ಲಕ್ಷಾಂತರ ಜನ ಈಗ ವರ್ಕಿಂಗ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಮನೆಯಲ್ಲೇ ಖುಷಿಯಾಗಿ ಕೆಲಸ ಮಾಡಬಹುದು ಅಂದ್ರೆ ಪರಿಸ್ಥಿತಿ ಉಲ್ಟಾಆಗಿದೆ. ಬೆನ್ನುನೋವು, ಸ್ನಾಯು ಸೆಳೆತದಂಥಾ ಸಮಸ್ಯೆ ಕಾಮನ್‌ ಆಗಿಬಿಟ್ಟಿದೆ. ಕಾರ್ಪಲ್‌ ಟನಲ್‌ ಸಿಂಡ್ರೋಮ್‌ ಅನ್ನುವ ವಿಚಿತ್ರ ಸಮಸ್ಯೆಯೂ ಹೆಚ್ಚಾಗುತ್ತಿದೆ. ಫಿಸಿಯೋ ಥೆರಪಿ ಕೇಂದ್ರಗಳು ಇಂಥಾ ಸಮಸ್ಯೆಗಳಿರುವ ರೋಗಿಗಳಿಂದ ತುಂಬಿ ತುಳುಕುತ್ತಿವೆ. ವರ್ಕಿಂಗ್‌ ಫ್ರಂ ಹೋಮ್‌ನಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ನೀವು ಪಾಲಿಸಲೇ ಬೇಕಾದ ಹತ್ತು ನಿಯಮಗಳು ಇಲ್ಲಿವೆ.

1. ಕತ್ತು ನೆಟ್ಟಗಿರಲಿ

ಟೇಬಲ್‌ ಮೇಲಿರುವ ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ಅನ್ನು ಕತ್ತುಬಗ್ಗಿಸಿ ನೋಡುತ್ತಾ ಕೆಲಸ ಮಾಡಬೇಡಿ. ಕೆಲವರು ಮೌಸ್‌, ಕೀಬೋರ್ಡ್‌ಅನ್ನು ಸೈಡ್‌ನಲ್ಲಿಟ್ಟು ಪದೇ ಪದೇ ಆ ಕಡೆ ವಾಲುತ್ತಾ ಕೆಲಸ ಮಾಡ್ತಾರೆ. ಸಿಸ್ಟಮ್‌ ಶಟ್‌ಡೌನ್‌ ಮಾಡುವ ಹೊತ್ತಿಗೆ ಸಣ್ಣಗೆ ಬೆನ್ನುನೋವು ಶುರುವಾಗಿರುತ್ತೆ. ಕಂಪ್ಯೂಟರ್‌ ಪರದೆ ನೋಡುವಾಗ ಕತ್ತು ನೇರವಾಗಿರಲಿ. ಆಗ ಸಮಸ್ಯೆ ಬರಲ್ಲ. ಪುಸ್ತಕ, ದಿಂಬಿನ ಸಹಾಯದಿಂದ ಎತ್ತರವನ್ನು ಅಡ್ಜೆಸ್ಟ್‌ ಮಾಡಿ.

2. ಬೆಳಕನ್ನು ಹೀಗೆ ಬಳಸಿಕೊಳ್ಳಿ.

ಚೆನ್ನಾಗಿ ಬೆಳಕು ಇರುವ ಜಾಗದಲ್ಲಿ ನಿಮ್ಮ ಚೇರ್‌ ಟೇಬಲ್‌ ಸೆಟ್‌ ಮಾಡಿಕೊಳ್ಳಿ. ಕಿಟಕಿಯ ಬೆಳಕು ನಿಮ್ಮ ಮೇಲೆ ಬೀಳಬೇಕು. ಸ್ಕ್ರೀನ್‌ ನಿಮಗೆ ಅಭಿಮುಖವಾಗಿರಬೇಕು. ಬೆಳಕು ಸ್ಕ್ರೀನ್‌ ಮೇಲೆ ನೇರ ಬಿದ್ದರೆ ರಿಫ್ಲೆಕ್ಷನ್‌ ಆಗಿ ಕಣ್ಣಿಗೆ ಆಯಾಸ ಆಗಬಹುದು.

ಬೆನ್ನು, ಸೊಂಟ ನೋವು ಪರಿಹಾರಕ್ಕೆ ಇಲ್ಲಿದೆ ಸಿಂಪಲ್ ಮದ್ದು

3. ಪೇಪರ್‌, ಡಾಕ್ಯುಮೆಂಟ್‌ಅನ್ನು ಟೇಬಲ್‌ ಮೇಲಿಟ್ಟು ನೋಡಬೇಡಿ.

