ಕೆಲವರು ಸುಮ್ ಸುಮ್ಮನೆ ಅಳೋದ್ಯಾಕೆ? ಅವರ ಮನಸ್ಸಲ್ಲಿ ಏನಾಗುತ್ತಿರುತ್ತೆ?
ನಮಗೆ ಸಂತೋಷ ಆದಾಗ ನಗುವ ಸ್ವಾತಂತ್ರ್ಯವಿದ್ದಂತೆ ಅಳಲೂ ನಮಗೆ ಅಧಿಕಾರವಿದೆ. ಅಳು, ನಮ್ಮ ಭಾವನೆಗಳಲ್ಲಿ ಒಂದು. ಆದ್ರೆ ಅತಿಯಾಗಿ ಅಳೋದು ಒಳ್ಳೆಯದಲ್ಲ. ಅಳು ಹೆಚ್ಚಾಗಲು ಕಾರಣ ಇಲ್ಲಿದೆ.
ಸಂತೋಷ, ದುಃಖ ಎರಡೂ ಮನುಷ್ಯನ ಸಹಜ ಸ್ವಭಾವದಲ್ಲಿ ಒಂದು. ಸಂತೋಷವಾದಾಗ ನಗುವ ನಾವು ದುಃಖವಾದಾಗ ಕಣ್ಣೀರು ಸುರಿಸುತ್ತೇವೆ. ಪ್ರತಿಯೊಬ್ಬರ ಸ್ವಭಾವವೂ ಭಿನ್ನವಾಗಿರುತ್ತದೆ. ಒಬ್ಬರು ಯಾವಾಗಲೂ ಖುಷಿಯಾಗೆ ಇದ್ರೆ ಇನ್ನೊಬ್ಬರು ಸಣ್ಣ ಪುಟ್ಟ ವಿಷಯಕ್ಕೂ ಕಣ್ಣೀರಿಡುತ್ತಾರೆ.
ಕೆಲವರ ಮನಸ್ಸು (Mind) ತೀರ ಸೂಕ್ಷ್ಮವಾಗಿರುತ್ತದೆ. ಅಂತವರು ಸ್ವಲ್ಪ ಧ್ವನಿ (Voice) ಏರಿಸಿ ಮಾತನಾಡಿದರೂ ದುಃಖಿತರಾಗುತ್ತಾರೆ. ಇನ್ನೂ ಕೆಲವರು ತಮ್ಮ ಬಗ್ಗೆ ತಾವೇ ನಕಾರಾತ್ಮಕ (Negative)ವಾಗಿ ಚಿಂತಿಸಿ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಅಂತಹ ಭಾವನೆಗಳು ಮನುಷ್ಯನನ್ನು ಅಸಹಾಯಕನನ್ನಾಗಿಸುತ್ತದೆ ಮತ್ತು ಭಾವುಕರನ್ನಾಗಿಸುತ್ತದೆ. ಇದರಿಂದ ಅನೇಕ ದೈಹಿಕ ಬದಲಾವಣೆಗಳು ಉಂಟಾಗುತ್ತವೆ. ಆದರೂ ಕೆಲವರಿಗೆ ಅಳುವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹೀಗೆ ಕ್ಷಣಮಾತ್ರದಲ್ಲಿ ಭಾವುಕರಾಗಲು ಕಾರಣ ಏನು ಎನ್ನುವುದನ್ನು ವೈದ್ಯರು ಹೇಳಿದ್ದಾರೆ.
ಮಲಗೋ ಭಂಗಿಯಲ್ಲೇ ಇದೆ ಆರೋಗ್ಯ, ನಿಮ್ಮ ಮಲಗೋ ಭಂಗಿ ಸರಿಯಾಯೋ, ತಪ್ಪಾ ಚೆಕ್ ಮಾಡ್ಕೊಳ್ಳಿ!
ಕೆಲವರು ಮತ್ತೆ ಮತ್ತೆ ಅಳೋದು ಏಕೆ? : ಒಬ್ಬ ವ್ಯಕ್ತಿ ತನ್ನನ್ನು ತಾನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಚಿಂತೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಆತ ಹೆಚ್ಚು ದುರ್ಬಲನಾಗುತ್ತಾಹೋಗುತ್ತಾನೆ. ಇತರರ ರೂಡ್ ಬಿಹೇವಿಯರ್ ಕೆಲವೊಮ್ಮೆ ಸೆನ್ಸೆಟಿವ್ ಜನರನ್ನು ಭಾವನಾತ್ಮಕವಾಗಿ ದುರ್ಬಲರನ್ನಾಗಿಸುತ್ತದೆ. ಇದು ಅವರ ಅಳುವಿಗೆ ನಿಜವಾದ ಕಾರಣವಾಗಿರುತ್ತದೆ. ಇದರ ಪ್ರಭಾವ ಅವರ ಮೆದುಳು ಮತ್ತು ಮನಸ್ಸಿಗಾಗುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.
ವಾತ, ಪಿತ್ತ, ಕಫ; ದೇಹದ ಈ ಮೂರು ದೋಷಗಳನ್ನೂ ಬ್ಯಾಲೆನ್ಸ್ ಮಾಡುವ ಆಹಾರ ಇಲ್ಲಿದೆ!
