Asianet Suvarna News Asianet Suvarna News

ಗಿಡ ನೆಡೋದಷ್ಟೇ ಅಲ್ಲ, ಕಾಗದ ಉಳಿಸೋದೂ ಪರಿಸರ ಪ್ರೀತಿ

ಪರಿಸರ ಪ್ರೀತಿ ಎಂದ ಕೂಡಲೇ ನಾವು ಸಸಿಗಳನ್ನು ನೆಡುವ, ದಿನವೂ ನೀರೆರೆದು ಅವುಗಳನ್ನು ಸಂರಕ್ಷಿಸುವ ಬಗ್ಗೆಯಷ್ಟೇ ವಿಚಾರ ಮಾಡುತ್ತೇವೆ. ನಮ್ಮ ದೈನಂದಿನ ಬದುಕಿನಲ್ಲಿ ತುಸು ಎಚ್ಚರವಹಿಸಿ, ಪ್ರಜ್ಞಾಪೂರ್ವಕವಾಗಿ ನಡೆಯಿಟ್ಟರೂ ನಾವು ಮರಗಳನ್ನು ಸ್ವಲ್ಪಮಟ್ಟಿಗಾದರೂ ರಕ್ಷಿಸಬಹುದು.

Not only planting, but also saving paper is environmental love Vin
Author
First Published Jun 4, 2023, 1:14 PM IST

- ಡಾ.ವಿನಯ ಶ್ರೀನಿವಾಸ್

ನನ್ನ ಗೆಳತಿಯೊಬ್ಬಳು ತನ್ನ ಮಗನನ್ನು ಓದಿಸುತ್ತಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಹೋಂ ವರ್ಕ್ ಬಗ್ಗೆ ಸದಾ ಆಕ್ಷೇಪ ಮಾಡುತ್ತಿದ್ದಳು. ಅಲ್ಲಿನ ಶಿಕ್ಷಕರು ಕೊಡುತ್ತಿದ್ದ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ಅಂದವಾಗಿ ಸಿದ್ಧಪಡಿಸಬೇಕಿತ್ತು. ವಿಷಯವಾರು ವಿವರಗಳನ್ನು ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಇನ್ನೊಂದು ಮಗ್ಗುಲನ್ನು ಖಾಲಿಯೇ ಬಿಡಬೇಕಿತ್ತು. ವಿವರಗಳನ್ನು ಬರೆದ ಪುಟಗಳನ್ನು ಒಟ್ಟಾಗಿಸಿ ಅದರ ಮೇಲೆ ಮುಖಪುಟದ ರೀತಿಯಲ್ಲಿ ಮತ್ತೊಂದು ಖಾಲಿ ಕಾಗದವನ್ನೂ ಇರಿಸಬೇಕಾಗಿತ್ತು. ಈ ಎಲ್ಲ ಪುಟಗಳನ್ನು ಮತ್ತೊಂದು ಬಣ್ಣದ ಕಾಗದದಿಂದ ಕವರ್‌ ಮಾಡಿ ಅದರ ಮೇಲೆ ವಿದ್ಯಾರ್ಥಿಯ, ಶಿಕ್ಷಕರ, ವಿಷಯದ ಹೆಸರು ಬರೆಯಬೇಕಾಗಿತ್ತು. ಈ ರೀತಿಯ ಪ್ರಾಜೆಕ್ಟ್‌ ಸಿದ್ಧಪಡಿಸಿಕೊಂಡು ಹೋಗುತ್ತಿದ್ದ ಮಗನನ್ನು ಏನೂ ಕೇಳುವಂತಿರಲಿಲ್ಲ. ‘ಶಾಲೆಯ ಶಿಕ್ಷಕರು ಹೇಳಿದಂತೆ ಮಾಡುತ್ತಿರುವೆ’ ಎಂಬ ಸಿದ್ಧ ಉತ್ತರವನ್ನು ಆತ ಕೊಡುತ್ತಿದ್ದ.

