Asianet Suvarna News Asianet Suvarna News

ಆರ್ಯುವೇದದ ಪ್ರಕಾರ ನೀರು ಕುಡಿಯೋ ಸರಿಯಾದ ವಿಧಾನ ಇದೇ ನೋಡಿ

ನೀರು ಆರೋಗ್ಯಕ್ಕೆ ಒಳ್ಳೆಯದು. ಕಡಿಮೆ ನೀರು ಸೇವನೆ ಮಾಡಿದ್ರೆ ದೇಹ ನಿರ್ಜಲೀಕರಣಗೊಂಡು ಒಂದಿಷ್ಟು ಸಮಸ್ಯೆ ಕಾಡುತ್ತದೆ. ಫಿಟ್ ಆಗಿರ್ಬೇಕು ಅಂತಾ ಜನರು ಸಿಕ್ಕಾಪಟ್ಟೆ ನೀರು ಸೇವನೆ ಮಾಡಿದ್ರೂ ಒಳ್ಳೆಯದಲ್ಲ. ಇದು ಕೂಡ ಆಸ್ಪತ್ರೆ ಸೇರುವಂತೆ ಮಾಡುತ್ತೆ. ಆರ್ಯುವೇದದ ಪ್ರಕಾರ ಹೇಗೆ ನೀರು ಕುಡಿಬೇಕು ಅನ್ನೋ ಮಾಹಿತಿ ಇಲ್ಲಿದೆ.

Rules For Drinking Water As Per Ayurveda Vin
Author
First Published Aug 28, 2022, 9:41 AM IST

ನೀರಿಲ್ಲದೆ ಬದುಕೋದು ಸಾಧ್ಯವೇ ಇಲ್ಲ. ನೀರನ್ನು ಅದೇ ಕಾರಣಕ್ಕೆ ಜೀವ ಜಲ ಎನ್ನುತ್ತಾರೆ. ನೀರು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕ. ಇಡೀ ದೇಹ ಆರೋಗ್ಯವಾಗಿರಲು ನೀರು ಬೇಕು. ಪ್ರತಿ ದಿನ ಮೂರು ಲೀಟರ್ ನೀರು ಸೇವನೆ ಮಾಡುವಂತೆ ವೈದ್ಯರು ಹೇಳ್ತಾರೆ. ಮತ್ತೆ ಕೆಲವರು ಬಾಯಾರಿಕೆ ಆದಾಗ ನೀರು ಕುಡಿಯುವಂತೆ ಸಲಹೆ ನೀಡ್ತಾರೆ. ನೀರು ಆರೋಗ್ಯಕ್ಕೆ ಒಳ್ಳೆಯದು, ಚರ್ಮದ ಹೊಳಪಿಗೆ ಇದು ಬಹಳ ಪ್ರಯೋಜನಕಾರಿ ಎಂಬ ಕಾರಣಕ್ಕೆ ಅನೇಕರು ಪ್ರತಿ ದಿನ ಮಿತಿಮೀರಿ ನೀರು  ಕುಡಿದ್ರೆ ಅದು ಒಳ್ಳೆಯದಲ್ಲ. ಅತಿ ಹೆಚ್ಚು  ನೀರು ಕುಡಿಯುವುದು ನಿಮಗೆ ಮಾರಕವಾಗಬಹುದು. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಹಾಗಿದ್ರೆ ನೀರು ಕುಡಿಯೋಕೆ ಸರಿಯಾದ ರೀತಿ ಯಾವುದು ? ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಆರ್ಯುವೇದ ಏನು ಹೇಳುತ್ತೆ ತಿಳಿಯೋಣ. 

