ಜಗತ್ತಿನಾದ್ಯಂತ ಪುರುಷ ಹಾಗೂ ಮಹಿಳೆಯರ ಸಾವಿಗೆ ಹೃದಯದ ಕಾಯಿಲೆಗಳು ಮುಂಚೂಣಿ ಕಾರಣಗಳಾಗಿ ನಿಂತಿವೆ. ಇಂಥ ಹೃದಯ ಕಾಯಿಲೆಗಳಲ್ಲೊಂದು ದೊಡ್ಡ ವಿಲನ್ ಹಾರ್ಟ್ ಅಟ್ಯಾಕ್. ಸಾಮಾನ್ಯವಾಗಿ ಎದೆನೋವು ಬಂದರೆ ಸಾಕು, ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದು ಹಲವರು ಭಯ ಪಡುತ್ತಾರೆ. ಆದರೆ ಎದೆ ನೋವೆಲ್ಲ ಹಾರ್ಟ್ ಅಟ್ಯಾಕೇ ಆಗಿರಬೇಕೆಂದಿಲ್ಲ. ಹಾಗೆಯೇ ಹಾರ್ಟ್ ಅಟ್ಯಾಕ್‌ಗೆ ಕೇವಲ ಎದೆನೋವೊಂದೇ ಲಕ್ಷಣವಲ್ಲ. ಅಜೀರ್ಣದಂಥ ಸಣ್ಣ ಅನಾರೋಗ್ಯಕ್ಕೂ ಹಾರ್ಟ್ ಅಟ್ಯಾಕ್‌ಗೂ ಸಂಬಂಧವಿರಬಹುದು ಎಂಬುದು ನಿಮಗೆ ಗೊತ್ತೇ?

ಹೌದು, ಸುಸ್ತು, ಸಂಕಟ, ಎದೆಯುರಿ ಮುಂತಾದ ಬೇರೆ ಅನಾರೋಗ್ಯಗಳ ಲಕ್ಷಣಗಳು ಹೃದಯಾಘಾತದ ಲಕ್ಷಣಗಳೂ ಹೌದು. ಹಾರ್ಟ್ ಅಟ್ಯಾಕ್‌ನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಅದಕ್ಕಾಗಿ  ಚಿಕಿತ್ಸೆ ಪಡೆದುಕೊಳ್ಳುವುದು ಬದುಕಿನತ್ತ ನಾಲ್ಕು ಹೆಜ್ಜೆ ಹಿಂದೆ ಹಾರಿದಂತೆ. ಹಾಗಿದ್ದರೆ, ಹಾರ್ಟ್ ಅಟ್ಯಾಕ್‌ನ ಸಾಮಾನ್ಯ ಸೂಚನೆಗಳೇನು ನೋಡೋಣ.

ದವಡೆ ನೋವು
ಮಹಿಳೆಯರಲ್ಲಿ ಹಾರ್ಟ್ ಅಟ್ಯಾಕ್‌ನ ನೋವು ಬಂದಾಗ ಸಾಮಾನ್ಯವಾಗಿ ಎಡ ಭಾಗದ ಕೆಳದವಡೆಯಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. 

ಶುರುವಾಗಿದೆ ಹೊಸ ಫುಡ್ ಟ್ರೆಂಡ್; ನಾನ್‌ ವೆಜ್‌ನಿಂದ ವೆಜ್‌ ಕಡೆ ಬರ್ತಿದ್ದಾರೆ ಸೆಲಬ್ರಿಟಿಗಳು!...

ಸ್ನಾಯು ಸೆಳೆತ
ಭುಜಗಳು ಹಾಗೂ ಬೆನ್ನಿನ ಮೇಲ್ಭಾಗದಲ್ಲಿ ಯಾವುದೇ ದೈಹಿಕ ಪೆಟ್ಟು ಇಲ್ಲದೆ ಇದ್ದರೂ ಸ್ನಾಯುಸೆಳೆತ ಹಾಗೂ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಸೈಲೆಂಟ್ ಹಾರ್ಟ್ ಅಟ್ಯಾಕ್‌ನ ಲಕ್ಷಣವಾಗಿರಬಹುದು ಎನ್ನುತ್ತದೆ ಅಮೆರಿಕನ್ ಹಾರ್ಟ್ ಅಸೋಸಿಯೇಶನ್. ಸೈಲೆಂಟ್ ಹಾರ್ಟ್ ಅಟ್ಯಾಕ್ ಆದಾಗ ಹಲವು ಬಾರಿ ಯಾವುದೇ ಗುರುತಿಸಬಲ್ಲ ಲಕ್ಷಣಗಳು ಕಾಣಿಸದಿದ್ದರೂ ಅದು ಬಹಳ ಅಪಾಯಕಾರಿಯಾದುದು.  