ನಾಲ್ಕಾರು ಬಾರಿ ಇದನ್ನು ಗಮನಿಸಿದ ನನ್ನ ಗೆಳತಿ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಈ ರೀತಿ ಖಾಲಿ ಕಾಗದದ ಅನಗತ್ಯ ಬಳಕೆಯ ಬಗ್ಗೆ ಪ್ರಸ್ತಾಪಿಸಿದಾಗ ಅಲ್ಲಿಯೂ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಒಳಗಿದ್ದ ಸಸ್ಯ ಸಂರಕ್ಷಣಾ ಕಾಳಜಿಯು ಆಕೆಯನ್ನು ಸುಮ್ಮನೆ ಇರಲು ಬಿಡಲಿಲ್ಲ. ಈ ವಿಷಯವನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದು, ಚರ್ಚಿಸಿ, ಪ್ರಾಜೆಕ್ಟ್‌ ವರ್ಕ್‌ನಲ್ಲಿ ಬದಲಾವಣೆ ತಂದಿದ್ದಳು. ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗಾಗಿ ಅನಗತ್ಯ ಕಾಗದ ಬಳಕೆ ಮಾಡುವುದು ನಿಂತಿತ್ತು.

World Environment Day ಹಿನ್ನೆಲೆ ಗಿಳಿವಿಂಡು ನೋಡೊಣ ಬನ್ನಿ ಕಾರ್ಯಕ್ರಮ

ಮನೆ ಹತ್ತಿರದ ದಿನಸಿ ಅಂಗಡಿಯ ಮಾಲಿಕ ಕೂಡ ಹಾಗೆಯೇ. ನಮ್ಮ ಬಡಾವಣೆಯ ಎಲ್ಲ ಮನೆಯವರೂ ಹಳೆಯ ದಿನಪತ್ರಿಕೆಗಳನ್ನು, ಮಕ್ಕಳು ಉಪಯೋಗಿಸಿ ಬಿಟ್ಟ ನೋಟ್ ಪುಸ್ತಕಗಳನ್ನು ಆ ಅಂಗಡಿಗೇ ಕೊಡುವುದು ರೂಢಿ. ಅದನ್ನು ಇತರೆ ರದ್ದಿ ವ್ಯಾಪಾರಿಗಳಿಗೆ ಕೊಡುವ ಮೊದಲು, ಪ್ರತಿ ಹಳೆ ಪುಸ್ತಕವನ್ನು ತೆಗೆದು ಅದರಲ್ಲಿ ಇರುವ ಖಾಲಿ ಹಾಳೆಗಳನ್ನು ಬೇರ್ಪಡಿಸಿ, ಪ್ರತ್ಯೇಕವಾಗಿಸಿ ನಂತರವೇ ಆ ಪುಸ್ತಕಗಳನ್ನು ರದ್ದಿಗೆ ಹಾಕುವುದು ಆ ಮಾಲಿಕನ ಅಭ್ಯಾಸ. ಒಮ್ಮೆ ಅದನ್ನು ನೋಡಿದ ನಾನು ಹೀಗೇಕೆ ಎಂದು ಕೇಳಿದ್ದೆ. ಅದಕ್ಕೆ ಆತ ‘ಈಗಿನ ಮಕ್ಕಳಿಗೆ ಈ ಹಾಳೆಗಳ ಬೆಲೆಯೇ ಗೊತ್ತಿಲ್ಲ ಮೇಡಂ. ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ, ಶೈಕ್ಷಣಿಕ ವರ್ಷ ಮುಗಿಯುತ್ತಲೂ ಹಳೆಯ ಪುಸ್ತಕಗಳನ್ನು ಒಟ್ಟಾಗಿಸಿ ಅದರಲ್ಲಿನ ಖಾಲಿ ಹಾಳೆಗಳನ್ನು ಬೇರ್ಪಡಿಸಿ ಅದನ್ನು ಪುಸ್ತಕ ರೂಪಕ್ಕೆ ತಂದು ಗಣಿತ ಅಭ್ಯಾಸಕ್ಕೋ ಅಥವಾ ನಕ್ಷೆಗಳನ್ನು ಬರೆದು ಕಲಿಯಲೋ ಉಪಯೋಗಿಸುತ್ತಿದ್ದೆವು. ಈಗಿನ ಮಕ್ಕಳು ಅರ್ಧಕ್ಕೆ ಅರ್ಧ ಖಾಲಿ ಇರುವ ಪುಸ್ತಕಗಳನ್ನೇ ರದ್ದಿಗೆ ಹಾಕಿರುತ್ತಾರೆ’ ಎಂದಿದ್ದರು.

