ಬೆಳಗ್ಗೆ ಟೀ, ಕಾಫಿ ಬದಲು ಅರಿಶಿನ, ನಿಂಬೆ, ಶುಂಠಿ ಬೆರೆಸಿದ ಬಿಸಿ ನೀರು ಕುಡಿದರೆ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಅಥವಾ ಕಾಫಿ ಕುಡಿಯುವುದು ಹಲವರ ಅಭ್ಯಾಸ. ಅವುಗಳ ಬದಲು ಕೆಲ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಹಲವು ಪ್ರಯೋಜನಗಳಾಗುತ್ತದೆ. ಹಲವು ಶತಮಾನಗಳಿಂದಲೂ ನಮ್ಮ ಹಿರಿಯರು ಬಿಸಿ ನೀರಿಗೆ ಅರಿಶಿನ, ನಿಂಬೆ ರಸ ಮತ್ತು ಶುಂಠಿ ಬೆರೆಸಿ ಪಾನೀಯವಾಗಿ ಸೇವಿಸುತ್ತಿದ್ದರು. ಈ ಪಾನೀಯವು ಉಲ್ಲಾಸಕರವಾಗಿದ್ದು, ಜೀವಸತ್ವಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ, ಪ್ರತಿದಿನ ಬೆಳಗ್ಗೆ ಟೀ, ಕಾಫಿ ಕುಡಿಯುವ ಬದಲು ಈ ಪಾನೀಯ ಸೇವಿಸುವುದರಿಂದ 7 ರೀತಿಯ ಲಾಭಗಳನ್ನು ಪಡೆಯಬಹುದು. ಅವು ಯಾವುವು ಎಂದು ಈಗ ತಿಳಿದುಕೊಳ್ಳೋಣ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ನಿಂಬೆಯಲ್ಲಿರುವ ವಿಟಮಿನ್ ಸಿ ಬಿಳಿ ರಕ್ತ ಕಣಗಳ ಕಾರ್ಯವನ್ನು ಬೆಂಬಲಿಸುತ್ತದೆ. ಇದರಲ್ಲಿ ಕರ್ಕ್ಯುಮಿನ್, ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ವೈರಲ್ ಗುಣಗಳೂ ಇವೆ. ಅದೇ ರೀತಿ ಶುಂಠಿ ಮತ್ತು ನಿಂಬೆಯಲ್ಲಿರುವ ಗುಣಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಈ ಮೂರು ಮಿಶ್ರಣದ ಪಾನೀಯ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಶೀತ, ಕೆಮ್ಮು, ಜ್ವರ ಮತ್ತು ಇತರ ಕಾಲೋಚಿತ ಸೋಂಕುಗಳು ಬರುವುದನ್ನು ತಡೆಯುತ್ತದೆ.
ಕೀಲು ನೋವು ಮತ್ತು ಊತ ಕಡಿಮೆಯಾಗುತ್ತದೆ :
ಅರಿಶಿನದಲ್ಲಿರುವ ಕರ್ಕ್ಯುಮಿನ್ ಕೀಲು ನೋವು, ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ನಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಜೀವಕೋಶಗಳನ್ನು ರಕ್ಷಿಸುತ್ತದೆ. ಹಾಗಾಗಿ ಈ ಮೂರೂ ಸೇರಿದ ಪಾನೀಯವನ್ನು ಪ್ರತಿದಿನ ಬೆಳಗ್ಗೆ ಕುಡಿದರೆ ಕೀಲು ನೋವು, ಊತದಿಂದ ನಿವಾರಣೆ ದೊರೆಯುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಈ ಆರೋಗ್ಯಕರ ಪಾನೀಯವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಂದರೆ, ಬಿಸಿ ನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ, ಅರಿಶಿನ ಉರಿಯೂತವನ್ನು ಕಡಿಮೆ ಮಾಡುತ್ತದೆ, ಶುಂಠಿ ವಾಕರಿಕೆಯನ್ನು ಕಡಿಮೆ ಮಾಡುತ್ತದೆ, ನಿಂಬೆ ಆಮ್ಲೀಯತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಲಬದ್ಧತೆ, ಆಮ್ಲೀಯತೆ, ಅಜೀರ್ಣ ಮುಂತಾದ ಜೀರ್ಣಕ್ರಿಯೆಯ ಸಮಸ್ಯೆ ಇರುವವರಿಗೆ ಈ ಪಾನೀಯವು ರಾಮಬಾಣವಾಗಿದೆ.
