ಸಂತೋಷ ಯಾರಿಗೆ ಬೇಡ? ಎಲ್ಲರೂ ಸಂತೋಷವನ್ನರಸಿಯೇ ನಿರಂತರ ಓಡುವುದು. ಇದಕ್ಕಾಗಿ ಹಲವು ದಾರಿಗಳಿವೆ ಎಂದು ಜನರ ಅಭಿಪ್ರಾಯ. ಕೆಲವರು ದುಡ್ಡು ಸಿಕ್ಕರೆ ಸಂತೋಷ ಸಿಗುತ್ತದೆ ಎಂದುಕೊಳ್ಳುತ್ತಾರೆ. ಅಷ್ಟು ಸಿಕ್ಕ ಬಳಿಕ ಇನ್ನೂ ಹೆಚ್ಚಿನ ದುಡ್ಡಿನ ಹಪಹಪಿಗೆ ಬೀಳುತ್ತಾರೆ, ಮತ್ತೆ ಕೆಲವರು ಮನೆ ಕಟ್ಟಿದರೆ ಸಂತೋಷವಾಗಿರುತ್ತೇನೆ ಎಂದುಕೊಳ್ಳುತ್ತಾರೆ, ಮಗದೊಬ್ಬರು ದೇಶ ಸುತ್ತಿದರೆ ಸಂತೋಷ ಸಿಗುತ್ತದೆ ಎಂದುಕೊಳ್ಳುತ್ತಾರೆ, ಮತ್ತೂ ಕೆಲ ಮುಗ್ಧರು ಮದುವೆಯಾದರೆ ಸಂತೋಷವಾಗಿರಬಹುದು ಎಂದು ಭಾವಿಸುತ್ತಾರೆ. ಆದರೆ, ಮರುಭೂಮಿಯ ಮರೀಚಿಕೆಯಂತೆ ಅದಕ್ಕೆ ಹತ್ತಿರಾದಂತೆಲ್ಲ ಮತ್ತೆಲ್ಲೋ ದೂರದಲ್ಲಿ ಸಂತೋಷ ಇರುವಂತೆ ಕಾಣಿಸುತ್ತದೆ. 

ಹಾಗಾದರೆ ಸಂತೋಷವಾಗಿರಲು ಏನು ಮಾಡಬೇಕು? ಸಂತೋಷವಾಗಿರಬೇಕೆಂದು ನೀವು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಸಂತೋಷ ನಿಮ್ಮಿಂದ ದೂರ ಹೋಗುತ್ತದೆ ಎನ್ನುತ್ತದೆ ವಿಜ್ಞಾನ. ಸಂತೋಷವಾಗಿರಲು ಏನು ಮಾಡಬೇಕೆಂದು ವೈಜ್ಞಾನಿಕವಾಗಿ ವಿವರಿಸುತ್ತಾರೆ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸೈಕಾಲಜಿ ಪ್ರೊಫೆಸರ್ ಸೋನ್ಯಾ ಲೈಬೋಮಿರ್ಸ್ಕಿ. ಇವರು 'ದಿ ಹೌ ಆಫ್ ಹ್ಯಾಪಿನೆಸ್' ಎಂಬ ಜನಪ್ರಿಯ ಪುಸ್ತಕದ ಲೇಖಕಿ ಕೂಡಾ. ಇವರ ಪ್ರಕಾರ, 'ಸದಾ ಸಂತೋಷವಾಗಿರಬೇಕೆಂದರೆ ಅದಕ್ಕೆ ಪ್ರತಿ ದಿನದ ಬದುಕಿನಲ್ಲಿ ಒಂದಿಷ್ಟು ಪ್ರಯತ್ನ ಹಾಗೂ ಕಮಿಟ್‌ಮೆಂಟ್ ನೀಡಿ ಒಂದಿಷ್ಟು ಶಾಶ್ವತ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ'.

ಮಾಮ್‌ಶೇಮಿಂಗ್‌ಗೆ ಗರಂ ಆದ ತಾಯಂದಿರು, ಇಂಥ ಕಾಮೆಂಟ್ ಮಾಡೋಕ್ ಹೋಗ್ಬೇಡಿ...

