Asianet Suvarna News Asianet Suvarna News

ಅಬ್ಬಾ! ಅದೃಷ್ಟವೇ ಈ ದೇಶದಲ್ಲಿ ಆಫೀಸಲ್ಲಿದ್ರೂ ಮಧ್ಯಾಹ್ನ2 ಗಂಟೆ ಮಲಗ್ತಾರೆ!

ಹಾಸಿಗೆ ಬಳಸೋದರಿಂದ ಹಿಡಿದು ಮಲಗೋ ಸಮಯದವರೆಗೂ ಜಗತ್ತಿನ ಒಂದೊಂದು ಕಡೆ ಒಂದೊಂದು ರೀತಿಯಾಗಿ ಮಲಗುವ ಅಭ್ಯಾಸಗಳಿವೆ. ಅದರದೇ ಆದ ನಂಬಿಕೆಗಳಿವೆ. ಜಗದಾದ್ಯಂತ ಇರುವ ಇಂಥ ಕೆಲವು ಅಪರೂಪದ ಮಲಗುವ ರೂಢಿಗಳ ಬಗ್ಗೆ ಇಲ್ಲಿದೆ.

Unique Ways People Around the World Prefer to Sleep
Author
Bangalore, First Published Nov 14, 2019, 12:53 PM IST

2018ರ ಸ್ಲೀಪ್ ಸರ್ವೆಯ ಪ್ರಕಾರ, ಭಾರತ, ಆಸ್ಟ್ರೇಲಿಯಾ, ಅಮೆರಿಕ, ಅರ್ಜೆಂಟೀನಾ, ಬ್ರೆಜಿಲ್, ಚೀನಾ, ಕೊಲಂಬಿಯಾ, ಫ್ರ್ಯಾನ್ಸ್, ಜರ್ಮನಿ, ಜಪಾನ್, ಮೆಕ್ಸಿಕೋ ಹಾಗೂ ಪೋಲಂಡ್‌ಗಳಲ್ಲಿ 25 ವರ್ಷ ಮೇಲ್ಪಟ್ಟವರು ದಿನಕ್ಕೆ ಸರಾಸರಿ 6.9 ಗಂಟೆ ನಿದ್ದೆ ಮಾಡಲು ಮಾತ್ರ ಸಾಧ್ಯವಾಗುತ್ತಿದೆ. ಬಹುತೇಕರಿಗೆ ಹಣದ ಕುರಿತ ಒತ್ತಡ ಹಾಗೂ ಇತರೆ ಚಿಂತೆಗಳು 8 ಗಂಟೆ ನಿದ್ರೆ ಮಾಡದಂತೆ ತಡೆಯುತ್ತಿವೆ. ಮಲಗಿದ ಕೂಡಲೇ ಈ ಚಿಂತೆಗಳು ಎದ್ದು ಕುಣಿಯಲಾರಂಭಿಸಿ ನಿದ್ರೆಯೇ ಸಾಧ್ಯವಾಗುವುದಿಲ್ಲವಂತೆ. ಅದು ಬಿಡಿ, ಸಧ್ಯ ಬೇರೆ ಬೇರೆ ದೇಶಗಳಲ್ಲಿ ನಿದ್ರೆಯ ಅಭ್ಯಾಸಗಳು ಹೇಗೆಲ್ಲ ವಿಭಿನ್ನವಾಗಿವೆ ಎಂದು ತಿಳಿಯೋಣ ಬನ್ನಿ.

ಪುರುಷರಿಗಂತ ಮಹಿಳೆಯರೇ ಹೆಚ್ಚೊತ್ತು ನಿದ್ರಿಸುತ್ತಾರೆ: ಏಕೆಂದು ಇಲ್ಲಿದೆ!