ಮೂತ್ರಪಿಂಡದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ :
ದೇಹದಿಂದ ವಿಷವನ್ನು ಹೊರಹಾಕಲು ಯಕೃತ್ತು ಸಹಾಯ ಮಾಡುತ್ತದೆ. ಈ ಬಿಸಿ ಪಾನೀಯವು ಈ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ನಿಂಬೆಯು ದೇಹದಲ್ಲಿ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚು ಮೂತ್ರವನ್ನು ಉತ್ಪಾದಿಸುತ್ತದೆ. ಇದರಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅದೇ ರೀತಿ ಶುಂಠಿ ಮತ್ತು ಅರಿಶಿನವು ಅನಗತ್ಯ ವಿಷವನ್ನು ಹೊರಹಾಕುತ್ತದೆ. ಪ್ರತಿದಿನ ಬೆಳಿಗ್ಗೆ ಈ ಪಾನೀಯವನ್ನು ಕುಡಿದರೆ ದೇಹದಲ್ಲಿರುವ ರಕ್ತ ಶುದ್ಧೀಕರಿಸಲ್ಪಡುತ್ತದೆ. ಅದೇ ಸಮಯದಲ್ಲಿ ಮೂತ್ರಪಿಂಡದ ಕಾರ್ಯವನ್ನು ಬೆಂಬಲಿಸುತ್ತದೆ.
ಚರ್ಮವನ್ನು ಆರೋಗ್ಯವಾಗಿರಿಸುತ್ತದೆ :
ಪ್ರತಿದಿನ ಬೆಳಗ್ಗೆ ಈ ಅದ್ಭುತ ಪಾನೀಯವನ್ನು ಕುಡಿದರೆ ನಿಮ್ಮ ಚರ್ಮವು ಯಾವಾಗಲೂ ಯೌವ್ವನ ಮತ್ತು ಹೊಳಪಿನಿಂದ ಕೂಡಿರುತ್ತದೆ. ಏಕೆಂದರೆ, ನಿಂಬೆಯಲ್ಲಿರುವ ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಅರಿಶಿನದಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಿಂದ ಮೊಡವೆಗಳು ಕಡಿಮೆಯಾಗುತ್ತದೆ ಮತ್ತು ಚರ್ಮದ ಬಣ್ಣ ಸುಧಾರಿಸುತ್ತದೆ. ಶುಂಠಿಯಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ಆಕ್ಸಿಡೆಂಟ್ ಗುಣಗಳು ಚರ್ಮದ ಕಿರಿಕಿರಿಯನ್ನು ನಿವಾರಿಸುತ್ತದೆ.
ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ :
ಈ ಪಾನೀಯವು ತೂಕವನ್ನು ನಿಯಂತ್ರಣದಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ, ನಿಂಬೆಯಲ್ಲಿರುವ ಪೆಕ್ಟಿನ್ ಹೊಟ್ಟೆಯನ್ನು ದೀರ್ಘಕಾಲ ತುಂಬಿದಂತೆ ಮಾಡುತ್ತದೆ. ಶುಂಠಿ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅರಿಶಿನ ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಈ ಪಾನೀಯವನ್ನು ಹಿಂಜರಿಕೆಯಿಲ್ಲದೆ ಸೇವಿಸಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ :
ಅರಿಶಿನ ಗ್ಲೂಕೋಸ್ ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ. ನಿಂಬೆ ಮತ್ತು ಶುಂಠಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಹೀಗಾಗಿ ನೀವು ದಿನವಿಡೀ ಚೈತನ್ಯದಿಂದಿರುತ್ತೀರಿ.
ಈ ಪಾನೀಯವನ್ನು ತಯಾರಿಸುವುದು ಹೇಗೆ?
ಈ ಪಾನೀಯವನ್ನು ತಯಾರಿಸಲು, ಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನ ಮತ್ತು ಸಣ್ಣ ತುಂಡು ಶುಂಠಿ ಸೇರಿಸಿ. 10 ನಿಮಿಷ ಹಾಗೆಯೇ ಇರಿಸಿ ನಂತರ ನಿಂಬೆ ರಸ ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಕುಡಿಯಿರಿ. ರುಚಿಗೆ ತುಸು ಜೇನುತುಪ್ಪ ಸೇರಿಸಬಹುದು. ಬಿಸಿಯಾಗಿರುವಾಗಲೇ ಈ ಪಾನೀಯವನ್ನು ಕುಡಿಯುವುದು ಒಳ್ಳೆಯದು. ಈ ಪಾನೀಯವನ್ನು ಉಪಾಹಾರಕ್ಕೆ 20 ರಿಂದ 30 ನಿಮಿಷಗಳ ಮೊದಲು ಕುಡಿಯಬೇಕು ಎಂಬುದನ್ನು ನೆನಪಿನಲ್ಲಿಡಿ.
