ನಿರಂತರವಾಗಿ ಕಾಡುವ ಕಿವಿ ನೋವು ಗಂಟಲ ಕ್ಯಾನ್ಸರ್ ಆಗಿರಬಹುದು!
ನಮ್ಮ ದೇಹದಲ್ಲಿ ಆಗುವ ಸಣ್ಣಪುಟ್ಟ ಸಮಸ್ಯೆಗಳನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಒಂದೇ ಎರಡೋ ದಿನಕ್ಕೆ ಕಡಿಮೆ ಆಗುತ್ತೆ ಎಂದುಕೊಂಡಿದ್ದು ತಿಂಗಳು ತೆಗೆದುಕೊಂಡ್ರೂ ವೈದ್ಯರ ಬಳಿ ಹೋಗೋದಿಲ್ಲ. ನಾವು ಮಾಡುವ ಈ ನಿರ್ಲಕ್ಷ್ಯವೇ ಮುಂದೆ ಸಾವು ತರುತ್ತೆ.
ಯಾವುದೇ ರೋಗವಾದರೂ ಪ್ರಾರಂಭದ ಹಂತದಲ್ಲಿ ಏನಾದರೂ ಒಂದು ಲಕ್ಷಣವನ್ನು ತೋರಿಸುತ್ತೆ. ನಾವು ಅಂತಹ ಲಕ್ಷಣಗಳನ್ನು ಗಮನಿಸುವುದಿಲ್ಲ ಅಥವಾ ಗಂಭೀರವಾಗಿ ತೆಗೆದೆಕೊಳ್ಳುವುದಿಲ್ಲ. ಅಂತಹ ಕೆಲವು ಲಕ್ಷಣಗಳೇ ಮುಂದೆ ಗಂಭೀರ ಸ್ವರೂಪ ಪಡೆದು ಮಾರಣಾಂತಿಕವಾಗುತ್ತದೆ. ಕ್ಯಾನ್ಸರ್ ಕೂಡ ಇಂತಹ ಖಾಯಿಲೆಗಳಲ್ಲಿ ಒಂದು.
ಕ್ಯಾನ್ಸರ್ (Cancer) ಎಂಬ ಭೀಕರ ಖಾಯಿಲೆ ಈಗ ಸರ್ವೇಸಾಮಾನ್ಯವಾಗಿದೆ. ಕೆಲವೇ ಕೆಲವು ಮಂದಿ ಮಾತ್ರ ಆರಂಭಿಕ ಹಂತದಲ್ಲಿ ಇದನ್ನು ಪತ್ತೆಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ (Treatment) ಪಡೆದುಕೊಳ್ಳುತ್ತಾರೆ. ಆದರೆ ಅನೇಕ ಮಂದಿಗೆ ಇದನ್ನು ಪತ್ತೆಹಚ್ಚುವಷ್ಟರಲ್ಲೇ ರೋಗ ಗಂಭೀರ ಸ್ವರೂಪ ಪಡೆದಿರುತ್ತದೆ. ಗಂಟಲಿ (Throat) ನಲ್ಲಿ ಬೆಳೆಯುವ ಕ್ಯಾನ್ಸರ್ ಜೀವಕೋಶಗಳು ಗಡ್ಡೆಗಳನ್ನು ರೂಪಿಸುತ್ತವೆ ಹಾಗೂ ಅಂತಿಮವಾಗಿ ಗಂಟಲಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಮಯೋ ಕ್ಲಿನಿಕ್ ಹೇಳಿದೆ. 2020 ರಲ್ಲಿ ಜಾಗತಿಕವಾಗಿ 1,84,615 ಜನರಿಗೆ ಗಂಟಲಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ORAL CANCER : ಆರಂಭದಲ್ಲೇ ಪತ್ತೆಯಾದ್ರೆ ಗುಣಪಡಿಸಬಲ್ಲ ಬಾಯಿ ಕ್ಯಾನ್ಸರ್ ಲಕ್ಷಣವೇನು?
ಗಂಟಲಿನ ಕ್ಯಾನ್ಸರ್ ಗೆ ಕಾರಣಗಳು ಮತ್ತು ಲಕ್ಷಣಗಳು : ಗಂಟಲಿನ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುವಂತಹ ಕೆಲವು ಮುಖ್ಯ ಕಾರಣಗಳನ್ನು ಮಯೋ ಕ್ಲಿನಿಕ್ ಹೇಳಿದೆ. ಅವುಗಳಲ್ಲಿ ಮುಖ್ಯವಾದವು ತಂಬಾಕು ಸೇವನೆ, ಧೂಮಪಾನ, ಮಿತಿಮೀರಿದ ಆಲ್ಕೋಹಾಲ್ ಬಳಕೆ, ಸೋಂಕುಗಳು, ಪೌಷ್ಠಿಕ ಆಹಾರಗಳ ಕೊರತೆ, ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಖಾಯಿಲೆಗಳು ಪ್ರಮುಖ ಕಾರಣಗಳಾಗಿವೆ. ಕೆಲವು ಉದ್ಯಮಗಳಲ್ಲಿ ಬಳಕೆ ಮಾಡುವ ಕೆಲವು ವಿಷಕಾರಿ ರಾಸಾಯನಿಕ ಪದಾರ್ಥಗಳಿಂದಲೂ ಗಂಟಲಿನ ಕ್ಯಾನ್ಸರ್ ಉಂಟಾಗುತ್ತದೆ. ಹಾಗಾಗಿ ಅಂತಹ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಉದ್ಯಮಿಗಳಲ್ಲಿ ಗಂಟಲಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ ಪಿ ವಿ) ಸೋಂಕಿನಿಂದಲೂ ಗಂಟಲಿನ ಕ್ಯಾನ್ಸರ್ ಉಂಟಾಗುತ್ತದೆ. ಬಾಯಿ ಕ್ಯಾನ್ಸರ್ ಹಾಗೂ ಗಂಟಲಿನ ಕ್ಯಾನ್ಸರ್ ಓಂದೇ ಎಂದು ಅನೇಕರು ಭಾವಿಸುತ್ತಾರೆ. ಆದ್ರೆ ಇವೆರಡೂ ಭಿನ್ನವಾಗಿದೆ.
