Asianet Suvarna News Asianet Suvarna News

ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್‌, ಮಹಿಳೆಯರ ಪಾಲಿಗೆ ಯಾಕಿಷ್ಟು ಡೇಂಜರಸ್?

ನಟಿ ಪೂನಂ ಪಾಂಡೆ, ತಮ್ಮ 32ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ. ಇಷ್ಟಕ್ಕೂ ಈ ಗರ್ಭಕಂಠದ ಕ್ಯಾನ್ಸರ್ ಎಂದರೇನು? ಯಾಕಿಷ್ಟು ಡೇಂಜರಸ್ ಅನ್ನೋದನ್ನು ತಿಳಿಯೋಣ.

Model actor Poonam Pandey dies of cervical cancer, Why its dangerous, what is symptoms Vin
Author
First Published Feb 2, 2024, 12:40 PM IST

ಬಾಲಿವುಡ್ ನಟಿ, ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ನಟಿ ಪೂನಂ ಪಾಂಡೆ, ತಮ್ಮ 32ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ. ಪೂನಂ ಪಾಂಡೆ ಅವರ ಮ್ಯಾನೇಜರ್‌ ಹಾಗೂ ಅವರ ಟೀಮ್‌ ಈ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಿ, ಮಾಹಿತಿಯನ್ನು ದೃಢಪಡಿಸಿದ್ದಾರೆ. ಎಲ್ಲಾ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವ ಸೆಲೆಬ್ರಿಟಿಯೂ ಇದರಿಂದ ಬದುಕುಳಿಯಲು ಸಾಧ್ಯವಾಗದ ಕಾರಣ ಈ Cervical Cancer ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದೆ. 

ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರಲ್ಲಿ ಉಂಟಾಗುವ ಸಾವಿನ (Death) ಪ್ರಮಾಣದಲ್ಲಿ ಸಹ ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಮಹಿಳೆಯರ ಪಾಲಿಗೆ ಗರ್ಭಕಂಠದ ಕ್ಯಾನ್ಸರ್ ಅಷ್ಟರಮಟ್ಟಿಗೆ ಅಪಾಯಕಾರಿಯಾಗಿದೆ. 2020ರಲ್ಲಿ ಅಂದಾಜು 604 000 ಹೊಸ ಪ್ರಕರಣಗಳು ಮತ್ತು 342 000 ಸಾವುಗಳು ಇದರಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ. ಇಷ್ಟಕ್ಕೂ ಗರ್ಭಕಂಠ ಕ್ಯಾನ್ಸರ್‌ ಎಂದರೇನು? ಈ ಕ್ಯಾನ್ಸರ್ ಯಾಕೆ ಇಷ್ಟು ಡೇಂಜರಸ್ ಅನ್ನೋ ಮಾಹಿತಿ ಇಲ್ಲಿದೆ.

ಗರ್ಭಕಂಠದ ಕ್ಯಾನ್ಸರ್ ಎಂದರೇನು?
ಕ್ಯಾನ್ಸರ್ ಎನ್ನುವುದು ದೇಹದಲ್ಲಿನ ಜೀವಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುವ ಕಾಯಿಲೆಯಾಗಿದೆ. ದೇಹದ ಯಾವ ಭಾಗದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೋ ಆ ಕ್ಯಾನ್ಸರ್‌ ಎಂದು ಹೆಸರಿಸಲಾಗುತ್ತದೆ, ಗರ್ಭಕಂಠದಲ್ಲಿ ಕ್ಯಾನ್ಸರ್ ಪ್ರಾರಂಭವಾದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಗರ್ಭಕಂಠವು ಯೋನಿಯನ್ನು ಗರ್ಭಾಶಯದ ಮೇಲಿನ ಭಾಗಕ್ಕೆ ಸಂಪರ್ಕಿಸುತ್ತದೆ. ಇಲ್ಲಿನ ಜೀವಕೋಶಗಳು ನಿಯಂತ್ರಣ ಕಳೆದುಕೊಂಡಾಗ ಸರ್ವಿಕಲ್ ಕ್ಯಾನ್ಸರ್ ಉಂಟಾಗುತ್ತದೆ.

ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವೇನು?
ಕೆಲವು ವಿಧದ ಮಾನವ ಪ್ಯಾಪಿಲೋಮವೈರಸ್ (HPV) ಯೊಂದಿಗೆ ದೀರ್ಘಕಾಲದ ಸೋಂಕು ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದೆ. HPV ಒಂದು ಸಾಮಾನ್ಯ ವೈರಸ್ ಆಗಿದ್ದು ಅದು ಲೈಂಗಿಕ ಸಮಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿರುವ ಜನರಲ್ಲಿ ಕನಿಷ್ಠ ಅರ್ಧದಷ್ಟು ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ HPV ಹೊಂದಿರುತ್ತಾರೆ, ಅದರಲ್ಲಿ ಕೆಲವರು ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಇದು 30 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

ಗರ್ಭಕಂಠದ ಕ್ಯಾನ್ಸರ್‌ನ ರೋಗಲಕ್ಷಣಗಳು 
ಗರ್ಭಕಂಠದ ಕ್ಯಾನ್ಸರ್‌, ಕೆಲವೊಂದು ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ. ಅವಧಿಗಳ ನಡುವೆ ಮತ್ತು ಲೈಂಗಿಕ ಸಂಭೋಗದ ನಂತರ ಹೆಚ್ಚು ರಕ್ತಸ್ರಾವವನ್ನು ಒಳಗೊಂಡಿರುತ್ತದೆ. ದುರ್ವಾಸನೆಯ ಬಿಳಿ ಸ್ರಾವ, ಬೆನ್ನು ನೋವು ಅಥವಾ ಕೆಳ ಹೊಟ್ಟೆ ನೋವು ಸಹ ಸಂಭವಿಸಬಹುದು. ಕೆಲವು ಸಂದರ್ಭಗಳಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದಿರಬಹುದು.

ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು HPV ಲಸಿಕೆ ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್‌ನ್ನು ಮೊದಲೇ ಪತ್ತೆ ಮಾಡಿದಾಗ, ಇದು ಚಿಕಿತ್ಸೆ ಪಡೆದುಕೊಳ್ಳಲು ಸುಲಭ. ಇಲ್ಲದಿದ್ದರೆ ಜೀವಕ್ಕೇ ಸಂಚಕಾರವಾಗಿ ಪರಿಣಮಿಸುತ್ತದೆ. ಗರ್ಭಕಂಠದ ಕ್ಯಾನ್ಸರ್‌ (ಸರ್ವಿಕಲ್‌ ಕ್ಯಾನ್ಸರ್‌) ತಡೆಗೆ 9 ರಿಂದ 14 ವರ್ಷದೊಳಗಿನ ಬಾಲಕಿಯರು ಲಸಿಕೆ ಹಾಕಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಉತ್ತೇಜಿಸಲಿದೆ ಎಂದು ನಿನ್ನೆಯಷ್ಟೇ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ 2024-25ನೇ ಸಾಲಿನ ಬಜೆಟ್‌ ಮಂಡನೆ ವೇಳೆ ತಿಳಿಸಿದ್ದರು.

Follow Us:
Download App:
  • android
  • ios