ಸಾಮಾನ್ಯವಾಗಿ ಮೊಬೈಲ್‌ಅನ್ನು ಟೇಬಲ್‌ ಮೇಲಿಟ್ಟು ಕತ್ತುಬಗ್ಗಿಸಿ ನೋಡುತ್ತಾ ಆಮೇಲೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮುಂದುವರಿಸುತ್ತಾರೆ. ಡಾಕ್ಯುಮೆಂಟ್‌ಗಳನ್ನೂ ಇದೇ ರೀತಿ ನೋಡುವ ಕ್ರಮ ಹಲವರಲ್ಲಿದೆ. ಇದು ತಪ್ಪು. ಕಣ್ಣಿಗೆ ನೇರವಾಗಿ ಹಿಡಿದು ಡಾಕ್ಯುಮೆಂಟ್‌ ಅಥವಾ ಮೊಬೈಲ್‌ ನೋಡಿ.

4. ಮೌಸ್‌, ಕೀಬೋರ್ಡ್‌ ಅಥವಾ ಟಚ್‌ಪ್ಯಾಡ್‌ಗಳ ಎತ್ತರ ನಿಮ್ಮ ಮೊಣಕೈಯ ನೇರಕ್ಕಿರಲಿ.

ಕೈಗಳು ನೇರವಾಗಿರಬೇಕು. ನೀವು ಕಂಪೋಸ್‌ ಮಾಡುವಾಗ ಕೈಯಿಂದ ಕೀಬೋರ್ಡ್‌ ಎಷ್ಟುಅಂತರಲ್ಲಿರುತ್ತದೋ ಅಷ್ಟೇ ಅಂತರಲ್ಲಿ ಸ್ವಲ್ಪ ಬದಿಯಲ್ಲಿ ಮೌಸ್‌ ಇರಬೇಕು. ಕೈಗಳು ಕೆಳಗೆ ಜೋತುಬಿದ್ದ ಹಾಗಿರಬಾರದು. ಮೊಣಕೈ ನೇರವಾಗಿಟ್ಟರೆ ಬೆರಳುಗಳಿಗೆ ಎಟಕುವ ಅಂತರಲ್ಲಿ ಕೀ ಬೋರ್ಡ್‌ ಇರಲಿ.

5. ಅಂಗೈಯಡಿ ಮೆತ್ತನೆಯ ವಸ್ತುಗಳನ್ನಿಡಬೇಡಿ.

ಕೆಲವರು ಅಂಗೈಯಡಿಗೆ ಮೆತ್ತನೆಯ ವಸ್ತುಗಳನ್ನಿಟ್ಟು ಕಂಪೋಸ್‌ ಮಾಡುತ್ತಾರೆ. ಅದು ಸಪೋರ್ಟಿವ್‌ ಆಗಿರುತ್ತೆ ಅನ್ನುವುದು ಮುಖ್ಯ ಕಾರಣ. ಆದರೆ ಬಹಳ ಹೊತ್ತು ಈ ಥರ ಸಪೋರ್ಟ್‌ಗಳನ್ನಿಟ್ಟು ಕೆಲಸ ಮಾಡೋದರಿಂದ ಕಾರ್ಪಲ್‌ ಡನಲ್‌ ಸಿಂಡ್ರೋಮ್‌ ಬರುವ ಸಾಧ್ಯತೆ ಇದೆ.

6. ದೇಹದ ಭಂಗಿ ಹೀಗಿರಲಿ

ಬೆನ್ನು ನೇರವಾಗಿದ್ದು ಚೇರ್‌ಗೆ ಒರಗಿದಂತಿರಲಿ. ಮುಂದಕ್ಕೆ ಬಾಗಿ ಆಮೆಯ ಭಂಗಿಯಲ್ಲಿ ಕೆಲಸ ಮಾಡಬೇಡಿ. ಸಂಪೂರ್ಣ ಹಿಂದಕ್ಕೊರಗಿ ಆರಾಮಾಸನದಲ್ಲಿ ಕೆಲಸ ಮಾಡುವುದರಿಂದಲೂ ಮೂಳೆ, ಸ್ನಾಯುಗಳ ಸಮಸ್ಯೆ ಬರುತ್ತದೆ. ಕಾಲುಗಳು ನೇರವಾಗಿ ನೆಲಕ್ಕೆ ಅಭಿಮುಖವಾಗಿರಲಿ. ಕಾಲಿಗೆ ಸಪೋರ್ಟಿಂಗ್‌ ಸಿಕ್ಕರೂ ಬಳಸಬಹುದು.

7. ಬೆಡ್‌ ಮೇಲೆ ಕೂತು ಕೆಲಸ ಮಾಡೋದು ಒಳ್ಳೆಯದಲ್ಲ

ಹಾಸಿಗೆ ಮೇಲೆ ಕೂತು ತೊಡೆ ಮೇಲೋ ಕೆಳಗೋ ಲ್ಯಾಪ್‌ಟಾಪ್‌ ಇಟ್ಟು ಹೆಚ್ಚು ಹೊತ್ತು ಕೆಲಸ ಮಾಡೋದು ಒಳ್ಳೆಯದಲ್ಲ. ಇದರಿಂದ ಕತ್ತಿಗೆ ಸಮಸ್ಯೆಯಾಗಬಹುದು. ಕಾಲುಗಳ ಭಂಗಿ ಸರಿಯಾಗಿಲ್ಲದ ಕಾರಣ ನೋವು ಬರಬಹುದು.

