ದೇಹದ ಚಯಾಪಚಯ ಕ್ರಿಯೆ, ಶಕ್ತಿ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕಾರ್ಯದಲ್ಲಿನ ವ್ಯತ್ಯಾಸವು ಅನಿರೀಕ್ಷಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

35 ವರ್ಷ ದಾಟಿದ ಮೇಲೆ ತೂಕ ಹೆಚ್ಚಾಗುವುದನ್ನು ಬಹಳ ಮಂದಿ ವಯಸ್ಸಿನ ಸಹಜ ಲಕ್ಷಣ ಅಂತಾ ಸುಮ್ಮನಾಗಿಬಿಡುತ್ತಾರೆ. ವಯಸ್ಸಾದಂತೆ ದೇಹದ ಚಯಾಪಚಯ ಕ್ರಿಯೆ (ಮೆಟಬಾಲಿಸಂ) ನಿಧಾನವಾಗುವುದು ನಿಜ. ಆದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿಮ್ಮ ತೂಕ ಇದ್ದಕ್ಕಿದ್ದಂತೆ ಹೆಚ್ಚಾದರೆ, ಅದನ್ನು ಸುಲಭವಾಗಿ ತಗೋಬೇಡಿ. ಇದು ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಸಂಕೇತವೂ ಆಗಿರಬಹುದು. ನಮ್ಮ ದೇಹದ ಮೆಟಬಾಲಿಸಂ, ಶಕ್ತಿಯ ಮಟ್ಟ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವುದೇ ಈ ಥೈರಾಯ್ಡ್ ಗ್ರಂಥಿ. ಈ ಗ್ರಂಥಿಯು ಅಗತ್ಯವಿರುವಷ್ಟು ಹಾರ್ಮೋನುಗಳನ್ನು ಉತ್ಪಾದಿಸದ ಸ್ಥಿತಿಯನ್ನು 'ಹೈಪೋಥೈರಾಯ್ಡಿಸಮ್' ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿ, ದೇಹವು ಕ್ಯಾಲೊರಿಗಳನ್ನು ಬಳಸುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಹೆಚ್ಚಾಗುವುದು ಮತ್ತು ವಿಪರೀತ ಸುಸ್ತು ಕಾಣಿಸಿಕೊಳ್ಳುತ್ತದೆ.

ಜೀವನಶೈಲಿಯೋ ಅಥವಾ ಥೈರಾಯ್ಡೋ?

ಸಾಮಾನ್ಯವಾಗಿ 35-40 ವರ್ಷಕ್ಕೆ ಕಾಲಿಡುವಾಗ ದೈಹಿಕ ಚಟುವಟಿಕೆ ಕಡಿಮೆ ಆಗುವುದು, ನಿದ್ದೆ ಸರಿಯಾಗಿ ಮಾಡದೇ ಇರುವುದು, ಮಾನಸಿಕ ಒತ್ತಡ ಮತ್ತು ಹಾರ್ಮೋನ್ ಬದಲಾವಣೆಗಳಿಂದ ತೂಕ ಹೆಚ್ಚಾಗಬಹುದು. ಆದರೆ, ನಿಮ್ಮ ಆಹಾರ ಕ್ರಮ ಅಥವಾ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ತೂಕ ಜಾಸ್ತಿಯಾಗುತ್ತಿದ್ದರೆ, ಅದರ ಹಿಂದೆ ಥೈರಾಯ್ಡ್ ಕಾರಣ ಇರಬಹುದು. ಥೈರಾಯ್ಡ್ ಕಾರ್ಯಕ್ಷಮತೆ ನಿಧಾನವಾದಾಗ, ದೇಹದಲ್ಲಿ ನೀರು ಮತ್ತು ದ್ರವಗಳು ಶೇಖರಣೆಯಾಗಿ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಸಾಮಾನ್ಯ. ವಿಶೇಷವಾಗಿ, ಹಾರ್ಮೋನ್ ಬದಲಾವಣೆ, ಗರ್ಭಧಾರಣೆ ಮತ್ತು ಇತರ ಕಾಯಿಲೆಗಳಿಂದಾಗಿ 35 ವರ್ಷದ ನಂತರ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದರೆ, ಇದು ಪುರುಷರ ಮೇಲೂ ಪರಿಣಾಮ ಬೀರಬಹುದು.