ಅತಿಯಾದ ಎದೆಬಿಗಿತ
ಹಾರ್ಟ್ ಅಟ್ಯಾಕ್‌ನ ಅತಿ ಮುಖ್ಯವಾದ ಸೂಚನೆ ಎಂದರೆ ಎದೆ ಒತ್ತಿದಂತಾಗುವುದು, ಹಿಂಡಿದಂಥ ಅನುಭವ, ಎದೆ ಮಧ್ಯೆಯಲ್ಲಿ ಅತಿಯಾದ ನೋವು. ಈ ಎದೆಬಿಗಿತವು ಅಲೆಗಳು ಬಂದಂತೆ ಮತ್ತೆ ಮತ್ತೆ ಬಂದು ಕೆಲ ನಿಮಿಷಗಳ ಕಾಲ ಇರುತ್ತವೆ. 

ದೇಹದ ಇತರ ಭಾಗಗಳಲ್ಲಿ ನೋವು
ಹಾರ್ಟ್ ಅಟ್ಯಾಕ್ ನೋವೆಂದ ಕೂಡಲೇ ಕೇವಲ ಎದೆ, ಭುಜ, ಬೆನ್ನು, ಕತ್ತು ಹಾಗೂ ದವಡೆ ನೋವು ಮಾತ್ರವಲ್ಲ. ಕಟ್ಟಿಕೊಂಡ ಹೃದಯ ನಾಳಗಳಂಥ ಸಮಸ್ಯೆ ಇದ್ದಾಗ ಅದು ನಿಮ್ಮ ಹೃದಯದ ನರಗಳಿಗೆ ಏನೋ ಸರಿಯಿಲ್ಲ ಎಂದು ಸಂದೇಶ ನೀಡುತ್ತದೆ. ಆಗ ನಮಗೆ ನೋವಾಗುತ್ತದೆ. ಈ ವೇಗಸ್ ನರ್ವ್ ಕೇವಲ ಹೃದಯಕ್ಕಷ್ಟೇ ಸಂಬಂಧ ಹೊಂದಿಲ್ಲದೆ, ಮೆದುಳು, ಎದೆ, ಹೊಟ್ಟೆ ಹಾಗೂ ಕತ್ತಿನವರೆಗೂ ತನ್ನ ಬಾಹುಗಳನ್ನು ಚಾಚಿರುತ್ತದೆ. ಹೀಗಾಗಿ, ಈ ಯಾವುದೇ ಭಾಗದಲ್ಲಿ ಕೂಡಾ ನೋವು ಕಾಣಿಸಿಕೊಳ್ಳಬಹುದು. 

ಗೋಮೂತ್ರದಿಂದ ಫಿನಾಯಿಲ್‌ ತಯಾರಿಸಿದ ದಕ್ಷಿಣ ಕನ್ನಡದ ರೈತ ಗೌತಮ್‌!...

ತಲೆ ಸುತ್ತು
ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ, ಊಟ ಬಿಟ್ಟರೆ ಅಥವಾ ಸಡನ್ನಾಗಿ ಎದ್ದು ನಿಂತರೆ ಕೂಡಾ ತಲೆ ಸುತ್ತು ಬರುತ್ತದೆ ನಿಜ. ಆದರೆ, ಎದೆನೋವು ಅಥವಾ ಉಸಿರಾಟಕ್ಕೆ ತೊಂದರೆಯಾಗುತ್ತಾ ತಲೆಸುತ್ತು ಜೊತೆಯಾದರೆ ಅದು ರಕ್ತ ಕಡಿಮೆಯಾದುದರ, ರಕ್ತದೊತ್ತಡ ಇಳಿದುದರ ಸೂಚನೆಯಾಗಿರಬಹುದು. ಅದರರ್ಥ ಹೃದಯಾಘಾತ ಅರ್ಧ ಹಾದಿಯಲ್ಲಿದೆ ಎಂದು. 

ಸುಸ್ತು
ಒತ್ತಡದ ದಿನದ ಬಳಿಕ ಅಥವಾ ನಿದ್ದೆಯಿಲ್ಲದ ರಾತ್ರಿಯ ಬಳಿಕ ಸುಸ್ತಾಗುವುದು ಸಾಮಾನ್ಯ. ಆದರೆ, ಹಾರ್ವರ್ಡ್ ಹೆಲ್ತ್ ಪಬ್ಲಿಶಿಂಗ್ ರಿಪೋರ್ಟ್ ಪ್ರಕಾರ, ಹೃದಯಾಘಾತವಾಗುವ 1 ತಿಂಗಳ ಮುಂಚೆಯಿಂದಲೇ ಮಹಿಳೆಯರನ್ನು ಸುಸ್ತು ಕಾಡಬಹುದು. 

