ನಮ್ಮ ದೇಹದ ಆರೋಗ್ಯ ಮತ್ತು ಸ್ನಾಯುಗಳ ಬಲಕ್ಕೆ ಪ್ರೋಟೀನ್ ಅತ್ಯಗತ್ಯ. ದೇಹದಲ್ಲಿ ಪ್ರೋಟೀನ್ ಕಡಿಮೆಯಾದಾಗ ಸ್ನಾಯುಗಳ ಸವೆತ, ಕೂದಲು ಉದುರುವಿಕೆ, ಪದೇ ಪದೇ ಹಸಿವು ಮತ್ತು ಸುಸ್ತಿನಂತಹ 8 ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಮುನ್ಸೂಚನೆಗಳನ್ನು ನಿರ್ಲಕ್ಷಿಸದೆ ಸರಿಯಾದ ಸಮಯದಲ್ಲಿ ಗುರುತಿಸುವುದು ಮುಖ್ಯ.

ಕೂದಲಿನಿಂದ ಹಿಡಿದು ಸ್ನಾಯುಗಳವರೆಗೆ ನಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಪ್ರೋಟೀನ್ ತುಂಬಾ ಮುಖ್ಯ. ದೇಹದ ಆರೋಗ್ಯ, ಸ್ನಾಯುಗಳ ಬಲ ಮತ್ತು ಮೆಟಬಾಲಿಸಂ ಸರಿಯಾಗಿ ಕೆಲಸ ಮಾಡಬೇಕೆಂದರೆ, ಪ್ರೋಟೀನ್ ಕೊರತೆಯ ಆರಂಭಿಕ ಲಕ್ಷಣಗಳನ್ನು ನಾವು ಮೊದಲು ಗುರುತಿಸಬೇಕು.

ಪ್ರೋಟೀನ್ ಕೊರತೆ: ದೇಹ ತೋರಿಸುವ 8 ಲಕ್ಷಣಗಳು

ಆರೋಗ್ಯ, ಸ್ನಾಯುಗಳ ಬಲ ಮತ್ತು ಮೆಟಬಾಲಿಸಂ ಕಾಪಾಡಿಕೊಳ್ಳಲು ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ನಾವು ತಿಳಿಯಲೇಬೇಕು. ದೇಹದಲ್ಲಿ ಪ್ರೋಟೀನ್ ಕಡಿಮೆಯಾದಾಗ, ನಮ್ಮ ದೇಹ ಹಲವು ರೀತಿಯಲ್ಲಿ ಮುನ್ಸೂಚನೆ ನೀಡುತ್ತದೆ. ಆದರೆ ನಾವು ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಪ್ರೋಟೀನ್ ಕೊರತೆ ಇದ್ದಾಗ ದೇಹದಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸುತ್ತವೆ.

ಸ್ನಾಯುಗಳ ಸವೆತ ಮತ್ತು ದೌರ್ಬಲ್ಯ

ಸ್ನಾಯುಗಳು ಕರಗುವುದು ಮತ್ತು ಸುಸ್ತು ಪ್ರೋಟೀನ್ ಕೊರತೆಯ ಮೊದಲ ಲಕ್ಷಣ. ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಮೂಲವಸ್ತು. ಊಟದಲ್ಲಿ ಸಾಕಷ್ಟು ಪ್ರೋಟೀನ್ ಸಿಗದಿದ್ದಾಗ, ದೇಹವು ಮೂಳೆಗಳಿಗೆ ಅಂಟಿಕೊಂಡಿರುವ ಸ್ನಾಯುಗಳನ್ನು ಕರಗಿಸಿ ತನಗೆ ಬೇಕಾದ ಅಮೈನೋ ಆಸಿಡ್‌ಗಳನ್ನು ಪಡೆಯುತ್ತದೆ. ಇದರಿಂದ ವಿಪರೀತ ಸುಸ್ತು ಮತ್ತು ಸ್ನಾಯುಗಳ ಬಲ ಕಡಿಮೆಯಾಗುತ್ತದೆ.

ಕೂದಲು ಮತ್ತು ಉಗುರುಗಳು ತುಂಡಾಗುವುದು

ಕೂದಲು ಮತ್ತು ಉಗುರುಗಳು ಬೇಗನೆ ತುಂಡಾಗುವುದು ಪ್ರೋಟೀನ್ ಕೊರತೆಯ ಮತ್ತೊಂದು ಲಕ್ಷಣ. ನಮ್ಮ ಕೂದಲು, ಚರ್ಮ ಮತ್ತು ಉಗುರುಗಳು ಕೆರಾಟಿನ್ ಹಾಗೂ ಕಾಲಜನ್ ಎಂಬ ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿವೆ. ಇವುಗಳ ಕೊರತೆಯಾದಾಗ ಕೂದಲು ತೆಳುವಾಗಿ ಉದುರಲು ಶುರುವಾಗುತ್ತದೆ ಮತ್ತು ಚರ್ಮ ಒಣಗುತ್ತದೆ. ಜೊತೆಗೆ ಉಗುರುಗಳು ಬೇಗನೆ ಮುರಿದುಹೋಗುತ್ತವೆ.

