Asianet Suvarna News Asianet Suvarna News

ಬೆಂಗಳೂರಲ್ಲಿ ಮಳೆಯಿಂದ ಹೆಚ್ಚಿದ ಸೊಳ್ಳೆ ಕಾಟ, ಪ್ರತಿದಿನ 50ಕ್ಕೂ ಹೆಚ್ಚು ಡೆಂಘಿ ಕೇಸ್ ಪತ್ತೆ

ಬೆಂಗಳೂರಿನಲ್ಲಿ ಬಹುತೇಕ ದಿನಗಳು ಜಿಟಿಜಿಟಿ ಮಳೆ ಸುರಿಯುತ್ತಿದೆ. ಇದರಿಂದ ಸೊಳ್ಳೆಯ ಸಂತತಿ ಹೆಚ್ಚಳವಾಗಿ ಡೆಂಘೀ ಜ್ವರ ವ್ಯಾಪಕವಾಗಿ ಹೆಚ್ಚಳವಾಗಿದೆ. ಡಿಸೆಂಬರ್‌ 8ರಿಂದ 14ವರೆಗೂ ನಿತ್ಯ ಒಂದು ಸಾವಿರ ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಶಂಕಿತರು ಎಂದು ಗುರುತಿಸಿ ಈ ಪೈಕಿ 1,415 ಮಂದಿ ಸೋಂಕು ಪರೀಕ್ಷೆ ನಡೆಸಿದ್ದು, 347 ಮಂದಿಯಲ್ಲಿ ಡೆಂಘೀ ಸೋಂಕು ದೃಢಪಟ್ಟಿದೆ.

Mosquitoes Increased In Bengaluru, 50 Dengue Cases Were Detected Every day Vin
Author
First Published Dec 16, 2022, 9:46 AM IST

ಬೆಂಗಳೂರು: ಕಳೆದ ಒಂದು ವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸರಾಸರಿ 50 ಮಂದಿಯಲ್ಲಿ ಡೆಂಘಿ ಜ್ವರ (Dengue fever) ಪತ್ತೆಯಾಗುತ್ತಿದೆ. ಅಂತೆಯೇ ರಾಜ್ಯದಲ್ಲಿಯೂ ಡೆಂಘೀ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 720 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟಾರೆ ಪ್ರಕರಣಗಳ ಸಂಖ್ಯೆ ಒಂಬತ್ತು ಸಾವಿರ ಗಡಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.35ರಷ್ಟು ಹೆಚ್ಚು ಪ್ರಕರಣಗಳು  ಪತ್ತೆಯಾಗಿವೆ. ಇನ್ನೊಂದೆಡೆ ಡೆಂಘೀ ಜ್ವರಕ್ಕೆ ಕಾರಣವಾಗುವ ಸೊಳ್ಳೆಯೇ ಝಿಕಾ ವೈರಸ್‌ ಸೋಂಕು ಹರಡಲು ಕೂಡಾ ಕಾರಣವಾಗಿದ್ದು, ಧಿಡೀರ್‌ ಡೆಂಘೀ ಉಲ್ಬಣದಿಂದ ಆತಂಕ (Anxiety) ಮತ್ತಷ್ಟುಹೆಚ್ಚಳವಾಗಿದೆ.

ಚಂಡಮಾರುತ, ಹವಾಮಾನ ಬದಲಾವಣೆಯಿಂದ ಪ್ರಸಕ್ತ ತಿಂಗಳಲ್ಲಿ ಬೆಂಗಳೂರಿನಲ್ಲಿ ಬಹುತೇಕ ದಿನಗಳು ಜಿಟಿಜಿಟಿ ಮಳೆ ಸುರಿಯುತ್ತಿದೆ. ಇದರಿಂದ ಸೊಳ್ಳೆಯ (Mosquitoes) ಸಂತತಿ ಹೆಚ್ಚಳವಾಗಿ ಡೆಂಘೀ ಜ್ವರ ವ್ಯಾಪಕವಾಗಿ ಹೆಚ್ಚಳವಾಗಿದೆ. ಡಿಸೆಂಬರ್‌ 8ರಿಂದ 14ವರೆಗೂ ನಿತ್ಯ ಒಂದು ಸಾವಿರ ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಶಂಕಿತರು ಎಂದು ಗುರುತಿಸಿ ಈ ಪೈಕಿ 1,415 ಮಂದಿ ಸೋಂಕು ಪರೀಕ್ಷೆ ನಡೆಸಿದ್ದು, 347 ಮಂದಿಯಲ್ಲಿ ಡೆಂಘೀ ಸೋಂಕು ದೃಢಪಟ್ಟಿದೆ. ಈ ಮೂಲಕ ಸರಾಸರಿ 50 ಮಂದಿಗೆ ಡೆಂಘೀ ತಗುಲಿದಂತಾಗಿದೆ. ಬೆಂಗಳೂರು ಒಟ್ಟಾರೆ ಪ್ರಕರಣಗಳು (Cases) 1,982ಕ್ಕೆ ಹೆಚ್ಚಳವಾಗಿದೆ.

