ಪಾದದ ಉರಿ. ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಿದು. ಕಣ್ಣಿಗೆ ಕಾಣದ,ವಿಪರೀತ ಕಿರಿಕಿರಿ ಎನ್ನಿಸುವ ಖಾಯಿಲೆ ಇದು ಅಂದ್ರೆ ತಪ್ಪಾಗೋದಿಲ್ಲ. ಸಾಕಪ್ಪ ಸಾಕು ಎನ್ನಿಸುವ ಈ ಪಾದದುರಿಗೆ ಕೆಲ ಮನೆ ಮದ್ದನ್ನು ಟ್ರೈ ಮಾಡಿ.
ಅನೇಕರಿಗೆ ಪಾದ (Foot) ಮತ್ತು ಕೈ (Hand) ಉರಿಯುವ ಸಮಸ್ಯೆ ಇರುತ್ತದೆ. ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚೆನಿಸಿದ್ರೂ ಕೆಲವರು ವರ್ಷದ ಎಲ್ಲ ಋತುವಿನಲ್ಲಿ ಪಾದದ ಉರಿ ಸಮಸ್ಯೆ ಎದುರಿಸುತ್ತಾರೆ. ಪಾದದ ಉರಿ ಸಾಮಾನ್ಯ ಎನ್ನಿಸಿದ್ರೂ ಸಾಕಷ್ಟು ಕಿರಿಕಿರಿ ನೀಡುತ್ತದೆ. ಅನೇಕರು ಉರಿ ತಾಳಲಾರದೆ ಪಾದಗಳನ್ನು ನೀರಿನಲ್ಲಿಟ್ಟುಕೊಳ್ಳುವವರಿದ್ದಾರೆ. ಮತ್ತೆ ಕೆಲವರು ಐಸ್ ಮಸಾಜ್ ಮಾಡಿಕೊಳ್ತಾರೆ. ಇಡೀ ದಿನ ಪಾದಕ್ಕೆ ಬೆಂಕಿ ಹಚ್ಚಿದ ಅನುಭವವಾಗ್ತಿರುತ್ತದೆ. ಇದಕ್ಕೆ ಅನೇಕರ ಕಾರಣವಿದೆ. ವಿಟಮಿನ್ ಬಿ (Vitamin b), ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಅಥವಾ ಕ್ಯಾಲ್ಸಿಯಂ ಕೊರತೆಯು ಸಹ ಇದಕ್ಕೆ ಕಾರಣವಾಗಬಹುದು. ಇದಲ್ಲದೆ ದೇಹದ ನರಗಳು ದುರ್ಬಲವಾಗಿದ್ದರೂ ಈ ಸಮಸ್ಯೆ ಕಾಡುತ್ತದೆ. ನರಮಂಡಲದ ಹಾನಿ ಅಥವಾ ಅಸಮರ್ಪಕ ಕ್ರಿಯೆಯಂತಹ ಕೆಲವು ಕಾಯಿಲೆಗಳನ್ನು ಸಹ ಇದು ಸೂಚಿಸುತ್ತದೆ.
ಪಾದಗಳಲ್ಲಿ ವಿಪರೀತ ಉರಿಗೆ ಕಾರಣಗಳಲ್ಲಿ ಒಂದು ನರರೋಗ. ಇದು ಎಲ್ಲಾ ನರಗಳು ಮತ್ತು ಮೋಟಾರ್ ನರಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ನೋವು, ಉರಿಯ ಅನುಭವವಾಗುತ್ತೆ. ಇನ್ನು ಕೆಲವರ ಪಾದದ ಉರಿಗೆ ಮಧುಮೇಹ ಕಾರಣವಾಗಿರುತ್ತದೆ. ಪಾದದ ಉರಿ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಮೊದಲು ಯಾವ ಕಾರಣಕ್ಕೆ ಸಮಸ್ಯೆಯಾಗ್ತಿದೆ ಎಂಬುದನ್ನು ನೀವು ಪತ್ತೆ ಮಾಡ್ಬೇಕು.
