Mental Health : ಸಣ್ಣ ವಿಚಾರಕ್ಕೂ ನರ್ವಸ್ ಆಗಿ ಬೆವರು ಬರ್ತಿದ್ರೆ ಫೋಬಿಯಾ ಕಾಡ್ತಿದೆ ಎಂದರ್ಥ
ಮಾನಸಿಕ ಆರೋಗ್ಯ ಬಹಳ ಮುಖ್ಯ. ನಮ್ಮ ಮಾನಸಿಕ ಸ್ಥಿತಿ ಗಟ್ಟಿಯಾಗಿದ್ರೆ ಎಂಥ ಸಂದರ್ಭವನ್ನು ಕೂಡ ನಾವು ಧೈರ್ಯವಾಗಿ ಎದುರಿಸಬಹುದು. ಆದ್ರೆ ಸದಾ ಆತಂಕ ನಮ್ಮ ಮನಸ್ಸು ಹೊಕ್ಕಿದ್ರೆ ಅದ್ರಿಂದ ಸಮಸ್ಯೆ ಹೆಚ್ಚಾಗುತ್ತೆ ವಿನಃ ಕಡಿಮೆಯಾಗೋದಿಲ್ಲ.
ನರ್ವಸ್ ಆಗೋದು, ಆತಂಕಕ್ಕೆ ಒಳಗಾಗೋದು ಮನುಷ್ಯನ ಒಂದು ಸಾಮಾನ್ಯ ಪ್ರಕ್ರಿಯೆ. ಪ್ರತಿಕೂಲ ಸಂದರ್ಭದಲ್ಲಿ ಜನರು ನರ್ವಸ್ ಗೆ ಒಳಗಾಗ್ತಾರೆ. ಪರೀಕ್ಷೆಯಿಂದ ಹಿಡಿದು ಭಾವನಾತ್ಮಕ ಸಮಯದಲ್ಲಿ, ಸಾರ್ವಜನಿಕರ ಮುಂದೆ ಮಾತನಾಡುವ ವೇಳೆ ಬಹುತೇಕರು ಆತಂಕ ಪಟ್ಟುಕೊಳ್ತಾರೆ. ಹೊಸ ಜನರು ಭೇಟಿಯಾದಾಗ ಅವರ ಜೊತೆ ಮಾತನಾಡಲು ಮಕ್ಕಳು ಭಯಪಡ್ತಾರೆ. ದೊಡ್ಡವರಾಗ್ತಾ ಈ ನರ್ವಸ್ನೆಸ್ ಕಡಿಮೆಯಾಗ್ತಾ ಬರುತ್ತದೆ. ಅಪರೂಪಕ್ಕೆ ಅಥವಾ ಸಂದರ್ಭಕ್ಕೆ ತಕ್ಕಂತೆ ನರ್ವಸ್ ಕಾಡಿದ್ರೆ ಅದು ಸಾಮಾನ್ಯ ಎನ್ನಬಹುದು. ಆದ್ರೆ ನೀವು ಆಗಾಗ್ಗೆ ಈ ಆತಂಕಕ್ಕೆ ಒಳಗಾಗ್ತಿದ್ದರೆ ಅದನ್ನು ಮಾಮೂಲಿ ಎನ್ನಲು ಸಾಧ್ಯವಿಲ್ಲ. ಇದು ಆತಂಕ ಹುಟ್ಟಿಸುವ ಸಂಗತಿಯಾಗಿದೆ.
ಪ್ರತಿ ದಿನ ಮಾಡುವ ಸಣ್ಣಪುಟ್ಟ ಕೆಲಸಕ್ಕೂ ಕೆಲವರು ಆತಂಕ (Anxiety) ಪಟ್ಟುಕೊಳ್ತಾರೆ. ತಮ್ಮ ಅಭಿಪ್ರಾಯವನ್ನು ಯಾರ ಮುಂದೂ ಹೇಳೋದಿಲ್ಲ. ತಾವು ಮಾಡಿದ ಕೆಲಸವನ್ನು ಜನರು ಇಷ್ಟಪಡದೆ ಹೋದ್ರೆ ಎಂದು ಆತಂಕಪಟ್ಟುಕೊಳ್ತಾರೆ. ನೀವೂ ಚಿಕ್ಕ ವಿಚಾರಕ್ಕೂ ತಲೆಕೆಡಿಸಿಕೊಂಡು ನರ್ವಸ್ (Nervous) ಆಗ್ತಿದ್ದರೆ ಅದೊಂದು ರೀತಿಯ ಮಾನಸಿಕ ಕಾಯಿಲೆ. ಅದನ್ನು ಸಾಮಾಜಿಕ ಆತಂಕ (SAD) ಎಂದು ಕರೆಯಲಾಗುತ್ತದೆ. ನೀವಿದನ್ನು ಸಾಮಾಜಿಕ ಫೋಬಿಯಾ ಎನ್ನಬಹುದು. ಈ ಸಾಮಾಜಿಕ ಫೋಬಿಯಾ, ನಿಮ್ಮ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಸುಖಕರ ಜೀವನ (Life) ನಡೆಸೋದು ಕಷ್ಟವಾಗುತ್ತದೆ.
