ಬಾಣಂತಿ, ಮಕ್ಕಳ ಸಾವು ಕೇಸ್: ವೈದ್ಯ ಸಂಘಕ್ಕೆ ಡಾ.ಉಷಾ ಪತ್ರ
- ಬಾಣಂತಿ, ಮಕ್ಕಳ ಸಾವು ಕೇಸ್: ವೈದ್ಯ ಸಂಘಕ್ಕೆ ಡಾ.ಉಷಾ ಪತ್ರ
- ಏಕಪಕ್ಷೀಯವಾಗಿ ಸಸ್ಪೆಂಡ್: ಅಮಾನತಾದ ವೈದ್ಯೆ ಹೇಳಿಕೆ
ತುಮಕೂರು (ನ.7) : ಪ್ರಸವ ವೇಳೆ ಬಾಣಂತಿ, ಎರಡು ಶಿಶುಗಳು ಮೃತಪಟ್ಟಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಏಕಪಕ್ಷೀಯವಾಗಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಪ್ರಸೂತಿ ತಜ್ಞೆ ಡಾ.ಉಷಾ ರಾಜ್ಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆದಿದ್ದಾರೆ.
ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಮಕ್ಕಳ ಸಾವು ಪ್ರಕರಣ: ಸರ್ಕಾರದಿಂದ ನೂತನ ಮಾರ್ಗಸೂಚಿ ಪ್ರಕಟ
ಘಟನೆ ನಡೆದ ನ.2ರಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಒಪಿಡಿಯಲ್ಲಿ, 5.30ರಿಂದ 9.30ರವರೆಗೆ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದೆ. ಶಸ್ತ್ರಚಿಕಿತ್ಸೆ ಮುಗಿಸಿ ಹೊರಬರುವಾಗ ಗರ್ಭಿಣಿ ಕಸ್ತೂರಿ ಹಾಗೂ ಅವರ ಸಂಬಂಧಿಕರಾದ ವೃದ್ಧೆಯೊಬ್ಬರು ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದರು. ಅವರು ಯಾಕೆ ಹಿಂದಿರುಗಿ ಹೋಗುತ್ತಿದ್ದಾರೆ ಎಂದು ಸ್ಟಾಫ್‌ನರ್ಸ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಬಳಿ ವಿಚಾರಿಸಿದೆ. ಕಸ್ತೂರಿ ಹಾಗೂ ಆಕೆ ಜೊತೆಗೆ ಬಂದಿದ್ದ ವೃದ್ಧೆ ವೈಯಕ್ತಿಕ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಿ ಹಿಂದಿರುಗಿದರು ಎಂದು ಸಿಬ್ಬಂದಿ ನನಗೆ ತಿಳಿಸಿದರು. ಈ ಎಲ್ಲ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿರುವೆ ಎಂದು ಡಾ.ಉಷಾ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಸ್ತೂರಿಯನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು ಎಂದು ಸಚಿವರಿಗೆ ಪೊಲೀಸರು ಮಾಹಿತಿ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲ ಸಿಸಿ ಟಿವಿ ದೃಶ್ಯಾವಳಿಗಳನ್ನು ಸಚಿವರು ವೀಕ್ಷಿಸಿದ್ದಾರೆ. ಆದರೂ ಏಕಪಕ್ಷೀಯವಾಗಿ ನನ್ನನ್ನು ಅಮಾನತುಗೊಳಿಸಿದ್ದಾರೆ. ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿಹೋಗಿರುವೆ ಎಂದು ಡಾ.ಉಷಾ ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಇಬ್ಬರು ಮಕ್ಕಳು ಸಾವು
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಕೊನೆಗೆ ಮನೆಯಲ್ಲೇ ಮೃತಪಟ್ಟತಮಿಳುನಾಡು ಮೂಲದ ಗರ್ಭಿಣಿ ಮತ್ತು ಆಕೆಯ ನವಜಾತ ಅವಳಿ ಮಕ್ಕಳ ಸಾವಿಗೆ ಸಂಬಂಧಿಸಿ ಕರ್ತವ್ಯ ಲೋಪದ ಆರೋಪದ ಮೇರೆಗೆ ಆಸ್ಪತ್ರೆಯ ವೈದ್ಯೆ ಡಾ.ಉಷಾ ಹಾಗೂ ಇಬ್ಬರು ನರ್ಸ್‌ಗಳನ್ನು ಅಮಾನತು ಮಾಡಿ ಆರೋಗ್ಯ ಸಚಿವ ಡಾ.ಸುಧಾಕರ್ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದ್ದರು.