ಪಾದದ ಉರಿಕೆ ಕಾರಣ :
* ವಿಟಮಿನ್ ಬಿ 12 ಕೊರತೆಯು ಪಾದಗಳು ಮತ್ತು ಕೈಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಉರಿಗೆ ಕಾರಣವಾಗುತ್ತದೆ.
* ಅಧಿಕ ರಕ್ತದೊತ್ತಡ ಅಥವಾ ಕಡಿಮೆ ನೀರು ಕುಡಿಯುವ ಅಥವಾ ಹೆಚ್ಚು ಆಲ್ಕೋಹಾಲ್ ಸೇವಿಸುವ ಜನರಿಗೂ ಈ ಸಮಸ್ಯೆ ಕಾಡುತ್ತದೆ.
* ಹೆಚ್ಚು ಔಷಧಗಳನ್ನು ಸೇವಿಸುವುದರ ಹೊರತಾಗಿ ಕಿಡ್ನಿ ಸಮಸ್ಯೆ ಅಥವಾ ಥೈರಾಯ್ಡ್ ಹಾರ್ಮೋನ್‌ನಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
* ರಕ್ತನಾಳಗಳಲ್ಲಿ ಸೋಂಕನ್ನು ಹೊಂದಿರುವ ವ್ಯಕ್ತಿಗೂ ಪಾದದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.
ನೀವು ಮಲಗೋ ಭಂಗಿಯಿಂದ್ಲೇ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತೆ !
ಪಾದದ ಉರಿಗೆ ಪರಿಹಾರ : ಮೊದಲೇ ಹೇಳಿದಂತೆ ಕಾರಣ ತಿಳಿಯಬೇಕು. ನಂತ್ರ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ಪಡೆಯಬೇಕು. ಇದರ ಹೊರತಾಗಿಯೂ ನೀವು ಮನೆಯಲ್ಲಿ ಕೆಲವು ಮದ್ದುಗಳನ್ನು ಮಾಡ್ಬಹುದು.
ಆಹಾರ : ಸಸ್ಯಾಹಾರಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ನಿಯಮಿತವಾಗಿ ಹಾಲು, ಮೊಸರು, ಪನೀರ್, ಚೀಸ್, ಬೆಣ್ಣೆ, ಸೋಯಾ ಹಾಲನ್ನು ಸೇವಿಸಬೇಕು. ಮಾಂಸಾಹಾರಿ ಜನರು ಮೊಟ್ಟೆ, ಮೀನು, ಕೋಳಿ ಮತ್ತು ಸಮುದ್ರಾಹಾರದಿಂದ ವಿಟಮಿನ್ ಬಿ 12 ಅನ್ನು ಹೇರಳವಾಗಿ ಪಡೆಯಬಹುದು. ದೇಹದ ಉಷ್ಣತೆ ಹೆಚ್ಚಾದರೂ ಅನೇಕರಿಗೆ ಈ ಸಮಸ್ಯೆ ಕಾಡುತ್ತದೆ. ಅಂಥವರು ಕಬ್ಬಿನ ಹಾಲು, ಮೊಸರು, ದಾಳಿಂಬೆ ಹಣ್ಣು, ಲಸ್ಸಿ, ಸೌತೆಕಾಯಿ, ಕಲ್ಲಂಗಡಿ, ಮಾವಿನ ಹಣ್ಣು, ಎಳನೀರು, ಪಾಲಕ್, ತುಳಸಿ, ಲಿಚಿ, ನಿಂಬೆ ಮುಂತಾದ ತಂಪಾಗಿಸುವ ಆಹಾರ ಸೇವನೆ ಮಾಡ್ಬೇಕು.
ವಿನೆಗರ್ : ಒಂದು ಗ್ಲಾಸ್ ನೀರಿಗೆ ಫಿಲ್ಟರ್ ಮಾಡದ ವಿನೆಗರ್ ಒಂದು ಚಮಚ ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಪಾದಗಳ ಉರಿ ಕಡಿಮೆಯಾಗುತ್ತದೆ.
