ ಬೆರಳಿನ ಮೇಲೆ ಹಾಕಿಸಿಕೊಂಡಿರುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿ ಮುರಿದು ಬೀಳುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಯ ಹೆಸರನ್ನು ತೆಗೆದುಹಾಕಲು ಬಯಸಿದ್ರೂ ಅದು ಸಾಧ್ಯವಾಗೋದಿಲ್ಲ. ಶಾಶ್ವತ ಟ್ಯಾಟೂ (Tattoo) ಹೇಗೆ ತೆಗೆಯೋದು ಎನ್ನುವ ಪ್ರಶ್ನೆ ಮೂಡುತ್ತದೆ. ನೀವೂ ಶಾಶ್ವತ ಟ್ಯಾಟೂ ಹಾಕಿಸಿಕೊಂಡಿದ್ದು, ಅದನ್ನು ತೆಗೆಯುವ ಆಲೋಚನೆಯಲ್ಲಿದ್ದರೆ ಚಿಂತಿಸಬೇಕಾಗಿಲ್ಲ. ತಂತ್ರಜ್ಞಾನ ಈಗ ಸಾಕಷ್ಟು ಮುಂದುವರೆದಿದೆ. ನೀವು ಆರಾಮವಾಗಿ ಪರ್ಮನೆಂಟ್ ಟ್ಯಾಟೂವನ್ನು ತೆಗೆಯಬಹುದು. 

BEAUTY TIPS : ಪನ್ನೀರ್ ನೀರನ್ನು ಎಸಿದೆ ಹೀಗೆ ಬಳಕೆ ಮಾಡಿದ್ರೆ ಚರ್ಮ ಶೈನ್ ಆಗುತ್ತೆ

ಶಾಶ್ವತ ಟ್ಯಾಟೂ ತೆಗೆಯುವ ವಿಧಾನ ಇಲ್ಲಿದೆ : 

ಲೇಸರ್ ಬಳಕೆ (Use of Laser) : ಶಾಶ್ವತ ಟ್ಯಾಟೂವನ್ನು ತೆಗೆಯಲು ಲೇಸರ್ ಬಳಕೆ ಮಾಡಲಾಗುತ್ತದೆ. ಇದು ಅತ್ಯಂತ ಸಾಮಾನ್ಯ ಮತ್ತು ಪರಿಣಾಮಕಾರಿ ವಿಧಾನ ಎಂದು ನಂಬಲಾಗಿದೆ. ಚರ್ಮದಲ್ಲಿನ ಶಾಯಿ ಕಣಗಳನ್ನು ಒಡೆಯಲು ಹೆಚ್ಚಿನ ತೀವ್ರತೆಯ ಲೇಸರ್ ಬೆಳಕನ್ನು ಬಳಸಲಾಗುತ್ತದೆ. ಇದು ನಿಮ್ಮ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಅದೇ ಸಮಯದಲ್ಲಿ ವಿವಿಧ ಬಣ್ಣಗಳ ಹಚ್ಚೆಗಳನ್ನು ತೆಗೆದುಹಾಕಲು ವಿವಿಧ ಲೇಸರ್ ಗಳು ಅಗತ್ಯವಿದೆ. ಒಂದೇ ಬೈಟೆಕ್ ನಲ್ಲಿ ಟ್ಯಾಟೂ ತೆಗೆಯುವುದು ಸಾಧ್ಯವಿಲ್ಲ. ಲೇಸರ್ ಮೂಲಕ ಟ್ಯಾಟೂ ತೆಗೆಯಬೇಕೆಂದ್ರೆ ನೀವು ಹಲವಾರು ಸೆಷನ್‌ ತೆಗೆದುಕೊಳ್ಳಬೇಕು. ಲೇಸರ್ ಮೂಲಕ ಟ್ಯಾಟೂ ತೆಗೆಯುವುದ್ರಿಂದ ಹೆಚ್ಚಿನ ಯಾವುದೇ ಹಾನಿ ಆಗುವುದಿಲ್ಲ. ಚರ್ಮ ಕೆಂಪಾಗುವುದು, ಊತ ಅಥವಾ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಲೇಸರ್ ಮೂಲಕ ಟ್ಯಾಟೂ ತೆಗೆಯುವ ವಿಧಾನದಿಂದ ಉಂಟಾಗುವ ಅಡ್ಡಪರಿಣಾಮ ತುಂಬಾ ದಿನ ನಿಮ್ಮನ್ನು ಕಾಡುವುದಿಲ್ಲ. ಇದು ಸೌಮ್ಯವಾಗಿರುವುದಲ್ಲದೆ, ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ. 

