ಕುತ್ತಿಗೆ ನೋವು ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದ ಭಾರತೀಯ ಮಹಿಳೆಯೊಬ್ಬರು ಜಪಾನ್ನಿಂದ 40,000 ರೂ. ಬೆಲೆಯ ಕಸ್ಟಮೈಸ್ ಮಾಡಿದ ತಲೆದಿಂಬು ಖರೀದಿಸಿದ್ದಾರೆ. 400 ವರ್ಷ ಹಳೆಯ ಅಂಗಡಿಯಿಂದ ಖರೀದಿಸಿದ ಈ ದಿಂಬು, ತಜ್ಞರ ಪರೀಕ್ಷೆಯ ನಂತರ ತಯಾರಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
ಭಾರತೀಯರಿಗೆ ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಕುತ್ತಿಗೆ ನೋವು, ನಿದ್ರಾಹೀನತೆ ಸಮಸ್ಯೆಯೂ ಒಂದು. ದಣಿದ ಬಂದ ದೇಹ ವಿಶ್ರಾಂತಿ ಪಡೆಯಲು ನಿದ್ರೆ ಅವಶ್ಯಕ. ದಿನದ ಇಪ್ಪತ್ನಾಲ್ಕು ಗಂಟೆಯೂ ಲ್ಯಾಪ್ಟಾಪ್, ಸಿಸ್ಟಂ ಮುಂದೆ ಕುಳಿತು ಕೆಲಸ ಮಾಡುವವರಿಗಂತೂ ಕುತ್ತಿಗೆ ನೋವು ತುಂಬಾನೇ ಕಾಡುತ್ತೆ. ರಾತ್ರಿ ನಿದ್ದೆಯೂ ಬರೋದಿಲ್ಲ. ಯಾವುದೇ ತಪಾಸಣೆ ನಡೆಸಿದರೂ ಆ ನೋವು ಮತ್ತೆ ಮರುಕಳಿಸುತ್ತಲೇ ಇರುತ್ತದೆ.
ಕುತ್ತಿಗೆ ನೋವು ನಿವಾರಣೆಗೆ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಅಸಹನೀಯವಾಗಿ ಕುತ್ತಿಗೆ ನೋವು, ನಿದ್ರಾಹೀನತೆಯಿಂದ ಬಳಲುತ್ತಿದ್ದ ಭಾರತೀಯ ಮಹಿಳೆಯೊಬ್ಬರು ಜಪಾನ್ನಿಂದ ಬರೋಬ್ಬರಿ 40,000 ರೂ. ಬೆಲೆಯ, ಕಸ್ಟಮೈಸ್ ಮಾಡಿದ ತಲೆದಿಂಬು ಖರೀದಿಸಿದ್ದಾರೆ! ಹೌದು ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಹಾರ್ಟ್ ಪ್ರಾಬ್ಲಂ ಇರೋರ ಗಮನಕ್ಕೆ: ರಾತ್ರಿ ಯಾವ ಮಗ್ಗಲು ಮಲಗಬೇಕು? ವೈದ್ಯರು ಹೇಳಿದ್ದೇನು? ಮಲಗುವ ಮುನ್ನ ಈ ವಿಷಯ ತಿಳ್ಕೊಳ್ಳಿ
ಚಾರ್ಟರ್ಡ್ ಅಕೌಂಟೆಂಟ್ ಹೇಳುವ ಪ್ರಕಾರ, ಒಂದೇ ಕಡೆ ಕುಳಿತು ಕೆಲಸ ಮಾಡುವವರು, ಲ್ಯಾಪ್ ಟಾಪ್ ಸಿಸ್ಟಂ ಬಳಸಿ ಕೆಲಸ ಮಾಡುವವರಿಗೆ ಕುತ್ತಿಗೆ ನೋವು ತುಂಬಾನೇ ಕಾಡುತ್ತೆ. ಹೀಗಾಗಿ ಅವರು ಈ ಸಮಸ್ಯೆ ನಿವಾರಣೆಗೆ ಎಷ್ಟು ಬೇಕಾದ್ರೂ ಖರ್ಚು ಮಾಡಲು ಸಿದ್ಧರಿರ್ತಾರೆ ಎಂದು ಹೇಳುತ್ತಾರೆ.
400 ವರ್ಷ ಹಳೆಯ ತಲೆದಿಂಬು ಅಂಗಡಿ!
ವಿಪಂದೀಪ್ ಕೌರ್(Vipandeep Kaur) ಎಂಬ ಯುವತಿ ನಾಲ್ಕು ನೂರು ವರ್ಷಗಳ ಹಳೆಯ ಅಂಗಡಿಯಿಂದ ಬೃಹತ್ ಬೆಲೆಗೆ ತಲೆದಿಂಬು ಖರೀದಿಸಿದ್ದಾಳೆ. ತನ್ನ ಹೊಸ ದಿಂಬಿನೊಂದಿಗೆ ವಿಡಿಯೋ ಮಾಡಿರುವ ಆಕೆ, ಇದೀಗ ನೆಟ್ಟಿಗರ ಗಮನ ಸೆಳೆದಿದ್ದಾರೆ. ಯುವತಿ ಇತ್ತೀಚೆಗೆ ಜಪಾನ್ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ನಿಹೋನ್ಬಾಶಿಯಲ್ಲಿರುವ 400 ವರ್ಷ ಹಳೆಯ ಅಂಗಡಿಗೆ ಭೇಟಿ ನೀಡಿದ್ದರಂತೆ. ಹಾಸಿಗೆ ಬ್ರ್ಯಾಂಡ್ ನಿಶಿಕಾವಾದಿಂದ ಕಸ್ಟಮೈಸ್ ಮಾಡಿದ ದಿಂಬನ್ನು ಖರೀದಿಸಿದ್ದಾರೆ. ಹೀಗೆ ಖರೀದಿಸಿದ ತಲೆದಿಂಬನ್ನು ನವೆಂಬರ್ 4 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಖರೀದಿಸಿದ ತಲೆದಿಂಬು ಹೇಗೆ ಸಹಾಯಕವಾಯ್ತು ಎಂಬ ಅನುಭವವನ್ನು ವಿವರಿಸಿದ್ದಾರೆ. ದೇಹದ ಗುಣಲಕ್ಷಣಗಳು, ಮಲಗುವ ಶೈಲಿ ಮತ್ತು ಮಲಗಿರುವಾಗ ದೇಹದ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ದಿಂಬನ್ನು ತಯಾರಿಸಲಾಗಿದೆ ಹೇಳಿದ್ದಾರೆ.