ಆ ಉಳಿದ ಹಾಳೆಗಳನ್ನು ಆತ ತನ್ನಲ್ಲಿಗೆ ಬಂದ ಗ್ರಾಹಕರು ವೇಗವಾಗಿ ಹೇಳುವ ದಿನಸಿ ಸಾಮಾನುಗಳ ಪಟ್ಟಿಯನ್ನು ಬರೆದುಕೊಳ್ಳಲೋ ಅಥವಾ ಅಂಗಡಿಯ ಇತರೆ ಲೆಕ್ಕ ಬರೆಯಲೋ ಉಪಯೋಗಿಸುತ್ತಿದ್ದರು. ಇದಷ್ಟೇ ಅಲ್ಲ, ಹಳೆಯ ವರ್ಷದ ಉಪಯೋಗಿಸಿದ ಕ್ಯಾಲೆಂಡರ್‌ಗಳ ಹಿಂಭಾಗವನ್ನೂ ಇದೇ ರೀತಿ ಮರು ಬಳಕೆ ಮಾಡುವ ಈತನದೂ ಪರಿಸರ ಸಂರಕ್ಷಣೆಯೇ.

ನಮ್ಮ ಸಂಸ್ಥೆಯ ಕಚೇರಿಯಲ್ಲಿ ಉದ್ಯೋಗ ಮಾಡುವ ಯುವಕರೂ ಇದಕ್ಕೆ ಹೊರತಲ್ಲ. ಯಾವುದಾದರೂ ಪತ್ರವನ್ನು ಅಥವಾ ದಾಖಲೆಯನ್ನು ನಾನು ಅವರ ಇ ಮೇಲ್‌ಗೆ ಕಳುಹಿಸಿ, ‘ಇದರ ಪ್ರಿಂಟ್‌ಔಟ್‌ ತೆಗೆದು ಕೊಡಿ’ ಎಂದೇನಾದರೂ ಕೇಳಿದರೆ ‘ಮೇಡಂ, ನಿಮ್ಮ ವೈಯಕ್ತಿಕ ಬಳಕೆಗಾದರೆ, ಈಗಾಗಲೇ ಒಂದು ಬದಿ ಬಳಕೆಯಾದ ಹಾಳೆಯಲ್ಲಿ ಮುದ್ರಿಸಿ ಕೊಡಲೇ’ ಎಂದು ಕೇಳುತ್ತಾರೆ. ಅವರ ಪ್ರಜ್ಞಾಪೂರ್ವಕ ಕಾಗದದ ಬಳಕೆಗೆ ಮತ್ತು ಆ ಮೂಲಕದ ಪರಿಸರ ಪ್ರೀತಿಗೆ ನಾನು ಪ್ರತಿಬಾರಿಯೂ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.

ಭಾರತದಲ್ಲಿ ಹೆಚ್ಚಾಗ್ತಿದೆ Green Dating ! ಏನಿದು ಟ್ರೆಂಡ್?

ಮೂರರಿಂದ ನಾಲ್ಕು ವರ್ಷದ ಮರಗಳನ್ನು ಕಾಗದ ತಯಾರಿಕೆಗೆ ಬಳಸುತ್ತಾರೆ. ಸಾಮಾನ್ಯವಾಗಿ ಒಂದು ಮರದಿಂದ ಅದರ ಅರ್ಧದಷ್ಟು ತೂಕದ ತಿರುಳನ್ನು ಮಾತ್ರ ಪಡೆಯಬಹುದು. ಅಂದರೆ ಐವತ್ತು ಕೆಜಿ ತೂಕದ ಮರದಿಂದ ಕೇವಲ ಇಪ್ಪತ್ತೈದು ಕೆಜಿಯಷ್ಟು ತಿರುಳು ದೊರೆಯುತ್ತದೆ. ಅಂದಾಜಿನಲ್ಲಿ ಹೇಳುವುದಾದರೆ ಮೂವತ್ತು ಕೆಜಿ ಕಾಗದದ (6820 ಎ- 4 ಕಾಗದ) ತಯಾರಿಕೆಗೆ ಸುಮಾರು ಇಪ್ಪತ್ತೈದು ಕೆಜಿ ಮರದ ತಿರುಳು ಬೇಕಾಗುತ್ತದೆ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ನೀವು ಉಳಿಸುವ ಒಂದೊಂದು ಕಾಗದವೂ ನಾಡಿನ ಸಸ್ಯ ಸಂರಕ್ಷಣೆಯಲ್ಲಿ ಒಂದಿಷ್ಟು ಕೊಡುಗೆಯನ್ನು ನೀಡುವುದು ಖಚಿತ. ನಾವು ವಿದ್ಯಾರ್ಥಿಗಳಾಗಿದ್ದಾಗ ಕಡ್ಡಾಯವಾಗಿ ಕಾಗದದ ಕಾರ್ಖಾನೆಗೆ ಕರೆದೊಯ್ಯುತ್ತಿದ್ದುದು ಈ ಬಗ್ಗೆ ಅರಿವು ಮೂಡಿಸಲೆಂದೇ ಇರಬೇಕು ಎಂದು ಒಮ್ಮೊಮ್ಮೆ ಅನ್ನಿಸುವುದುಂಟು.

