Health Tips : ಕಿವಿ ಹಣ್ಣಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ
ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಅನೇಕ ಖಾಯಿಲೆಗಳಿಗೆ ಹಣ್ಣು ಮದ್ದು. ಆದ್ರೆ ಯಾವುದೇ ಹಣ್ಣನ್ನು ಅತಿಯಾಗಿ ತಿನ್ನಬಾರದು. ಕೆಲವೊಂದು ಹಣ್ಣಿನ ಸೇವನೆ ಅಪಾಯಕ್ಕೆ ಕಾರಣವಾಗುತ್ತದೆ. ಕಿವಿ ಹಣ್ಣನ್ನು ಕೂಡ ಹೆಚ್ಚಾಗಿ ಸೇವನೆ ಮಾಡಿದ್ರೆ ಹುಷಾರ್ ತಪ್ಪುತ್ತದೆ.
ಕೆಲವರು ಕಿವಿ (Kiwi ) ಹಣ್ಣನ್ನು ತುಂಬ ಇಷ್ಟಪಟ್ಟು ತಿನ್ನುತ್ತಾರೆ. ಇದಕ್ಕೆ ಕಾರಣ ಅದ್ರಲ್ಲಿರುವ ಹುಳಿ (Sour). ಸಿಹಿ-ಹುಳಿ ಮಿಶ್ರಿತ ಹಣ್ಣು (Fruit ) ಕೆಲವರಿಗೆ ಇಷ್ಟವಾಗುತ್ತದೆ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ (Vitamin c) ಸಮೃದ್ಧವಾಗಿದೆ. ಇದೇ ಕಾರಣಕ್ಕೆ ಅದು ಹುಳಿ. ಡೆಂಗ್ಯೂ ರೋಗಿಗಳು ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ಇದಕ್ಕೆ ಕಾರಣ ಈ ಹಣ್ಣಿನ ಸೇವನೆ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಒಳಗೆ ಹಸಿರಾಗಿರುವ ಹಣ್ಣಿನಲ್ಲಿ ಕಪ್ಪು ಬಣ್ಣದ ಸಣ್ಣ ಬೀಜಗಳಿರುತ್ತವೆ. ಇದ್ರ ತಿರುಳು ತುಂಬಾ ಮೃದು. ಇದನ್ನು ಜ್ಯೂಸ್ ರೂಪದಲ್ಲಿಯೂ ಅನೇಕರು ಸೇವನೆ ಮಾಡ್ತಾರೆ.
ಕಿವಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ರಕ್ತಹೀನತೆ, ವಿಟಮಿನ್ ಬಿ ಕೊರತೆ, ವೈರಲ್ ಸೋಂಕುಗಳನ್ನು ಗುಣಪಡಿಸಲು ಸಹಕಾರಿ. ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕಗಳ ಜೊತೆಗೆ ವಿಟಮಿನ್ ಬಿ6, ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ನೀರು, ರಂಜಕ, ಮೆಗ್ನೀಸಿಯಮ್, ತಾಮ್ರ, ಸತು, ಬೀಟಾ ಕ್ಯಾರೋಟಿನ್ ಇತ್ಯಾದಿಗಳು ಇದ್ರಲ್ಲಿವೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಯಾವುದನ್ನೂ ಅತಿಯಾಗಿ ಸೇವನೆ ಮಾಡಬಾರದು. ಅದ್ರಲ್ಲಿ ಕಿವಿ ಕೂಡ ಒಂದು. ಕಿವಿ ಹಣ್ಣನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯ ಸುಧಾರಿಸುವ ಬದಲು ಹಾಳಾಗುತ್ತದೆ.
ಅತಿಯಾದ ಕಿವಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಅಪಾಯಕಾರಿ
ಅಲರ್ಜಿ: ವರದಿಯೊಂದರ ಪ್ರಕಾರ ದಿನದಲ್ಲಿ ಹೆಚ್ಚು ಕಿವಿ ಹಣ್ಣು ಸೇವಿಸಿದರೆ ಕೆಲವು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಚರ್ಮದ ಮೇಲೆ ಗುಳ್ಳೆ, ಊತ ಅಥವಾ ಉರಿಯೂತ, ಬಾಯಿಯಲ್ಲಿ ಕಿರಿಕಿರಿ ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ಕಿವಿ ಹಣ್ಣಿನ ಅತಿಯಾದ ಸೇವನೆಯಿಂದ ಓರಲ್ ಅಲರ್ಜಿ ಸಿಂಡ್ರೋಮ್ ಕಾಡುವ ಅಪಾಯವಿದೆ. ಇದರಲ್ಲಿ ಬಾಯಿ, ತುಟಿ ಮತ್ತು ನಾಲಿಗೆಯಲ್ಲಿ ಊತ ಕಂಡುಬರುತ್ತದೆ.
