Asianet Suvarna News Asianet Suvarna News

ಕೊರೋನಾದ ಜೊತೆಗೆ ಇಲಿ ಜ್ವರದ ಭಯ. ಚೀನಾದಲ್ಲಿ ಒಂದು ಬಲಿ!

ಕೊರೋನಾದ ಭಯದಿಂದಲೇ ಜಗತ್ತು ತತ್ತರಿಸಿದೆ. ಇಂಥ ಸಮಯದಲ್ಲಿ ಚೀನಾದಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಹ್ಯಾಂಟವೈರಸ್‍ನಿಂದ ಹರಡುವ ಈ ಕಾಯಿಲೆ ಲಕ್ಷಣಗಳೇನು? ಇದನ್ನು ತಡೆಗಟ್ಟುವುದು ಹೇಗೆ?

What is Hantavirus and how it spreads
Author
Bangalore, First Published Mar 24, 2020, 9:25 PM IST

ಕೊರೋನಾ ಎಂಬ ಮಹಾಮಾರಿ ಹುಟ್ಟುಹಾಕಿರುವ ಆವಾಂತರವನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೊರೋನಾದಿಂದ ತಪ್ಪಿಸಿಕೊಳ್ಳೋದು ಹೇಗೆ? ಎಂಬ ಯೋಚನೆಯ ಜೊತೆಗೆ ಈ ರೋಗಕ್ಕೆ ಮದ್ದು ಕಂಡುಹಿಡಿಯುವ ಪ್ರಯತ್ನದಲ್ಲಿ ಜಗತ್ತಿನ ವಿಜ್ಞಾನಿಗಳು ತೊಡಗಿದ್ದಾರೆ. ಈ ನಡುವೆ ಚೀನಾದಲ್ಲಿ ಮತ್ತೊಂದು ವೈರಸ್ ಒಬ್ಬನನ್ನು ಆಹುತಿ ಪಡೆದಿದೆ. ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಹ್ಯಾಂಟವೈರಸ್‍ಗೆ (ಇಲಿ ಜ್ವರಕ್ಕೆ) ಬಲಿಯಾಗಿದ್ದಾನೆ. ಗಾಯದ ಮೇಲೆ ಬರೆ ಎಳೆದಂತೆ ಕೊರೋನಾ ವಿರುದ್ಧವೇ ಹೋರಾಡಲು ಹೆಣಗಾಡುತ್ತಿರುವ ವಿಶ್ವಕ್ಕೆ ಇದು ಇನ್ನೊಂದು ಸಂಕಷ್ಟವನ್ನು ತಂದಿಟ್ಟಿದೆ.

ಕೊರೋನಾ ಲಾಕ್‌ಡೌನ್‌ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ

ಏನಿದು ಹ್ಯಾಂಟವೈರಸ್?
ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರಗಳ (ಸಿಡಿಸಿ) ಪ್ರಕಾರ ಹ್ಯಾಂಟವೈರಸ್ ಇಲಿಗಳಲ್ಲಿ ಉತ್ಪತ್ತಿಯಾಗುವ ವೈರಸ್‍ಗಳ ಒಂದು ಸಮೂಹವಾಗಿದೆ. ಪ್ರತಿ ವಿಧದ ಹ್ಯಾಂಟ್‍ವೈರಸ್ ಒಂದು ನಿರ್ದಿಷ್ಟ ಇಲಿ ಪ್ರಭೇದದಿಂದ ಹರಡಲ್ಪಡುತ್ತದೆ. ಈ ಕಾಯಿಲೆ ಗಾಳಿ ಮೂಲಕ ಹರಡುವುದಿಲ್ಲ. ಮನುಷ್ಯ ಇಲಿಯ ಮಲ, ಮೂತ್ರ ಅಥವಾ ಎಂಜಿಲಿನ ಸಂಪರ್ಕಕ್ಕೆ ಬಂದರೆ ಮಾತ್ರ ವೈರಸ್ ಆತನ ದೇಹ ಪ್ರವೇಶಿಸುತ್ತದೆ. ಹ್ಯಾಂಟವೈರಸ್ ಸೋಂಕಿಗೆ ತುತ್ತಾಗಿರುವ ಇಲಿಯು ಮನುಷ್ಯನನ್ನು ಕಚ್ಚುವುದರಿಂದ ರೋಗ ಹರಡುವ ಸಾಧ್ಯತೆ ಕಡಿಮೆ.

ರೋಗಲಕ್ಷಣಗಳೇನು?
ಹ್ಯಾಂಟವೈರಸ್‍ಗಳಲ್ಲಿ ‘ನ್ಯೂ ವಲ್ರ್ಡ್’ ಅಥವಾ ಹ್ಯಾಂಟವೈರಸ್ ಶ್ವಾಸಕೋಶ ಕಾಯಿಲೆ (ಎಚ್‍ಪಿಎಸ್)  ಹಾಗೂ ‘ಓಲ್ಡ್ ವಲ್ರ್ಡ್’ ಅಥವಾ ಜ್ವರ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆ (ಎಚ್‍ಎಫ್‍ಆರ್‍ಎಸ್) ಎಂಬ ಎರಡು ಪ್ರಭೇದಗಳಿವೆ. ನ್ಯೂ ವಲ್ರ್ಡ್ ಹ್ಯಾಂಟವೈರಸ್ ಸುಸ್ತು, ಸ್ನಾಯುಗಳ ಸೆಳೆತ, ತಲೆನೋವು, ತಲೆಸುತ್ತು ಹಾಗೂ ಹೊಟ್ಟೆನೋವಿನಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯದೆ ಹೋದರೆ ಕೆಮ್ಮು ಹಾಗೂ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಓಲ್ಡ್ ವಲ್ರ್ಡ್ ವೈರಸ್ ಜ್ವರ, ತಲೆನೋವು, ತಲೆಸುತ್ತು, ಕಣ್ಣು ಮಂಜಾಗುವ ಗಂಭೀರವಲ್ಲದ ರೋಗಲಕ್ಷಣಗಳ ಜೊತೆಗೆ ದೇಹದ ಆಂತರಿಕ ಭಾಗಗಳಲ್ಲಿ ರಕ್ತಸ್ರಾವ ಹಾಗೂ ಕಿಡ್ನಿ ವೈಫಲ್ಯದಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ. 