ಶಾಲೆ, ಕಚೇರಿ, ಆಸ್ಪತ್ರೆ, ವಿಶ್ವವಿದ್ಯಾಲಯ ಮೊದಲಾದೆಡೆಯಲ್ಲಿ ಕೆಲವೊಂದು ದಾಖಲೆಗಳನ್ನು ಖಾಯಂ ಪ್ರತಿಯ ರೂಪದಲ್ಲಿ ದಾಖಲಿಸಬೇಕಾಗುತ್ತದೆ. ಅದು ಅನಿವಾರ್ಯ ಎಂದಾದಾಗ ಮಾತ್ರವೇ ಅದನ್ನು ಅನುಸರಿಸಬಹುದು. ಎಲ್ಲೆಲ್ಲಿ ಸಾಫ್ಟ್‌ ಕಾಪಿಗಳೊಂದಿಗೆ ನಿರ್ವಹಿಸಬಹುದೋ ಅಲ್ಲೆಲ್ಲಾ ಆದಷ್ಟು ಕಾಗದದ ಬಳಕೆಯನ್ನು ಕಡಿಮೆ ಮಾಡುವ ನಿಯಮ ಮಾಡಬೇಕು. ಆಸ್ಪತ್ರೆಗಳಲ್ಲಿ ಒಳರೋಗಿಗಳ ಕಾಯಿಲೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಕಡತಗಳನ್ನು ಸಮರ್ಪಕವಾಗಿ ಇಂತಿಷ್ಟೇ ವರ್ಷಗಳು ಕಾದಿರಿಸಬೇಕೆಂಬ ನಿಯಮವಿದೆ. ಹಾಗಾಗಿ ಅದಕ್ಕೆಲ್ಲ ಕಾಗದದ ಬಳಕೆ ಮಾಡಲೇಬೇಕಾಗುತ್ತದೆ. ಆರೋಗ್ಯ ವಿಮೆ ಹೊಂದಿರುವ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ, ವಿಮಾ ಕಂಪೆನಿಗಳಿಗೆ ರೋಗಿಗಳ ಸಂಪೂರ್ಣ ಕಡತಗಳ ಕಾಯಂಪ್ರತಿಯನ್ನೇ ಕಳುಹಿಸಬೇಕಾಗುತ್ತದೆ. ಇಲ್ಲಿಯೂ ಸಾಕಷ್ಟು ಕಾಗದದ ಪೋಲಾಗುತ್ತದೆ. ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕಾಯಂಪ್ರತಿ ರೂಪದಲ್ಲಿ ಇಡದೆ ಬೇರೆ ದಾರಿ ಇರುವುದಿಲ್ಲ.