ಸ್ಪೇನ್

ಸ್ಪೇನ್‌ ತನ್ನ ನಿದ್ರಾಭ್ಯಾಸದಿಂದಾಗಿ ಜಗತ್ತಿನಲ್ಲಿ ಹೆಸರು ಮಾಡಿದೆ. ಇಲ್ಲಿ ಪ್ರತಿದಿನ ಮಧ್ಯಾಹ್ನ ಮಲಗುವುದನ್ನು ಸಿಯೆಸ್ಟಾ ಎನ್ನುತ್ತಾರೆ. ಮಧ್ಯಾಹ್ನ ಮಲಗುವುದು ಸಂಪ್ರದಾಯದಂತೆ ಪಾಲನೆಯಾಗುತ್ತಿದೆ. ಊಟವಾದ ಬಳಿಕ, ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ ಮಲಗುವುದು ಇಲ್ಲಿ ರೂಢಿ. ದೊಡ್ಡ ನಗರಗಳಲ್ಲಿ ಮಾತ್ರ ಕೆಲ ಕಚೇರಿಗಳು ಇದಕ್ಕೆ ಅಪವಾದವಿರಬಹುದು. ಆದರೆ, ಅವನ್ನು ಹೊರತುಪಡಿಸಿದರೆ ಉದ್ಯೋಗಕ್ಕೆ ಹೋದವರಿಗೆ ಕೂಡಾ ಈ ಎರಡು ಗಂಟೆ ಬ್ರೇಕ್ ಇರುತ್ತದೆ. ಸ್ಥಳೀಯ ಉದ್ಯಮಗಳು ಸಿಯೆಸ್ಟಾಗಾಗಿ ಈ ಸಮಯದಲ್ಲಿ ಅಂಗಡಿಗಳನ್ನು ಮುಚ್ಚುತ್ತವೆ.  ಆಹಾ! ಈ ಸೌಕರ್ಯ ನಮ್ಮ ಕಚೇರಿಗಳಲ್ಲೂ ನೀಡಿದರೆ ಎಷ್ಟು ಚೆನ್ನಾಗಿರುತ್ತದಲ್ಲವೇ?

ಇಟಲಿ

ಇಟಲಿಯಲ್ಲಿ ಕೂಡಾ ಊಟವಾದ ಬಳಿಕ ಮಲಗುವ ಅಭ್ಯಾಸಕ್ಕೆ ರಿಪೋಸೋ ಎಂದು ಹೆಸರು. ಇದು ಎರಡರಿಂದ ನಾಲ್ಕು ಗಂಟೆಗಳವರೆಗೆ- ಅಂದರೆ ಸಂಜೆಯ ಸೂರ್ಯ ಮುಳುಗುವವರೆಗೂ ಮುಂದುವರಿಯಬಹುದು. ಪಾಸ್ತಾ, ಪಿಜ್ಜಾದಂಥ ಆಹಾರವನ್ನು ಸೇವಿಸಿದ ಮೇಲೆ ಮೂರ್ನಾಲ್ಕು ಗಂಟೆಗಳ ಕಾಲ ಕೋಮಾಗೆ ಜಾರುವುದು ಆಶ್ಚರ್ಯವೇನಲ್ಲ ಬಿಡಿ. ದಕ್ಷಿಣ ಇಟಲಿಯಲ್ಲಿ ಈ ರಿಪೋಸೋ ಬಹಳ ಸಾಮಾನ್ಯವಾಗಿದ್ದು, ಉತ್ತರ ಇಟಲಿಯಲ್ಲಿ ಇಂಥ ಅಭ್ಯಾಸವನ್ನು ಸೋಮಾರಿತನ ಎಂದು ಬಗೆಯಲಾಗುತ್ತದೆ. ಇಲ್ಲಿ ಸೂರ್ಯ ಹುಟ್ಟುವ ಮೊದಲೇ ಏಳುವ ಅಭ್ಯಾಸವಿರುವುದರಿಂದ ಮಧ್ಯಾಹ್ನದ ಹೊತ್ತು ಸ್ವಲ್ಪ ಮಲಗುವ ಅಭ್ಯಾಸ ಬೆಳೆದುಬಂದಿರಬಹುದು.