ಡಿಪ್ರೆಶನ್ ಕೂಡ ಕಾರಣವಾಗಿರಬಹುದು : ಖಿನ್ನತೆಗೆ ಒಳಗಾದ ವ್ಯಕ್ತಿಗಳು ಆಗಾಗ್ಗೆ ಅಳುವುದು ಸಾಮಾನ್ಯವಾಗಿದೆ. ಈ ಮಾನಸಿಕ ಅಸ್ವಸ್ಥತೆಯಿಂದಾಗಿ ಅವರಲ್ಲಿ ದುಃಖದ ಭಾವನೆಗಳು ಹೆಚ್ಚುತ್ತಲೇ ಹೋಗುತ್ತವೆ. ಮನಸ್ಸಿಗೆ ನೋವುಂಟುಮಾಡುವ ಅಂತಹ ಆಲೋಚನೆಗಳೇ ವ್ಯಕ್ತಿಯ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಖಿನ್ನತೆಗೆ ಒಳಗಾದ ವ್ಯಕ್ತಿಗಳು ಹೆಚ್ಚು ಹತಾಶರಾಗಿರುತ್ತಾರೆ, ಚಿಂತೆ ಮಾಡುತ್ತಾರೆ ಮತ್ತು ಪ್ರತಿಯೊಂದು ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟಪಡುತ್ತಾರೆ ಹಾಗೂ ಇವರಲ್ಲಿ ಶಕ್ತಿಯ ಕೊರತೆಯೂ ಇರುತ್ತದೆ.
ಹಳೆಯ ನೆನಪನ್ನು ಮರೆಯದೇ ಇರುವುದು : ಕೆಲವರು ತಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆಯನ್ನೇ ನೆನಪಿಸಿಕೊಂಡು ಬದುಕುತ್ತಿರುತ್ತಾರೆ. ಇಂಥವರು ಕೂಡ ಹೆಚ್ಚು ಅಳುತ್ತಾರೆ. ಇವರು ಹೆಚ್ಚಿನ ಸಮಯ ಹಳೆಯ ನೆನಪಿನಲ್ಲೇ ಕೊರಗುವುದರಿಂದ ಇವರ ಮೆದುಳು ಹೆಚ್ಚು ಪ್ರಭಾವಿತವಾಗುತ್ತದೆ. ಇದು ಅವರನ್ನು ಹೆಚ್ಚು ನಿಸ್ಸಹಾಯಕರನ್ನಾಗಿಸುತ್ತದೆ.
ಹೆಚ್ಚಿನ ಸಹಾನುಭೂತಿ (Compassion) : ಅತಿಯಾದ ಸಹಾನುಭೂತಿ ಗುಣದ ವ್ಯಕ್ತಿಗಳು ತಮ್ಮ ಸುತ್ತಮುತ್ತಲ ಜನರ ಕಷ್ಟಗಳನ್ನು ನೋಡಿ ಭಾವುಕರಾಗುತ್ತಾರೆ. ಇಂತಹ ಜನರಿಗೆ ಭಾವನೆಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗೋದಿಲ್ಲ. ಇಂತಹ ಜನರು ಇತರರ ಜಗಳ, ಕಷ್ಟ, ನೋವುಗಳನ್ನು ನೋಡಿ ಕಣ್ಣೀರಿಡುತ್ತಾರೆ.
ಹಾರ್ಮೋನ್ ಬದಲಾವಣೆ : ಕೆಲವೊಮ್ಮೆ ನಮ್ಮ ದೇಹದಲ್ಲಾಗುವ ಹಾರ್ಮೋನುಗಳ ಏರಿಳಿತಗಳಿಂದಲೂ ಜನರ ಭಾವನೆಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಋತುಚಕ್ರ, ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಂದರ್ಭದಲ್ಲಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಈ ಸಮಯದಲ್ಲಿ ಅವರು ಹೆಚ್ಚು ಭಾವುಕರಾಗುತ್ತಾರೆ.
ಈ ವಿಷಯಗಳ ಬಗ್ಗೆ ಕಾಳಜಿಯಿರಲಿ :
ಇತರರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ : ಕೆಲವೊಮ್ಮೆ ನಾವು ಅಂದುಕೊಂಡಂತೆ ನಮ್ಮ ಎದುರಿನಲ್ಲಿರುವ ವ್ಯಕ್ತಿ ಇರುವುದಿಲ್ಲ. ಆಗ ಅವನ ಮಾತುಗಳು ನಮಗೆ ನೋವುಂಟು ಮಾಡಬಹುದು ಅಂತಹ ಸಮಸ್ಯೆಯಿದ್ದಾಗ ಅದನ್ನು ಮಾತನಾಡುವ ಮೂಲಕ ಪರಿಹರಿಸಿಕೊಳ್ಳಬೇಕು ಅಥವಾ ಇತರರ ಮಾತಿಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು.
ಸೆಲ್ಪ್ ಕೇರ್ (Self Care) ತೆಗೆದುಕೊಳ್ಳಿ : ನಿಮ್ಮ ಆರೋಗ್ಯದ ಬಗ್ಗೆ, ನಿಮ್ಮ ಉಡುಗೆ ತೊಡುಗೆ ಹಾಗೂ ತಿಂಡಿ ತಿನಿಸುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಆಗ ಇತರರ ಮಾತು ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರೋದಿಲ್ಲ. ಸೆಲ್ಫ್ ಕೇರ್ ಇಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿ ನಿಮ್ಮ ಬಗ್ಗೆ ನಿಮಗೆ ಪ್ರೀತಿ ಮೂಡುತ್ತದೆ.