ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಆಗಸ್ಟ್‌ 20ರವರೆಗೆ ಜಿಲ್ಲೆಯಲ್ಲಿ ಒಟ್ಟು 163 ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಡೆಂಘೀ ಜ್ವರ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ 187 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಆ ವೇಳೆ ಆಗಸ್ಟ್‌, ಸೆಪ್ಟಂಬರ್‌, ಅಕ್ಟೋಬರ್‌ ತಿಂಗಳಲ್ಲಿಯೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಇಂದಿ​ನ​ವ​ರೆಗೆ 163 ಪ್ರಕರಣಗಳು ದಾಖಲಾಗಿವೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಶಿವಮೊಗ್ಗ(ಆ.20): ಮಳೆಯಿಲ್ಲದೇ ಜನತೆ ಕುಡಿ​ಯುವ ನೀರು, ಕೃಷಿ ಚಟು​ವ​ಟಿ​ಕೆಗೆ ಹಿನ್ನ​ಡೆ​ಯಿಂದ ತತ್ತರಿಸುತ್ತಿದ್ದಾರೆ. ಇದರ ಮಧ್ಯೆ ಈಗ ಡೆಂಘೀ​ಜ್ವ​ರ ಕಾಟ ಶುರುವಾಗುತ್ತಿದೆ. ಮನೆ, ಹೋಟೆಲ್‌ ಇನ್ನಿ​ತರ ಕಡೆ​ಗ​ಳ​ಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸುತ್ತಾರೆ. ಹೀಗಿ​ರು​ವಾಗ ಜಿಲ್ಲೆಯಲ್ಲಿ ವಿವಿ​ಧೆಡೆ ಡೆಂಘೀ ಪ್ರಕರಣಗಳು ಕಂಡು​ಬ​ರು​ತ್ತಿವೆ.

ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಆಗಸ್ಟ್‌ 20ರವರೆಗೆ ಜಿಲ್ಲೆಯಲ್ಲಿ ಒಟ್ಟು 163 ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಡೆಂಘೀ ಜ್ವರ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ 187 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಆ ವೇಳೆ ಆಗಸ್ಟ್‌, ಸೆಪ್ಟಂಬರ್‌, ಅಕ್ಟೋಬರ್‌ ತಿಂಗಳಲ್ಲಿಯೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಇಂದಿ​ನ​ವ​ರೆಗೆ 163 ಪ್ರಕರಣಗಳು ದಾಖಲಾಗಿವೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Health Tips: ಡೆಂಗ್ಯೂ ಇರೋರು ಯಾವುದನ್ನ ತಿನ್ಲೇಬಾರ್ದು? ಯಾವುದನ್ನ ತಿನ್ಲೇಬೇಕು?

ಬರಗಾಲ ರೋಗಕ್ಕೆ ಮೂಲ!:

ಜಿಲ್ಲೆಯಲ್ಲಿ ಈ ವರ್ಷ ಮಳೆ ಪ್ರಮಾಣ ಕುಸಿದಿದ್ದು, ಬರಗಾಲ ಛಾಯೆ ಆವರಿಸಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಜನರು ವಾರಗಟ್ಟಲೆ ನೀರನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಹೀಗೆ ಅಧಿಕ ದಿನ​ಗಳ ಕಾಲ ಸಂಗ್ರ​ಹಿ​ಸಿದ, ನಿಂತ ನೀರಿನಲ್ಲಿ ಡೆಂಘೀ ಹರ​ಡುವ ಸೊಳ್ಳೆಗಳು ಬೆಳೆಯುತ್ತಿವೆ. ಅಲ್ಲದೇ, ಆ ನೀರನ್ನು ನೇರವಾಗಿ ಬಳಸುತ್ತಿರುವುದರಿಂದ ಡೆಂಘೀಜ್ವ​ರ​ದಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು.