ಅಡ್ಡ ಪರಿಣಾಮ ಬೀರೋ ನಿದ್ರೆ ಮಾತ್ರೆಗಳು; ಮರೆವಿನಿಂದ ಚಿರನಿದ್ರೆವರೆಗೆ

ನಾರ್ವೆ

ಬೇಸಿಗೆ ಬಂತೆಂದರೆ ನಾರ್ವೆಯಲ್ಲಿ ತಿಂಗಳುಗಟ್ಟಲೆ ಸೂರ್ಯ ಮುಳುಗುವುದೇ ಇಲ್ಲ. ಇದರಿಂದಾಗಿ ಸ್ಥಳೀಯರು ಹೆಚ್ಚು ಕಾಲ ಎಚ್ಚರೇ ಇರುವಂತಾಗುತ್ತದೆ. ನಿದ್ರೆಯ ಸಮಯ ಕಡಿತವಾಗುತ್ತದೆ. ಉತ್ತರ ನಾರ್ವೆಯಲ್ಲಿ ಬೇಸಿಗೆ ಎಂದರೆ ಅರ್ಧರಾತ್ರಿಯ ಸಮಯದಲ್ಲೂ ಕಾಫಿ ಕುಡಿಯುತ್ತಾ ಉದ್ಯಾನದಲ್ಲಿ ಕುಳಿತವರು, ಚಾರಣ ಹೋಗುವವರು ಮುಂತಾದ ದೃಶ್ಯಗಳು ಸಾಮಾನ್ಯ. ಈ ಸಮಯದಲ್ಲಿ ಇಲ್ಲಿ ಹಲವಾರು ಹಬ್ಬಗಳು ನಡೆಯುತ್ತವೆ. ಎಲ್ಲವೂ ಕನಿಷ್ಠ ಅರ್ಧರಾತ್ರಿವರೆಗೆ ಮುಂದುವರೆಯುತ್ತವೆ. ಇಲ್ಲಿಗೆ ಹೋದ ಯಾತ್ರಿಕರು ಕತ್ತಲಾಗದ ಪ್ರಪಂಚದಲ್ಲಿ ಸರಿಯಾಗಿ ನಿದ್ದೆ ಮಾಡಲು ಸೋತು ಬಳಲುತ್ತಾರೆ. ಅದೇ ಚಳಿಗಾಲ ಬಂತೆಂದರೆ ಕತ್ತಲಲ್ಲಿ ಮುಳುಗುವ ನಾರ್ವೆಯಲ್ಲಿ ಬಹಳಷ್ಟು ಜನ ತಾತ್ಕಾಲಿಕ ಖಿನ್ನತೆಯಿಂದ ಬಳಲುತ್ತಾರೆ. 

ಫಿನ್‌ಲ್ಯಾಂಡ್

ಫಿನ್‌ಲ್ಯಾಂಡ್‌ನಲ್ಲಿ ನವಜಾತ ಶಿಶು ಜನಿಸಿದ ಕೆಲ ತಿಂಗಳು ತೊಟ್ಟಿಲಲ್ಲಿ ಮಲಗುವ ಬದಲು ಪ್ಯಾಡಿಂಗ್ ಇರುವ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಮಲಗುತ್ತವೆ. ಈ ಸ್ಲೀಪ್ ಬಾಕ್ಸ್‌ಗಳನ್ನು ಸರಕಾರವೇ ನೀಡುತ್ತದೆ. ಬೇಸಿಗೆ ಮಧ್ಯದ ಮಧ್ಯರಾತ್ರಿಯಲ್ಲಿ ಎದ್ದು ಏಳು ವಿವಿಧ ಹೂಗಳನ್ನು ತಂದು ತಮ್ಮ ದಿಂಬಿನಡಿಗೆ ಇಟ್ಟು ತಮ್ಮ ಭವಿಷ್ಯದ ಪತಿ ಬಗೆಗೆ ಯುವತಿಯರು ಕನಸು ಕಾಣುವ ಅಭ್ಯಾಸವಿದೆ. ಕನಸಿನಿಂದ ಹೊರ ಬಂದ ಮೇಲೆ ಮಾತ್ರ ಆಕೆಯ ಕನಸಿನ ರಾಜಕುಮಾರನನ್ನು ಅವಳೇ ಹುಡುಕಿಕೊಳ್ಳಬೇಕು. 

ರಾತ್ರಿ ನಿದ್ದೆ ಕಡಿಮೆಯಾದರೆ ಶುರುವಾಗುತ್ತೆ ಹೈಪರ್ ಟೆನ್ಷನ್; ಜೋಕೆ!

ಐಸ್‌ಲ್ಯಾಂಡ್

ಬೆಳಗ್ಗೆ ಹೊತ್ತಿನಲ್ಲಿ ಹೊರಾಂಗಣದಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಐಸ್‌ಲ್ಯಾಂಡಿಗರದು. ಮಕ್ಕಳನ್ನು ಪರಿಸರದ ಮಧ್ಯೆ ಮಲಗಿಸಿದರೆ ತಂಗಾಳಿಯ ಸದ್ದಿಗೆ ಅವು ಚೆನ್ನಾಗಿ ನಿದ್ದೆ ಮಾಡುತ್ತವಲ್ಲದೆ, ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎಂಬ ಯೋಚನೆ ಅವರದು. ಹೀಗಾಗಿ, ಸಾರ್ವಜನಿಕವಾಗಿಯೇ ಮಕ್ಕಳು ಹೊರಗಡೆ ನಿದ್ರಿಸುವುದು ಸಾಮಾನ್ಯ ದೃಶ್ಯ. ಮಕ್ಕಳನ್ನು ದಪ್ಪನೆಯ ಬ್ಲ್ಯಾಂಕೆಟ್‌ನಿಂದ ಸುತ್ತಿ ಸ್ಟ್ರೋಲರ್‌ನಲ್ಲಿ ಮಲಗಿಸಿ ಮನೆಯ ಅಥವಾ ಅಂಗಡಿ, ಕಚೇರಿಯ ಹೊರಗೆ ಮಲಗಿಸಲಾಗುತ್ತದೆ. ಐಸ್‌ಲ್ಯಾಂಡ್‌ನಲ್ಲಿ ಕ್ರೈಂ ರೇಟ್ ಬಹಳ ಕಡಿಮೆ ಇದ್ದು, ಹೀಗೆ ಎಲ್ಲೆಂದರಲ್ಲಿ ಮಕ್ಕಳನ್ನು ಮಲಗಿಸಿ ಬಿಟ್ಟು ಹೋದರೂ ಪೋಷಕರು ಚಿಂತಿಸುವ ಅಗತ್ಯವೇ ಇಲ್ಲ. 

