Medical Test : 40 ವರ್ಷ ದಾಟುತ್ತಿದ್ದಂತೆ ಈ ಕೆಲಸ ತಪ್ಪದೇ ಮಾಡಿ
ಮೇಲಿಂದ ನೋಡಿದ್ರೆ ನಾವು ಆರೋಗ್ಯವಾಗಿದ್ದಂತೆ ಕಾಣಿಸುತ್ತದೆ. ಆದ್ರೆ ಒಳಗೆ ಅನೇಕ ರೋಗ ನಮ್ಮನ್ನು ಮುತ್ತಿಕೊಂಡಿರುತ್ತದೆ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚಾಗುತ್ತದೆ. ರೋಗದಿಂದ ದೂರವಿರಬೇಕು, ಆರಂಭದಲ್ಲೇ ಅದಕ್ಕೆ ಚಿಕಿತ್ಸೆ ಬೇಕೆಂದ್ರೆ ನೀವು ತಪ್ಪದೆ ವರ್ಷಕ್ಕೊಮ್ಮೆ ಈ ತಪಾಸಣೆ ಮಾಡ್ಬೇಕು.
ವಯಸ್ಸು ಹೆಚ್ಚಾಗ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ನಮ್ಮ ದೇಹ ಮೊದಲಿನಂತೆ ಶಕ್ತಿಯುತವಾಗಿರೋದಿಲ್ಲ. ದೇಹ ದುರ್ಬಲಗೊಳ್ಳುತ್ತದೆ. ಹಾಗಾಗಿ ದೇಹದಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ನಮ್ಮ ವಯಸ್ಸು 40ರ ಗಡಿದಾಟುತ್ತಿದ್ದಂತೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಾದ ಅಗತ್ಯವಿರುತ್ತದೆ. 40 ವರ್ಷ ವಯಸ್ಸಿನ ನಂತರ ಪುರುಷರು ಮತ್ತು ಮಹಿಳೆ ಅಗತ್ಯವಾಗಿ ಕೆಲ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು.
ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಆರೋಗ್ಯ (Health) ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಈ ತಪಾಸಣೆಯಲ್ಲಿ 9 ಅಗತ್ಯ ವೈದ್ಯಕೀಯ ಪರೀಕ್ಷೆ (Test) ಗಳನ್ನು ಸೇರಿಸಬೇಕು. ಈ ತಪಾಸಣೆ ನಿಮಗೆ ರೋಗದ ಆರಂಭದಲ್ಲಿಯೇ ರೋಗವನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ನಾವಿಂದು ಯಾವೆಲ್ಲ ವೈದ್ಯಕೀಯ ತಪಾಸಣೆಗೆ ನೀವು ಒಳಗಾಗಬೇಕು ಎಂಬುದನ್ನು ಹೇಳ್ತೇವೆ.
ಸಂಪೂರ್ಣ ರಕ್ತದ ಎಣಿಕೆ (CBC ) : ಸಂಪೂರ್ಣ ರಕ್ತದ ಎಣಿಕೆ ಪರೀಕ್ಷೆಯ ಸಹಾಯದಿಂದ ನೀವು ರಕ್ತದಲ್ಲಿರುವ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಹಿಮೋಗ್ಲೋಬಿನ್, ಪ್ಲೇಟ್ಲೆಟ್ ಸೇರಿದಂತೆ ಅನೇಕ ಸಂಗತಿಯನ್ನು ತಿಳಿಯಬಹುದು. ನೀವು ಆರೋಗ್ಯವಾಗಿರಬೇಕೆಂದ್ರೆ ರಕ್ತದ ಎಲ್ಲ ಕಣಗಳು ಸರಿಯಾಗಿರಬೇಕು. ಒಂದರಲ್ಲಿ ಏರುಪೇರಾದ್ರು ಸಮಸ್ಯೆಯಾಗುತ್ತದೆ. ನೀವು ಪ್ರತಿ ವರ್ಷ ರಕ್ತ ಎಣಿಕೆ ಪರೀಕ್ಷೆಗೆ ಒಳಗಾದ್ರೆ ನಿಮಗೆ ಅದ್ರ ಮಾಹಿತಿ ಸಿಗುತ್ತದೆ.
Health Tips: ಫ್ರೋಜನ್ ಆಹಾರ ಬಳಸೋದ್ರಿಂದ ಕಾಡುತ್ತೆ ಗಂಭೀರ ಸಮಸ್ಯೆ
ಹೆಚ್ ಬಿಎಒನ್ ಸಿ ಪರೀಕ್ಷೆ (HbA1C) : ನಿಮ್ಮ ಮಧುಮೇಹದ ಬಗ್ಗೆ ಇದ್ರಲ್ಲಿ ಮಾಹಿತಿ ಲಭ್ಯವಾಗುತ್ತದೆ. ನೀವು ಮಧುಮೇಹಕ್ಕೆ ಒಳಗಾಗಿದ್ದರೆ, ಗಡಿಯಲ್ಲಿದ್ದರೆ ಅದನ್ನು ಇದ್ರಿಂದ ಪತ್ತೆ ಮಾಡಬಹುದು. ಕಳೆದ ಮೂರು ತಿಂಗಳ ಸರಾಸರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದರಲ್ಲಿ ಕಂಡುಹಿಡಿಯಬಹುದು.
