ಜೆನ್ ಝಡ್ ಆರೋಗ್ಯದ ಬಗ್ಗೆ ಸಂಶೋಧನೆಯೊಂದು ಆಘಾತಕಾರಿ ವಿಷ್ಯ ಹೊರ ಹಾಕಿದೆ. ಅವರಿಗೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಅಪಾಯ ಜಾಸ್ತಿ ಎಂದಿದೆ.
ಜೆನ್ ಝಡ್ (Gen Z) ಬಗ್ಗೆ ಸಂಶೋಧನೆಯೊಂದು ಆತಂಕಕಾರಿ ವಿಷ್ಯವನ್ನು ಹೊರ ಹಾಕಿದೆ. ಭಾರತ ಮತ್ತು ಚೀನಾದಲ್ಲಿ ಝಡ್ ಜನರೇಷನ್ನ ಯುವ ಪೀಳಿಗೆಗೆ ಅಪಾಯವಿದೆ ಎಂದು ಸಂಶೋಧನೆ ಎಚ್ಚರಿಕೆ ನೀಡಿದೆ. ಭಾರತ ಹಾಗೂ ಚೀನಾದ ಜೆನ್ ಝೆಡ್ ಜನರು ಹೊಟ್ಟೆಯ ಕ್ಯಾನ್ಸರ್ಗೆ ಬಲಿಯಾಗುವ ಹೆಚ್ಚಿನ ಅಪಾಯ ಹೊಂದಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ಈ ಸಂಶೋಧನಾ ವರದಿಯ ಪ್ರಕಾರ, 2008 ಮತ್ತು 2017 ರ ನಡುವೆ ಜನಿಸಿದ ವಿಶ್ವದ 1.5 ಕೋಟಿ ಜನರಿಗೆ ಭವಿಷ್ಯದಲ್ಲಿ ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.
ಚೀನಾ (China) ನಾಗರೀಕರು ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆ ಕ್ಯಾನ್ಸರ್ ನಿಂದ ಬಳಲಲಿದ್ದಾರೆ. ಅದ್ರ ನಂತ್ರದ ಸ್ಥಾನ ಭಾರತದ್ದು. ಭಾರತದ ಯುವ ಪೀಳಿಗೆ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚು ಎದುರಿಸಲಿದ್ದಾರೆ. ಸಂಶೋಧನೆಯ ಪ್ರಕಾರ, ಹೊಟ್ಟೆಯ ಕ್ಯಾನ್ಸರ್ ಅಪಾಯದಲ್ಲಿರುವ 1.5 ಕೋಟಿ ಜನಸಂಖ್ಯೆಯಲ್ಲಿ, ಮೂರನೇ ಎರಡರಷ್ಟು ಜನರು ಏಷ್ಯಾ ಖಂಡದವರು. ಉಳಿದವರು ಅಮೆರಿಕ ಮತ್ತು ಆಫ್ರಿಕಾದವರು.
ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, 185 ದೇಶಗಳಲ್ಲಿ ಹೊಟ್ಟೆಯ ಕ್ಯಾನ್ಸರ್ನ ಪ್ರಸ್ತುತ ಡೇಟಾವನ್ನು ಅಧ್ಯಯನ ಮಾಡಿದ ನಂತ್ರ ಈ ವರದಿ ನೀಡಲಾಗಿದೆ. ಇದರ ಪ್ರಕಾರ, 2008 ಮತ್ತು 2017 ರ ನಡುವೆ ಜನಿಸಿದ ಸುಮಾರು 1.5 ಕೋಟಿ ಜನರಿಗೆ ಭವಿಷ್ಯದಲ್ಲಿ ಕ್ಯಾನ್ಸರ್ ಬರಲಿದೆ. ಈ ಜನರಲ್ಲಿ ಶೇಕಡಾ 76 ರಷ್ಟು ಜನರು ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗುತ್ತಾರೆ. ಈ ಬ್ಯಾಕ್ಟೀರಿಯಾವು ಹೊಟ್ಟೆಯಲ್ಲಿ ಕಂಡುಬರುತ್ತದೆ. ವಿಶ್ವದ ಒಟ್ಟು ಕ್ಯಾನ್ಸರ್ ಸಾವುಗಳಲ್ಲಿ ಹೊಟ್ಟೆ ಕ್ಯಾನ್ಸರ್ ಹೆಚ್ಚಿನ ಪಾಲನ್ನು ಹೊಂದಿದೆ. ಆದಾಗ್ಯೂ, ಸರಿಯಾದ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆಯಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಹೃದಯಾಘಾತ ಹಾಗೂ ಕ್ಯಾನ್ಸರ್ ಸಾವಿನ ಪ್ರಕರಣ ಹೆಚ್ಚಾಗ್ತಾನೇ ಇದೆ. ಪ್ರಪಂಚದಾದ್ಯಂತದ ವೈದ್ಯರು ಮತ್ತು ಸಂಶೋಧಕರು ಕ್ಯಾನ್ಸರ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಹೊಟ್ಟೆ ಕ್ಯಾನ್ಸರ್ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ವರದಿಯ ಅಂದಾಜಿನ ಪ್ರಕಾರ, ಏಷ್ಯಾದಲ್ಲಿ 1.06 ಮಿಲಿಯನ್ ಜನರು ಭವಿಷ್ಯದಲ್ಲಿ ಹೊಟ್ಟೆ ಕ್ಯಾನ್ಸರ್ನಿಂದ ಬಳಲುತ್ತಾರೆ. ಈ ಪೈಕಿ 65 ಮಿಲಿಯನ್ ರೋಗಿಗಳು ಭಾರತ ಮತ್ತು ಚೀನಾದವರಾಗಿರುತ್ತಾರೆ.