ಕಡೆಗಣಿಸಲೇಬಾರದ ಪ್ರಮುಖ ಲಕ್ಷಣಗಳು: ತೂಕ ಹೆಚ್ಚಾಗುವುದರ ಜೊತೆಗೆ ಈ ಕೆಳಗಿನ ಲಕ್ಷಣಗಳು ನಿಮ್ಮಲ್ಲಿದ್ದರೆ, ಗಮನ ಕೊಡಿ.

-ಯಾವಾಗಲೂ ಸುಸ್ತು ಮತ್ತು ಶಕ್ತಿ ಇಲ್ಲದ ಹಾಗೆ ಆಗುವುದು.

-ಚಳಿಯನ್ನು ಸಹಿಸಿಕೊಳ್ಳಲು ಆಗದಿರುವುದು.

-ಚರ್ಮ ಮತ್ತು ಕೂದಲು ಒಣಗಿದಂತೆ ಆಗುವುದು, ಕೂದಲು ಉದುರುವುದು.

-ಮಲಬದ್ಧತೆ ಸಮಸ್ಯೆ.

-ಮುಖ ಮತ್ತು ಕುತ್ತಿಗೆಯಲ್ಲಿ ಊತ ಕಾಣಿಸಿಕೊಳ್ಳುವುದು.

-ಮನಸ್ಥಿತಿಯಲ್ಲಿ ಬದಲಾವಣೆ, ಖಿನ್ನತೆ ಮತ್ತು ಆತಂಕ.

-ಅನಿಯಮಿತ ಮುಟ್ಟಿನ ಸಮಸ್ಯೆ.

-ಸರಿಯಾಗಿ ಡಯಟ್ ಮತ್ತು ವ್ಯಾಯಾಮ ಮಾಡಿದರೂ ತೂಕ ಕಡಿಮೆ ಆಗದಿರುವುದು.

ಮುಂಗಡ ಪರೀಕ್ಷೆ ಮತ್ತು ಪರಿಹಾರ

ಒಂದು ಸರಳ ರಕ್ತ ಪರೀಕ್ಷೆಯ ಮೂಲಕ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಸುಲಭವಾಗಿ ಪತ್ತೆ ಮಾಡಬಹುದು. ಹೈಪೋಥೈರಾಯ್ಡಿಸಮ್ ಅನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚಿದರೆ, ಔಷಧಿಗಳು, ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಉತ್ತಮ ನಿದ್ದೆಯ ಮೂಲಕ ಸುಲಭವಾಗಿ ನಿಯಂತ್ರಣಕ್ಕೆ ತರಬಹುದು. ಆದರೆ, ಇದಕ್ಕೆ ದೀರ್ಘಕಾಲ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಅಧಿಕ ಕೊಲೆಸ್ಟ್ರಾಲ್, ಹೃದಯದ ಕಾಯಿಲೆಗಳು, ಬಂಜೆತನದ ಸಮಸ್ಯೆಗಳು ಮತ್ತು ತೀವ್ರವಾದ ಸುಸ್ತಿಗೆ ಕಾರಣವಾಗಬಹುದು. ಆದ್ದರಿಂದ, 35 ವರ್ಷದ ನಂತರ ಇದ್ದಕ್ಕಿದ್ದಂತೆ ಆಗುವ ತೂಕ ಹೆಚ್ಚಳವನ್ನು ವಯಸ್ಸಿನ ಬದಲಾವಣೆ ಎಂದು ಕಡೆಗಣಿಸಬೇಡಿ.