ಇನ್ನು 'ಈಟ್, ಪ್ರೇ, ಲವ್‌' ಪುಸ್ತಕದ ಲೇಖಕಿ ಎಲಿಜಬೆತ್ ಗಿಲ್ಬರ್ಟ್ ಪ್ರಕಾರ, 'ಸಂತೋಷ ಎಂಬುದು ವೈಯಕ್ತಿಕ ಪ್ರಯತ್ನಗಳ ಪ್ರತಿಫಲ. ನೀವದಕ್ಕಾಗಿ ಫೈಟ್ ಮಾಡಬೇಕು, ಹಸಿದು ಅರಸಬೇಕು, ಅದಕ್ಕಾಗಿ ಹಟಕ್ಕೆ ಬೀಳಬೇಕು. ಕಡೆಗೊಮ್ಮೆ ಅದು ಸಿಕ್ಕಿದಾಗ , ಅದನ್ನು ಉಳಿಸಿ ಬೆಳೆಸಿಕೊಳ್ಳಲು ನಿಂರತರವಾಗಿ ಪ್ರಯತ್ನ ಹಾಕುತ್ತಲೇ ಇರಬೇಕು'. 

ಸಂಶೋಧನೆಯೊಂದರ ಪ್ರಕಾರ, ಸಂತೋಷವನ್ನು ಹುಡುಕಿ ಹೊರಡುವವರು ಕೇವಲ ತಮ್ಮ ಯೋಚನೆಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಅವರು ಸುತ್ತಲಿನ ಜನರ ಫೀಲಿಂಗ್ಸ್‌ನ್ನು ಕಡೆಗಣಿಸುತ್ತಾರೆ. ಇದರಿಂದ ಏಕಾಂಗಿತನ ಹಾಗೂ ಒಂಟಿ ಭಾವ ಕಾಡಲಾರಂಭಿಸುತ್ತದೆ. 

ಮತ್ತೊಂದು ಸಂಶೋಧನೆಯಂತೆ, ಸದಾ ಸಂತೋಷದ ಹುಡುಕಾಟಕ್ಕೆ ಬೀಳುವುದರಿಂದ ಸಮಯ ನಮ್ಮ ಕೈ ತಪ್ಪಿದಂತೆ ಭಾಸವಾಗುತ್ತದೆ. ಏಕೆಂದರೆ, ಗುರಿ ತಲುಪಲು ಸಮಯದ ಹೂಡಿಕೆ ಅಗತ್ಯ. ಸಂತೋಷ ಕೂಡಾ ಗುರಿಯಾದಾಗ ಅದಕ್ಕಾಗಿ ಹೆಚ್ಚು ಹೆಚ್ಚು ಸಮಯ ಮೀಸಲಿಡಬೇಕಾಗುತ್ತದೆ. ಕಡೆಗೊಂದು ದಿನ ಸಂತೋಷಕ್ಕೆ ಹತ್ತಿರಾಗುವಾಗ ನಮಗಾಗಿ ಸಮಯವೇ ಇಲ್ಲವಲ್ಲ ಎಂದು ಖೇದವಾಗುತ್ತದೆ. 

ಜೀವನದ ಸಾರ್ಥಕತೆಗೆ ಸಂತೋಷವೇ ಮಾನದಂಡ
ಮತ್ತೊಂದು ಸಂಶೋಧನೆಯು ಜನರು ತಮ್ಮ ಸಂತೋಷವನ್ನು ಜೀವನದ ಸಾರ್ಥಕತೆಗೆ ಹೋಲಿಸುವುದಾಗಿ ಹೇಳಿದೆ. ಬಹುತೇಕರು, ನಾನು ಎಷ್ಟು ಸಂತೋಷವಾಗಿದ್ದೇನೆಯೋ, ಬದುಕು ಕೂಡಾ ಅಷ್ಟೇ ಮೌಲ್ಯಯುತವಾದದ್ದಾಗಿತ್ತು ಎನ್ನುತ್ತಾರೆ. ತಾನು ಸದಾ ಸಂತೋಷವಾಗಿದ್ದರೆ, ಅದೇ ಅರ್ಥಪೂರ್ಣ ಜೀವನ ಎನ್ನುತ್ತಾರೆ. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸಂತೋಷಕ್ಕೆ ಯಾವುದು ಕಾರಣವಾಗುವುದೋ, ಅದರ ಆಧಾರದ ಮೇಲೆ ಆ ವಸ್ತು ಅಥವಾ ಸಂಗತಿಗೆ ಬೆಲೆ ಕಟ್ಟುತ್ತಾರೆ. ಅಂದರೆ, ಜೀವನದ ಬಗ್ಗೆ ತೃಪ್ತಿ ಹೊಂದಿಲ್ಲದವರು ಜೀವನದಲ್ಲಿ ಸಂತೋಷವಾಗಿಲ್ಲ ಎಂದರ್ಥ. 

ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆಯಾ?...

ಸಂತೋಷವಾಗಿರಲು ಪ್ರಯತ್ನಿಸುವುದು ಬಿಡಿ
ಯಾವುದೋ ಒಂದು ವಿದೇಶದ ಟ್ರಿಪ್ ಕುರಿತು ತಿಂಗಳುಗಟ್ಟಲೆ ಕನಸು ಕಂಡು ಯೋಜಿಸಿರುತ್ತೀರಿ. ಅಲ್ಲಿನ ಅತ್ಯುತ್ತಮ ಹೋಟೆಲ್ ಬುಕ್ ಮಾಡಿರುತ್ತೀರಿ. ಅತ್ತುತ್ತಮ ಆ್ಯಕ್ಟಿವಿಟಿಗಳನ್ನು ಆಯ್ಕೆ ಮಾಡಿರುತ್ತೀರಿ. ಈ ಪ್ರವಾಸ ಜೀವನವನ್ನೇ ಬದಲಿಸುವಷ್ಟು ಸಂತೋಷ ನೀಡುತ್ತದೆ ಎಂದು ಕನಸು ಕಾಣುತ್ತೀರಿ. ಆದರೆ, ರಿಯಲ್ ಆಗಿ ಪ್ರವಾಸ ಹೋದಾಗ ಸಿಗುವ ಅನುಭವಗಳೇ ಬೇರೆ ಇರಬಹುದು. ವಿಮಾನದಲ್ಲಿ ಬ್ಯಾಗೇಜ್ ವಿಷಯದಲ್ಲಾದ ಎಡವಟ್ಟು, ನೆತ್ತಿ ಸುಡುವ ಬಿಸಿಲು, ಸಡನ್ ಮಳೆಯಿಂದ ತಪ್ಪಿಹೋದ ಸ್ಕೈ ಡೈವಿಂಗ್ ಇತ್ಯಾದಿ ಇತ್ಯಾದಿಗಳನ್ನು ನೀವು ಕನಸಿನಲ್ಲಿ ಕಂಡಿರಲಿಲ್ಲ. ಹೀಗಾಗಿ, ಪ್ರವಾಸ ನಿಮಗೆ ಕನಸಿನಷ್ಟು ಖುಷಿ ಕೊಡಲಿಲ್ಲ. ಕನಸು ಕಾಣುವಾಗ ಆಕಾಶ ಕೂಡಾ ಮಿತಿಯಲ್ಲ. ಆದರೆ, ನಿಜ ಜೀವನ ಹಾಗಲ್ಲ. ಇಲ್ಲಿ ನಿರೀಕ್ಷೆಗಳ ಭಾರಕ್ಕೆ ನಿಮ್ಮ ಅತ್ಯುತ್ತಮ ಸಂತೋಷವೊಂದು ತಪ್ಪಿ ಹೋಯಿತು. ಸಂತೋಷವನ್ನರಸಿಯೇ ನಿರೀಕ್ಷೆಗಳನ್ನು ಕಟ್ಟಿಕೊಂಡಿದ್ದರಿಂದ ಹೀಗಾಯಿತು. ಸಂತೋಷವಾಗಿರಲು ಪ್ರಯತ್ನಿಸಿದರೆ ಅದರಿಂದ ಸಂತೋಷ ಸಿಗಲಾರದು. ಅದರ ಬದಲು ಜೀವಿಸಲು ಆರಂಭಿಸಿ. 