ಹಳೆ ಸಂಶೋಧನೆ ಏನು ಹೇಳಿತ್ತು? : ಈ ಬಗ್ಗೆ ಈ ಹಿಂದೆಯೂ ಸಂಶೋಧನೆ ನಡೆದಿದೆ. ಜೆನ್ ಝಡ್ ಪೀಳಿಗೆಗೆ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಹಳೆ ಸಂಶೋಧನೆ ವರದಿ ಹೇಳುತ್ತದೆ. 17 ವಿಧದ ಮಾರಕ ಕ್ಯಾನ್ಸರ್ನ ದೊಡ್ಡ ಅಪಾಯ ಅವರಿಗಿದೆ ಎಂದು ವರದಿ ಮಾಡಲಾಗಿತ್ತು. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಸಂಶೋಧಕರು ಇದನ್ನು ಬಹಿರಂಗಪಡಿಸಿದ್ದರು. 34 ಸಾಮಾನ್ಯ ರೀತಿಯ ಕ್ಯಾನ್ಸರ್ಗಳನ್ನು ಅಧ್ಯಯನ ಮಾಡಲಾಗಿತ್ತು. ಯುವ ಪೀಳಿಗೆಯಲ್ಲಿ ಸ್ತನ, ಮೇದೋಜ್ಜೀರಕ ಗ್ರಂಥಿ ಮತ್ತು ಹೊಟ್ಟೆ ಸೇರಿದಂತೆ 17 ವಿಧದ ಕ್ಯಾನ್ಸರ್ಗಳ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ಪತ್ತೆಯಾಗಿತ್ತು.
ಕ್ಯಾನ್ಸರ್ ನಿಂದ ರಕ್ಷಣೆ ಹೇಗೆ? : ದೇಹದಲ್ಲಿ ಆಗುವ ಯಾವುದೇ ಬದಲಾವಣೆಯನ್ನು ನಿರಂತರವಾಗಿ ಗಮನಿಸ್ತಿರಬೇಕು. ಯಾವುದೇ ಅಸಾಮಾನ್ಯ ಬದಲಾವಣೆ ಕಂಡು ಬಂದ್ರೂ ವೈದ್ಯರನ್ನು ಭೇಟಿಯಾಗ್ಬೇಕು. ರೋಗ ಲಕ್ಷಣಗಳಿಗೆ ಗಮನ ನೀಡಿ, ನಿರಂತರ ತಪಾಸಣೆ ಮಾಡ್ಬೇಕು. ಆನುವಂಶಿಕವಾಗಿ ಮಾತ್ರವಲ್ಲದೆ ನೀವು ತಿನ್ನುವ ಮತ್ತು ಬದುಕುವ ವಿಧಾನ ಈ ಗಂಭೀರ ಖಾಯಿಲೆಗೆ ಕಾರಣವಾಗುತ್ತದೆ. ಕೆಲವು ಜೀವನಶೈಲಿ ಅಭ್ಯಾಸಗಳು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಕ್ಯಾನ್ಸರ್ ಅಪಾಯಕ್ಕೆ ತಳ್ಳಬಹುದು. ಉದಾಹರಣೆಗೆ, ಅತಿಯಾದ ಮದ್ಯಪಾನ ಮತ್ತು ಧೂಮಪಾನ, ತಂಬಾಕು ಉತ್ಪನ್ನಗಳ ಸೇವನೆ ಕ್ಯಾನ್ಸರ್ಗೆ ಕಾರಣವಾಗಬಹುದು. ಪು ಮಾಂಸ, ಟ್ರಾನ್ಸ್-ಕೊಬ್ಬು, ಉಪ್ಪು ಮತ್ತು ಸಕ್ಕರೆ ಸಮೃದ್ಧವಾಗಿರುವ ಆಹಾರ, ಬೊಜ್ಜು ಮತ್ತು ದೈಹಿಕ ಚಟುವಟಿಕೆಯ ಕೊರತೆ ಕೂಡ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
