ಕ್ಯಾನ್ಸರ್‌ಕಾರಕ ಫಾರ್ಮಾಲ್ಡಿಹೈಡ್ ಶಾಂಪೂ, ಲೋಷನ್ ಸೇರಿದಂತೆ ಹಲವು ಸೌಂದರ್ಯವರ್ಧಕಗಳಲ್ಲಿ ಪತ್ತೆಯಾಗಿದೆ. ಅಮೆರಿಕದ ಅಧ್ಯಯನವೊಂದು ಕಪ್ಪು ಮತ್ತು ಲ್ಯಾಟಿನ್ ಮಹಿಳೆಯರು ಬಳಸುವ ಉತ್ಪನ್ನಗಳಲ್ಲಿ ಇದರ ಅಂಶ ಹೆಚ್ಚಿರುವುದನ್ನು ಬಹಿರಂಗಪಡಿಸಿದೆ.
ಕೂದಲು ಚೆನ್ನಾಗಿರಲೆಂದೋ, ಮುಖ ಚೆನ್ನಾಗಿರಲೆಂದೋ ನೀವು ಪ್ರತಿದಿನ ಶಾಂಪೂ, ಬಾಡಿ ಲೋಷನ್, ಫೇಸ್ ವಾಶ್ ಅಥವಾ ಸೋಪ್ ಬಳಸುತ್ತಿದ್ದರೆ ಈ ಸುದ್ದಿ ನಿಮಗಾಗಿಯೇ...ಹೌದು, ಇಷ್ಟು ದಿನ ನಾವು ಸೇವಿಸುವ ಆಹಾರದಲ್ಲಿ ಏನೆಲ್ಲಾ ರಾಸಯನಿಕಗಳನ್ನು ಬಳಸುತ್ತಾರೆ ಎಂಬುದನ್ನು ಓದಿದ್ದೇವೆ. ಈಗ ಸೋಪು-ಶಾಂಪೂ ಸರದಿ. ಅಮೆರಿಕದಲ್ಲಿ ಇತ್ತೀಚೆಗೆ ನಡೆಸಿದ ಸಂಶೋಧನೆಯು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ 'ಫಾರ್ಮಾಲ್ಡಿಹೈಡ್' ಅನೇಕ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಕಂಡುಬಂದಿದೆ. ಇದು ವಿಶೇಷವಾಗಿ ಕಪ್ಪು ಮತ್ತು ಲ್ಯಾಟಿನ್ ಮಹಿಳೆಯರು ಬಳಸುವ ಉತ್ಪನ್ನಗಳಲ್ಲಿ ಕಂಡುಬರುತ್ತದೆ.
ಸಂಶೋಧನೆಯಲ್ಲಿ ಏನು ಕಂಡುಬಂದಿದೆ?
ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಲೆಟರ್ಸ್(Environmental Science & Technology Letters)ನಲ್ಲಿ ಪ್ರಕಟವಾದ ಈ ಅಧ್ಯಯನವು 70 ಕಪ್ಪು ಮತ್ತು ಲ್ಯಾಟಿನ್ ಮಹಿಳೆಯರ ಸೌಂದರ್ಯ ಉತ್ಪನ್ನ ಆದ್ಯತೆಗಳನ್ನು ಪರಿಶೀಲಿಸಿದೆ. ಮಹಿಳೆಯರು ತಮ್ಮ ಉತ್ಪನ್ನಗಳಲ್ಲಿನ ಪದಾರ್ಥಗಳ ಚಿತ್ರಗಳನ್ನು ಆ್ಯಪ್ ಮೂಲಕ ಹಂಚಿಕೊಂಡರು. ಆಗ ಬಂದ ಫಲಿತಾಂಶಗಳು ಆಘಾತಕಾರಿಯಾಗಿದ್ದವು.
53% ಮಹಿಳೆಯರು ಫಾರ್ಮಾಲ್ಡಿಹೈಡ್ ಅಥವಾ ಅದನ್ನು ಬಿಡುಗಡೆ ಮಾಡುವ ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸಿದ್ದಾರೆ. ಈ ಅಪಾಯಕಾರಿ ಅಂಶವು ಶೇ. 58 ರಷ್ಟು ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಕಂಡುಬಂದಿದೆ. ಇದು ಹೇರ್ ಸ್ಟ್ರೈಟ್ನರ್‌ಗಳಲ್ಲಿ ಮಾತ್ರವಲ್ಲದೆ ಶಾಂಪೂ, ಲೋಷನ್, ಬಾಡಿ ವಾಶ್ ಮತ್ತು ಐಲ್ಯಾಶ್ ಗ್ಲೂ ಮುಂತಾದ ದಿನನಿತ್ಯದ ಉತ್ಪನ್ನಗಳಲ್ಲಿಯೂ ಕಂಡುಬಂದಿದೆ.
ಫಾರ್ಮಾಲ್ಡಿಹೈಡ್ ಎಂದರೇನು ಮತ್ತು ಅದು ಏಕೆ ಅಪಾಯಕಾರಿ?
