ಹಾಸಿಗೆ ಎಂದ ಮೇಲೆ ಅಲ್ಲಿ ದಿಂಬು ಇರಲೇಬೇಕೆಂಬುದು ನಾವು ನಂಬಿಕೊಂಡು ಬಂದಿರುವ ಅಲಿಖಿತ ನಿಯಮ. ಬಾಲ್ಯದಿಂದಲೇ ಅಭ್ಯಾಸ ಮಾಡಿಕೊಂಡಿರುವುದರಿಂದ ದಿಂಬಿಲ್ಲದೆ ಮಲಗುವುದು ಹೇಗೆಂಬ ಕಲ್ಪನೆಯೇ ಬಹುತೇಕರಿಗೆ ಬರದು. ಅಲ್ಲದೆ, ದಿಂಬಿನಲ್ಲಿ ಅಭ್ಯಾಸವಾದವರಿಗೆ ದಿಂಬಿಲ್ಲದೆ ಮಲಗಿದಾಗ ನಿದ್ದೆಯೂ ಬರದು. ಆದರೆ, ಈ ದಿಂಬು ಆರೋಗ್ಯಕ್ಕೆ ಎಷ್ಟೆಲ್ಲ ಸಮಸ್ಯೆ ತರುತ್ತದೆ ಗೊತ್ತೇ? ದಿಂಬಿಲ್ಲದ ಹಾಸಿಗೆ ಹಲವಾರು ಸಮಸ್ಯೆಗಳನ್ನು ತಾನಾಗಿಯೇ ಪರಿಹರಿಸಬಲ್ಲದು. ಅವು ಯಾವುವು ಅಂತ ನೋಡೋಣ.

ತಲೆ ಬುಡದಲ್ಲಿ ಇದನ್ನೆಲ್ಲ ಇಟ್ಕೊಂಡ್ರೆ ಕಾಡುತ್ತೆ ಮನೋರೋಗ!

1. ಬೆನ್ನು ಹಾಗೂ ಕತ್ತು ನೋವು 

ಹೆಚ್ಚಿನ ಜನರು ಬೆನ್ನುನೋವು ಅನುಭವಿಸಲು ಕೆಟ್ಟ ದೇಹಭಂಗಿ ಕಾರಣ. ಹಾಗೆ ಕೆಟ್ಟ ದೇಹಭಂಗಿ ಹೆಚ್ಚು ಕಾಲ ಇರುವುದು ನೀವು ದಿಂಬಿನ ಮೇಲೆ ತಲೆ ಇಟ್ಟು ಮಲಗಿದಾಗ. ಬೆನ್ನುಮೂಳೆಯ ಸಾಮಾನ್ಯ ತಿರುವಿಗೆ ವಿರುದ್ಧವಾದ ದಿಂಬು ಅದನ್ನು ಅಗತ್ಯಕ್ಕಿಂತ ಹೆಚ್ಚು ಬಗ್ಗಿಸುತ್ತದೆ. ಇದರಿಂದ ಬೆನ್ನುಮೂಳೆಯ ಆಕಾರವೇ ಬದಲಾಗಬಹುದು ಮತ್ತು ಬೆನ್ನುನೋವು ನಿಮ್ಮ ಶಾಶ್ವತ ಸಂಗಾತಿಯಾಗಬಹುದು. ಇನ್ನು ದಿಂಬಿನ ಮೇಲೆ ಕತ್ತಿಟ್ಟಾಗ ಅದು ಮೇಲೆ ಬಾಗುತ್ತದೆ. ಹೆಚ್ಚು ಕಾಲ ಇದೇ ರೀತಿ ಇರುವುದರಿಂದ ಕತ್ತು ನೋವು ಕೂಡಾ ಪ್ರತಿದಿನ ಕಾಡಲಾರಂಭಿಸುತ್ತದೆ. ದಿಂಬಿಲ್ಲದಿದ್ದರೆ ದೇಹವು ನೇರವಾಗಿ ಪ್ರಾಕಡತಿಕ ಭಂಗಿಯಲ್ಲಿ ಮಲಗಿರುತ್ತದೆ. ಇದರಿಂದ ಕತ್ತು ಹಾಗೂ ಬೆನ್ನಿನ ಮೂಳೆ, ಸ್ನಾಯುಗಳು ಹೆಚ್ಚು ರಿಲ್ಯಾಕ್ಸ್ ಆಗುತ್ತವೆ. 

2. ಅಲರ್ಜಿ, ಸುಕ್ಕು ಹಾಗೂ ಮೊಡವೆ

ದಿಂಬನ್ನು ಬಳಸಿ ಮಲಗಿದಾಗ ಬಹುತೇಕ ಜನರು ಯಾವುದಾದರೂ ಒಂದು ಬದಿಗೆ ತಿರುಗಿ ಮಲಗುವುದಿದೆ. ದಿಂಬಿನಲ್ಲಿ ಪ್ರತಿದಿನ ನಮ್ಮ ತಲೆಹೊಟ್ಟು, ಮಣ್ಣು, ಜೊಲ್ಲು ಎಲ್ಲವೂ ಸೇರಿಕೊಂಡು ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿರುತ್ತದೆ. ಅಂಥ ಕೊಳಕು ದಿಂಬಿಗೆ ಮುಖ ತಾಗಿಸಿ ಮಲಗಿದರೆ ಮೊಡವೆ, ಇನ್ನಿತರೆ ಕಲೆ, ಗುಳ್ಳೆಗಳು ಏಳುವುದು ಸಾಮಾನ್ಯ. ಇನ್ನು ಈ ಬ್ಯಾಕ್ಟೀರಿಯಾಗಳ ಕಾರಣದಿಂದಲೇ ಅಲರ್ಜಿಯಾಗಬಹುದು. ಮುಖದಲ್ಲಿ ಒಂದೇ ಬದಿಗೆ ರಕ್ತ ಸಂಚಲನವಾಗುವುದರಿಂದ ಮತ್ತೊಂದೆಡೆ ಕೊರತೆಯಾಗುತ್ತದೆ. ಇದರಿಂದ ಆ ಭಾಗದಲ್ಲಿ ಬೇಗ ಸುಕ್ಕು ಏಳಬಹುದು. 

ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

3. ಮೂಳೆಗಳ ಜೋಡಣೆ

ಪ್ರತಿದಿನ ದಿಂಬಿನ ಮೇಲೆ ಚಿತ್ರವಿಚಿತ್ರ ಭಂಗಿಗಳಲ್ಲಿ ಮಲಗಿಕೊಳ್ಳುವುದರಿಂದ ಮೂಳೆಗಳ ಜೋಡಣೆ ಏರುಪೇರಾಗಿ ಬಿಡಬಹುದು. ಆದರೆ ದಿಂಬಿಲ್ಲದ ಹಾಸಿಗೆಯಲ್ಲಿ ನೇರವಾಗಿ ಮಲಗುವುದರಿಂದ ಮೂಳೆಗಳು ಸರಿಯಾದ ರೀತಿಯಲ್ಲಿ ಜೋಡಣೆಯಿಂದ ದೇಹದ ಆಕಾರ ಚೆನ್ನಾಗಿರುತ್ತದೆ. 

4. ಒತ್ತಡ, ನಿದ್ರಾಹೀನತೆ

ದಿಂಬು ಸರಿಯಾಗಿಲ್ಲದಿದ್ದರೆ, ಅದರ ಎತ್ತರ ಏರು ಅಥವಾ ತಗ್ಗಾಗಿದ್ದರೆ ಅದು ನಿಮ್ಮ ರಾತ್ರಿಯ ನಿದ್ರೆಗೆ ಪದೇ ಪದೆ ಭಂಗ ತರುತ್ತದೆ. ಉತ್ತಮ ನಿದ್ದೆಯಾಗಲಿಲ್ಲವೆಂದರೆ ಬೆಳಗ್ಗೆ ಎಲ್ಲ ಕಿರಿಕಿರಿ ಎನಿಸುತ್ತದೆ. ನಿಧಾನವಾಗಿ ಇದು ಒತ್ತಡಕ್ಕೆ ಕಾರಣವಾಗುತ್ತದೆ. ಆದರೆ, ದಿಂಬಿಲ್ಲದಿದ್ದರೆ ದೇಹದ ನೋವುಗಳೂ ಇಲ್ಲದೆ ಉತ್ತಮ ಗುಣಮಟ್ಟದ ನಿದ್ರೆ ಬರುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ನಿದ್ರೆ ಚೆನ್ನಾಗಾಗುವುದರಿಂದ ಹೆಚ್ಚು ಎನರ್ಜಿಯಿಂದಿರುವಿರಿ. 

ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್?

5. ಸೃಜನಶೀಲತೆ ಹಾಗೂ ನೆನಪಿನ ಶಕ್ತಿ

ಗುಣಮಟ್ಟದ ನಿದ್ರೆ ಜನರ ಕ್ರಿಯೇಟಿವಿಟಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ನಾವು ನಿದ್ರೆ ಮಾಡಿದ ಸಂದರ್ಭದಲ್ಲಿ ನಮ್ಮ ಮೆದುಳು ತಾನು ಪಡೆದ ಎಲ್ಲ ಮಾಹಿತಿಯನ್ನು ಶೇಖರಿಸಿ, ಬೇಕಾದ್ದು ಬೇಡದ್ದುಗಳನ್ನು ನಿರ್ಧರಿಸುತ್ತದೆ. ಚೆನ್ನಾಗಿ ನಿದ್ರೆಯಾದರೆ ಈ ಸಾರ್ಟ್ ಔಟ್ ಕೆಲಸ ಚೆನ್ನಾಗಾಗುತ್ತದೆ. ದಿಂಬಿಲ್ಲದೆ ಅಂಗಾತ ಮಲಗಿದಾಗ ಬರುವ ಗುಣಮಟ್ಟದ ನಿದ್ರೆ ಮಾನಸಿಕ  ಹಾಗೂ ದೈಹಿಕ ಆರೋಗ್ಯವನ್ನು ಹಲವು ರೀತಿಯಲ್ಲಿ ಕಾಪಾಡುತ್ತದೆ. 

6. ಫ್ಲಾಟ್ ಹೆಡ್ ಸಿಂಡ್ರೋಮ್

ಮಗು ನಿಮ್ಮನ್ನು ದಿಂಬಿನಲ್ಲಿ ಮಲಗಿಸುವಂತೆ ಕೇಳುವುದಿಲ್ಲ. ಆದರೂ, ನೀವದನ್ನು ದಿಂಬಿನಲ್ಲಿ ಮಲಗಿಸುತ್ತೀರಿ. ಇದರಿಂದ ಅದರ ಮೆತ್ತಗಿನ ತಲೆ ಒಂದು ಬದಿ ಪೂರ್ತಿ ಫ್ಲ್ಯಾಟ್ ಆಗಿ, ಮತ್ತೊಂದು ಬದಿ ಹಾಗೆ ಎತ್ತರ ಉಳಿಯುವ ಸಾಧ್ಯತೆಗಳು ಹೆಚ್ಚು. ದಿಂಬಿಲ್ಲದೆ ಮಲಗಿಸಿದಾಗ ಈ ಸಮಸ್ಯೆ ತಲೆದೋರುವುದಿಲ್ಲ.