ಸಂತೋಷದ ಸೂತ್ರಗಳು
ಅನುಭವಗಳಿಗೆ ಮಹತ್ವ ನೀಡಿ. ಸಂತೋಷ ಹುಡುಕಾಡುವ ಬದಲು ಗೆಳೆಯರನ್ನು ಮಾಡಿಕೊಳ್ಳುವತ್ತ ಗಮನ ಹರಿಸಿ. ಸೋಷ್ಯಲ್ ಮೀಡಿಯಾದಲ್ಲಿ ಅಲ್ಲ, ನಿಜಜೀವನದಲ್ಲಿ ಗೆಳೆಯರ ಸಂಖ್ಯೆ ದ್ವಿಗುಣವಾದರೆ, ನಿಮ್ಮ ಆದಾಯವೇ ದುಪ್ಪಟ್ಟಾದಷ್ಟು ಸಂತೋಷ ಹೆಚ್ಚುತ್ತದೆ ಎನ್ನುತ್ತವೆ ರಿಸರ್ಚ್. ಪ್ರತಿ ವಾರ ನೀವು ಜೀವನದಲ್ಲಿ ಸಂತೋಷವಾಗಿರಲು ಸಿಕ್ಕ ಐದು ವಿಷಯ/ವಸ್ತು/ವ್ಯಕ್ತಿಗಳ ಕುರಿತು ಬರೆಯಿರಿ. ಜೀವನದಲ್ಲಿ ಏನು ಸಿಗುತ್ತದೆ ಎಂದು ನಿರೀಕ್ಷಿಸುವುದಕ್ಕಿಂತ ಏನು ಸಿಕ್ಕಿದೆ ಎಂಬ ಬಗ್ಗೆ ತೃಪ್ತಿ ಹೊಂದಿದ್ದರೆ ಅದೇ ಸಂತೋಷ ತಂದುಕೊಡುತ್ತದೆ. 

ದುಡ್ಡು ಮಾಡಿದರೆ ಸಂತೋಷ ದಕ್ಕುತ್ತದೆ ಎಂದುಕೊಳ್ಳುತ್ತೀರಿ. ಆದರೆ, ಸಂಶೋಧನೆಗಳ ಪ್ರಕಾರ, ವರ್ಷಕ್ಕೆ 75,000 ಡಾಲರ್‌ಗೂ ಹೆಚ್ಚು ಸಂಪಾದಿಸುವಂತಾದ ಮೇಲೆ ಹಣ ಸಂಪಾದಿಸುವುದರಲ್ಲಿ ಯಾವ ಖುಷಿಯೂ ದೊರೆಯುವುದಿಲ್ಲವಂತೆ. ಇದಕ್ಕೆ ಮುಖ್ಯ ಕಾರಣ ವಸ್ತುಗಳು ನಿಮ್ಮನ್ನು ಸಂತೋಷವಾಗಿಡಲಾರವು. ಆದರೆ ವ್ಯಕ್ತಿಗಳು, ಅರ್ಥಪೂರಿತ ಕೆಲಸಗಳು, ಕುಟುಂಬ, ಗುರಿಸಾಧನೆ ಇವೆಲ್ಲ ಖಂಡಿತಾ ಸಂತೋಷವಾಗಿಡುತ್ತವೆ. ಅಂದರೆ, ಜೀವನದಲ್ಲಿ ಹೆಚ್ಚು ಸಮಯವನ್ನು ಸುತ್ತಲಿರುವವರಿಗೆ ನೀಡಿದರೆ ಖಂಡಿತಾ ಖುಷಿಯಾಗಿರಬಹುದು. ನಿಮ್ಮಿಷ್ಟದ ಕೆಲಸಗಳನ್ನು ಮಾಡುವುದು, ಜನರೊಂದಿಗೆ ಜನರಿಗಾಗಿ ಬದುಕುವುದು ಮಾಡಿದರೆ ಸಂತೋಷವಾಗಿರಲು ನೀವು ಪ್ರಯತ್ನಿಸುವ ಅಗತ್ಯವೇ ಇಲ್ಲ. ಅದು ನಿಮ್ಮೊಂದಿಗೆ ಸದಾ ಬಂದಿರುತ್ತದೆ.