ಕಿಡ್ನಿ ಸಮಸ್ಯೆ : ಯಾವುದೇ ವ್ಯಕ್ತಿಗೆ ಕಿಡ್ನಿ ಸಂಬಂಧಿತ ಕಾಯಿಲೆಗಳಿದ್ದರೆ ಆತ ಕಿವಿ ಸೇವನೆ ಮಾಡದಿರುವುದೇ ಒಳ್ಳೆಯದು. ಒಂದು ವೇಳೆ ಸೇವನೆ ಮಾಡುತ್ತಿದ್ದರೆ ಕಡಿಮೆ ಪ್ರಮಾಣದಲ್ಲಿ ಹಣ್ಣನ್ನು ತಿನ್ನುವುದು ಒಳ್ಳೆಯದು. ಕಿವಿ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇದೆ. ಪೊಟ್ಯಾಸಿಯಮ್ ಅತಿಯಾದ ಸೇವನೆಯು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಇದು ಕಿಡ್ನಿ ಸಮಸ್ಯೆಯನ್ನು ಹೆಚ್ಚು ಮಾಡುವ ಸಾಧ್ಯತೆಯಿರುತ್ತದೆ.
HOLI 2022: ಹಬ್ಬದ ನಂತ್ರ ಆರೋಗ್ಯ ರಕ್ಷಣೆ ಹೀಗಿರಲಿ
ಹೊಟ್ಟೆ ಸಮಸ್ಯೆ : ಕಿವಿ ಸೇವನೆ ನಂತ್ರ ನಿಮ್ಮ ದೇಹದಲ್ಲಿ ಕೆಲ ಬದಲಾವಣೆ ಕಂಡು ಬಂದ್ರೆ ಅದರ ಸೇವನೆಯನ್ನು ಮಿತಗೊಳಿಸಿ. ಯಾಕೆಂದ್ರೆ ಕಿವಿಯಲ್ಲಿ ಹೆಚ್ಚು ನಾರಿನಂಶವಿರುತ್ತದೆ. ಇದರ ಅತಿಯಾದ ಸೇವನೆಯು ಅತಿಸಾರ, ಹೊಟ್ಟೆ ನೋವು, ವಾಂತಿ ಮತ್ತು ವಾಕರಿಕೆಗೆ ಕಾರಣವಾಗಬಹುದು.
ಗರ್ಭಿಣಿಯರಿಗೆ ಅಪಾಯ : ಗರ್ಭಿಣಿಯರು ಕಿವಿ ಹಣ್ಣನ್ನು ಅತಿಯಾಗಿ ಸೇವನೆ ಮಾಡಬಾರದು. ಕಿವಿ ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
Unhealthy Habits: ಪುರುಷರ ಇಂಥಾ ಕೆಟ್ಟ ಅಭ್ಯಾಸ ವೀರ್ಯದ ಗುಣಮಟ್ಟ ಕಡಿಮೆ ಮಾಡುತ್ತೆ !
ಕಿವಿ ಹಣ್ಣಿನ ಸೇವನೆ ಹೀಗಿರಲಿ : ಕಿವಿ ಹಣ್ಣನ್ನು ನಾನಾ ರೂಪದಲ್ಲಿ ನೀವು ಸೇವನೆ ಮಾಡಬಹುದು. ಕಿವಿ ಹಣ್ಣನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ನೀವು ಸೇವನೆ ಮಾಡಬಹುದು. ಹಣ್ಣನ್ನು ಜ್ಯೂಸ್ ರೂಪದಲ್ಲಿಯೂ ಸೇವನೆ ಮಾಡಬಹುದು. ಕಿವಿಯನ್ನು ಸ್ಮೂಥಿ ಅಥವಾ ಸಲಾಡ್ ರೂಪದಲ್ಲಿ ತೆಗೆದುಕೊಳ್ಳಬಹುದು. ಈ ಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹುದು. ಹಣ್ಣು ತಾಜಾ ಇರುವಾಗ ಸೇವನೆ ಮಾಡುವುದು ಹೆಚ್ಚು ಪರಿಣಾಮಕಾರಿ. ಕಿವಿಯು ದೇಹಕ್ಕೆ ತಂಪು ನೀಡುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಇದನ್ನು ತಿಂದರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.