ಫಾರ್ಮಾಲ್ಡಿಹೈಡ್ ಒಂದು ಗುರುತಿಸಲ್ಪಟ್ಟ ಕ್ಯಾನ್ಸರ್ ಕಾರಕವಾಗಿದೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಈಗಾಗಲೇ ಇದನ್ನು ಮಾನವನ ಆರೋಗ್ಯಕ್ಕೆ "ಅತ್ಯಂತ ಅಪಾಯಕಾರಿ ರಾಸಾಯನಿಕ" ಎಂದು ಘೋಷಿಸಿದೆ.
ಎಚ್ಚರಿಕೆ ಕೊಟ್ಟ ತಜ್ಞರು
"ಈ ರಾಸಾಯನಿಕಗಳು ನಾವು ಪ್ರತಿದಿನ ನಮ್ಮ ದೇಹದಾದ್ಯಂತ ಬಳಸುವ ಉತ್ಪನ್ನಗಳಲ್ಲಿವೆ. ಪದೇ ಪದೇ ಒಡ್ಡಿಕೊಂಡಾಗ ಅವುಗಳ ಪರಿಣಾಮಗಳು ಹೆಚ್ಚಾಗುತ್ತವೆ ಮತ್ತು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು" ಎಂದು ಅಧ್ಯಯನದ ಪ್ರಮುಖ ಲೇಖಕ ಡಾ. ರಾಬಿನ್ ಡಾಡ್ಸನ್ ಹೇಳುತ್ತಾರೆ. ಉತ್ಪನ್ನಗಳಲ್ಲಿ ಗುಪ್ತ ಹೆಸರು ಸೇರಿಸಲಾಗಿರುವುದರಿಂದ ಗ್ರಾಹಕರು ಅಂತಹ ರಾಸಾಯನಿಕಗಳನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳುತ್ತಾರೆ. ಉದಾಹರಣೆಗೆ - DMDM ಹೈಡಾಂಟೊಯಿನ್, ಇಮಿಡಾಜೋಲಿಡಿನೈಲ್ ಯೂರಿಯಾ, ಡಯಾಜೋಲಿಡಿನೈಲ್ ಯೂರಿಯಾ ಇತ್ಯಾದಿ.
ಇದರಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು?
* ಉತ್ಪನ್ನವನ್ನು ಖರೀದಿಸುವ ಮೊದಲು ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿ.
* "ಯೂರಿಯಾ" ಅಥವಾ "ಹೈಡಾಂಟೊಯಿನ್" ಹೊಂದಿರುವ ಸಂರಕ್ಷಕಗಳನ್ನು ತಪ್ಪಿಸಿ.
* ಫಾರ್ಮಾಲ್ಡಿಹೈಡ್-ಮುಕ್ತ, ನೈಸರ್ಗಿಕ ಅಥವಾ ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡಿ.
* ಸಾಧ್ಯವಾದಾಗ ಕಡಿಮೆ ರಾಸಾಯನಿಕ ಹೊಂದಿರುವ, ಮನೆಯಲ್ಲಿ ತಯಾರಿಸಿದ ಪರ್ಯಾಯಗಳನ್ನು ಆರಿಸಿ.
ಈ ಬಗ್ಗೆ ಸರ್ಕಾರಗಳ ನಿಲುವೇನು?
2023 ರಲ್ಲಿ US FDA ಫಾರ್ಮಾಲ್ಡಿಹೈಡ್ ಅನ್ನು ರಾಷ್ಟ್ರವ್ಯಾಪಿ ನಿಷೇಧಿಸಲು ಶಿಫಾರಸು ಮಾಡಿತು, ಆದರೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಕಾನೂನು ಕ್ರಮ ತೆಗೆದುಕೊಳ್ಳಲಾಗಿಲ್ಲ. ಯುರೋಪಿಯನ್ ಒಕ್ಕೂಟ ಮತ್ತು ಕೆಲವು ಅಮೇರಿಕನ್ ರಾಜ್ಯಗಳಲ್ಲಿ ಇದರ ಮೇಲೆ ಭಾಗಶಃ ನಿಷೇಧಗಳಿವೆ. "ಕಂಪನಿಗಳು ಈ ರಾಸಾಯನಿಕಗಳನ್ನು ಬಳಸುವುದನ್ನು ಆರಂಭದಿಂದಲೇ ನಿಲ್ಲಿಸುವುದು ಉತ್ತಮ ಮಾರ್ಗವಾಗಿದೆ" ಎಂದು ಡಾ. ಡಾಡ್ಸನ್ ಹೇಳುತ್ತಾರೆ.
ಸೌಂದರ್ಯ ಉತ್ಪನ್ನಗಳನ್ನು ಬಳಸುವುದು ಮುಖ್ಯ, ಆದರೆ ಆರೋಗ್ಯಕರ ಚರ್ಮ ಮತ್ತು ಕೂದಲಿಗಿಂತ ಆರೋಗ್ಯಕರ ಜೀವನ ಮುಖ್ಯ. ಆದ್ದರಿಂದ ಮುಂದಿನ ಬಾರಿ ನೀವು ಯಾವುದೇ ಶಾಂಪೂ, ಲೋಷನ್ ಅಥವಾ ಸೋಪ್ ಖರೀದಿಸಿದಾಗ ಅದರ ಪದಾರ್ಥಗಳನ್ನು ಪರಿಶೀಲಿಸುವುದನ್ನು ಮರೆಯದಿರಿ.