ಗಂಡನಿಗಾಗಿ ಮೂಗು ಚುಚ್ಚಿಸಿದ ನಟಿ, ಇದೀಗ ಪತಿ ಹೆಸರಿನ ಟ್ಯಾಟೂ ಹಾಕಿಸ್ಕೊಂಡ್ರು

ಡರ್ಮಬ್ರೇಶನ್ (Dermabrasion) : ಇದು ಲೇಸರ್ ಟ್ಯಾಟೂ ತೆಗೆಯುವ ವಿಧಾನದಷ್ಟು ಪರಿಣಾಮಕಾರಿಯಲ್ಲ. ಆರಾಮದಾಯಕವೂ ಅಲ್ಲ. ತಜ್ಞರು, ಶಾಯಿ ಇರುವ ಚರ್ಮದ ಪದರವನ್ನು ತೆಗೆಯುವ ವಿಧಾನ ಇದಾಗಿದೆ. ಇದು ನಿಮಗೆ ನೋವನ್ನುಂಟು ಮಾಡುತ್ತದೆ. ಚರ್ಮದ ಸೋಂಕು, ಚರ್ಮದ ರಚನೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಶಸ್ತ್ರಚಿಕಿತ್ಸೆ (Surgery) : ಶಾಶ್ವತ ಟ್ಯಾಟೂಗಳನ್ನು ಶಸ್ತ್ರಚಿಕಿತ್ಸೆಯ ಮೂಲಕವೂ ತೆಗೆದುಹಾಕಬಹುದು. ಅನಸ್ತೇಶಿಯಾ ನೀಡಿ, ಸರ್ಜಿಕಲ್ ಬ್ಲೇಡ್ ಸಹಾಯದಿಂದ ಟ್ಯಾಟೂ ತೆಗೆಯಲಾಗುತ್ತದೆ. ಇದು ಕೂಡ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆದ್ರೆ ಇದು ಕೆಲವೊಮ್ಮೆ ಗುರುತುಗಳನ್ನು ಬಿಡುತ್ತದೆ. ನೀವು ಚಿಕ್ಕ ಟ್ಯಾಟೂ ಹೊಂದಿದ್ದರೆ ಅದನ್ನು ತೆಗೆಯಲು ಈ ವಿಧಾನವನ್ನು ಬಳಸಬಹುದು. ಇದ್ರಲ್ಲೂ ಅಡ್ಡಪರಿಣಾಮ ಹೆಚ್ಚಿದೆ. ಗುರುತು ಉಳಿಯುವ ಸಾಧ್ಯತೆ ಮತ್ತು ಸೋಂಕು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದ್ರಿಂದ ಚೇತರಿಸಿಕೊಳ್ಳಲು ನಿಮಗೆ ಹೆಚ್ಚಿನ ಸಮಯ ಬೇಕಾಗುತ್ತದೆ.

ಟ್ಯಾಟೂ ಕವರ್ (Tattoo Cover) : ಈಗಿನ ದಿನಗಳಲ್ಲಿ ಟ್ಯಾಟೂ ಕವರ್ ಗೆ ಬೇಡಿಕೆ ಹೆಚ್ಚಿದೆ. ಟ್ಯಾಟೂವನ್ನು ಸಂಪೂರ್ಣವಾಗಿ ತೆಗೆಯಲು ಬಯಸದ ಜನರು ಇದನ್ನು ಬಳಸುತ್ತಿದ್ದಾರೆ. ಇದ್ರಲ್ಲಿ ಸಣ್ಣ ಟ್ಯಾಟೂವನ್ನು ದೊಡ್ಡ ಟ್ಯಾಟೂ ಮಾಡುವ ಮೂಲಕ ಮೊದಲ ಟ್ಯಾಟೂವನ್ನು ಮುಚ್ಚಲಾಗುತ್ತದೆ. ನಿಮ್ಮ ಹಚ್ಚೆಯನ್ನು ಹೇಗೆ ಮುಚ್ಚುತ್ತಾರೆ ಎನ್ನುವುದು ಟ್ಯಾಟೂ ಕಲಾವಿದನನ್ನು ಅವಲಂಭಿಸಿರುತ್ತದೆ.
ನೀವೂ ಶಾಶ್ವತ ಟ್ಯಾಟೂ ಹಾಕಿಸಿಕೊಂಡಿದ್ದು, ಹೇಗೆ ತೆಗೆಯೋದು ಎನ್ನುವ ಚಿಂತೆಯಲ್ಲಿದ್ರೆ ಇದ್ರಲ್ಲಿ ನಿಮಗಿಷ್ಟವಾಗೋದನ್ನು ಆಯ್ಕೆ ಮಾಡಿಕೊಳ್ಳಿ.