ಏಷ್ಯನ್ ಟೈಗರ್ ಸೊಳ್ಳೆ ಕಚ್ಚೋದರಿಂದ ಸಾವು ಸಂಭವಿಸಬಹುದು ಜೋಪಾನ!

ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಸೋಂಕು ಹೆಚ್ಚಳ
ಬೆಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ 720 ಮಂದಿಯಲ್ಲಿ ಡೆಂಘೀ ದೃಢಪಟ್ಟಿದೆ. ಉಡುಪಿ, ಮೈಸೂರು, ವಿಜಯಪುರ, ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿ ಹೆಚ್ಚು ಪ್ರಕರಣ ವರದಿಯಾಗಿವೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ ಒಟ್ಟಾರೆ ಪ್ರಕರಣಗಳು 8,972ಕ್ಕೆ ತಲುಪಿವೆ. ಕಳೆದ ವರ್ಷ (2021) 6,600 ಮಂದಿಗೆ ಡೆಂಘೀ ತಗುಲಿತ್ತು. ಈ ಬಾರಿ ವರ್ಷ ಮುಕ್ತಾಯಕ್ಕೆ ಎರಡು ವಾರ ಬಾಕಿ ಇರುವಂತೆ ಒಂಬತ್ತು ಸಾವಿರ ಗಡಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸೋಂಕು ಮೂರನೇ ಒಂದು ಭಾಗ (ಶೇ.35) ಹೆಚ್ಚಳವಾಗಿದೆ.

ವಾರದಲ್ಲಿ ಐವರು ಸಾವು
ಕಳೆದ ಒಂದು ವಾರದಲ್ಲಿ ಹಾಸನ, ವಿಜಯಪುರ, ಧಾರವಾಡ, ತುಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಡೆಂಘೀ ಜ್ವರದಿಂದ ತಲಾ ಒಬ್ಬರು ಬಲಿಯಾಗಿದ್ದಾರೆ. ಈ ವರ್ಷದ ಒಟ್ಟಾರೆ ಸಾವು 9ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ ಕೇವಲ ಐದು ಸಾವಾಗಿದ್ದು (Death), ಈ ಬಾರಿ ಸಾವು ಕೂಡಾ ಹೆಚ್ಚಳವಾಗಿದೆ.

ಸಾರ್ವಜನಿಕರು ಎಚ್ಚರಿಕೆ ವಹಿಸಿ
ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್‌ ಈಜಿಪ್ಟ್‌ ಎಂಬ ಸೊಳ್ಳೆಯೇ ಡೆಂಘೀ ಜ್ವರ ಹರಡಲು ಕಾರಣವಾಗಿದೆ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ ಇದಾಗಿದ್ದು, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಜನರು ಮನೆ ಸುತ್ತಮುತ್ತಲೂ ನೀರು, ತ್ಯಾಜ್ಯ ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ದಿಢೀರ್‌ ಜ್ವರ, ತಲೆ ನೋವು, ಮೂಗಿನಲ್ಲಿ ಸೋರುವುದು, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ-ಕೈ ನೋವು, ಅತಿಸಾರ ಈ ರೀತಿ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Dengue ರೋಗಿಗೆ ಪ್ಲೇಟ್‌ಲೆಟ್ಸ್‌ ಬದಲು ಜ್ಯೂಸ್‌ ನೀಡಿದ ಆಸ್ಪತ್ರೆಗೆ ಡೆಮಾಲಿಷನ್‌ ನೋಟಿಸ್..!

ಡೆಂಘೀ ಜತೆ ಝಿಕಾ ಭಯ
ಪ್ರಸಕ್ತ ವಾರ ರಾಜ್ಯದಲ್ಲಿ ಮೊದಲ ಝಿಕಾ ವೈರಸ್‌ ಪ್ರಕರಣ ಕಾಣಿಸಿಕೊಂಡಿತ್ತು. ಡೆಂಘೀ ಜ್ವರಕ್ಕೆ ಕಾರಣವಾಗುವ ಈಡಿಸ್‌ ಈಜಿ±್ಟ… ಜಾತಿಯ ಸೊಳ್ಳೆ ಕಚ್ಚುವುದರಿಂದಲೇ ಝಿಕಾ ವೈರಸ್‌ ಸೋಂಕು ಕೂಡಾ ಹರಡುತ್ತದೆ. ಸೊಳ್ಳೆ ಹೆಚ್ಚಳದಿಂದ ಡೆಂಘೀ ಉಲ್ಬಣವಾಗಿದ್ದು, ಇದೇ ಸೊಳ್ಳೆಗಳಿಂದ ಝಿಕಾ ವೈರಸ್‌ ಸೋಂಕು ಕೂಡಾ ತೀವ್ರ ವ್ಯಾಪ್ತಿಸುವ ಆತಂಕ ಹೆಚ್ಚಳವಾಗಿದೆ. ಆದರೆ, ಈವರೆಗೂ ರಾಜ್ಯ ಆರೋಗ್ಯ ಇಲಾಖೆ ಸೊಳ್ಳೆ ನಿಯಂತ್ರಣಕ್ಕೆ ಅಥವಾ ಝಿಕಾ ವೈರಸ್‌ ತಡೆಗೆ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ.

Follow Us:
Download App:
  • android
  • ios