Health Tips: ಮಧ್ಯರಾತ್ರಿಯಾದ್ರೂ ನಿದ್ರೆ ಮಾಡ್ತಿಲ್ವಾ? ಸಾವು ಸಮೀಪಿಸುತ್ತಿದ್ಯಾ?
ಊಟ, ವ್ಯಾಯಾಮ, ನಿದ್ರೆ ಎಲ್ಲವೂ ಸರಿಯಾಗಿದ್ರೆ ಮಾತ್ರ ಆರೋಗ್ಯ. ಒಂದರಲ್ಲಿ ಏರುಪೇರಾದ್ರೂ ಅನಾರೋಗ್ಯ ಕಾಡುತ್ತದೆ. ಅದ್ರಲ್ಲೂ ತಡರಾತ್ರಿವರೆಗೂ ವ್ಯಸನ ಮಾಡ್ತಾ ಕಾಲ ಕಳೆಯೋರು ನೀವಾಗಿದ್ರೆ ಈಗಿನಿಂದ್ಲೇ ಸಾವಿಗೆ ಸಿದ್ಧರಾಗಿ.
ರಾತ್ರಿ ನಿದ್ರೆಯಲ್ಲಿ ಹೊತ್ಕೊಂಡು ಹೋದ್ರೂ ಗೊತ್ತಾಗಲ್ಲ.. ಅಷ್ಟು ನಿದ್ರೆ ಬರುತ್ತೆ ನನಗೆ ಅನ್ನೋರು ನೀವಾಗಿದ್ದರೆ ಈ ಸುದ್ದಿ ಕೇಳಿ ಖುಷಿಯಾಗ್ತೀರಾ. ಅದೇ ರಾತ್ರಿ ನಿದ್ರೆನೇ ಬರೋದಿಲ್ಲ ಎನ್ನುವವರಿಗೆ ಸ್ವಲ್ಪ ಆತಂಕವಾಗೋದು ಸಾಮಾನ್ಯ. ರಾತ್ರಿ ಸರಿಯಾಗಿ ನಿದ್ರೆಯಾದ್ರೆ ಮಾರನೇ ದಿನ ಶಕ್ತಿ ಹೆಚ್ಚಿರುತ್ತದೆ. ಎಲ್ಲ ಕೆಲಸವನ್ನು ನೀವು ಉತ್ಸಾಹದಿಂದ ಮಾಡ್ತೀರಿ. ಆರೋಗ್ಯ ಕೂಡ ಚೆನ್ನಾಗಿರುತ್ತೆ. ಬರೀ ನಿದ್ರೆ ಇಷ್ಟಕ್ಕೆ ಸೀಮಿತವಾಗಿಲ್ಲ. ನಿಮ್ಮ ಜೀವಿತಾವಧಿ ಮೇಲೂ ಈ ನಿದ್ರೆ ಪ್ರಭಾವ ಬೀರುತ್ತದೆ.
ಹೌದು, ನಿದ್ರೆ (Sleep ) ಸರಿಯಾಗಿ ಬರ್ತಾ ಇಲ್ಲ, ತಡರಾತ್ರಿವರೆಗೂ ಮೊಬೈಲ್, ಟವಿ ನೋಡ್ತೇನೆ, ಆಗಾಗ ನಿದ್ರೆಯಿಂದ ಎಚ್ಚವಾಗುತ್ತೆ ಎನ್ನುವವರು ನೀವಾಗಿದ್ದರೆ ಇಂದೇ ಆ ಅಭ್ಯಾಸ (Practice) ಬಿಡೋದು ಉಳಿತು. ತಡರಾತ್ರಿಯವರೆಗೆ ಎಚ್ಚರವಾಗಿರುವವರ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ತಡರಾತ್ರಿವರೆಗೆ ಟಿವಿ, ಮೊಬೈಲ್ ನೋಡ್ತಾ ಕಾಲ ಕಳೆಯುವವರಿಗೆ ನಿದ್ರೆ ಮಾಡಿದ್ಮೇಲೂ ಎಚ್ಚರವಾಗ್ತಿರುತ್ತದೆ. ರಾತ್ರಿ ಸರಿಯಾಗಿ ನಿದ್ರೆಯಾಗದ ಕಾರಣ, ಆರೋಗ್ಯ (Health)ದಲ್ಲಿ ಏರುಪೇರಾಗುತ್ತದೆ. ಆದ್ರೆ ಇನ್ನೊಂದು ಅಧ್ಯಯನ ಸಾವಿನ ಬಗ್ಗೆ ಮಾಹಿತಿ ನೀಡಿದೆ. ನಿದ್ರೆ ಹಾಗೂ ಸಾವು ಇದ್ರ ಬಗ್ಗೆ ಅಧ್ಯಯನ ಏನೆಲ್ಲ ಹೇಳಿದೆ ಎಂಬ ಮಾಹಿತಿ ಇಲ್ಲಿದೆ.