ಮಹಾ​ನ​ಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಾಯದೊಂದಿಗೆ ಜಿಲ್ಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನೀರನ್ನು ಕುದಿಸಿ ಕುಡಿಯಬೇಕು. ಹೆಚ್ಚು ದಿನ ಒಂದೇ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಸಂಗ್ರ​ಹಣ ತೊಟ್ಟಿ, ಪಾತ್ರೆ​ಗ​ಳನ್ನು ಕಾಲ​ಕಾ​ಲಕ್ಕೆ ಸ್ವಚ್ಛ​ಗೊ​ಳಿಸಿ ಬಳ​ಸ​ಬೇ​ಕು ಎಂದು ಅರಿವು ಮೂಡಿಸಲಾಗುತ್ತಿದೆ. ಆದರೂ, ನೀರಿನ ಕೊರತೆ ಹೀಗೆಯೇ ಮುಂದುವರಿದರೆ, ಜನರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ರೋಗ ಲಕ್ಷಣಗಳೇನು?

ವ್ಯಕ್ತಿ​ಯಲ್ಲಿ ಡೆಂಘೀಜ್ವ​ರ ಕಾಣಿಸಿಕೊಂಡರೆ ಸುಲಭವಾಗಿ ಗುಣವಾಗುತ್ತದೆ. ಒಮ್ಮೆ ಡೆಂಘೀಜ್ವರ ಬಂದವರಿಗೆ ಮತ್ತೊಮ್ಮೆ ಡೆಂಘೀ ವೈರಾಣು ಸೋಂಕು ತಗುಲಿದರೆ ಪರಿಣಾಮ ಗಂಭೀರವಾಗುತ್ತದೆ. ದಿಢೀರ್‌ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ-ಕೈ ನೋವು, ಅತಿಸಾರ ಈ ರೀತಿ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನಂತರ ದೇಹದ ಮೇಲೆ ಕೆಂಪು ದದ್ದು ಹಾಗೂ ಕರುಳಿನಲ್ಲಿ ರಕ್ತಸ್ರಾವ ಆಗುತ್ತದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ.

ಡೆಂಘೀಜ್ವ​ರ ಭಯ ಬೇಡ, ಚಿಕಿತ್ಸೆ ಪಡೆದುಕೊಳ್ಳಿ

ಜಿಲ್ಲೆಯಲ್ಲಿ ಎಲ್ಲ ಭಾಗದಲ್ಲೂ ಡೆಂಘೀಜ್ವ​ರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹೊರಗಿನಿಂದ ಬಂದ ಜನರಲ್ಲಿ ಹೆಚ್ಚಾಗಿ ಡೆಂಘೀ ಪ್ರಕರಣಗಳು ಕಂಡುಬರುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಸುರಗಿಹಳ್ಳಿ ಹೇಳಿ​ದ್ದಾರೆ.

ರಾಜ್ಯದಲ್ಲಿ ಡೆಂಘೀ ತಾಂಡವ: ಒಂದೇ ತಿಂಗಳಲ್ಲಿ 2489 ಕೇಸ್‌

ಡೆಂಘೀ ಪ್ರಕರಣಗಳ ಸಂಬಂಧ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಒಂದೇ ಗ್ರಾಮದಲ್ಲಿ 3ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದರೆ ಅಂತಹ ಕಡೆ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಒಂದೇ ಗ್ರಾಮದಲ್ಲಿ 3ಕ್ಕೂ ಹೆಚ್ಚು ಪ್ರಕರಣಗಳು ಇದುವರೆಗೆ ಕಂಡುಬಂದಿಲ್ಲ. ಡೆಂಘೀ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿದಿದೆ ಎನ್ನುತ್ತಾರೆ.

ಡೆಂಘೀ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯದೇ ಇರುವುದು, ದೀರ್ಘಕಾಲ ಜ್ವರ ಇದ್ದರೂ ನಿರ್ಲಕ್ಷ್ಯ ಮಾಡುವುದರಿಂದ ರೋಗ ಉಲ್ಬಣಿಸುವ ಸಾಧ್ಯತೆ ಇದೆ. ಜನರು ಜಾಗ್ರತೆ ವಹಿಸಿ, ಸಕಾಲಕ್ಕೆ ಚಿಕಿತ್ಸೆ ಪಡೆಯಯಬೇಕು. ಇದ​ರಿಂದ ರೋಗ ತಡೆಗಟ್ಟಬಹುದು ಎಂದು ಸಲಹೆ ನೀಡಿದ್ದಾರೆ.