ಸಂಕಟ ಹಾಗೂ ಅಜೀರ್ಣ
ಸ್ಟೋನಿ ಬ್ರೂಕ್ ಮೆಡಿಸಿನ್ ಪ್ರಕಾರ, ವಾಂತಿ, ಹೊಟ್ಟೆನೋವು, ಹೊಟ್ಟೆಯುಬ್ಬರಿಸುವುದು ಮುಂತಾದ ಗ್ಯಾಸ್ಟ್ರಿಕ್ ಲಕ್ಷಣಗಳು ಹೃದಯ ಹಾಗೂ ದೇಹದ ಇತರ ಭಾಗಗಳಿಗೆ ರಕ್ತ ಸರಿಯಾಗಿ ಸಪ್ಲೈ ಆಗದಾಗ ಆಗುತ್ತದೆ. ಹಾಗಾಗಿ, ಗ್ಯಾಸ್ಟ್ರಿಕ್ ಎಂದು ಕಡೆಗಣಿಸುವ ಬದಲು ಇತರೆ ಹೃದಯಾಘಾತದ ಲಕ್ಷಣಗಳೂ ಇದ್ದರೆ ಈ ಸಮಸ್ಯೆಯನ್ನು ವೈದ್ಯರಿಗೆ ತೋರಿಸುವುದು ಉತ್ತಮ.

ಸೈಲೆಂಟ್ ಹಾರ್ಟ್ ಆಟ್ಯಾಕ್ ಬಗ್ಗೆ ನಿಮಗೇನು ಗೊತ್ತು?

ಬೆವರು
ಮೆನೋಪಾಸ್ ಸಮಯದಲ್ಲಿ ಅಥವಾ ವ್ಯಾಯಾಮದ ಬಳಿಕವಲ್ಲದೆ, ಇದ್ದಕ್ಕಿದ್ದಂತೆ ಮೈಯ್ಯೆಲ್ಲ ಅತಿಯಾಗಿ ಬೆವರುತ್ತದೆ ಎಂದರೆ ಅದು ಹೃದಯಾಘಾತದ ಸೂಚನೆ. 

ಹೃದಯ ಬಡಿತ
ಹೃದಯಕ್ಕೆ ಪೋಷಕಸತ್ವಗಳನ್ನು ಹೊಂದಿದ ರಕ್ತ ಸರಿಯಾಗಿ, ಸಾಕಷ್ಟು ಪ್ರಮಾಣದಲ್ಲಿ ಸಪ್ಲೈಯಾಗದೆ ಇದ್ದಾಗ ಹೃದಯ ಜೋರಾಗಿ ವೇಗವಾಗಿ ಬಡಿದುಕೊಳ್ಳಲಾರಂಭಿಸುತ್ತದೆ. ಒಂದು ವೇಳೆ ಈ ಅನುಭವ ಆದಲ್ಲಿ ತಕ್ಷಣ ವೈದ್ಯರನ್ನು ಕಾಣುವುದು ಉತ್ತಮ.

ಉಸಿರಾಟ ಸಮಸ್ಯೆ
ಮುಂಚೆಯೆಲ್ಲ ಆರಾಮಾಗಿ ಮೆಟ್ಟಿಲು ಹತ್ತಿಳಿಯುತ್ತಿದ್ದಿರಿ. ಬೆಟ್ಟ ಹತ್ತಲೂ ಹೆದರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಮೆಟ್ಟಿಲು ಹತ್ತುವುದು ಸಿಕ್ಕಾಪಟ್ಟೆ ಆಯಾಸ ತರುತ್ತಿದ್ದು, ಉಸಿರಾಟ ಸಮಸ್ಯೆ ತರುತ್ತಿದ್ದರೆ ತಕ್ಷಣ ವೈದ್ಯರನ್ನು ಕಾಣುವುದು ಉತ್ತಮ. ಇದರರ್ಥ ನಿಮಗೆ ಹೃದಯಾಘಾತ ಆಗೇಬಿಡುತ್ತದೆ ಎಂದಲ್ಲವಾದರೂ, ನಿಮ್ಮ ಹೃದಯ ಅಪಾಯದಲ್ಲಿದೆ ಎಂದಂತೂ ಅಂದು ಹೇಳುತ್ತಿದೆ.