ತಂತ್ರಜ್ಞಾನವು ಮುಂದುವರಿದಂತೆಲ್ಲ ಹಲವೆಡೆ ಕಾಗದದ ಬಳಕೆಯನ್ನು ಕಡಿಮೆ ಮಾಡಿ, ಕಾಗದ ರಹಿತ ಜಗತ್ತಿನೆಡೆ ನಾವು ನಿಧಾನವಾಗಿ ಹೆಜ್ಜೆಯಿಡುತ್ತಿರುವುದೇನೋ ನಿಜ. ಬಸ್ಸು, ರೈಲುಗಳಲ್ಲಿ ಟಿಕೇಟುಗಳನ್ನು ಮತ್ತಿತರ ಗುರುತು ಚೀಟಿಗಳನ್ನು ಸಾಫ್ಟ್‌ ಕಾಪಿ ರೂಪದಲ್ಲಿಯೂ ಪರಿಶೀಲಿಸುತ್ತಿರುವುದು ಸ್ವಾಗತಾರ್ಹ. ಅಂತೆಯೇ ಸಂಚಾರಿ ಪೋಲೀಸರು ವಾಹನಗಳ ದಾಖಲೆಗಳನ್ನು ಮತ್ತು ಚಾಲಕನ ಪರವಾನಿಗೆ, ಮತ್ತಿತರ ದಾಖಲೆಗಳನ್ನೂ ಮೊಬೈಲ್‌ನಲ್ಲಿರುವ ಸಾಫ್ಟ್‌ ಕಾಪಿಯಲ್ಲಿಯೇ ಗಮನಿಸುತ್ತಿರುವುದು ಸಹ ಶ್ಲಾಘನೀಯ. ಈ ದಾರಿಯಲ್ಲಿ ನಾವು ಇನ್ನೂ ವೇಗವಾಗಿ ಸಾಗಬೇಕಿದೆ.

ದೊಡ್ಡ ಗಾತ್ರದ, ಹಲವಾರು ಪುಟಗಳ ಮದುವೆಯ, ಮತ್ತಿತರ ಸಮಾರಂಭಗಳ ಆಹ್ವಾನ ಪತ್ರಿಕೆಗಳೂ ಅನಗತ್ಯ ಕಾಗದದ ಬಳಕೆಯ ಸಾಲಿಗೇ ಸೇರುತ್ತದೆ. ಮುಖ್ಯವಾಗಿ ಸಮಾರಂಭದ ದಿನಾಂಕ, ಸ್ಥಳವನ್ನು ತಿಳಿಸಲು ಅಷ್ಟೊಂದು ಕಾಗದದ ಬಳಕೆ ಬೇಕೆ ಎಂದು ಒಮ್ಮೆ ನಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಈಗಿನ ದಿನಗಳಲ್ಲಂತೂ ವಾಟ್ಸಾಪ್‌ ಮೂಲಕ ಆಹ್ವಾನ ಕಳುಹಿಸಿ, ಒಂದು ಕರೆ ಮಾಡಿ ಹೇಳಿದರೂ ಸಾಕು, ಕೆಲಸವಾಗುತ್ತದೆ. ಈಗಾಗಲೇ ಮೊದಲ ಕಾಗದರಹಿತ ದೇಶ ಎಂದು ಹೆಸರಾದ ದುಬೈ ತನ್ನ ಈ ನಡೆಯಿಂದ ವರ್ಷದಲ್ಲಿ ಸಾಕಷ್ಟು ಹಣವನ್ನು ಉಳಿಸಿರುವುದಾಗಿ ಹೇಳಿದೆ. ಅಷ್ಟೇ ಅಲ್ಲ ಮಾನವ ಸಂಪನ್ಮೂಲದ ಸದ್ಬಳಕೆಯೂ ಇದರಿಂದ ಸಾಧ್ಯವಾಗಿದೆ ಎನ್ನುತ್ತಾರೆ ಅಲ್ಲಿನ ಸರ್ಕಾರಿ ಅಧಿಕಾರಿಗಳು. ಒಟ್ಟಾರೆ ಪ್ರಜ್ಞಾಪೂರ್ವಕ ಕಾಗದದ ಬಳಕೆಯಿಂದಲೂ ನಿಮ್ಮ ಪರಿಸರ ಕಾಳಜಿ ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಮನಗಾಣಬೇಕು. ಮುಖ್ಯವಾಗಿ ಇಂದಿನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ವಿಶ್ವ ಪರಿಸರ ದಿನದ ಆಚರಣೆಯ ಸಂದರ್ಭದಲ್ಲಿ ಇಂತಹ ಚಿಂತನೆ ಅತ್ಯಗತ್ಯ ಎನ್ನುವುದು ನನ್ನ ಅನಿಸಿಕೆ.

Follow Us:
Download App:
  • android
  • ios