Asianet Suvarna News Asianet Suvarna News

ಆಧಾರ್‌ ಕಾರ್ಡ್‌ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಇಬ್ಬರು ಮಕ್ಕಳು ಸಾವು

  • ಆಧಾರ್‌ ಕಾರ್ಡ್‌ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಇಬ್ಬರು ಮಕ್ಕಳು ಸಾವು
  • ತುಮಕೂರಲ್ಲೊಂದು ಅಮಾನವೀಯ ಘಟನೆ, ಆಕ್ರೋಶ
  • ದಾಖಲೆಗಳಿಲ್ಲದ್ದಕ್ಕೆ ಅಡ್ಮಿಟ್‌ ಮಾಡಿಕೊಳ್ಳಲು ಹಿಂದೇಟು
  • ಮನೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ, ತಾಯಿ-ಮಕ್ಕಳು ಸಾವು
  • ಘಟನೆಗೆ ಸಂಬಂಧಿಸಿ ವೈದ್ಯೆ, ಇಬ್ಬರು ನರ್ಸ್‌ಗಳ ಅಮಾನತು
Mother and two childrens died without getting treatment  Aadhaar card tumakuru rav
Author
First Published Nov 4, 2022, 3:12 AM IST

ತುಮಕೂರು (ನ.4) : ಹೆರಿಗೆ ನೋವಿನಿಂದ ಬಂದಿದ್ದ ತುಂಬು ಗರ್ಭಿಣಿಯನ್ನು ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ ಇಲ್ಲದೆ ದಾಖಲು ಮಾಡಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರಿಂದ ಮನೆಯಲ್ಲೇ ಹೆರಿಗೆಯಾದ ಕೆಲವೇ ಹೊತ್ತಿನಲ್ಲಿ ತಾಯಿ ಮತ್ತು ಅವಳಿ ನವಜಾತ ಶಿಶುಗಳು ಸೂಕ್ತ ಆರೈಕೆಯಿಲ್ಲದೆ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆಗೆ ತುಮಕೂರಲ್ಲಿ ನಡೆದಿದೆ.

ಕಲಬುರಗಿ: ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಸಾವು​..?

ಹೆರಿಗೆ ನೋವಿಂದ ಬಂದ ಗರ್ಭಿಣಿಯ ಆರೈಕೆ ಮಾಡದೆ ಅಮಾನವೀಯವಾಗಿ ವರ್ತಿಸಿದ ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಸಂಬಂಧ ಗುರುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ಘಟನೆಯ ದಿನ ರಾತ್ರಿ ಕರ್ತವ್ಯದಲ್ಲಿದ್ದ ಒಬ್ಬ ವೈದ್ಯೆ ಹಾಗೂ ಇಬ್ಬರು ನರ್ಸ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮೂಲತಃ ತಮಿಳುನಾಡಿನ ಕಸ್ತೂರಿ(30) ಎಂಬಾಕೆ ತುಮಕೂರಿನ ಭಾರತಿ ನಗರದಲ್ಲಿ ತನ್ನ 6 ವರ್ಷದ ಹೆಣ್ಣು ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಸ್ತೂರಿ ಗಂಡ ಇತ್ತೀಚೆಗಷ್ಟೇ ತೀರಿಕೊಂಡಿದ್ದರು. ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಕಸ್ತೂರಿಗೆ ಬುಧವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಗೆ ಪಕ್ಕದ ಮನೆಯ ವೃದ್ಧೆಯೊಬ್ಬರ ಸಹಾಯದಿಂದ ಅಡ್ಮಿಟ್‌ ಆಗಲು ಬಂದಿದ್ದರು. ಆದರೆ ಈಕೆ ಬಳಿ ತಾಯಿ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಇಲ್ಲದ್ದನ್ನೇ ನೆಪಮಾಡಿಕೊಂಡ ಜಿಲ್ಲಾಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಎಷ್ಟೇ ಮನವಿ ಮಾಡಿದರೂ ಯಾರೂ ಸ್ಪಂದಿಸಲಿಲ್ಲ. ಕೊನೆಗೆ ಹೆರಿಗೆ ನೋವು ತಡೆಯಲಾರದೆ ಕಸ್ತೂರಿ ಹಾಗೂ ಆಕೆ ಜೊತೆ ಬಂದಿದ್ದ ವೃದ್ಧೆ ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಮನಸ್ಸು ಕರಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಎಂದು ಸೂಚಿಸಿದ್ದಾರೆ. ಬೆಂಗಳೂರಿನ ಆಸ್ಪತ್ರೆಗೆ ಹೋಗಲು ಹಣವಿಲ್ಲದ್ದರಿಂದ ಹೆರಿಗೆ ನೋವಿನಲ್ಲೇ ಗರ್ಭಿಣಿ ಭಾರತಿ ನಗರದ ತಮ್ಮ ಮನೆಗೆ ವಾಪಸ್‌ ಆಗಿದ್ದು, ಗುರುವಾರ ಬೆಳಗಿನ ಜಾವ ಯಾರೂ ಇಲ್ಲದ ವೇಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಂತರ ತೀವ್ರ ನಿತ್ರಾಣಗೊಂಡು ಬಾಣಂತಿ ಹಾಗೂ ಅವಳಿ ಮಕ್ಕಳಿಬ್ಬರೂ ಹೆರಿಗೆಯಾದ ಕೆಲ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ.

ರಾತ್ರಿ ಚೀರಾಟ ಕೇಳಿಸಿದ್ದರಿಂದ ಬೆಳಗ್ಗೆ ಅಕ್ಕಪಕ್ಕದವರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದು ಬಾಣಂತಿ ಮತ್ತು ಮಕ್ಕಳು ಮೃತಪಟ್ಟಿರುವ ದೃಶ್ಯ ಕಂಡಿದೆ. ಈಕೆಯ ಗಂಡ ನಾಲ್ಕು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದು, ಇದೀಗ ತಾಯಿಯನ್ನೂ ಕಳೆದುಕೊಂಡ 6 ವರ್ಷದ ಮಗು ಅನಾಥವಾಗಿದೆ. ಮಗುವನ್ನು ಈಗ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ತೀವ್ರ ಆಕ್ರೋಶ: ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಡಿಎಚ್‌ಒ ಡಾ.ಮಂಜುನಾಥ್‌ ಹಾಗೂ ಡಿಎಸ್‌ ಡಾ.ವೀಣಾ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ವೈದ್ಯರು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸದಿದ್ದರೆ ಶವ ಎತ್ತಲೂ ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು.

ಸಚಿವ ಸುಧಾಕರ್‌ ಭೇಟಿ: ಘಟನೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಗುರುವಾರ ರಾತ್ರಿ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದರು. ನಂತರ ಘಟನೆಯ ದಿನ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯೆ ಉಷಾ ಹಾಗೂ ಇಬ್ಬರು ನರ್ಸ್‌ಗಳನ್ನು ಅಮಾನತು ಮಾಡುವ ನಿರ್ಧಾರ ಪ್ರಕಟಿಸಿದರು.

ಕಲಘಟಗಿ‌ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಹೆರಿಗೆಗೆ ಬಂದ ಗರ್ಭಿಣಿ ಸಾವು

ತಾಯಿ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ ಮಾಡಿದ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಇನ್ನು ಮುಂದೆ ಜಿಲ್ಲಾಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು.

- ಡಾ.ವೀಣಾ, ಜಿಲ್ಲಾಸ್ಪತ್ರೆ ಸರ್ಜನ್‌

Follow Us:
Download App:
  • android
  • ios