HEALTH TIPS: ಆಫೀಸ್ ಕೆಲ್ಸ ಮಾಡ್ತಾನೇ ಯೋಗ ಮಾಡಿ, ಸ್ಟ್ರೆಸ್ ಕಡಿಮೆ ಮಾಡ್ಕೊಳ್ಳಿ
ಇದು ದೀರ್ಘಕಾಲ ಕಾಡುವ ಮಾನಸಿಕ ಸಮಸ್ಯೆಯಾಗಿದೆ. ಭಯ, ಚಿಂತೆ, ನಕಾರಾತ್ಮಕ ಆಲೋಚನೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ದೈನಂದಿನ ಕೆಲಸ, ಶಾಲೆ, ಕಚೇರಿ ಕೆಲಸ, ಮನೆ ಕೆಲಸ ಸೇರಿದಂತೆ ನೀವು ನಿತ್ಯ ಮಾಡುವ ಎಲ್ಲ ಕೆಲಸದ ಮೇಲೆ ಇದ್ರ ಪ್ರಭಾವ ಇರುತ್ತದೆ. ಹದಿಹರೆಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆ, ಕೆಲ ಮಕ್ಕಳನ್ನೂ ಕಾಡುವುದಿದೆ.
ಸಾಮಾಜಿಕ ಫೋಬಿಯಾ ಲಕ್ಷಣಗಳು : ಕೆಲವೊಂದು ಲಕ್ಷಣಗಳ ಮೂಲಕ ಸಾಮಾಜಿಕ ಫೋಬಿಯಾ ಹೊಂದಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು.
• ಅಪರಿಚಿತರ ಜೊತೆ ಮಾತನಾಡಲು ಭಯ
• ಎಲ್ಲ ಸಂದರ್ಭದಲ್ಲಿ ಕಾಡುವ ಭಯ
• ಆಸಕ್ತಿಯಿದ್ರೂ ಜನರು ನೋಡ್ತಾರೆಂಬ ಆತಂಕ
• ಜನರನ್ನು ನೋಡಿದಾಗ ಮುಖ ಕೆಂಪಾಗುವುದು
• ಅರಿಚಿತರ ಜೊತೆ ಮಾತನಾಡುವಾಗ ಬೆವರು
• ದೇಹದಲ್ಲಿ ಸಣ್ಣ ನಡುಕ ಕಾಣಿಸಿಕೊಳ್ಳುವುದು
• ಭಯದ ಕಾರಣಕ್ಕೆ ಜನರ ಜೊತೆ ಮಾತನಾಡಲು ಹಿಂಜರಿಕೆ. ಅವಕಾಶ ಸಿಕ್ಕಿದ್ರೂ ಭಯದಿಂದ ಹಿಂದೆ ಸರಿಯುವುದು.
• ಸಾರ್ವಜನಿಕ ಪ್ರದೇಶದಲ್ಲಿ ಅಡಗಿಕೊಳ್ಳುವ ಸ್ವಭಾವ
ವರ್ಕ್ ಫ್ರಮ್ ಹೋಮ್ ಮಾಡ್ತೀರಾ? ಮುಂದಿನ ದಿನಗಳಲ್ಲಿ ನೀವು ಹೀಗಾಗ್ತೀರಿ..
ಸಾರ್ವಜನಿಕ ಆತಂಕಕ್ಕೆ ಕಾರಣ : ಜೈವಿಕ ಮತ್ತು ಪರಿಸರ ಅಂಶಗಳು ಈ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವು ಜನರಲ್ಲಿ ಈ ಆತಂಕದ ಸಮಸ್ಯೆ ಆನುವಂಶಿಕವಾಗಿ ಬರುತ್ತದೆ. ಆನುವಂಶಿಕವಾಗಿ ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೈಪರ್ಆಕ್ಟಿವ್ ಸ್ಥಿತಿ ಹೊಂದಿರುವ ಜನರು ಹೆಚ್ಚು ಭಯಕ್ಕೆ ಒಳಗಾಗ್ತಾರೆ ಎಂದು ತಜ್ಞರು ಹೇಳ್ತಾರೆ. ಮೆದುಳಿನ ಭಾಗ ಅಮಿಗ್ಡಾಲಾ, ಭಯವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.
ಸಾಮಾಜಿಕ ಆತಂಕಕ್ಕೆ ಪರಿಹಾರ ಏನು? : ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂಬುದನ್ನು ಮೊದಲು ಪತ್ತೆ ಮಾಡ್ಬೇಕು. ಅನೇಕರು ಇದನ್ನು ನಿರ್ಲಕ್ಷ್ಯ ಮಾಡ್ತಾರೆ. ಮತ್ತೆ ಕೆಲವರು ಇದು ಮಾನಸಿಕ ಸಮಸ್ಯೆಯಾಗಿದ್ದು, ಜನರು ತಪ್ಪು ತಿಳಿದ್ರೆ ಎನ್ನುವ ಕಾರಣಕ್ಕೆ ವೈದ್ಯರ ಬಳಿ ಹೋಗೋದಿಲ್ಲ. ಆದ್ರೆ ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯೋದು ಮುಖ್ಯ. ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗಿ ನೀವು ಚಿಕಿತ್ಸೆ ಪಡೆಯಬೇಕು. ಕೆಲವು ಔಷಧಿ ಅಥವಾ ಚಿಕಿತ್ಸೆ ಇದಕ್ಕೆ ಅಗತ್ಯ.