ಗ್ವಾಟೆಮಾಲಾ

ಇಲ್ಲೊಂದು ಅನುಕರಣೀಯ ಅಭ್ಯಾಸವಿದೆ. ಮಕ್ಕಳ ಜೊತೆಗೆ ವರಿ ಡಾಲ್ಸ್ (ಚಿಂತೆಯ ಗೊಂಬೆಗಳು)ನ್ನು ಮಲಗಿಸಲಾಗುತ್ತದೆ. ಮಕ್ಕಳಿಗೆ ಏನೇ ಹೆದರಿಕೆಯಾದರೂ, ಕೆಟ್ಟ ಕನಸು ಬಿದ್ದರೂ ಅವರು ಅದನ್ನು ಈ ಗೊಂಬೆಗಳ ಕಿವಿಯಲ್ಲಿ ಹೇಳಿ ಅನ್ನು ದಿಂಬಿನ ಕೆಳಗಿರಿಸಬೇಕು. ಆಗ ಆ ಎಲ್ಲ ನೆಗೆಟಿವಿಟಿಯನ್ನು ಈ ಗೊಂಬೆಗಳು ಹೀರಿಕೊಂಡು ಮಕ್ಕಳಿಗೆ ನೆಮ್ಮದಿಯ ನಿದ್ರೆ ನೀಡುತ್ತವೆ ಎಂಬ ನಂಬಿಕೆ ಇದೆ. ದೊಡ್ಡವರು ಕೂಡಾ ತಮ್ಮೆಲ್ಲ ಚಿಂತೆ, ಒತ್ತಡ, ಭಯಗಳನ್ನು ಗೊಂಬೆಗಳಿಗೆ ಬಿಟ್ಟು ತಾವು ಆರಾಮಾಗಿ ನಿದ್ರಿಸಬಹುದು. 

ಮೆಕ್ಸಿಕೋ

ಮೆಕ್ಸಿಕೋದ ಜನಸಂಖ್ಯೆಯಲ್ಲಿ ಶೇ.83ರಷ್ಟು ಕ್ಯಾಥೋಲಿಕರು ಇರುವುದರಿಂದ ಮಲಗುವ ಮುನ್ನ ಪ್ರಾರ್ಥಿಸುವುದು ಸಾಮಾನ್ಯ ಅಭ್ಯಾಸ. ಇದರಿಂದ ಮನಸ್ಸಿಗೆ ಶಾಂತಿ ದೊರೆತು ಆರಾಮಾಗಿ ನಿದ್ರಿಸಬಹುದು. 

ದಿಂಬು ಇದ್ದರೆ ಸುಖ, ಇಲ್ಲದಿದ್ದರೆ ಆರೋಗ್ಯ...ಯಾವುದು ನಿಮ್ಮ ಆಯ್ಕೆ?

ಚೀನಾ

ಚೀನಾದಲ್ಲಿ ಕೆಲಸದ ಸಮಯ ಹೆಚ್ಚಾಗಿರುವುದರಿಂದ ಊಟವಾದ ನಂತರ ಸಣ್ಣದಾಗಿ ನಿದ್ರಿಸಿ ಏಳುವುದನ್ನು ಕಚೇರಿಗಳು ಕೂಡಾ ಬೆಂಬಲಿಸುತ್ತವೆ. ಇದರಿಂದ ಕೆಲಸದಲ್ಲಿ ಏಕಾಗ್ರತೆ ಹೆಚ್ಚಿ ಉತ್ಪಾದಕತೆ, ಗುಣಮಟ್ಟ ಹೆಚ್ಚುತ್ತದೆ ಎಂಬ ಕಾರಣಕ್ಕೆ ಕೆಲ ಕಚೇರಿಗಳಲ್ಲಿ ಸಣ್ಣ ನಿದ್ರೆ ತೆಗೆಯಲು ನ್ಯಾಪ್ ಕೋಣೆಗಳು ಕೂಡಾ ಇರುತ್ತವೆ. 

Follow Us:
Download App:
  • android
  • ios