8. ನಿಂತು ಕೆಲಸ ಮಾಡೋದನ್ನು ತಪ್ಪಿಸಿ

ನಿಂತುಕೊಂಡು ಬಗ್ಗಿ ಸಿಸ್ಟಮ್‌ನಲ್ಲಿ ಕೆಲಸ ಮಾಡೋದು ಒಳ್ಳೆಯದಲ್ಲ. ಹಾಗೇ ನಿಂತುಕೊಂಡು ನೇರವಾಗಿ ಸಿಸ್ಟಮ್‌ ಇಟ್ಟು ಕೆಲಸ ಮಾಡಿದರೂ ಬಹಳ ಬೇಗ ಆಯಾಸವಾಗಿ ಬಿಡುತ್ತೆ. ಕಂಪ್ಯೂಟರ್‌ನಲ್ಲಿ ಕೂತು ಕೆಲಸ ಮಾಡೋದು ಒಳ್ಳೆಯದು.

ಕೆಲವೊಮ್ಮೆ ಹೀಗಾಗಿಬಿಡುತ್ತೆ!

ಮನೆಯಲ್ಲಿ ಆಫೀಸ್‌ ಥರ ಕೆಲಸ ಮಾಡುವ ವ್ಯವಸ್ಥೆ ಇರಲ್ಲ. ಹೆಚ್ಚಿನವರ ಮನೆಯಲ್ಲಿ ಆ ಸೆಟ್‌ಅಪ್‌ಗೆ ಬೇಕಾದಷ್ಟುಜಾಗವೂ ಇರಲ್ಲ. ಇರುವ ಜಾಗದಲ್ಲಿ ಯಾವ್ಯಾವುದೋ ಭಂಗಿಯಲ್ಲಿ ಲ್ಯಾಪ್‌ಟಾಪ್‌ ಇಟ್ಟು ಕೆಲಸ ಮಾಡೋದರಿಂದ ಸ್ನಾಯು ಮತ್ತು ಮೂಳೆಗಳಿಗೆ ಹಾನಿಯಾಗಬಹುದು. ಸೊಂಟನೋವು, ಕತ್ತು ಮತ್ತು ಬೆನ್ನಲ್ಲಿ ಸೆಳೆತ ನೋವು, ಕಾರ್ಪಲ್‌ ಟನಲ್‌ ಸಿಂಡ್ರೋಮ್‌ ಇತ್ಯಾದಿ ಗಂಭೀರ ಸಮಸ್ಯೆಗಳಾಗಬಹುದು. ಈ ಎಂಟು ಸಲಹೆ ಪಾಲಿಸಿ, ಪುಸ್ತಕ, ರಟ್ಟಿನ ಡಬ್ಬದ ಸಹಾಯದಿಂದ ಸರಿಯಾದ ಭಂಗಿಯಲ್ಲಿ ಕೆಲಸ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ. ಆಗ ಈ ಹಿಂಸೆ ಇಲ್ಲ.

ಬೆಂಬಿಡದೇ ಕಾಡುವ ಬೆನ್ನು ನೋವಿಗೆ ಇಲ್ಲಿದೆ ಸಿಂಪಲ್ ಪರಿಹಾರ

ಕಾರ್ಪಲ್‌ ಟನಲ್‌ ಸಿಂಡ್ರೋಮ್‌ ತುಂಬ ಡೇಂಜರ್‌

ಇದು ಮಣಿಕಟ್ಟಿಗೆ ಸಂಬಂಧಿಸಿದ ಸಮಸ್ಯೆ. ಇದರಲ್ಲಿ ಕೈಯಲ್ಲಿರುವ ಮಧ್ಯದ ನರ ಸಂಕುಚಿತಗೊಳ್ಳುತ್ತದೆ. ಇದು ಮಣಿಕಟ್ಟಿನ ಮೂಲಕ ಹಾದುಹೋಗುವುದರಿಂದ ಆ ಭಾಗದಲ್ಲಿ ನೋವು ಹೆಚ್ಚು. ನೋವು, ಸೆಳೆತ, ಜೋಮು ಹಿಡಿಯುವ ಅನುಭವ, ಕೈ ಬೆರಳುಗಳು ಮರಗಟ್ಟಿದಂತಾಗುವುದು, ತೋಳುಗಳಲ್ಲಿ ನೋವು ಇತ್ಯಾದಿ ಸಮಸ್ಯೆ ಬರುತ್ತದೆ. ಮೊದಲೇ ಗುರುತಿಸಿದರೆ ಕೈಗೆ ಕ್ಯಾಪ್‌ ಹಾಕಿ ಸರಿ ಮಾಡಬಹುದು. ಗುರುತಿಸುವುದು ವಿಳಂಬವಾದರೆ ನರ ಡ್ಯಾಮೇಜ್‌ ಆಗಬಹುದು. ಆಗ ಶಸ್ತ್ರಚಿಕಿತ್ಸೆ ಮಾಡಿಯೇ ಇದನ್ನು ಸರಿಪಡಿಸಬೇಕಾಗುತ್ತದೆ.