ಆಯುರ್ವೇದದ ಪ್ರಕಾರ ನೀರು ಕುಡಿಯುವ ನಿಯಮಗಳು
ನೀರು (Water) ನಮ್ಮ ದೇಹಕ್ಕೆ ಹಗಲಿನಲ್ಲಿ ಕನಿಷ್ಠ ಕೆಲವು ಗಂಟೆಗಳಿಗೊಮ್ಮೆ ಅಗತ್ಯವಿರುವ ಪ್ರಮುಖ ಪೋಷಕಾಂಶವಾಗಿದೆ. ಜೀರ್ಣಕ್ರಿಯೆಯಿಂದ ಹಿಡಿದು ದೇಹದ ಉಷ್ಣತೆಯನ್ನು ನಿಯಂತ್ರಿಸುವುದರಿಂದ ಪೋಷಕಾಂಶಗಳನ್ನು ಸಾಗಿಸುವವರೆಗೆ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ನಮ್ಮ ದೇಹಕ್ಕೆ (Body) ನೀರು ಅಗತ್ಯವಾಗಿರುತ್ತದೆ. ಬಾಯಾರಿಕೆಯ ಭಾವನೆಯು ನೀವು ನಿರ್ಜಲೀಕರಣಗೊಂಡಿದ್ದೀರಿ ಮತ್ತು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ದ್ರವಗಳನ್ನು ಹೊಂದಿಲ್ಲ ಎಂದು ಸೂಚಿಸುತ್ತದೆ. ಆಯುರ್ವೇದ ತಜ್ಞೆ ಡಾ.ರೇಖಾ ರಾಧಾಮೋನಿ ಅವರು ನೀರನ್ನು ಸೇವಿಸುವ ಸರಿಯಾದ ವಿಧಾನದ ಬಗ್ಗೆ ವಿವಿಧ ಕಾಯಿಲೆಗಳನ್ನು ದೂರವಿರಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ಇದಕ್ಕಾಗಿ ಯಾವ ರೀತಿ ನೀರು ಕುಡಿಯಬೇಕು ಎಂಬುದನ್ನು ವಿವರಿಸಿದ್ದಾರೆ. 

ಫಿಲ್ಟರ್ ನೀರು v/s ಕುದಿಸಿದ ನೀರು, ಆರೋಗ್ಯಕ್ಕೆ ಯಾವುದು ಒಳ್ಳೇದು ?

ಆಧುನಿಕ ಜೀವನಶೈಲಿ (Lifestyle)ಯಲ್ಲಿ ಎಲ್ಲರೂ ಧಾವಂತದಲ್ಲಿರುತ್ತಾರೆ. ಎಲ್ಲಾ ಕೆಲಸವನ್ನು ತರಾತುರಿಯಲ್ಲಿ ಮಾಡುತ್ತಿರುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಹೀಗೆ ಗಡಿಬಿಡಿಯಲ್ಲಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ (Health) ಹಾನಿಕಾರಕವಾಗಿದೆ. ಬದಲಿಗೆ ನೀರನ್ನು ನಿಧಾನವಾಗಿ ಕುಡಿಯಬೇಕು. ಮಾತ್ರವಲ್ಲ ರೆಫ್ರಿಜರೇಟರ್‌ನಿಂದ ನೀರನ್ನು ನೇರವಾಗಿ ಕುಡಿಯುವುದನ್ನು ತಪ್ಪಿಸಬೇಕು. ಬೆಳಗ್ಗೆದ್ದು ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನುಂಟು ಮಾಡುತ್ತದೆ. 

ಆಯುರ್ವೇದ ತಜ್ಞೆ ಡಾ.ರೇಖಾ ರಾಧಾಮೋನಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಡಿಯುವ ನೀರಿನ ಆಯುರ್ವೇದ ನಿಯಮಗಳನ್ನು ಹಂಚಿಕೊಂಡಿದ್ದಾರೆ.

- ನಿಂತುಕೊಂಡು ನೀರು ಕುಡಿಯುವ ಬದಲು ಕುಳಿತುಕೊಂಡು ನೀರು ಕುಡಿಯಿರಿ. ಏಕೆಂದರೆ ಹೀಗೆ ಮಾಡುವುದರಿಂದ ನೀರು ದೇಹಕ್ಕೆ ಉತ್ತಮವಾಗಿ ಪೂರೈಕೆಯಾಗುತ್ತದೆ. 

- ಸಿಪ್ ಮಾಡುತ್ತಾ ನೀರನ್ನು ಕುಡಿಯಿ. ದಿನಾ ಎಂಟು ಗ್ಲಾಸ್‌ಗಳಷ್ಟು ನೀರನ್ನು ಕುಡಿಯುವುದು ಒಳ್ಳೆಯದು. ಆದರೆ ಈ ರೀತಿ ನೀರು ಕುಡಿಯುವ ಕ್ರಮವನ್ನು ಪೂರ್ಣಗೊಳಿಸಲು, ನೀವು ಒಟ್ಟಿಗೆ 2-3 ಗ್ಲಾಸ್ ನೀರನ್ನು ಕುಡಿಯಬೇಕಾಗಿಲ್ಲ. ಆಯುರ್ವೇದದ ಪ್ರಕಾರ, ನೀರನ್ನು ಸಣ್ಣ ಗುಟುಕುಗಳಲ್ಲಿ ಮತ್ತು ದಿನವಿಡೀ ಕುಡಿಯುವುದು ಒಳ್ಳೆಯ ಅಭ್ಯಾಸ.