ಗಂಟಲಿನ ಕ್ಯಾನ್ಸರ್ ಕೂಡ ಆರಂಭದ ಹಂತದಲ್ಲಿ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಸಕಾಲದಲ್ಲಿ ರೋಗನಿರ್ಣಯ ಮಾಡುವುದರಿಂದ ವೈದ್ಯಕೀಯ ಚಿಕಿತ್ಸೆಗೆ ಸಹಾಯವಾಗುತ್ತದೆ ಹಾಗೂ ಕ್ಯಾನ್ಸರ್ ಮುಂದಿನ ಹಂತಕ್ಕೆ ಹೋಗುವುದನ್ನು ಕೂಡ ತಡೆಗಟ್ಟಬಹುದಾಗಿದೆ. ಅಂತಹ ಕೆಲವು ಲಕ್ಷಣಗಳ ಪೈಕಿ ಕಿವಿಯ ಸಮಸ್ಯೆ ಕೂಡ ಒಂದು. ಗಂಟಲಿನ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ನಿರಂತರ ಕಿವಿಯ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೂ ಅಡ್ಡಿಯಾಗುತ್ತದೆ. ಆದ್ದರಿಂದ ಇಂತಹ ಲಕ್ಷಣಗಳು ಕಂಡುಬಂದಲ್ಲಿ ನೀವು ವೈದ್ಯರೊಂದಿಗೆ ಮಾತನಾಡಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
ಮಕ್ಕಳ ಮೆಮೊರಿ ಕಂಪ್ಯೂಟರ್ ಗಿಂತ ವೇಗವಾಗಬೇಕಾದ್ರೆ… ಬೇಗ ಈ ಕೆಲ್ಸ ಮಾಡಿ!
ಕ್ಲೀವ್ಲ್ಯಾಂಡ್ ಕ್ಲಿನಿಕ್ ಗಂಟಲು ಕ್ಯಾನ್ಸರ್ ಅನ್ನು ಸೂಚಿಸುವ ಕೆಲವು ಇತರ ಲಕ್ಷಣಗಳನ್ನು ಸೂಚಿಸಿದೆ. ಕ್ಲೀವ್ಲ್ಯಾಂಡ್ ಪ್ರಕಾರ, ಗಂಟಲಿನ ಕ್ಯಾನ್ಸರ್ ನ ಪ್ರಾರಂಭಿಕ ಹಂತದಲ್ಲಿ ಗಂಟಲಿನ ನೋವು ಅಥವಾ ಆಹಾರ ನುಂಗಲು ತೊಂದರೆ (ಡಿಸ್ಫೇಜಿಯಾ) ಆಗುತ್ತದೆ. ವ್ಯಕ್ತಿಯ ಧ್ವನಿಯಲ್ಲಿ ಬದಲಾವಣೆ ಅಥವಾ ಒರಟುತನದಿಂದ ಮಾತನಾಡಲು ತೊಂದರೆಯಾಗಬಹುದು. ಕೆಲವರಿಗೆ ನಿರಂತರ ಕೆಮ್ಮು, ಉಸಿರಾಟದ ತೊಂದರೆಯೂ ಆಗಬಹುದು. ಇಂತಹ ತೊಂದರೆಗಳು ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಉಳಿಯಬಹುದು. ಅಂತಹ ಸಮಯದಲ್ಲಿ ಬೇಗ ವೈದ್ಯರನ್ನು ಕಾಣುವುದು ಒಳ್ಳೆಯದು. ಗಂಟಲಿನ ಕ್ಯಾನ್ಸರ್ ನ ಆರಂಭಿಕ ಹಂತದಲ್ಲಿ ಗಂಟಲು, ಕುತ್ತಿಗೆಯ ಹಿಂಭಾಗ ಅಥವಾ ಬಾಯಿಯ ಹಿಂಭಾಗದಲ್ಲಿ ಚಿಕ್ಕ ಚಿಕ್ಕ ಉಂಡೆಗಳು ಕಾಣಿಸಿಕೊಳ್ಳುತ್ತವೆ. ಈ ಉಂಡೆಗಳು ಕೂಡ ನಿಮ್ಮ ಗಮನಕ್ಕೆ ಬರುತ್ತದೆ. ಹಾಗಾಗಿ ಅಂತಹ ಲಕ್ಷಣಗಳು ಕಂಡುಬಂದಾಗಲೂ ಎಚ್ಚೆತ್ತುಕೊಳ್ಳಬೇಕು. ಇದರ ಹೊರತಾಗಿ ಎರಡು ವಾರಕ್ಕಿಂತಲೂ ಹೆಚ್ಚು ಸಮಯ ಕಿವಿಯ ನೋವು ಕಾಡುತ್ತಿದ್ದರೆ ಹಾಗೂ ಇನ್ಯಾವುದೇ ಬದಲಾವಣೆಗಳಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.