ವಿಪರೀತ ಹಸಿವು ಮತ್ತು ಆಹಾರದ ಮೇಲಿನ ಆಸೆ

ಯಾವಾಗಲೂ ಹಸಿವಾಗುವುದು ಮತ್ತು ಏನಾದರೂ ತಿನ್ನಬೇಕು ಅನ್ನಿಸುವುದು ಇದರ ಇನ್ನೊಂದು ಲಕ್ಷಣ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ, ಹೊಟ್ಟೆ ತುಂಬಿದ ಅನುಭವ ನೀಡಲು ಪ್ರೋಟೀನ್ ಸಹಾಯ ಮಾಡುತ್ತದೆ. ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗದಿದ್ದರೆ ಪದೇ ಪದೇ ಹಸಿವಾಗುತ್ತದೆ. ಜೊತೆಗೆ ಕಾರ್ಬೋಹೈಡ್ರೇಟ್ ಮತ್ತು ಸಿಹಿ ತಿಂಡಿಗಳ ಮೇಲೆ ಆಸೆ ಹೆಚ್ಚಾಗುತ್ತದೆ.

ಪದೇ ಪದೇ ಕಾಡುವ ಕಾಯಿಲೆ ಮತ್ತು ಸೋಂಕು

ಪದೇ ಪದೇ ಕಾಯಿಲೆ ಬೀಳುವುದು ಮತ್ತು ಸೋಂಕು ತಗುಲುವುದು ಪ್ರೋಟೀನ್ ಕೊರತೆಯ ಲಕ್ಷಣ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಂಟಿಬಾಡಿಗಳನ್ನು ಉತ್ಪಾದಿಸಲು ದೇಹಕ್ಕೆ ಪ್ರೋಟೀನ್ ಬೇಕೇ ಬೇಕು. ಪ್ರೋಟೀನ್ ಕಡಿಮೆಯಾದಾಗ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ ಕುಂದುತ್ತದೆ. ಇದರಿಂದ ಶೀತ, ಜ್ವರದಂತಹ ಕಾಯಿಲೆಗಳು ಬೇಗನೆ ಬರುತ್ತವೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿಯುವುದು

ದೇಹದಲ್ಲಿ ಪ್ರೋಟೀನ್ ಕಡಿಮೆಯಾದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ ಕುಸಿಯುತ್ತದೆ. ಇದೇ ಕಾರಣಕ್ಕೆ ನಮಗೆ ಸಿಹಿ ತಿಂಡಿಗಳನ್ನು ತಿನ್ನಬೇಕು ಅನ್ನಿಸುತ್ತದೆ. ಆದರೆ ಎಷ್ಟು ಸಿಹಿ ತಿಂದರೂ ಈ ಆಸೆ ತೀರಲ್ಲ. ಏಕೆಂದರೆ ದೇಹಕ್ಕೆ ಬೇಕಾಗಿರುವುದು ಸಿಹಿಯಲ್ಲ, ಬದಲಾಗಿ ಪ್ರೋಟೀನ್. ಇದನ್ನು ನಿರ್ಲಕ್ಷಿಸಿದರೆ ಹೆಚ್ಚು ಸಿಹಿ ತಿಂದು ಬೇರೆ ಆರೋಗ್ಯ ಸಮಸ್ಯೆಗಳು ಬರಬಹುದು.

ಗಾಯಗಳು ಬೇಗನೆ ವಾಸಿಯಾಗದಿರುವುದು

ಗಾಯಗಳು ಬೇಗನೆ ಒಣಗದಿರುವುದು ಪ್ರೋಟೀನ್ ಕೊರತೆಯ ಮತ್ತೊಂದು ಲಕ್ಷಣ. ಹಾನಿಯಾದ ಚರ್ಮ ಮತ್ತು ರಕ್ತನಾಳಗಳನ್ನು ಸರಿಪಡಿಸಲು ಕಾಲಜನ್ ಉತ್ಪಾದನೆ ನಿರಂತರವಾಗಿ ಆಗಬೇಕು. ಪ್ರೋಟೀನ್ ಕಡಿಮೆಯಾದಾಗ, ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ಗಾಯಗಳನ್ನು ಸರಿಪಡಿಸಲು ದೇಹ ಪರದಾಡುತ್ತದೆ. ಇದರಿಂದ ಗಾಯ ವಾಸಿಯಾಗುವುದು ತಡವಾಗುತ್ತದೆ.

ವಿಪರೀತ ಸುಸ್ತು ಮತ್ತು ಮರೆವು

ವಿಪರೀತ ಸುಸ್ತು ಮತ್ತು ಗೊಂದಲ ಕೂಡ ಪ್ರೋಟೀನ್ ಕೊರತೆಯ ಲಕ್ಷಣ. ಡೋಪಮೈನ್ ಮತ್ತು ಸೆರೊಟೋನಿನ್‌ನಂತಹ ಪ್ರಮುಖ ರಾಸಾಯನಿಕಗಳನ್ನು ಉತ್ಪಾದಿಸಲು ಅಮೈನೋ ಆಸಿಡ್‌ಗಳು ಬೇಕು. ಪ್ರೋಟೀನ್ ಕೊರತೆಯಿಂದಾಗಿ ಮರೆವು, ನಿಧಾನಗತಿಯ ಆಲೋಚನೆ, ಏಕಾಗ್ರತೆಯ ಕೊರತೆ, ಮೂಡ್ ಸ್ವಿಂಗ್ಸ್ ಮತ್ತು ವಿಪರೀತ ದೈಹಿಕ ಆಯಾಸ ಉಂಟಾಗುತ್ತದೆ.