Weight Gain Foods: ಎಷ್ಟೇ ಆಹಾರ ಸೇವಿಸಿದರೂ ದೇಹದ ತೂಕ ಹೆಚ್ಚಾಗುತ್ತಿಲ್ಲವೇ? ಸಣ್ಣಗಿರುವ ಸಮಸ್ಯೆಯಿಂದ ಬಳಲುತ್ತಿರುವವರು ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಏನೇನು ಆಹಾರ ಸೇವಿಸಬಹುದು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮಗೂ ಈ ಸಮಸ್ಯೆ ಇದ್ದರೆ. ಇವತ್ತೇ ಈ ಡಯಟ್ ಆರಂಭಿಸಿ.
ಎಷ್ಟು ತಿಂದರೂ ನಿಮ್ಮ ತೂಕ ಹೆಚ್ಚುತ್ತಿಲ್ಲವೇ?
ನಾನು ತುಂಬಾ ತಿನ್ನುತ್ತೇನೆ, ಆದರೂ ನನ್ನ ತೂಕ ಹೆಚ್ಚಾಗುತ್ತಿಲ್ಲ ಎಂದು ಹೇಳುವವರನ್ನು ನೀವು ಕೇಳಿರಬಹುದು. ಸಣ್ಣಗಾಗಿರುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಅನೇಕರು ಇದರಿಂದ ಬಳಲುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವರು ಅನಾರೋಗ್ಯಕರ ತಿಂಡಿಗಳನ್ನು ಸೇವಿಸಲು ಆರಂಭಿಸುತ್ತಾರೆ. ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್ ಸೇರಿದಂತೆ ಹಲವು ಜಂಕ್ ಫುಡ್ಗಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಇಂತಹ ಆಹಾರಗಳಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಬಹುದೇ ಹೊರತು ಅದು ಆರೋಗ್ಯಕರ ಕೊಬ್ಬಾಗಿರುವುದಿಲ್ಲ. ಹೊರನೋಟಕ್ಕೆ ದೇಹ ದಷ್ಟಪುಷ್ಟವಾಗಿ ಕಂಡರೂ ದೇಹದ ಒಳಗಿನ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಹಾಗಿದ್ರೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳೋದು ಹೇಗೆ ನೋಡೋಣ.
ತೂಕ ಹೆಚ್ಚಿಸಿಕೊಳ್ಳುವುದು ಎಂದರೆ ದೇಹಕ್ಕೆ ಅಗತ್ಯವಿರುವುದಕ್ಕಿಂತ ಸ್ವಲ್ಪ ಹೆಚ್ಚು ಕ್ಯಾಲೊರಿಗಳನ್ನು ಒದಗಿಸುವುದು. ಆದರೆ ಇದಕ್ಕಾಗಿ ಜಂಕ್ ಫುಡ್ ಸೇವಿಸುವುದು ಸರಿಯಾದ ಕ್ರಮವಲ್ಲ. ಆರೋಗ್ಯಕರ ಆಹಾರಗಳ ಮೂಲಕ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಹಾಗಿದ್ರೆ ತೂಕ ಹೆಚ್ಚಿಸಿಕೊಳ್ಳಲು ಯಾವ ಆಹಾರಗಳನ್ನು ಸೇವಿಸಬೇಕು?
ಹಾಲಿನೊಂದಿಗೆ ಓಟ್ಸ್ ಅಥವಾ ದಲಿಯಾ
ದಲಿಯಾ ಮತ್ತು ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲೊರಿ, ಆರೋಗ್ಯಕರ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಾರಿನಾಂಶ ಇರುತ್ತದೆ. ಇವು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳಲು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇದನ್ನ ಬೆಳಗಿನ ಉಪಹಾರದಲ್ಲಿ ಸೇವಿಸಿ.
ಬಾಳೆಹಣ್ಣು ಮತ್ತು ಪೀನಟ್ ಬಟರ್
ಬಾಳೆಹಣ್ಣು ಮತ್ತು ಪೀನಟ್ ಬಟರ್ ಎರಡೂ ಕ್ಯಾಲೊರಿ, ಆರೋಗ್ಯಕರ ಕೊಬ್ಬು, ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ಗಳಿಂದ ಸಮೃದ್ಧವಾಗಿವೆ. ಇವು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಬಾಳೆಹಣ್ಣಿನೊಂದಿಗೆ ಪೀನಟ್ ಬಟರ್ ಸೇವಿಸುವುದರಿಂದ ದೇಹಕ್ಕೆ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಮೆಗ್ನೀಷಿಯಂ ದೊರೆಯುತ್ತದೆ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರ ಆಯ್ಕೆಯಾಗಿದೆ.
ಪನೀರ್, ಮೊಸರು, ಲಸ್ಸಿ ಮತ್ತು ಗ್ರೀಕ್ ಯೋಗರ್ಟ್
ತೂಕ ಹೆಚ್ಚಿಸಿಕೊಳ್ಳಲು ಪನೀರ್ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಕೊಬ್ಬಿನಾಂಶ ಹೇರಳವಾಗಿದ್ದು, ದೇಹಕ್ಕೆ ಹೆಚ್ಚುವರಿ ಕ್ಯಾಲೊರಿಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಇನ್ನು ಮೊಸರು ಮತ್ತು ಗ್ರೀಕ್ ಯೋಗರ್ಟ್ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತವೆ. ಲಸ್ಸಿ ಮತ್ತು ಮಜ್ಜಿಗೆಯೂ ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿ. ಇವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಪ್ರತಿದಿನ ಸಕ್ಕರೆ ಸೇರಿಸಿದ ಸಿಹಿ ಲಸ್ಸಿ ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಬದಲಿಗೆ ಕಡಿಮೆ ಸಕ್ಕರೆ ಅಥವಾ ಸಕ್ಕರೆ ಇಲ್ಲದ ಲಸ್ಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.