- ಬೆಚ್ಚಗಿನ ಅಥವಾ ಕೋಣೆಯ ಉಷ್ಣಾಂಶದಲ್ಲಿರುವ ನೀರನ್ನು ಕುಡಿಯಿರಿ, ಫ್ರಿಜ್‌ನಿಂದ ನೇರವಾಗಿ ತಣ್ಣನೆಯ ನೀರನ್ನು ಕುಡಿಯಬೇಡಿ ಏಕೆಂದರೆ ತಣ್ಣೀರು ನಿಮ್ಮ ಜೀರ್ಣಕಾರಿ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

- ನೀರನ್ನು ಸಂಗ್ರಹಿಸಲು ಮಣ್ಣಿನ ಪಾತ್ರೆಗಳು ಅಥವಾ ತಾಮ್ರ ಪಾತ್ರೆಯನ್ನು ಬಳಸಿ

- ಹರಿಯುವ ನೀರನ್ನು ಎಂದಿಗೂ ಕುಡಿಯಬೇಡಿ. ಯಾವಾಗಲೂ ಸಂಗ್ರಹವಾಗಿರುವ ನೀರನ್ನು ಕುಡಿಯಿರಿ.

- ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ನೀರನ್ನು ಕುಡಿಯಲು ಉತ್ತಮ ಮಾರ್ಗವೆಂದರೆ ಕುದಿಸಿದ ನೀರನ್ನು ಕುಡಿಯುವುದು.

- ನೀವು ಎದ್ದ ತಕ್ಷಣ, ಬೆಚ್ಚಗಿನ ನೀರನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ.

ಬಾಟಲ್ ನೀರು ಕುಡಿಯೋದು ಯಾಕೆ ಡೇಂಜರಸ್ ಇಲ್ಲಿ ತಿಳ್ಕೊಳ್ಳಿ!

ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು ?
ಡಾ.ರಾಧಾಮೋನಿ ಅವರು ಪ್ರಮಾಣಿತ ಪ್ರಮಾಣದ ನೀರನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನೀರನ್ನು ಕುಡಿಯಬೇಕು ಎಂದು ಹೇಳುತ್ತಾರೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ನೀವು ಗ್ಯಾಲನ್ ಗಟ್ಟಲೆ ನೀರು ಕುಡಿಯಬೇಕಾಗಿಲ್ಲ. ಆಯುರ್ವೇದದ ಪ್ರಕಾರ ನೀರು ಕೂಡ ಜೀರ್ಣವಾಗಬೇಕು. ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯವಿರುವ ನೀರಿನ ಪ್ರಮಾಣವು ಭಿನ್ನವಾಗಿರಬಹುದು. ನಿಮ್ಮ ದೇಹಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದನ್ನು, ಮಲಬದ್ಧತೆ (Constipation), ಬಾಯಿ ಒಣಗುವುದು, ಗಾಢ ಹಳದಿ ಮೂತ್ರದ (Urine) ಬಣ್ಣದಿಂದ ತಿಳಿದುಕೊಳ್ಳಬಹುದು. ಹೀಗೆಲ್ಲಾ ಆಗುತ್ತಿದ್ದರೆ ನೀವು ಕಡಿಮೆ ನೀರನ್ನು ಸೇವಿಸುತ್ತಿದ್ದೀರಿ. ಹೆಚ್ಚು ಕುಡಿಯಿರಿ ಎಂದು ತಜ್ಞರು ಹೇಳುತ್ತಾರೆ.

ಯಾವಾಗ ನೀರು ಕುಡಿಯಬೇಕು ?
ಊಟದ 30 ನಿಮಿಷಗಳ ನಂತರ ಅಥವಾ ಮೊದಲು ನೀರನ್ನು ಕುಡಿಯಿರಿ. ಅಪೌಷ್ಟಿಕತೆಯುಳ್ಳ ವ್ಯಕ್ತಿಗೆ ಆಹಾರದ ನಂತರ 30 ನಿಮಿಷಗಳ ನಂತರ ಮತ್ತು ಅಧಿಕ ತೂಕವಿರುವ ವ್ಯಕ್ತಿಗೆ ಆಹಾರದ 30 ನಿಮಿಷಗಳ ಮೊದಲು ನೀರನ್ನು ಕುಡಿಯಲು ಇದು ಸೂಕ್ತವಾಗಿದೆಎಂದು ಡಾ ರಾಧಾಮೋನಿ ಹೇಳುತ್ತಾರೆ. ಇನ್ಮುಂದೆ ನೀರು ಕುಡಿಯುವಾಗ ಈ ನಿಯಮಗಳನ್ನು ಪಾಲಿಸಿ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ. 

Follow Us:
Download App:
  • android
  • ios