ಕಲ್ಲುಪ್ಪು : ಮೆಗ್ನೀಸಿಯಮ್ ಸಲ್ಫೇಟ್ನಿಂದ ತಯಾರಿಸಿದ ಕಲ್ಲು ಉಪ್ಪು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಕಪ್ ಕಲ್ಲು ಉಪ್ಪನ್ನು ಬೆರೆಸಿ ಮತ್ತು ಅದರಲ್ಲಿ ನಿಮ್ಮ ಪಾದಗಳನ್ನು ಹಾಕಿ. ಪಾದಗಳನ್ನು 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ. ಈ ಪರಿಹಾರವನ್ನು ನಿಯಮಿತವಾಗಿ ಕೆಲವು ದಿನಗಳವರೆಗೆ ಮಾಡಿ. ಆದರೆ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದಿಂದ ಬಳಲುತ್ತಿರುವವರಿಗೆ ಈ ಪರಿಹಾರ ಸೂಕ್ತವಲ್ಲ.
ಸಾಸಿವೆ ಎಣ್ಣೆ : ಸಾಸಿವೆ ಎಣ್ಣೆಯು ಪಾದಗಳ ಉರಿ ಸಂವೇದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ಎರಡು ಚಮಚ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ. ಅದಕ್ಕೆ ತಣ್ಣೀರು ಅಥವಾ ಐಸ್ ತುಂಡು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದರಿಂದ ಪಾದವನ್ನು ಮಸಾಜ್ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಪರಿಹಾರ ಸಿಗುತ್ತದೆ.
ಅರಿಶಿನ : ಅರಿಶಿನದಲ್ಲಿರುವ ಉರಿಯೂತ ನಿವಾರಕ ಗುಣಗಳು ಪಾದಗಳಲ್ಲಿನ ಉರಿ ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅರಿಶಿನ ಹಾಲನ್ನು ಸೇವನೆ ಮಾಡುವುದು ಒಳ್ಳೆಯದು.
ಸೋರೆಕಾಯಿ – ಹಾಗಲಕಾಯಿ : ಬಾಟಲ್ ಸೋರೆಕಾಯಿಯ ತಿರುಳನ್ನು ಪಾದದ ಅಡಿಭಾಗಕ್ಕೆ ಉಜ್ಜುವುದರಿಂದ ಉರಿ ಕಡಿಮೆಯಾಗುತ್ತದೆ. ಹಾಗಲಕಾಯಿ ಎಲೆಗಳ ರಸವನ್ನು ಪಾದಗಳಿಗೆ ಮಸಾಜ್ ಮಾಡಿದ್ರೂ ನೀವು ಪ್ರಯೋಜನ ಪಡೆಯಬಹುದು.
ಮೆಹೆಂದಿ : ಗೋರಂಟಿಗೆ ವಿನೆಗರ್ ಅಥವಾ ನಿಂಬೆರಸವನ್ನು ಬೆರೆಸಿ ಪೇಸ್ಟ್ ಮಾಡಿ ಪಾದದ ಭಾಗಕ್ಕೆ ಹಚ್ಚಿದರೆ ಪಾದದ ಉರಿ ಕಡಿಮೆಯಾಗುತ್ತದೆ.
ವಾಕಿಂಗ್ ಗೊತ್ತು, ಇನ್ಫಿನಿಟಿ ವಾಕಿಂಗ್ ಇನ್ನೂ ಒಳ್ಳೇದಂತೆ !
ಮುಲ್ತಾನಿ ಮಿಟ್ಟಿ : ಮುಲ್ತಾನಿ ಮಿಟ್ಟಿಯ ಪೇಸ್ಟ್ ಅನ್ನು ಪಾದಕ್ಕೆ ಹಚ್ಚುವುದು ಕೂಡ ಒಳ್ಳೆ ಮದ್ದು ಎನ್ನಬಹುದು.
ಬರಿಗಾಲಿನಲ್ಲಿ ವಾಕಿಂಗ್ : ಮುಂಜಾನೆ ಬೇಗ ಏಳುವುದು, ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದಲೂ ನೀವು ಈ ಸಮಸ್ಯೆಯಿಂದ ಹೊರಗೆ ಬರಬಹುದು.