ತಲೆದಿಂಬು ಹೇಗೆ ಕಸ್ಟಮೈಸ್ ಮಾಡ್ತಾರೆ?
ಬೆಂಗಳೂರಿನ ತಲೆದಿಂಬು ಅಂಗಡಿಗಳಂತೆ ನೇರವಾಗಿ ಮಾರಾಟ ಮಾಡಲ್ಲ. ಜಪಾನ್ನ ತಜ್ಞರು ತಲೆದಿಂಬು ಕಸ್ಟಮೈಸ್ ಮಾಡುವ ಮೊದಲು ವಿವರವಾದ ಪರೀಕ್ಷೆಗಳನ್ನು ನಡೆಸುತ್ತಾರೆ. ಗ್ರಾಹಕರ ಕುತ್ತಿಗೆಯ ರಚನೆ. ದೇಹದ ಸ್ಥಾನವನ್ನು ಪರಿಶೀಲಿಸಲಾಗುತ್ತದೆ. ನಂತರ ಸೂಕ್ತವಾದ ದಿಂಬಿನ ಬಟ್ಟೆ ಮತ್ತು ಇತರ ಯುನಿಟ್ ಗಳ ಬಗ್ಗೆ ನಿರ್ಧಾರಕ್ಕೆ ಬರುತ್ತಾರೆ. ಬಳಿಕ ಗ್ರಾಹಕರನ್ನು ವಿವಿಧ ಎತ್ತರದ ದಿಂಬುಗಳ ಮೇಲೆ ಮಲಗುವಂತೆ ಹೇಳುತ್ತಾರೆ. ಇದರ ಮೂಲಕ ತಜ್ಞರು ದೇಹಕ್ಕೆ ಸೂಕ್ತವಾದ ಮಲಗುವ ಶೈಲಿ ಮತ್ತು ದಿಂಬಿನ ಎತ್ತರ ಎಷ್ಟಿರಬೇಕು ಎಂಬುದನ್ನ ನಿರ್ಧರಿಸುತ್ತಾರೆ. ಎಲ್ಲ ಪರೀಕ್ಷೆಗಳು ಮುಗಿದನಂತರವೇ ದಿಂಬನ್ನು ತಯಾರಿಸಿ ಕೊಡುತ್ತಾರೆ ಎಂದು ವಿವರಿಸಿದ್ದಾರೆ. ತಲೆದಿಂಬಿನ ಒಳಗೆ ಹತ್ತಿಯಲ್ಲ, ಏನೇನು ತುಂಬಲಾಗುತ್ತೆ ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.
ಉತ್ತಮ ಹೂಡಿಕೆ
ಇಷ್ಟು ಹಣ ಖರ್ಚು ಮಾಡಿ ತಲೆದಿಂಬು ಖರೀದಿಸುವವರು ಇದ್ದಾರಾ? ಈ ಪ್ರಶ್ನೆಗೂ ವಿವರಿಸಿರುವ ವಿಪಂದೀಪ್, ನಾನು ಮೊದಲು ನಿದ್ರೆಗೆ ಹೆಚ್ಚಿನ ಮಹತ್ವ ನೀಡುತ್ತಿರಲಿಲ್ಲ. ಆದರೆ ವಯಸ್ಸಾದಂತೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾದವು. ಅದರಲ್ಲೂ ಲ್ಯಾಪ್ಟಾಪ್, ಮೊಬೈಲ್ ಫೋನ್ನಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಕುತ್ತಿಗೆಯ ಮೇಲೆ ತುಂಬಾನೇ ಪರಿಣಾಮ ಆಗುತ್ತದೆ. ಈ ಸಮಸ್ಯೆಗೆ ಕಸ್ಟಮೈಸ್ ಮಾಡಿದ ದಿಂಬು ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತೆ.ಒಳ್ಳೆಯ ನಿದ್ದೆಗೂ ಹೆಲ್ಪ್ ಆಗುತ್ತೆ ಎಂದು ವಿವರಿಸಿದ್ದಾರೆ.
ವಿಪಂದೀಪ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬೇಗವೇ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ನಾಲ್ಲು ಗಂಟೆಗಳಲ್ಲೇ ಈ ವಿಡಿಯೋ ಮೂರು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಉತ್ತಮ ರಾತ್ರಿ ನಿದ್ರೆಗಾಗಿ ಹಣವನ್ನು ಖರ್ಚು ಮಾಡುವ ನಿರ್ಧಾರವನ್ನು ಕೆಲವರು ಶ್ಲಾಘಿಸಿದರೆ, ಇನ್ನು ಕೆಲವರು ದಿಂಬಿಗೆ 40,000 ರೂ. ಖರ್ಚು ಮಾಡುವುದು ಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.