ಥೈರಾಯ್ಡ್ ಪರೀಕ್ಷೆ : ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಇದ್ರ ಪರೀಕ್ಷೆಗೆ ಒಳಗಾಗುವುದು ಅನಿವಾರ್ಯವಾಗಿದೆ. ಥೈರಾಯ್ಡ್ ಪರೀಕ್ಷೆಯು ಕುತ್ತಿಗೆಯಲ್ಲಿರುವ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸುತ್ತದೆ.
ವಿಟಮಿನ್ ಬಿ 12 ಪರೀಕ್ಷೆ : ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ಅಪಾಯಕಾರಿ. ನರಗಳ ನೋವು, ಮರಗಟ್ಟುವಿಕೆ, ಸುಸ್ತು, ತಲೆನೋವು ಮತ್ತು ಕಿರಿಕಿರಿಯಂತಹ ಸಮಸ್ಯೆ ಕಾಡುತ್ತದೆ. ದೇಹಕ್ಕೆ ಬಿ 12 ಅಗತ್ಯವಿದ್ದು, ಅದ್ರ ಪತ್ತೆಗೆ ಈ ಪರೀಕ್ಷೆ ಮಾಡಲಾಗುತ್ತದೆ.
Health Tips: ಅಲರಾಂ ಸ್ನೂಜ್ ಬಟನ್ ಒತ್ತೋ ಮುನ್ನ ಇದನ್ನೋದಿ
ವಿಟಮಿನ್ ಡಿ 3 ಪರೀಕ್ಷೆ : ರಕ್ತದಲ್ಲಿರುವ ವಿಟಮಿನ್ ಡಿ ಮಟ್ಟವನ್ನು ಇದ್ರಲ್ಲಿ ಪರೀಕ್ಷೆ ಮಾಡಲಾಗುತ್ತದೆ. ವಿಟಮಿನ್ ಡಿ ಕೊರತೆಯಿಂದಾಗಿ ಮೂಳೆ ನೋವು, ಮೂಳೆ ದುರ್ಬಲವಾಗುವುದು, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಸೇರಿದಂತೆ ಅನೇಕ ಲಕ್ಷಣಗಳು ಕಂಡುಬರುತ್ತವೆ.
ಹಿಮೋಗ್ಲೋಬಿನ್ ಪರೀಕ್ಷೆ : ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಅದನ್ನು ಪರೀಕ್ಷಿಸುವುದು ಅವಶ್ಯಕ. ಇದ್ರಿಂದ ರಕ್ತಹೀನತೆಯ ಅಪಾಯವಿರಬಹುದು ಮತ್ತು ರಕ್ತದ ತೀವ್ರ ನಷ್ಟವಾಗಬಹುದು.
ಲಿಪಿಡ್ ಪ್ರೊಫೈಲ್ ಪರೀಕ್ಷೆ : ಲಿಪಿಡ್ ಪ್ರೊಫೈಲ್ ಪರೀಕ್ಷೆಯಲ್ಲಿ ಕೊಲೆಸ್ಟ್ರಾಲ್, ಎಚ್‌ಡಿಎಲ್, ಎಲ್‌ಡಿಎಲ್, ವಿಎಲ್‌ಡಿಎಲ್, ಟ್ರೈಗ್ಲಿಸರೈಡ್ ಇತ್ಯಾದಿಗಳ ಮಟ್ಟ ತಿಳಿಯುತ್ತದೆ. ಇದು ಬಹಳ ಮುಖ್ಯ ಪರೀಕ್ಷೆಗಳಲ್ಲಿ ಒಂದಾಗಿದೆ.
ಯಕೃತ್ತಿನ ಕಾರ್ಯ ಪರೀಕ್ಷೆ (LFT ) : ಇದು ಯಕೃತ್ತಿನ ಕಾಯಿಲೆ ಮತ್ತು ಹಾನಿಯನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಈ ಪರೀಕ್ಷೆಯಲ್ಲಿ ರಕ್ತದಲ್ಲಿರುವ ವಿಶೇಷ ರೀತಿಯ ಕಿಣ್ವಗಳು ಮತ್ತು ಪ್ರೋಟೀನ್‌ಗಳನ್ನು ಪರೀಕ್ಷಿಸಲಾಗುತ್ತದೆ. ಇದರಿಂದ ನಿಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ತಿಳಿಯಬಹುದು.
ಕಿಡ್ನಿ ಫಂಕ್ಷನ್ ಟೆಸ್ಟ್ ಅಥವಾ ರೀನಲ್ ಫಂಕ್ಷನ್ ಟೆಸ್ಟ್ (KFT/RFT) : ಕಿಡ್ನಿ ಕಾರ್ಯ ಪರೀಕ್ಷೆಯನ್ನು ರೀನಲ್ ಫಂಕ್ಷನ್ ಟೆಸ್ಟ್ ಎಂದೂ ಕರೆಯಲಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದ ರೋಗಿಗೆ ಈ ಪರೀಕ್ಷೆ ಬಹಳ ಮುಖ್ಯ.