ನೋಡಿ! ಕಡಲನಗರಿ ಭವಿಷ್ಯದ ಮೇಲೆ ಕೊರೋನಾ ಕರಿನೆರಳು

ತಡೆ ಹೇಗೆ?
ಮನೆಯಲ್ಲಿ ಇಲಿಗಳಿದ್ದರೆ ಮೊದಲು ಅವುಗಳನ್ನು ಹೊರಹಾಕುವ ಇಲ್ಲವೆ ನಾಶಪಡಿಸುವ ಕೆಲಸ ಮಾಡಿ. ಇಲಿಯ ಮಲ, ಮೂತ್ರಗಳನ್ನು ಮುಟ್ಟಬೇಡಿ. ಗ್ಲೌಸ್ ಹಾಗೂ ಮಾಸ್ಕ್ ಬಳಸಿ ಅವುಗಳನ್ನು ತಕ್ಷಣ ಶುದ್ಧಗೊಳಿಸಿ. ಸತ್ತಿರುವ ಇಲಿಗಳನ್ನು ಬರಿ ಕೈಯಿಂದ ಮುಟ್ಟಲು ಹೋಗಬೇಡಿ. ಎಚ್‍ಪಿಎಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡೋದಿಲ್ಲ. ಇನ್ನು ಎಚ್‍ಎಫ್‍ಆರ್‍ಎಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಅತ್ಯಂತ ವಿರಳ. ಆದಕಾರಣ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. 

ಚಿಕಿತ್ಸೆ ಏನು?
ಹ್ಯಾಂಟವೈರಸ್ ಶ್ವಾಸಕೋಶ ಕಾಯಿಲೆಗೊಳಗಾದ (ಎಚ್‍ಪಿಎಸ್) ರೋಗಿಗಳನ್ನು ತುರ್ತು ನಿಗಾ ಘಟಕದಲ್ಲಿಟ್ಟು ಕೃತಕ ಆಮ್ಲಜನಕ ನೀಡುವ ಮೂಲಕ ಗಂಭೀರ ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ನೀಡಬೇಕಾಗುತ್ತದೆ. ರಕ್ತಸ್ರಾವದಿಂದ ಕೂಡಿದ ಜ್ವರ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಗೊಳಗಾದ (ಎಚ್‍ಎಫ್‍ಆರ್‍ಎಸ್) ರೋಗಿಗಳನ್ನು ಜಾಗರೂಕತೆಯಿಂದ ಗಮನಿಸುತ್ತಿರಬೇಕು. ಅವರು ತೆಗೆದುಕೊಳ್ಳುವ ದ್ರಾವಾಹಾರ, ಎಲೆಕ್ಟ್ರೋಲೈಟ್ಸ್ ಮಟ್ಟಗಳು, ರಕ್ತದೊತ್ತಡ ಮಟ್ಟದ ಮೇಲೆ ತೀವ್ರ ನಿಗಾವಿಡಬೇಕು. ಕೆಲವು ವೈದ್ಯರು ಈ ಕಾಯಿಲೆಯ ಚಿಕಿತ್ಸೆಗೆ ಆಂಟಿವೈರಲ್ ಔಷಧಗಳನ್ನು ಪ್ರಯೋಗಿಸುತ್ತಾರೆ. ಆದ್ರೆ, ಗಂಭೀರ ಪ್ರಕರಣಗಳಲ್ಲಿ ಮಾತ್ರ ಇದನ್ನು ಪ್ರಯೋಗಿಸುವ ಬಗ್ಗೆ ಯೋಚಿಸಲಾಗುತ್ತದೆ.
ಭಯಪಡುವ ಅಗತ್ಯವಿಲ್ಲ. ಕೊರೋನಾ ವೈರಸ್‍ನಂತೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಕಡಿಮೆ. ಇಲಿಯ ಮಲ, ಮೂತ್ರದ ಸಂಪರ್ಕಕ್ಕೆ ಬಂದ ಬಳಿಕ ಕೈಗಳಿಂದ ಕಣ್ಣುಗಳು, ಮೂಗು ಅಥವಾ ಬಾಯಿಯನ್ನು ಮುಟ್ಟಿದಾಗ ಮಾತ್ರ ಈ ರೋಗ ಹರಡುತ್ತದೆ. ಆದಕಾರಣ ಈ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಆದರೂ ಮನೆಯಲ್ಲಿ ಇಲಿಗಳು ಇರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಇಲಿಗಳನ್ನು ನಾಶಪಡಿಸಲು ರಾಸಾಯನಿಕಗಳು ಸೇರಿದಂತೆ ವಿವಿಧ ವಿಧಾನಗಳನ್ನು ಅನುಸರಿಸಬಹುದು. 

ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!

Follow Us:
Download App:
  • android
  • ios