Health Tips : ಹಾಸಿಗೆಗೆ ಹೋಗ್ತಿದ್ದಂತೆ ನಿದ್ರೆ ಆವರಿಸ್ಬೇಕೆಂದ್ರೆ ಅಮೆರಿಕದ ಈ ಟ್ರಿಕ್ ಫಾಲೋ ಮಾಡಿ
ರಾತ್ರಿ ಏಳುವವರ ಆಯಸ್ಸು ಕಡಿಮೆ ಆಗಲು ಕಾರಣವೇನು? : ರಾತ್ರಿ ಮಧ್ಯ ಮಧ್ಯ ಏಳುವುದು ಅಕಾಲಿಕ ಮರಣಕ್ಕೆ ಕಾರಣವಾಗ್ತಿದೆ. ಇದು ಅನೇಕ ರೋಗಕ್ಕೆ ಆಹ್ವಾನ ನೀಡುತ್ತದೆ. ರಾತ್ರಿಯಲ್ಲಿ ಪದೇ ಪದೇ ಏಳುವ ಜನರ ಆಯಸ್ಸು ಕಡಿಮೆಯಾಗಲು ಕಾರಣವೇನು ಎಂಬುದನ್ನು ಸಂಶೋಧಕರು ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ. ದಿನಕ್ಕೆ ಹೋಲಿಕೆ ಮಾಡಿದ್ರೆ ರಾತ್ರಿ ಏಳುವ ಜನರು ಹೆಚ್ಚು ಮದ್ಯವ್ಯಸನಿ ಹಾಗೂ ಧೂಮಪಾನಿಗಳಾಗಿರುತ್ತಾರೆ ಎಂದು ಅಧ್ಯಯನ ಹೇಳಿದೆ. ಇದು ಅವರ ಆರೋಗ್ಯ ಹಾಳು ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ.
ಅಧ್ಯಯನದ ಡೇಟಾ ಹೇಳೋದೇನು? : ಸುಮಾರು 23,000 ಅವಳಿಗಳ ಡೇಟಾವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಈ ಅವಳಿಗಳು 1981 ರಿಂದ 2018 ರವರೆಗೆ ನಡೆದ ಫಿನ್ನಿಷ್ ಟ್ವಿನ್ ಕೋಹಾರ್ಟ್ ಅಧ್ಯಯನದಲ್ಲಿ ಭಾಗವಹಿಸಿದ್ದರು. ಈ ಪೈಕಿ 8,728 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಸಾವಿನ ಅಂಕಿ ಅಂಶ ಆಘಾತಕಾರಿಯಾಗಿದೆ. ಬೆಳಗ್ಗೆ ಬೇಗ ಏಳುವವರಿಗಿಂತ ರಾತ್ರಿ ತಡವಾಗಿ ಮಲಗುವವರು ಬೇಗ ಸಾಯುವ ಸಾಧ್ಯತೆ ಶೇಕಡಾ 9ರಷ್ಟು ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ.
ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ?
ತಡರಾತ್ರಿ ಮಲಗಿದ್ರೂ ಇವರಿಗೆ ನೆಮ್ಮದಿ ನೀಡಿದ ಅಧ್ಯಯನ : ಅಧ್ಯಯನದಲ್ಲಿ ತಡವಾಗಿ ಮಲಗುವವರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಲಾಗಿದೆ. ಅಧ್ಯಯನದ ಪ್ರಕಾರ, ತಡರಾತ್ರಿಯವರೆಗೆ ಮದ್ಯಪಾನ ಅಥವಾ ಧೂಮಪಾನ ಮಾಡದೆ ಎಚ್ಚರವಿರುವವರಿಗೆ ಸಾವಿನ ಅಪಾಯ ಕಡಿಮೆ ಇರುತ್ತದೆ. ಅದೇ ಮದ್ಯಪಾನ ಮಾಡ್ತಾ, ತಡರಾತ್ರಿಯವರೆಗೆ ಇರುವ ಜನರು ಬೇಗ ಸಾವನ್ನಪ್ಪುತ್ತಾರೆ ಎಂದು ಅಧ್ಯಯನದ ವರದಿ ಹೇಳಿದೆ. ಅಂದ್ರೆ ಅಕಾಲಿಕ ಮರಣಕ್ಕೆ ಕಾರಣ ನಶೆ ಎಂದು ತಜ್ಞರು ಹೇಳಿದ್ದಾರೆ.
ಫಿನ್‌ಲ್ಯಾಂಡ್‌ನ ರಾಜಧಾನಿ ಹೆಲ್ಸಿಂಕಿಯಲ್ಲಿ, ಫಿನ್ನಿಶ್ ಇನ್‌ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಹೆಲ್ತ್ ಇದೆ. ಅಲ್ಲಿನ ಕ್ರಿಸ್ಟರ್ ಹಬ್ಲಿನ್ ಈ ಅಧ್ಯಯನದ ವರದಿ ನೀಡಿದ್ದಾರೆ. ಅವರ ಪ್ರಕಾರ, ತಂಬಾಕು ಮತ್ತು ಮದ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ, ತಡರಾತ್ರಿಯವರೆಗೂ ಎಚ್ಚರವಿರುವ ವ್ಯಕ್ತಿಗೆ ಮಾತ್ರ ಅಕಾಲಿಕ ಸಾವಿನ ಅಪಾಯ ಹೆಚ್ಚಿರುತ್ತದೆ ಎಂದಿದ್ದಾರೆ.
ಸೂಕ್ತ ನಿದ್ರೆಗೆ ಏನು ಮಾಡ್ಬೇಕು? : ಅಧ್ಯಯನ ಹೇಳಿದಂತೆ ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರುವುದು ಬಹಳ ಮುಖ್ಯ. ರಾತ್ರಿ ಸರಿಯಾಗಿ ನಿದ್ರೆ ಬರಬೇಕು ಎನ್ನುವವರು ತಡರಾತ್ರಿಯವರೆಗೆ ಗ್ಯಾಜೆಟ್ ಹಿಡಿದು ಕುಳಿತುಕೊಳ್ಳಬಾರದು. ರಾತ್ರಿ 10 ಗಂಟೆಯೊಳಗೆ ಬೆಡ್ ಗೆ ಹೋಗುವ ಅಭ್ಯಾಸ ಮಾಡಿಕೊಳ್ಳಬೇಕು. ಆರಂಭದಲ್ಲಿ ಕಷ್ಟವೆನ್ನಿಸಿದ್ರೂ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂಬುದನ್ನು ಮನಗಂಡು ಈ ಕೆಲಸ ಮಾಡ್ಬೇಕು.